ಕೊರೊನಾ; ಐಟಿ ಕಂಪನಿಗಳಿಂದಲೇ ಆದಾಯ ಕ್ರೋಡೀಕರಿಸಲು ಇಲ್ಲಿದೆ ದಾರಿ

ಬೆಂಗಳೂರು; ರಾಜಧಾನಿ ಬೆಂಗಳೂರು ನಗರದಲ್ಲಿ ನೆಲೆಗೊಂಡಿರುವ ಮಾಹಿತಿ ತಂತ್ರಜ್ಞಾನ ಸೇರಿದಂತೆ ಇನ್ನಿತರೆ ರಫ್ತು ಉದ್ಯಮಗಳಿಂದಲೇ ಅಂದಾಜು 40,000 ಕೋಟಿ ರು. ಕ್ರೋಢಿಕರಿಸಲು ಅವಕಾಶಗಳಿವೆ ಎಂಬ ಹೊಸ ಲೆಕ್ಕಾಚಾರಗಳು ಮುನ್ನೆಲೆಗೆ ಬಂದಿವೆ.


ಕೋವಿಡ್‌-19ರ ಹಿನ್ನೆಲೆಯಲ್ಲಿ ಸಂಪನ್ಮೂಲ ಸಂಗ್ರಹ ಸ್ಥಗಿತಗೊಂಡಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲ್ತಿಯಲ್ಲಿರುವ ಯೋಜನೆಗಳಿಗೂ ಹಣ ಹೊಂದಿಸಲು ತಿಣುಕಾಡುತ್ತಿರುವ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಸೇರಿದಂತೆ ಇನ್ನಿತರೆ ಸೇವಾ ವಲಯಗಳು ಮತ್ತು ವಿದೇಶಗಳಿಗೆ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ಕಂಪನಿಗಳಿಂದ ಆದಾಯ ಕ್ರೋಢೀಕರಣ ಲೆಕ್ಕಚಾರಗಳು ಹೊಸ ಚರ್ಚೆ ಹುಟ್ಟು ಹಾಕಿವೆ.


ರಾಜ್ಯದ ಬೃಹತ್‌ ಉದ್ದಿಮೆದಾರರು ಮತ್ತು ಐ ಟಿ ಕಂಪನಿಗಳಿಗೆ 1999 ರಿಂದ 2011ರವರೆಗೆ ಕೇಂದ್ರ ಸರ್ಕಾರ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿತ್ತು. ಹೀಗಾಗಿ ಆ ಸಂದರ್ಭದಲ್ಲಿ ಲಕ್ಷಾಂತರ ಕೋಟಿ ಮೊತ್ತದ ತೆರಿಗೆ ಹಣ ಉಳಿಸಿಕೊಂಡಿರುವ ಈ ಕಂಪನಿಗಳೀಗ, ತೀವ್ರ ತರಹದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಕ್ಕೆ ನೆರವಾಗುವ ಉತ್ತಮ ಅವಕಾಶವೂ ಬಂದದೊಗಿದೆ.


ಐ ಟಿ ಮತ್ತು ಇನ್ನಿತರೆ ರಫ್ತುದಾರ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಬಡ್ಡಿ ರಹಿತವಾಗಿ ಈ ಹಣವನ್ನು ನೀಡುವ ಮೂಲಕ ಹಿಂದಿನ ಹಲವು ವರ್ಷಗಳಲ್ಲಿ ಪಡೆದಿದ್ದ ತೆರಿಗೆ ವಿನಾಯಿತಿಯಿಂದ ಋಣಮುಕ್ತವಾಗಬಹುದಲ್ಲದೆ ಸರ್ಕಾರಕ್ಕೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಬಹುದು ಎಂಬ ವಾದಗಳು ಕೇಳಿ ಬಂದಿವೆ. ರಾಜ್ಯದಲ್ಲಿ ಪ್ರಾಯೋಗಿಕವಾಗಿ ಈ ಅವಕಾಶಗಳನ್ನು ಬಳಸಿಕೊಂಡಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಮಾದರಿ ಆಗಬಹುದು.


‘ಸದ್ಯದ ಪರಿಸ್ಥಿತಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕೈಗಾರಿಕೆಗಳಿಗೆ ಸಾಲ ನೀಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ 500 ಕೋಟಿ ರೂಪಾಯಿಗಳಿಗೂ ಹೆಚ್ಚು ವಾರ್ಷಿಕ ಆದಾಯವುಳ್ಳ ಬೃಹತ್‌ ಉದ್ದಿಮೆದಾರರಿಂದ ಪ್ರತಿಶತ 5 ರಿಂದ 10ರಷ್ಟು ಹಣವನ್ನು ಬಡ್ಡಿ ರಹಿತವಾಗಿ ಪಡೆಯಬಹುದು. ನಿಗದಿತ ಕಾಲಮಿತಿಯೊಳಗೆ ಅಸಲು ಮೊತ್ತವನ್ನು ಬೃಹತ್‌ ಉದ್ದಿಮೆಗಳಿಗೆ ಹಿಂದಿರುಗಿಸಬಹುದು.’ ಆರ್ಥಿಕ ವಿಶ್ಲೇಷಕ ಕರಣ್‌ಕುಮಾರ್‌ ವಿವರಿಸುತ್ತಾರೆ.


ಇದೇ ಮಾದರಿಯನ್ನು ಕೇಂದ್ರ ಸರ್ಕಾರವು ಅನುಸರಿಸಿದರೆ ಅಂದಾಜು 5 ಲಕ್ಷ ಕೋಟಿ ರು.ಗಳನ್ನು ಸಂಗ್ರಹಿಸಬಹುದು ಎಂದು ವಿವರಿಸುವ ಕರಣ್‌ಕುಮಾರ್‌ ಅವರು, ಇನ್ಫೋಸಿಸ್‌ ಸೇರಿದಂತೆ ಹಲವು ಐ ಟಿ ಕಂಪನಿಗಳು ಇರಿಸಿಕೊಂಡಿರುವ ಆಪದ್ಧನ ನಿಧಿ ಪೈಕಿ ಪ್ರತಿಶತ 5ರಷ್ಟು ಪಡೆದರೂ ರಾಜ್ಯ ಸರ್ಕಾರ ಸಂಪನ್ಮೂಲ ಸಂಗ್ರಹ ಕ್ರೋಢೀಕರಿಸಿಕೊಂಡು ಸಂಕಷ್ಟದಲ್ಲಿರುವ ಸೂಕ್ಷ್ಮ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕಂಪನಿಗಳಿಗೆ ಶೇ. 6ರ ಬಡ್ಡಿ ದರದಲ್ಲಿ ಹಣಕಾಸಿನ ನೆರವು ನೀಡಬಹುದು ಎನ್ನುತ್ತಾರೆ.


ಇದಷ್ಟೇ ಅಲ್ಲ, ಮಾರ್ಚ್‌ 2020ರ ನಂತರ ರುಪಾಯಿ ಮೌಲ್ಯ ಕಳೆದುಕೊಂಡ ಪರಿಣಾಮ ಡಾಲರ್‌ ಲೆಕ್ಕದಲ್ಲಿ ಐ ಟಿ ಸೇರಿದಂತೆ ವಿವಿಧ ದೇಶೀಯ ಉತ್ಪನ್ನಗಳ ರಫ್ತುದಾರರು ನಿರಾಯಸವಾಗಿ ಶೇ.10 ರಷ್ಟು ಅಧಿಕ ಆದಾಯ ಗಳಿಸುತ್ತಿದ್ದಾರೆ. ರುಪಾಯಿ ಮೌಲ್ಯ ಕುಸಿತದ ನಷ್ಟವನ್ನು ಸರ್ಕಾರಗಳು ಅನುಭವಿಸುತ್ತಿದ್ದರೆ ಕಂಪನಿಗಳು ಡಾಲರ್‌ ಲೆಕ್ಕದಲ್ಲಿ ಹೆಚ್ಚುವರಿ ಲಾಭ ಗಳಿಸುತ್ತಿವೆ.
ಬೆಂಗಳೂರಿನಿಂದ ರಫ್ತು ಮಾಡುತ್ತಿರುವ ಕಂಪನಿಗಳು ಪ್ರತಿ ತಿಂಗಳು 10,000 ಕೋಟಿ ರು. ಹೆಚ್ಚುವರಿಯಾಗಿ ಆದಾಯ ಗಳಿಸುತ್ತಿದೆ ಎಂದು ವಿವರಿಸುವ ಕರಣ್‌ಕುಮಾರ್‌ ಅವರು ‘ಡಾಲರ್‌ ವಿರುದ್ಧ ರುಪಾಯಿ ಮೌಲ್ಯ 69 ರು.ಗೆ ಬರುವವರೆಗೂ ಈ ಹೆಚ್ಚುವರಿ ಲಾಭವನ್ನು ಬೊಕ್ಕಸಕ್ಕೆ ತುಂಬುವ ಮೂಲಕ ನಷ್ಟವನ್ನು ಸರಿದೂಗಿಸುವ ಮತ್ತೊಂದು ವಿಧಾನ’ ಎಂದು ವಿವರಿಸುತ್ತಾರೆ.


ಅದೇ ರೀತಿ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌, ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಮಧ್ಯಪ್ರದೇಶ, ಹರಿಯಾಣ, ದೆಹಲಿಯಲ್ಲಿರುವ ಬೃಹತ್‌ ಉದ್ದಿಮೆಗಳಿಂದ ಅಂದಾಜು 5 ಲಕ್ಷ ಕೋಟಿ ರು.ಗಳನ್ನು ಸಂಗ್ರಹಿಸಲು ಅವಕಾಶವಿದೆ.


ಇನ್ನು,ಕಾರ್ಪೋರೇಟ್ ಕಂಪನಿಗಳು ಹೊಂದಿರುವ ಆಸ್ತಿ ಮೌಲ್ಯವೇ 100 ಲಕ್ಷ ಕೋಟಿಗೂ ಅಧಿಕ ಇದೆ. ಹೀಗಿರುವಾಗ ಶೇ.5ರಷ್ಟು ಕೊಡುಗೆ ನೀಡಿದರೂ ಅದರ ಮೊತ್ತವೇ 5 ಲಕ್ಷ ಕೋಟಿ ದಾಟುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಹೀಗೆ ಲಕ್ಷಾಂತರ ಕೋಟಿ ರು. ಲೆಕ್ಕದಲ್ಲಿ ಸಂಗ್ರಹವಾಗುವ ಹಣದಿಂದ ಪ್ರಾಥಮಿಕ ಹಂತದಲ್ಲಿ ಸೂಕ್ಷ್ಮ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಉದ್ಯಮಿಗಳ ನಿಧಿ ಆರಂಭಿಸಬಹುದು. 2019-20ರ ಆರ್ಥಿಕ ವರ್ಷದ ಆದಾಯದನ್ವಯ ಪ್ರತಿಶತ 25ರಷ್ಟು ಸಮಾನವಾಗಿ ಕೊರೊನಾ ಸಾಲವನ್ನು ವಾರ್ಷಿಕ ಶೇ.6ರಂತೆ ನೀಡಬಹುದು. ಮೊದಲ 6 ತಿಂಗಳ ನಿಷೇಧದ ಅವಧಿಯನ್ನು ಬಿಟ್ಟು 60 ಕಂತುಗಳಲ್ಲಿ ಮರುಪಾವತಿಸುವ ಷರತ್ತು ವಿಧಿಸಬಹುದು.


ಶೇ. 6ರ ಬಡ್ಡಿ ಮೊತ್ತದಲ್ಲಿ ಸಾಲ ವಿತರಿಸುವ ಬ್ಯಾಂಕ್‌ಗಳು ಶೇ.1ರಷ್ಟು ಹಣವನ್ನು ಆಡಳಿತ ಶುಲ್ಕವಾಗಿ ಉಳಿಸಿಕೊಂಡು ಉಳಿದ ಬಡ್ಡಿ ಶೇ.5ರ ಬಡ್ಡಿ ಮೊತ್ತವನ್ನು ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗಳ ಸಹಾಯ ನಿಧಿಗೆ ಜಮಾ ಮಾಡಬಹುದು.
ಅದೇ ರೀತಿ ಕಳೆದೆರಡು ದಶಕಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ರಿಯಾಯಿತಿಗಳನ್ನು ಪಡೆದಿರುವ ದೊಡ್ಡ ಪ್ರಮಾಣದ ಉದ್ದಿಮೆದಾರರು ಈ ಹಂತದಲ್ಲಿ ಮಧ್ಯಪ್ರವೇಶಿಸಿ ಬಡ್ಡಿ ರಹಿತ ಬಾಂಡ್‌ಗಳನ್ನು ನೀಡಲು ಇದೊಂದು ಉತ್ತಮ ಅವಕಾಶವೂ ಆಗಿದೆ.


ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳ ವಲಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳ ಬಗ್ಗೆ ವಿವರಿಸುವ ಕರಣ್‌ಕುಮಾರ್‌ ‘ಏಪ್ರಿಲ್‌ 2020ರಿಂದ ಸೆಪ್ಟಂಬರ್‌ 2020ರವರೆಗೆ ಸೂಕ್ಷ್ಮ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಶ್ರೇಣಿ ಉದ್ಯಮದ ನಿಧಿ ಮೂಲಕ 5 ಲಕ್ಷ ಕೋಟಿ ರು.ಗಳನ್ನು ಉತ್ತಮ ಪ್ರದರ್ಶನ ನೀಡಿರುವ ಸಣ್ಣ, ಅತಿ ಸಣ್ಣ ಉದ್ದಿಮೆಗಳಿಗೆ 2019-20ರ ಆರ್ಥಿಕ ವಾರ್ಷಿಕ ಆದಾಯದ ಶೇ.25ಕ್ಕೆ ಸಮನಾಗಿ ಬ್ಯಾಂಕ್‌ಗಳ ಮೂಲಕ ಸಾಲ ವಿತರಿಸಬಹುದು,’ ಎಂದು ಸಲಹೆ ನೀಡುತ್ತಾರೆ.


200 ಮತ್ತು 500 ಕೋಟಿ ರೂಪಾಯಿಗಳ ಮಧ್ಯದ ವಾರ್ಷಿಕ ಆದಾಯವುಳ್ಳ ಉದ್ದಿಮೆದಾರರು ಪ್ರತಿಶತ 3ರಿಂದ 5ರಷ್ಟು ಕೊಡುಗೆ ನೀಡುವಂತೆ ಪ್ರೇರೇಪಿಸಬಹುದು. 100 ಮತ್ತು 200 ಕೋಟಿ ರೂಪಾಯಿಗಳ ಮಧ್ಯದ ವಾರ್ಷಿಕ ಆದಾಯವುಳ್ಳ ಉದ್ದಿಮೆದಾರರು ಪ್ರತಿಶತ 2ರಿಂದ 3ರಷ್ಟು ಕೊಡುಗೆಯನ್ನು ನೀಡಲು ಉತ್ತೇಜಿಸಬಹುದು.


ಅಕ್ಟೋಬರ್ 2020ರಿಂದ ಸೆಪ್ಟಂಬರ್ 2023ರ ವರೆಗಿನ ದೀರ್ಘಾವಧಿ ಕ್ರಮಗಳನ್ನೂ ಕೈಗೊಳ್ಳಬಹುದು. ಆಸ್ತಿ/ಮೀಸಲುಗಳ ಶೇಕಡ 20ಕ್ಕೆ ಮೀರದಂತೆ ದೊಡ್ಡ (ದೇಶೀಯ ಮತ್ತು ಬಹುರಾಷ್ಟ್ರೀಯ) ಉದ್ದಿಮೆಗಳು ಅವುಗಳ ಆಸಕ್ತಿ ಮತ್ತು ಆಯ್ಕೆಗಳಿಗೆ ಅನುಗುಣವಾಗಿ 100 ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳಲ್ಲಿ ಶೇ.25ರಷ್ಟು ಹೂಡಿಕೆಗಳನ್ನು ಮಾಡುವಂತೆ ಆದೇಶಿಸಬಹುದು.
ಭಾರತ ಸರ್ಕಾರ ಅಥವಾ ಅನುಮೋದನೆಯ ಮೇರೆಗೆ ವಿದೇಶಿ ನೇರ ಬಂಡವಾಳ ಹೂಡಿಕೆಯು 25 ಲಕ್ಷ ಕೋಟಿಗಳಷ್ಟನ್ನು ಸಜ್ಜು ಗೊಳಿಸುವ ಮೂಲಕ ಶೇ 20 ರಷ್ಟು ಪಾಲನ್ನು ಹಿಡಿದಿಡಬಹುದು. ‘2023ರ ವೇಳೆಗೆ ಎರಡು ಟ್ರಿಲಿಯನ್ ಡಾಲರ್‌ಗಳ ವಾರ್ಷಿಕ ವಹಿವಾಟು ನಡೆಸುವ ಗುರಿ ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳನ್ನು ಹೊರತುಪಡಿಸಿ ದೀರ್ಘಾವಧಿಯಲ್ಲಿ ಹೆಚ್ಚುವರಿಯಾಗಿ 12 ಕೋಟಿ ಉದ್ಯೋಗ ಸೃಷ್ಠಿಸುವ ನಿರೀಕ್ಷೆಇದೆ,’ ಎನ್ನುತ್ತಾರೆ ಕರಣ್‌ಕುಮಾರ್‌.


ಮುಂದಿನ 90 ದಿನಗಳಲ್ಲಿ ದೇಶದ ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳ ಅವಶ್ಯವಾದ ಹಣದ ಹರಿವು ಆಗದಿದ್ದಲ್ಲಿ ದೇಶ ವಿದೇಶಗಳ ಗ್ರಾಹಕರ ಬೇಡಿಕೆಗಳನ್ನು ನೀಗಿಸುವ ಬೆಳವಣಿಗೆಯ ಬದಲು ಸರ್ಕಾರವು 30 ಕೋಟಿ ಜನಸಂಖ್ಯೆ (ನೌಕರರು ಮತ್ತು ಅವರ ಕುಟುಂಬದ ಸದಸ್ಯರು, ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳ ಸಹವರ್ತಿಗಳು) ಬೀದಿಗಿಳಿದರೂ ಅಚ್ಚರಿಯೇನಿಲ್ಲ ಎನ್ನುತ್ತಾರೆ ಕರಣ್‌ಕುಮಾರ್.

the fil favicon

SUPPORT THE FILE

Latest News

Related Posts