273 ಅಕ್ರಮ ಖಾತೆ ಪ್ರಕರಣ; ಪಿಡಿಒ ರಕ್ಷಣೆಗೆ ನಿಂತಿತೇ ಸರ್ಕಾರ?

ಬೆಂಗಳೂರು; ಆನೇಕಲ್‌ ತಾಲೂಕಿನ ಬಿಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ 79 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿಗೆ ಅಕ್ರಮವಾಗಿ ಮಾಡಿದ್ದ 273 ಖಾತೆಗಳನ್ನು ರದ್ದುಗೊಳಿಸಿರುವ ಸರ್ಕಾರ, ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟಿದ್ದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ರಕ್ಷಣೆಗೆ ನಿಂತಿದೆ!

ಗ್ರಾಮ ಪಂಚಾಯ್ತಿ ಸದಸ್ಯರನ್ನೂ ಯಾಮಾರಿಸಿ 300 ಕೋಟಿ  ರು. ಮೌಲ್ಯದ 79 ಎಕರೆಯನ್ನು ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಪಿಡಿಒ ಕೆ ವಿ ಜಯರಾಂ ಅವರನ್ನು ಈವರೆವಿಗೂ ಅಮಾನತುಗೊಳಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. 

273 ಖಾತೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ  ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೆ ವಿ ಜಯರಾಂ ಅವರನ್ನು ಅಮಾನತುಗೊಳಿಸದೆಯೇ ಇಲಾಖೆ ವಿಚಾರಣೆಗೆ ಆದೇಶಿಸಿರುವುದಕ್ಕೆ ಇಲಾಖೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. 

‘ಇದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಅನುಸರಿಸದೇ ಇರುವುದು ಮೇಲ್ನೋಟಕ್ಕೆ  ಕಂಡು ಬರುತ್ತದೆ.  ಈ ಸಂಬಂಧ ಕೆಸಿಎಸ್‌  ಸಿಸಿಎ ನಿಯಮ(12)ರ ಅಡಿಯಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ,’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ 2020ರ ಏಪ್ರಿಲ್‌  15ರಂದು ಆನೇಕಲ್‌  ತಾಲೂಕು  ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದರು. ಪತ್ರ ಬರೆದು ವಾರ ಕಳೆದಿದ್ದರೂ ಬಿಲ್ಲಾಪುರ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿ  ವಿರುದ್ಧ ಈವರೆವಿಗೂ ಕ್ರಮಗೊಂಡಿಲ್ಲ ಎಂದು ತಿಳಿದು ಬಂದಿದೆ.  

ಬಿಲ್ಲಾಪುರ  ಗ್ರಾಮ ಪಂಚಾಯ್ತಿ  ವ್ಯಾಪ್ತಿಯ ಅಡಿಗಾರಕಲ್ಲಹಳ್ಳಿಯ 79 ಎಕರೆ ಜಮೀನಿನ ಪ್ರಕರಣದಲ್ಲಿ ಸರ್ಕಾರದ  ಅತ್ಯುನ್ನತ ಹುದ್ದೆಯಲ್ಲಿರುವ ಪುತ್ರರಿಬ್ಬರು ಪ್ರಭಾವ ಬೀರಿದ್ದಾರೆ  ಎಂದು ಕೆಲ ಮೂಲಗಳು ತಿಳಿಸಿವೆ. ಹೀಗಾಗಿ ಪ್ರಕರಣಕ್ಕೆ  ಸಂಬಂಧಿಸಿದಂತೆ  ಪಿಡಿಒ ಅವರನ್ನು  ಅಮಾನತುಗೊಳಿಸಲು ಸಚಿವ  ಈಶ್ವರಪ್ಪ ಅವರು ಹಿಂದೇಟು ಹಾಕಿದ್ದಾರೆ ಎಂದು  ಗೊತ್ತಾಗಿದೆ. 

ಕೊರೊನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವ ಸಂದರ್ಭವನ್ನು ಬಳಸಿಕೊಂಡಿದ್ದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ ವಿ ಜಯರಾಮ್‌ ಎಂಬುವರು ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಯನ್ನೂ ಕತ್ತಲಲ್ಲಿಟ್ಟು 273 ಖಾತೆಗಳನ್ನು ಮಾಡಿಕೊಟ್ಟಿದ್ದನ್ನು ‘ದಿ ಫೈಲ್‌’ ಹೊರಗೆಡವಿತ್ತು.

ರೆಮ್ಕೋ ಬಿಎಚ್‌ಇಎಲ್‌ ಹೌಸಿಂಗ್‌ ಸೊಸೈಟಿ ಅಧ್ಯಕ್ಷ ವಿಜಯಕುಮಾರ್‌ ಅವರ ಹೆಸರಿಗೆ 2020ರ ಏಪ್ರಿಲ್‌ 1ರಂದು ಖಾತೆ ಮಾಡಿಕೊಡಲಾಗಿತ್ತು. ಖಾತೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ತೆರೆದಿರುವ ಕಡತದಲ್ಲಿ ಯಾವುದೇ ಮಾಹಿತಿ, ದಾಖಲೆಯೂ ಇರಲಿಲ್ಲ. ವಿಧಾನಪರಿಷತ್‌ ಸದಸ್ಯ ಸಿ ಆರ್‌ ಮನೋಹರ್‌ ಅವರ ಹೆಸರು ಈ ಪ್ರಕರಣದಲ್ಲಿ ಥಳಕು ಹಾಕಿಕೊಂಡಿತ್ತು. ಅಲ್ಲದೆ ಈ ಪ್ರಕರಣ ಎಸಿಬಿ  ಕೂಡ  ತನಿಖೆ ನಡೆಸುತ್ತಿದೆ. 

ಪ್ರಕರಣದ ಹಿನ್ನಲೆ

ವಿಧಾನ ಪರಿಷತ್‌ ಸದಸ್ಯ ಸಿ.ಆರ್‌. ಮನೋಹರ್‌ (ಜೆಡಿಎಸ್‌) ಹಾಗೂ ಸಿ.ಆರ್‌.ಗೋಪಿ ಮಾಲೀಕತ್ವದ ಲಯನ್‌ ಎಸ್ಟೇಟ್ಸ್‌ ಆ್ಯಂಡ್‌ ಪ್ರಾಪರ್ಟೀಸ್‌ ಸಂಸ್ಥೆಯು ಈ ಸರ್ವೇ ನಂಬರ್‌ನ  ಗೋಮಾಳ ಜಾಗದಲ್ಲೇ ವಸತಿ ಬಡಾವಣೆ ನಿರ್ಮಿಸಿ ರೆಮ್ಕೊ–ಬಿಎಚ್‌ಇಎಲ್‌ ಗೃಹನಿರ್ಮಾಣ ಸಹಕಾರ ಸಂಘಕ್ಕೆ ಮಾರಾಟ ಮಾಡಿತ್ತು. 

ಸಿ.ಆರ್‌.ಮನೋಹರ್‌ ಅವರು ಪಹಣಿ ಕಾಲಂ 3 ಮತ್ತು 9 ಅನ್ನು ಸರಿಪಡಿಸಿಕೊಡಲು ಕೋರಿರುವಂತೆ  ಅಡಿಗಾರ ಕಲ್ಲಹಳ್ಳಿ ಗ್ರಾಮದ ಮೂಲ ಸರ್ವೇ ನಂಬರ್‌ 47ರಲ್ಲಿ  ಜಮೀನಿನ  ಪೋಡಿ ದುರಸ್ತಿ ಮಾಡಲಾಗಿತ್ತಲ್ಲದೆ ಹಳೇ ಸರ್ವೇ ನಂಬರ್‌ (47)  ಬದಲು ಹೊಸ ಸರ್ವೇ ನಂಬರ್‌ಗಳನ್ನು  ನೀಡಲಾಗಿತ್ತು. ಇದರಲ್ಲಿ ಕೆಲವು ಅಧಿಕಾರಿಗಳೂ ಕೈಜೋಡಿಸಿದ್ದು ಅವರ ವಿರುದ್ಧವೂ ಕ್ರಮಕೈಗೊಳ್ಳಲು ಸಮಿತಿ ಶಿಫಾರಸು ಮಾಡಿತ್ತು. 

ಈ ಪೈಕಿ ಸರ್ವೇ ನಂಬರ್‌ 165ರಿಂದ 180ರವರೆಗಿನ ದುರಸ್ತಿ ದಾಖಲೆಗಳನ್ನು  ಹಾಗೂ ಚಾಲ್ತಿಯಲ್ಲಿರುವ ಪಹಣಿಗಳನ್ನು ರದ್ದುಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದ್ದರೂ ಖಾತೆ ಮಾಡಿಕೊಟ್ಟಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. 

ಅದರಲ್ಲೂ ವಿಶೇಷವಾಗಿ ಮೂಲ ಸರ್ವೇ ನಂಬರ್‌ 47ರಲ್ಲಿರುವ 24 ಎಕರೆ 23 ಗುಂಟೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇನ್ನುಳಿದ 79 ಎಕರೆ 10 ಗುಂಟೆ ಜಮೀನಿನ   ಮಂಜೂರಾತಿಗೆ ಸಂಬಂಧಿಸಿ ಕೆಲವು ದಾಖಲೆಗಳು ಲಭ್ಯ ಇದ್ದು, ಇನ್ನೂ ಕೆಲವು ಪ್ರಮುಖ ದಾಖಲೆಗಳು ಲಭ್ಯ ಇರಲಿಲ್ಲ ಎಂಬುದನ್ನೂ ಸಮಿತಿ ಹೊರಗೆಡವಿತ್ತು. 

ಇದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿತ್ತಲ್ಲದೆ,1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 136 (3)ರ ಅಡಿ ಭೂಮಾಲೀಕತ್ವ ನಿರ್ಧರಿಸುವ ಬಗ್ಗೆ ವಿಚಾರಣೆ ನಡೆಸುವುದು ಸೂಕ್ತ ಎಂದು ಹೇಳಿತ್ತು. 

ಇನ್ನು, ಗ್ರಾಮದ ಮೂಲ ದಾಖಲೆಗಳ ಪ್ರಕಾರ ಸರ್ವೇ ನಂಬರ್‌ 47ರಲ್ಲಿ  103 ಎಕರೆ 33 ಗುಂಟೆ ಗೋಮಾಳ ಜಮೀನು ಇದೆ. ಈ ಪೈಕಿ 1926–27ರಲ್ಲಿ 13 ಮಂದಿಗೆ ತಲಾ 4 ಎಕರೆಯಂತೆ 52 ಎಕರೆ ಹಾಗೂ 1953–54ರಲ್ಲಿ 22 ಮಂದಿಗೆ ತಲಾ 22 ಎಕರೆ ಭೂಮಿ ಮಂಜೂರು ಮಾಡಿರುವುದು ತಿಳಿದು ಬಂದಿದೆ. 

1978–79ರಲ್ಲೂ 2 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಆನೇಕಲ್‌ ತಹಸೀಲ್ದಾರ್‌ (ಈ ಹಿಂದಿನವರು) ಅವರು ಸಮಿತಿ ಮುಂದೆ ಹೇಳಿದ್ದರು. ಆದರೆ ಈ ಭೂಮಿ ಮಂಜೂರು ಮಾಡಿದ ಬಗ್ಗೆ ಮೂಲ   ದಾಖಲೆಗಳು  ಲಭ್ಯವಿಲ್ಲ ಎಂಬ ಅಂಶ ವಿಚಾರಣೆಯಿಂದ ಬಹಿರಂಗಗೊಂಡಿತ್ತು.

ಯಾವುದೇ ಭೂದಾಖಲೆಗಳ ಪೋಡಿ ದುರಸ್ತಿಗೆ ಮೂಲ ಮಂಜೂರಾತಿ ಆದೇಶ, ಸಾಗುವಳಿ ಚೀಟಿ, ಮಂಜೂರಾತಿ ಸಂದರ್ಭದಲ್ಲಿ ತಯಾರಿಸಿದ ನಕ್ಷೆ, ಪೋಡಿ ಶುಲ್ಕ ಪಾವತಿಸಿದ ರಸೀದಿ, ಮಂಜೂರಿದಾರರ ಹೆಸರಿಗೆ ಹಕ್ಕು ಬದಲಾವಣೆಗೊಂಡ ಮ್ಯುಟೇಷನ್‌ ಹಾಗೂ ಚಾಲ್ತಿ ಸಾಲಿನ ಆರ್‌ಟಿಸಿಗಳು ಅತ್ಯವಶ್ಯ. 

ಆದರ ಜೊತೆಗೆ ಮಂಜೂರಾತಿಯ ನೈಜತೆ ಸಾಬೀತುಪಡಿಸುವ ದರಖಾಸ್ತು ಮಂಜೂರಾತಿ ವಹಿ ಹಾಗೂ ಸಾಗುವಳಿ ಚೀಟಿ ವಿತರಣಾ ವಹಿಗಳಲ್ಲಿ ಹೆಸರು ನಮೂದಾಗಿರುವ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸಬೇಕು. ಆದರೆ ಈ ಪ್ರಮುಖ ದಾಖಲೆಗಳು ಇಲ್ಲದಿದ್ದರೂ ಗೋಮಾಳ ಜಮೀನಿನ ಪೋಡಿ ದುರಸ್ತಿ ಮಾಡಲಾಗಿತ್ತು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ್ದ ಸಮಿತಿ 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 136 (3)ರ ಅಡಿ ಭೂಮಾಲೀಕತ್ವ ನಿರ್ಧರಿಸುವ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಪ್ರಮುಖ ದಾಖಲೆಗಳು ಲಭ್ಯ ಇಲ್ಲದಿದ್ದಾಗ 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 67ರ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಆದೇಶ ಪಡೆದು ಪೋಡಿ ದುರಸ್ತಿ ಮಾಡಬಹುದು. ಆದರೆ, ಇಲ್ಲಿ ಈ ನಿಯಮವೂ ಪಾಲನೆ ಆಗಿರಲಿಲ್ಲ ಎಂಬುದನ್ನು ಸಮಿತಿ ಹೊರಗೆಡವಿತ್ತು. 

ಸರ್ಜಾಪುರ ಹೋಬಳಿಯ ಚಿಕ್ಕತಿಮ್ಮಸಂದ್ರ ಗ್ರಾಮದ ಸರ್ವೇ ನಂಬರ್‌ 55ಕ್ಕೆ ಮಂಜೂರಾದ ಜಮೀನಿನ ಸಂಖ್ಯೆಯನ್ನು ಇಟ್ಟುಕೊಂಡಿರುವುದಲ್ಲದೆ ಈ ಸಂಬಂಧ ಅಕ್ರಮ ದಾಖಲೆ ಸೃಷ್ಟಿಸಿರುವುದೂ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಇನ್ನು, ಯಾವುದೇ ಪಹಣಿಯ ಕಾಲಂ 3 ಹಾಗೂ 9ರಲ್ಲಿ ತಿದ್ದುಪಡಿ ಮಾಡುವ ಅಧಿಕಾರ  ಉಪವಿಭಾಗಾಧಿಕಾರಿಗೆ ಮಾತ್ರ ಇದೆ. ಆದರೆ ಈ ಪ್ರಕರಣದಲ್ಲಿ ಆಗಿನ ತಹಸೀಲ್ದಾರ್‌ ಆರ್‌.ಅನಿಲ್‌ ಕುಮಾರ್‌ ಅವರು  ಅಧಿಕಾರದ ವ್ಯಾಪ್ತಿ ಮೀರಿ ನಿಯಮಬಾಹಿರವಾಗಿ ಪಹಣಿ ತಿದ್ದುಪಡಿ ಮಾಡಿರುವುದನ್ನೂ ಸಮಿತಿಯ ತನಿಖೆ ವೇಳೆಯಲ್ಲಿ ಪತ್ತೆಯಾಗಿತ್ತು. 

ಅದೇ ರೀತಿ ಬಡಾವಣೆಯು ಗೋಮಾಳ ಜಾಗದಲ್ಲಿದೆ ಎಂಬ ಅಂಶ ಬೆಳಕಿಗೆ ಬಂದ ನಂತರ ಬೆಂಗಳೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರು    ನಿವೇಶನ ನೋಂದಣಿ ಮಾಡಬಾರದು ಎಂದು ಸೂಚಿಸಿ 2016ರ ಮೇ 27ರಂದು ಗೃಹನಿರ್ಮಾಣ ಸಂಘಕ್ಕೆ  ಪತ್ರ ಬರೆದಿದ್ದರು. ಆದರೆ ಆ ಸೂಚನಾ ಪತ್ರವನ್ನು ಬದಿಗೆ ಸರಿಸಿ ನಿವೇಶನಗಳನ್ನು ನೋಂದಣಿ ಮಾಡಲಾಗಿತ್ತು. 

the fil favicon

SUPPORT THE FILE

Latest News

Related Posts