ಆದಾಯ ಸ್ಥಗಿತ ನೆಪ; ಕಾಲೇಜು ಶಿಕ್ಷಣ ಶುಲ್ಕ ಶೇ.10ರಷ್ಟು ಹೆಚ್ಚಳ?

ಬೆಂಗಳೂರು; ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸಂಪನ್ಮೂಲ ಸಂಗ್ರಹ ಸ್ಥಗಿತಗೊಂಡಿರುವ ಕಾರಣ ರಾಜ್ಯ ಸರ್ಕಾರ ತೆರಿಗೆಯೇತರ ಆದಾಯ ಮೂಲಗಳ ಪರಿಷ್ಕರಣೆಯಲ್ಲಿ ಮಗ್ನವಾಗಿದೆ. ಇದರ ಭಾಗವಾಗಿ ಸರ್ಕಾರಿ ಕಾಲೇಜುಗಳಲ್ಲಿನ ಎಂಬಿಎ ಮತ್ತು ಎಂಸಿಎ ಸೇರಿದಂತೆ ಇನ್ನಿತರೆ ಕೋರ್ಸ್‌ಗಳ ಶುಲ್ಕವನ್ನು ಪರಿಷ್ಕರಿಸಲು ತುದಿಗಾಲಲ್ಲಿ ನಿಂತಿದೆ.

2019-20ನೇ ಸಾಲಿನಲ್ಲಿ ವಿಧಿಸಿದ್ದ ಶುಲ್ಕವನ್ನು ಮುಂದುವರೆಸುವುದೇ ಅಥವಾ 2019-20ನೇ ಸಾಲಿನಲ್ಲಿ ನಿಗದಿಗೊಳಿಸಿದ್ದ ಶುಲ್ಕಗಳಿಗೆ ಶೇ.10ರಷ್ಟು ಹೆಚ್ಚಿಸಿ ಪರಿಷ್ಕರಿಸಬೇಕೆ ಎಂಬ ಬಗ್ಗೆ ಉನ್ನತ ಶಿಕ್ಷಣ ಇಲಾಖೆ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರ ತೀರ್ಮಾನಕ್ಕೆ ಬಿಟ್ಟಿದೆ.

ಶುಲ್ಕ ಹೆಚ್ಚಿಸುವ ಕುರಿತು ಕಾಲೇಜು ಶಿಕ್ಷಣ ಆಯುಕ್ತರು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆರಂಭಗೊಳ್ಳಲಿರುವ ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳನ್ನು ಒಳಗೊಂಡಂತೆ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ 2019-20ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಶುಲ್ಕ ವಿನ್ಯಾಸವನ್ನೇ 2020-21ನೇ ಸಾಲಿನಲ್ಲಿ ಮುಂದುವರೆಸುವುದೇ ಅಥವಾ ಹಿಂದಿನ ಸಾಲಿನಲ್ಲಿ ನಿಗದಿಗೊಳಿಸಿದ್ದ ಶುಲ್ಕಗಳನ್ನು ಶೇ.10ರಷ್ಟು ಪರಿಷ್ಕರಿಸಲು ಅನುಮತಿ ಕೋರಿದೆ,’ ಎಂದು ಪ್ರಸ್ತಾವನೆ ಸಲ್ಲಿಸುವ ಮೂಲಕ ಆಯುಕ್ತರು ಸರ್ಕಾರದ ಬಾಗಿಲು ತಟ್ಟಿದ್ದಾರೆ.

ಈ ಪ್ರಸ್ತಾವನೆ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯೂ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ‘ಸುಮಾರು 2 ವರ್ಷಗಳ ಹಿಂದೆ ನಿಗದಿಗೊಳಿಸಿದ್ದ ಶುಲ್ಕವನ್ನು ಮುಂದುವರೆಸುತ್ತಿರುವುದರಿಂದ ಅದನ್ನು ಪರಿಷ್ಕರಿಸುವ ಅಗತ್ಯವಿದೆ. ಆದರೂ ಪ್ರಸ್ತಾವನೆಯಲ್ಲಿ ಹಣಕಾಸಿನ ವಿಷಯವಿರುವುದರಿಂದ ಆರ್ಥಿಕ ಇಲಾಖೆಯ ಅಭಿಪ್ರಾಯ ಕೋರಬಹುದು,’ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಎಂಬಿಎ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವಿದ್ಯಾರ್ಥಿಗಳಿಗೆ ಸರ್ಕಾರವು ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ವಾರ್ಷಿಕ 20,000 ರು. ನಿಗದಿಪಡಿಸಿತ್ತು. ಇದೇ ಶುಲ್ಕ 2018-19ನೇ ಸಾಲಿನಲ್ಲಿಯೂ ಚಾಲ್ತಿಯಲ್ಲಿತ್ತು. 2019-20ನೇ ಸಾಲಿನಲ್ಲಿ ಅರ್ಜಿ ಶುಲ್ಕ, ಪ್ರವೇಶ ಶುಲ್ಕ, ಪ್ರಯೋಗಾಲಯ, ಸ್ನಾತಕೋತ್ತರ ವಿಭಾಗ ಅಭಿವೃದ್ಧಿ ಶುಲ್ಕ ಸೇರಿದಂತೆ ಒಟ್ಟು 2,850 ರು.ಗಳನ್ನು ನಿಗದಿಪಡಿಸಿತ್ತು.

ಸರಕಾರಿ ಕಾಲೇಜುಗಳಲ್ಲಿನ ಎಂಬಿಎ, ಎಂಸಿಎ ಸೇರಿದಂತೆ ಹಲವು ಕೋರ್ಸುಗಳ ಶುಲ್ಕವನ್ನು ಪರಿಷ್ಕರಿಸಿದ್ದ ಉನ್ನತ ಶಿಕ್ಷಣ ಇಲಾಖೆ 2017-18 ನೇ ಸಾಲಿನಲ್ಲಿ ಕೆಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಿರುವ ಎಂಬಿಎ ಹಾಗೂ ಎಂಸಿಎ ಸೇರಿದಂತೆ ನಾನಾ ಸ್ನಾತಕೋತ್ತರ ಕೋರ್ಸುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

the fil favicon

SUPPORT THE FILE

Latest News

Related Posts