ಕೋವಿಡ್‌ ಭ್ರಷ್ಟಾಚಾರ; ಸಮಗ್ರ ವರದಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ದೇಶನ

ಬೆಂಗಳೂರು; ಕೊರೊನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಮಾರ್ಚ್‌ನಿಂದ ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಮಗ್ರ ವರದಿ ನೀಡಲು ಸೂಚಿಸಿದೆ.


ಮಹಾಲೇಖಪಾಲರ (ಸಿಎಜಿ) ವರದಿ ಆಧರಿಸಿ ಕ್ರಮಕ್ಕೆ ಮುಂದಾಗುತ್ತಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇದೇ ಮೊದಲ ಬಾರಿಗೆ ಸಿಎಜಿ ವರದಿಗೂ ಮುನ್ನವೇ ಖರೀದಿ ಪ್ರಕ್ರಿಯೆಗಳಲ್ಲಾಗಿರುವ ನಿಯಮಬಾಹಿರ ಮತ್ತು ಸರ್ಕಾರಕ್ಕೆ ಆಗಿರುವ ನಷ್ಟದ ಕುರಿತು ಸಮಗ್ರ ವರದಿ ಕೇಳಿದೆ.


‘ದಿ ಫೈಲ್‌’ ವರದಿ ಆಧರಿಸಿ ಕರ್ನಾಟಕ ರಾಷ್ಟ್ರಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ ಎನ್‌ ದೀಪಕ್‌ ಅವರು  ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರಿಗೆ ದೂರು ಸಲ್ಲಿಸಿದ್ದರು. ದೂರಿನ ಕುರಿತು ಅಧಿಕಾರಿಗಳು 2020ರ ಮೇ 19ರಂದು ನಡೆದ ಸಭೆಯ ಗಮನಕ್ಕೆ ತಂದಿದ್ದರು.


ಪಿಪಿಇ ಕಿಟ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಉಪಕರಣಗಳ ಖರೀದಿ ಪ್ರಕ್ರಿಯೆಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2020ರ ಮೇ 22ರಂದು ನಿರ್ದೇಶಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


‘ಮೇಲ್ಕಂಡ ಪ್ರಕರಣದ ಬಗ್ಗೆ ತಮ್ಮ ಇಲಾಖೆಯಿಂದ ಪರಿಶೀಲನೆ ನಡೆಸಿ ಸಮಗ್ರ ವರದಿಯನ್ನು ಜರೂರಾಗಿ ಸಲ್ಲಿಸಬೇಕು,’ ಎಂದು ವಿಧಾನಸಭೆಯ ಕಾರ್ಯದರ್ಶಿ ಅವರು ನಿರ್ದೇಶಿಸಿದ್ದಾರೆ.

ಸ್ಯಾನಿಟೈಸರ್‌ ಖರೀದಿಯಲ್ಲಿಯೂ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. 2019ರ ಅಕ್ಟೋಬರ್‌ 19ರಂದು ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ 97.44 ರು. ನಮೂದಿಸಿ ಎಲ್‌ 1 ಆಗಿತ್ತು. ಅದರಂತೆ 45 ಲಕ್ಷ ರು. ಮೊತ್ತದಲ್ಲಿ 47,000 ಪ್ರಮಾಣದ ಬಾಟಲ್‌ (ತಲಾ ಬಾಟಲ್‌ 500 ಎಂ ಎಲ್‌)ಗಳನ್ನು ಸರಬರಾಜು ಮಾಡಲು 2020ರ ಫೆಬ್ರುವರಿಯಲ್ಲಿ ದರ ಗುತ್ತಿಗೆ ಪ್ರಕಾರ ಖರೀದಿ ಆದೇಶ ಪಡೆದಿದ್ದ ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ದರ ಖರೀದಿ ಗುತ್ತಿಗೆ ಒಪ್ಪಂದವನ್ನು ಉಲ್ಲಂಘಿಸಿತ್ತು. ಅಲ್ಲದೆ ಅತ್ಯಲ್ಪ ದಿನಗಳಲ್ಲೇ ಇದೇ ಕಂಪನಿ ಅತ್ಯಲ್ಪ ಅವಧಿಯಲ್ಲಿ ಯೂನಿಟ್‌ವೊಂದಕ್ಕೆ 250.00 ರು.ಗಳಂತೆ ಒಟ್ಟು 5 ಕೋಟಿ ರು.ಮೊತ್ತದಲ್ಲಿ ಸರಬರಾಜು ಮಾಡಲು ಖರೀದಿ ಆದೇಶ ಪಡೆದಿತ್ತು.


ಆರಂಭದಲ್ಲಿ ನಮೂದಿಸಿದ್ದ ದರಕ್ಕೂ ಮತ್ತು ನಂತರ ನೀಡಿದ್ದ ಖರೀದಿ ಆದೇಶದ ಮೊತ್ತದಲ್ಲಿ ಒಟ್ಟು 152.56 ರು.ವ್ಯತ್ಯಾಸ ಕಂಡು ಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸರ್ಕಾರಕ್ಕೆ ಒಟ್ಟು 11,89,85,600 ರು.ಗಳು ನಷ್ಟವಾಗಿತ್ತು ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು.


ದೆಹಲಿ ಮೂಲದ ಆರ್‌ ಕೆ ಮೆಡಿಕಲ್‌ ಸೊಲ್ಯೂಷನ್ಸ್‌ ಕಂಪನಿ ರಾಜ್ಯಕ್ಕೆ ಸರಬರಾಜು ಮಾಡಿದ್ದ ಡ್ರ್ಯಾಗರ್‌ ಹೆಸರಿನ ಒಟ್ಟು 15 ವೆಂಟಿಲೇಟರ್‌ಗಳ ಗುಣಮಟ್ಟದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. 7 ವರ್ಷಗಳ ಹಿಂದೆ ಉತ್ಪಾದನೆಯಾಗಿದ್ದ ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದ್ದ ಈ ಕಂಪನಿ, ಉಪಕರಣದ ತಾಂತ್ರಿಕ ಅಂಶಗಳಿಗೆ ಸಂಬಂಧಿಸಿದಂತೆ ಯಾವ ವಿವರಗಳನ್ನು ಒದಗಿಸಿರಲಿಲ್ಲ. ಅಲ್ಲದೆ ಈ ಕಂಪನಿ ಸರಬರಾಜು ಮಾಡಿರುವ ಹಲವು ವೆಂಟಿಲೇಟರ್‌ಗಳು 13 ವರ್ಷಗಳ ಹಿಂದೆಯೇ ಉತ್ಪಾದನೆಗೊಂಡಿದ್ದವು. ಅಲ್ಲದೆ ಹಲವು ವೆಂಟಿಲೇಟರ್‌ಗಳು ಆಸ್ಪತ್ರೆಗಳಲ್ಲಿ ಬಹುಕಾಲ ಬಳಕೆ ಆಗಿದ್ದವು ಎಂಬುದು ಬಹಿರಂಗವಾಗಿತ್ತು.


ಅಮರಾವತಿ ಮೂಲದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರಿಸ್‌ ಸರಬರಾಜು ಮಾಡಿದ್ದ 11,56,40,000 ರು.ಮೌಲ್ಯದ 350000 ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆಯೂ ಹಲವು ದೂರುಗಳು ಕೇಳಿ ಬಂದಿದ್ದವು. ಈ ಕಂಪನಿ ರಾಜ್ಯಕ್ಕೆ ಪೂರೈಸಿರುವ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಹಲವು ದೂರುಗಳು ಕೇಳಿ ಬಂದ ಕಾರಣ, 125000 ಪಿಪಿಇ ಕಿಟ್‌ಗಳ ಆದೇಶವನ್ನು ಹಿಂಪಡೆದಿತ್ತು.
ಹಾಗೆಯೇ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಸಂಸ್ಥೆ ಸರಬರಾಜು ಮಾಡಿದ್ದ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಸ್ವೀಕೃತವಾಗಿವೆ. ಪ್ರತಿ ಸ್ವೀಕೃತಿಯಲ್ಲೂ ತಿದ್ದುಪಡಿಗಳನ್ನು ತಿಳಿಸಿದ್ದರೂ ಗುಣಮಟ್ಟದ ಕಿಟ್‌ ಪೂರೈಸಲು ಕಂಪನಿ ಕ್ರಮ ಕೈಗೊಂಡಿರಲಿಲ್ಲ.


ಇದಲ್ಲದೆ ಡಯಾಲಿಸಿಸ್‌ ಉಪಕರಣಗಳು, ಗ್ಲುಕೋಸ್‌ ಖರೀದಿಯಲ್ಲಿಯೂ ಸಾಕಷ್ಟು ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಎಲ್ಲ ಪ್ರಕರಣಗಳ ಬಗ್ಗೆ ‘ದಿ ಫೈಲ್‌’ ಸರಣಿ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು

the fil favicon

SUPPORT THE FILE

Latest News

Related Posts