ಕೊರೊನಾ; ಕಪ್ಪುಪಟ್ಟಿಯಲ್ಲಿರುವ ಗುಜರಾತ್‌ ಕಂಪನಿಯಿಂದ ಗ್ಲುಕೋಸ್‌ ಖರೀದಿ!

ಬೆಂಗಳೂರು: ನೆರೆಯ ಕೇರಳ, ಒಡಿಶಾ, ರಾಜಸ್ಥಾನ ಸರ್ಕಾರದ ಆರೋಗ್ಯ ಇಲಾಖೆಯ ಕಪ್ಪು ಪಟ್ಟಿಯಲ್ಲಿದ್ದ ಗುಜರಾತ್‌ನ ಅಹಮದಾಬಾದ್‌ ಮೂಲದ ಆಕ್ಯುಲೈಫ್‌ ಹೆಲ್ತ್‌ಕೇರ್‌ ಕಂಪನಿಯೊಂದಕ್ಕೆ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಮಣೆ ಹಾಕಿದೆ. ಈ ಹಿಂದೆ ಇದೇ ಕಂಪನಿಗೆ ನೋಟೀಸ್‌ ನೀಡಿದ್ದ ಕೆಎಸ್‌ಡಿಎಲ್‌ಎಸ್‌, ಕೊರೊನಾ ಹಿನ್ನೆಲೆಯಲ್ಲಿ ರತ್ನಗಂಬಳಿ ಹಾಸಿರುವುದು ವಿವಾದಕ್ಕೆಡೆ ಮಾಡಿಕೊಟ್ಟಿದೆ.


ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಗ್ಲುಕೋಸ್‌ (ಐ ವಿ ಫ್ಲೂಯಿಡ್‌) ಸೇರಿದಂತೆ ಇನ್ನಿತರೆ ಔಷಧ ಸಾಮಗ್ರಿಗಳ ಖರೀದಿಗೆ ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ 2020ರ ಏಪ್ರಿಲ್‌ನಲ್ಲಿ ಆದೇಶ ನೀಡಿರುವುದು ಸಂಸ್ಥೆಯ ಅಕ್ರಮದ ಜಾಡು ಇನ್ನಷ್ಟು ವಿಸ್ತರಿಸಿದಂತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲ ಮಹತ್ವದ ದಾಖಲೆಗಳು ಲಭ್ಯವಾಗಿವೆ.
ಪಿಪಿಇ ಕಿಟ್‌, ಸ್ಯಾನಿಟೈಸರ್‌ ಮತ್ತು ವೆಂಟಿಲೇಟರ್‌ಗಳ ಖರೀದಿ ಪ್ರಕರಣಗಳು ಎಬ್ಬಿಸಿದ್ದ ಸದ್ದು ಇನ್ನೂ ನಿಂತಿಲ್ಲ. ಇದರ ಬೆನ್ನಲ್ಲೇ ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ ಅಂದಾಜು 4 ಕೋಟಿ ರು. ಮೌಲ್ಯದ ಔಷಧ ಖರೀದಿ ಆದೇಶ ನೀಡಿರುವುದು ಈ ಸಂಸ್ಥೆಯಲ್ಲಿ ಅಕ್ರಮದ ಹುತ್ತವೇ ಎದ್ದು ನಿಂತಿದೆ ಎಂಬುದಕ್ಕೆ ನಿದರ್ಶನ ಒದಗಿಸಿದೆ.


ಗ್ಲುಕೋಸ್‌ ಸೇರಿದಂತೆ ಇನ್ನಿತರೆ ಔಷಧ ಖರೀದಿ ಸಂಬಂಧ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಆಕ್ಯುಲೈಫ್‌ ಹೆಲ್ತ್‌ಕೇರ್‌ ಕಂಪನಿಯು ಟೆಂಡರ್‌ ಷರತ್ತುಗಳನ್ನು ಪೂರೈಸದ ಕಾರಣ ಆರ್ಥಿಕ ಬಿಡ್‌ನ್ನು ತೆರೆದಿರಲಿಲ್ಲ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇದೇ ಕಂಪನಿಗೆ ಔಷಧ ಸಾಮಗ್ರಿ ಖರೀದಿ ಆದೇಶ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.


ಪ್ರಕರಣ ವಿವರ


ಆರ್‌ ಎಲ್‌(Ringer Lactate Infusion) ಎನ್‌ ಎಸ್‌ (Normal Saline) ಡಿಎನ್‌ಎಸ್‌ ( Dextrose) ಖರೀದಿಸಲು ಕರೆದಿದ್ದ ಟೆಂಡರ್‌ನಲ್ಲಿ ಫ್ರೆಸಿನಸ್‌ ಕಬಿ ಇಂಡಿಯಾ ಪ್ರೈ ಲಿ., ಒಟುಸ್ಕಾ ಫಾರ್ಮಾಸ್ಯುಟಿಕಲ್ಸ್‌ ಇಂಡಿಯಾ ಪ್ರೈ ಲಿ., ಕ್ರಮವಾಗಿ ಎಲ್‌ 1 ಮತ್ತು ಎಲ್‌ 2 ಅರ್ಹತೆ ಪಡೆದಿದ್ದವು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಆಕ್ಯುಲೈಫ್‌ ಹೆಲ್ತ್‌ಕೇರ್‌ ಕಂಪನಿ, ಈ ಹಿಂದೆ ಸರಬರಾಜು ಮಾಡಿದ್ದ ಎರಡಕ್ಕಿಂತ ಹೆಚ್ಚಿನ ಉತ್ಪನ್ನಗಳಲ್ಲಿ ನಿಗದಿತ ಪ್ರಮಾಣದಲ್ಲಿ ಔಷಧ ಇರಲಿಲ್ಲ ಎಂದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದರಿಂದ ಈ ಟೆಂಡರ್‌ನಿಂದ ಹೊರಗಿಡಲಾಗಿತ್ತು ಎಂಬುದು ಗೊತ್ತಾಗಿದೆ.


ನಿಯಮಗಳ ಪ್ರಕಾರ ಔ‍ಷಧ ಖರೀದಿ ಸಂಬಂಧ ಫ್ರೆಸಿನಸ್‌ ಕಬಿ ಇಂಡಿಯಾ ಪ್ರೈ ಲಿ. ಜತೆ ಚಾಲ್ತಿಯಲ್ಲಿದ್ದ ದರ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಈ ಕಂಪನಿ ಸರಬರಾಜು ಮಾಡಲು ಒಪ್ಪದಿದ್ದ ಪಕ್ಷದಲ್ಲಿ ಎಲ್‌ 2 ಅರ್ಹತೆ ಪಡೆದಿದ್ದ ಒಟುಸ್ಕಾ ಫಾರ್ಮಾಸ್ಯುಟಿಕಲ್ಸ್‌ ಇಂಡಿಯಾ ಪ್ರೈ ಲಿ ಗೆ ಆಹ್ವಾನ ನೀಡಬೇಕಿತ್ತು. ಈ ಕಂಪನಿಯೂ ಸರಬರಾಜು ಮಾಡಲು ಒಪ್ಪದಿದ್ದಾಗ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬೇಕಿತ್ತು.
ಈ ನಡುವೆ ಒಟುಸ್ಕಾ ಫಾರ್ಮಾಸ್ಯುಟಿಕಲ್ಸ್‌ ಇಂಡಿಯಾ ಪ್ರೈ ಲಿ., 2020ರ ಮಾರ್ಚ್‌ 26ರಂದು ಕೊಟೇಷನ್‌ ನೀಡಿತ್ತು. ಇದು ಆಕ್ಯುಲೈಫ್‌ ಹೆಲ್ತ್‌ಕೇರ್‌ ನಮೂದಿಸಿದ್ದ ದರಕ್ಕಿಂತಲೂ ಕಡಿಮೆ ಇತ್ತು. ಆದರೆ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಇದನ್ನು ಪರಿಗಣಿಸಿರಲಿಲ್ಲ. ಅಲ್ಲದೆ ನಿಯಮಗಳ ಪ್ರಕಾರ ಖರೀದಿ ಪ್ರಕ್ರಿಯೆ ನಡೆಸದೆ ನೇರವಾಗಿ ಆಕ್ಯುಲೈಫ್‌ ಹೆಲ್ತ್‌ಕೇರ್‌ ಕಂಪನಿಗೆ ಕೋಟ್ಯಂತರ ರು.ಮೊತ್ತದ ಖರೀದಿ ಆದೇಶ ನೀಡಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.


ಅದೇ ರೀತಿ ಕೋಲ್ಕತ್ತಾದ ಸಿಡಿಎಲ್‌ನಿಂದ ತಪಾಸಣೆ ವರದಿ ಪಡೆಯದ ಕಂಪನಿಗಳನ್ನೂ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೆ ಆಕ್ಯುಲೈಫ್‌ ಪ್ರೈ.ಲಿ., ಸಿಡಿಎಲ್‌ನಲ್ಲಿ ತಪಾಸಣೆಗೊಳಪಡದಿದ್ದರೂ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಿರಲಿಲ್ಲ.


ಇದಲ್ಲದೆ ಇದೇ ಆಕ್ಯುಲೈಫ್‌ ಹೆಲ್ತ್‌ಕೇರ್‌ ಕಂಪನಿ ಗುಣಮಟ್ಟವಲ್ಲದ ಔಷಧ ಪೂರೈಸಿದೆ ಎಂಬ ಕಾರಣಕ್ಕೆ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಗೆ 2020ರ ಫೆ.14ರಂದು ನೋಟೀಸ್‌ ನೀಡಿತ್ತು.’ಗುಣಮಟ್ಟವಲ್ಲದ ಔಷಧ ಸಾಮಗ್ರಿಗಳನ್ನು ಪೂರೈಸಿರುವ ಕಾರಣಕ್ಕೆ ನಿಮ್ಮ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮವೇಕೆ ಕೈಗೊಳ್ಳಬಾರದು,’ ಎಂದು ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಯ ಹೆಚ್ಚುವರಿ ನಿರ್ದೇಶಕಿ ಮಂಜುಶ್ರೀ ಅವರು ನೋಟೀಸ್‌ ನೀಡಿದ್ದರು.

ಆದರೆ ವಿಪರ್ಯಾಸವೆಂದರೆ 2 ತಿಂಗಳ ನಂತರ ಇದೇ ಕಂಪನಿಗೆ ಗ್ಲುಕೋಸ್‌ ಸೇರಿದಂತೆ ಇನ್ನಿತರೆ ಔಷಧ ಸಾಮಗ್ರಿ ಸರಬರಾಜು ಮಾಡಲು ಆದೇಶ ದೊರೆತಿರುವುದು ದಾಖಲೆಯಿಂದ ತಿಳಿದು ಬಂದಿದೆ.


ಇದಲ್ಲದೆ ದಾವಣಗೆರೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ 2019ರ ಫೆ.28ರಂದು ಸರಬರಾಜು ಮಾಡಿದ್ದ ಸಿಪ್ರೋಫ್ಲೋಕ್ಸಿನ್‌ ಹೆಸರಿನ ಚುಚ್ಚುಮದ್ದಿನಲ್ಲಿ ನಿಗದಿತ ಪ್ರಮಾಣದಲ್ಲಿ ಔಷಧ ಇರಲಿಲ್ಲ ಎಂಬುದನ್ನು ದಾವಣಗೆರೆ ವೃತ್ತದ ಔಷಧ ಪರಿವೀಕ್ಷಕರು ಇನ್ಸ್‌ಪೆಕ್ಟರ್‌ ಗೀತಾ ಎಂ ಎಸ್‌ ಎಂಬುವರು ಹೊರಗೆಡವಿದ್ದರು. ಅಲ್ಲದೆ ಇದೇ ಕಂಪನಿ ವಿರುದ್ಧ ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡುವ ಬಗ್ಗೆ 2019ರ ಅಕ್ಟೋಬರ್‌ 11ರಂದು ಪತ್ರವನ್ನೂ ಬರೆದಿದ್ದರು.


ಆಕ್ಯುಲೈಫ್‌ ಹೆಲ್ತ್‌ಕೇರ್‌ ಸೇರಿದಂತೆ ಗುರುತರ ಆರೋಪಗಳಿಗೆ ಗುರಿಯಾಗಿರುವ ಹಲವು ಕಂಪನಿಗಳಿಗೆ ಖರೀದಿ ಆದೇಶ ದೊರೆಯುತ್ತಿರುವುದರ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳ ಭ್ರಷ್ಟ ಕೂಟ ಹೆಚ್ಚು ಪಾತ್ರವಹಿಸಿದೆ.

ಸಚಿವ ಬಿ ಶ್ರೀರಾಮುಲು ಅವರನ್ನು ಕತ್ತಲಲ್ಲಿಟ್ಟು ಬಹುತೇಕ ಎಲ್ಲಾ ಖರೀದಿ ಪ್ರಕ್ರಿಯೆಗಳನ್ನು ಸಂಸ್ಥೆಯ ಇಬ್ಬರು ಅಧಿಕಾರಿಗಳೇ ನಡೆಸುತ್ತಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.

the fil favicon

SUPPORT THE FILE

Latest News

Related Posts