7,500ಕ್ಕೂ ಹೆಚ್ಚು ತಪಾಸಣೆ ಫಲಿತಾಂಶ ಬಾಕಿ; ಆಡಳಿತ ಯಂತ್ರದ ವಿಳಂಬ ದ್ರೋಹ?

ಬೆಂಗಳೂರು: ಕೊರೊನಾ ವೈರಸ್‌ ಸೋಂಕಿತರ  ಸಂಖ್ಯೆ ದಿನದಿಂದ ದಿನಕ್ಕೆ  ಹೆಚ್ಚುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆಗಳು ನಡೆಯುತ್ತಿಲ್ಲ. ಈ ನಡುವೆ ಮಾದರಿಗಳನ್ನು ಸಂಗ್ರಹಿಸಿರುವ ಸಂಖ್ಯೆ ಪೈಕಿ ಇನ್ನೂ 7,500 ಹೆಚ್ಚೂ ತಪಾಸಣೆಯ ಫಲಿತಾಂಶ ಬಾಕಿ ಇದೆ ಎಂಬ ಸಂಗತಿ ಇದೀಗ ಬಹಿರಂಗಗವಾಗಿದೆ. 

ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹಿಸಿದ ಇನ್ನೂ ಸುಮಾರು 5000ಕ್ಕೂ ಹೆಚ್ಚು ಪ್ರಕರಣಗಳ ತಪಾಸಣೆ ಫಲಿತಾಂಶ ಇನ್ನಷ್ಟೇ ಲಭ್ಯವಾಗಬೇಕಿದೆ. ಏಪ್ರಿಲ್ 12ರ ನಂತರ ಮಾದರಿ ಸಂಗ್ರಹಿಸಿರುವ ಬಹುದೊಡ್ಡ ಪ್ರಮಾಣದ ಮಾದರಿಗಳ ಫಲಿತಾಂಶ ಈವರೆವಿಗೂ ಪ್ರಕಟವಾಗಿಲ್ಲ. ಅಲ್ಲದೆ ಈ ಫಲಿತಾಂಶಗಳು ಪ್ರಕಟವಾದಲ್ಲಿ ಈಗಿರುವ 401ಕ್ಕೂ ಹೆಚ್ಚು ಕೋವಿಡ್-19 ಸಕಾರಾತ್ಮಕ(Positive) ಪ್ರಕರಣಗಳು ಎರಡು ಅಥವಾ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ. 

ರಾಜ್ಯದಲ್ಲಿ ಏರುತ್ತಿರುವ ಸಂಖ್ಯೆಯನ್ನು ಸೂಕ್ಷ್ಮವಾಗಿ  ಗಮನಿಸಿದರೆ ಪರಿಸ್ಥಿತಿ ಇನ್ನಷ್ಟು  ಬಿಗಡಾಯಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬಾಕಿ ಇರುವ 7,500 ಫಲಿತಾಂಶಗಳು ತ್ವರಿತಗತಿಯಲ್ಲಿ ಪ್ರಕಟಗೊಂಡಲ್ಲಿ ಸೋಂಕು ತಡೆಗಟ್ಟಲು ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ. ತಪಾಸಣೆ ಫಲಿತಾಂಶಗಳು ಬಾಕಿ ಇರುವುದರ  ಬಗ್ಗೆ  ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ. 

2020ರ ಏಪ್ರಿಲ್‌ 20ರ ಮಧ್ಯಾಹ್ನ 12  ಗಂಟೆ ಹೊತ್ತಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 395ಕ್ಕೆ ತಲುಪಿದೆ. ಸಂಜೆ ಹೊತ್ತಿಗೆ ಈ ಸಂಖ್ಯೆ ಹೆಚ್ಚಳವಾದರೂ ಅಚ್ಚರಿಯೇನಿಲ್ಲ. ಆದರೆ ಅಧಿಕಾರಿಗಳು ಮಾತ್ರ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ ಮತ್ತು ಹರಡುವಿಕೆಯನ್ನು ನಿಯಂತ್ರಿಸಲಾಗಿದೆ ಎಂಬ ಸುದ್ದಿಯನ್ನು ಸರ್ಕಾರದ  ಮಟ್ಟದಲ್ಲಿ ಬಿತ್ತನೆ ಮಾಡುವ ಮೂಲಕ  ನಿಜ ಸಂಗತಿಯನ್ನು ಮುಚ್ಚಿಡುತ್ತಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.  

ಒಂದೊಂದು ತಪಾಸಣೆ ಕೇಂದ್ರದಲ್ಲಿ ಕನಿಷ್ಠ 100-500  ಪ್ರಕರಣಗಳ ಫಲಿತಾಂಶ ಬಾಕಿ ಇದೆ.  ಇದೊಂದು ವಿಳಂಬ  ದ್ರೋಹ ಎಂದು ಕಾಂಗ್ರೆಸ್‌  ಮುಖಂಡ  ಎಚ್‌ ಕೆ  ಪಾಟೀಲ್‌  ಅವರು  ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆಗಳು ನಡೆಯುತ್ತಿಲ್ಲ ಎಂದು ಎಚ್‌ ಕೆ ಪಾಟೀಲ್‌ ಅವರು ಹಲವು ಬಾರಿ ಬರೆದಿರುವ ಪತ್ರಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಂತಿಲ್ಲ. 

‘ನಮ್ಮ ಕರ್ನಾಟಕದಲ್ಲಿಯೂ ಸಹ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಾ ಜನತೆ ಆತಂಕದ ಕ್ಷಣಗಳಲ್ಲಿ ದಿನ ದೂಡುವಂತೆ ಸ್ಥಿತಿ ಗಂಭೀರಗೊಂಡಿದೆ. ಆದರೆ ಅಗತ್ಯದ ತಪಾಸಣೆಗಳನ್ನು ಕೈಗೊಳ್ಳದೇ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ ಮತ್ತು ಈ ಹರಡುವಿಕೆಯನ್ನು ನಿಯಂತ್ರಿಸಲಾಗಿದೆ ಎಂಬ ಸುದ್ದಿಯನ್ನು ಹರಡುತ್ತಾ ತನ್ಮೂಲಕ ವ್ಯರ್ಥ ಸಾಹಸವನ್ನು ಸಂಘಟಿತವಾಗಿ ಮಾಡುತ್ತಿದ್ದಾರೆ,’ ಎಂದು 2020ರ  ಏಪ್ರಿಲ್‌ 20ರಂದು ಬರೆದಿರುವ ಪತ್ರದಲ್ಲಿ  ವಿವರಿಸಿದ್ದಾರೆ.  

ಇನ್ನು, ಕರ್ನಾಟಕದಲ್ಲಿ ಈಗ ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹಿಸಿದ ಇನ್ನೂ ಸುಮಾರು 5000ಕ್ಕೂ ಹೆಚ್ಚು ಪ್ರಕರಣಗಳ ತಪಾಸಣೆ ಫಲಿತಾಂಶ ಲಭ್ಯವಾಗಬೇಕಿದೆ. ಏಪ್ರಿಲ್ 12ರ ನಂತರ ಮಾದರಿ ಸಂಗ್ರಹಿಸಿರುವ ಬಹುದೊಡ್ಡ ಪ್ರಮಾಣದ ಮಾದರಿಗಳ ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಇದು ವಿಳಂಬ ದ್ರೋಹಕ್ಕೆ ಹಿಡಿದ ಕೈಗನ್ನಡಿಯಾಗಿದೆ. 

ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಈ ಹೊತ್ತಿನಲ್ಲಿ ತಪಾಸಣೆಗಳ ಪೂರ್ಣಗೊಂಡು ಫಲಿತಾಂಶ ಪ್ರಕಟಿಸಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿತ್ತು.’ಕ್ಷಿಪ್ರಗತಿಯಲ್ಲಿ ಫಲಿತಾಂಶ ಪ್ರಕಟಗೊಂಡಲ್ಲಿ ರೋಗ ಹರಡುವಿಕೆಯ ಪ್ರಮಾಣ ನಿರ್ಧರಿಸಲು ಮತ್ತು ತಡೆಗಟ್ಟುವ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ”, ಎಂದು ಎಚ್‌ ಕೆ ಪಾಟೀಲ್‌ ಅವರು ಪತ್ರದಲ್ಲಿ ವಿವರಿಸಿದ್ದಾರೆ. 

ರಾಜ್ಯ ಸರ್ಕಾರದ ನೇರ ಅಧೀನದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಮತ್ತು ಪಶು ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಸೇವೆ ಸಲ್ಲಿಸುವ 4 ಮತ್ತು ಬೆಂಗಳೂರಿನ ಜಕ್ಕೂರಿನಲ್ಲಿರುವ ಕೇಂದ್ರ ಸರ್ಕಾರದ ಜವಾಹರಲಾಲ್ ನೆಹರು ಮುಂದುವರೆದ ಅಧ್ಯಯನ ಸಂಶೋಧನಾ ಸಂಸ್ಥೆಯಲ್ಲಿ ಲಭ್ಯವಿರುವ ಯಂತ್ರೋಪಕರಣಗಳು, ಪ್ರಯೋಗಾಲಯಗಳನ್ನು ಬಳಕೆ  ಮಾಡಿಕೊಳ್ಳಲು ಇನ್ನೂ ಮುಂದಡಿ ಇಟ್ಟಿಲ್ಲ.  

‘ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವಂತಹ ಇಂಥ ವಿಷಯಗಳಲ್ಲಿ ತೀರಾ ನಿರ್ಲಕ್ಷ್ಯಗಳಿಂದ ಸ್ಪಂದಿಸುತ್ತಿರುವುದು ದಿನ ಕಳೆದಂತೆ ಗೋಚರವಾಗುತ್ತಿದೆ. ಇದರಿಂದ ಕರ್ನಾಟಕದ ನಾಗರೀಕರಿಗೂ ಮತ್ತು ವಿಶೇಷವಾಗಿ ಜನತೆಯ ಕಾಳಜಿಯುಳ್ಳವರಿಗೆ ತೀವ್ರ ನೋವಾಗಿದೆ,’ ಎನ್ನುತ್ತಾರೆ ಎಚ್‌ ಕೆ ಪಾಟೀಲ್‌. 

ಅದೇ ರೀತಿ ಪಿಪಿಇ ಕಿಟ್‌ಗಳನ್ನು ಅಗತ್ಯವಿರುವೆಡೆ  ಪೂರೈಕೆ ಆಗುತ್ತಿಲ್ಲ. ಕರ್ನಾಟಕದಲ್ಲಿ ಕ್ಷಿಪ್ರಗತಿಯಲ್ಲಿ ತಪಾಸಣೆ ನಡೆಸಲು 2020ರ ಏಪ್ರಿಲ್‌ 11ಕ್ಕೆ  ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಕಿಟ್‌ಗಳು  ಬರಲಿವೆ ಎಂದು ಹೇಳಲಾಗಿತ್ತು. ಆದರೆ 2020ರ ಏಪ್ರಿಲ್‌ 17ವರೆಗೂ ಆ ಕಿಟ್‌ಗಳು ರಾಜ್ಯಕ್ಕೆ  ಬಂದಿರಲಿಲ್ಲ. ಕೋವಿಡ್‌-19 ನಿಯಂತ್ರಣ ಮತ್ತು ಹರಡುವಿಕೆಗೆ ಸಂಬಂಧಿಸಿದಂತೆ ಸರ್ಕಾರ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ನಿದರ್ಶನವನ್ನು ಒದಗಿಸುತ್ತಿದೆ. 

‘ವಿಳಂಬದ್ರೋಹ ಅಂತ್ಯಗಾಣಿಸಿ. ನ್ಯಾಯಯುತ ತಕ್ಷಣದ ತೀರ್ಮಾನಗಳತ್ತ ಗಮನಹರಿಸಿ. ಸಭೆಗಳನ್ನು ಕೇವಲ ಸಮಾಲೋಚನೆಗೆ ಮಾಡಬೇಡಿ. ಗಟ್ಟಿಯಾದ ನಿರ್ಣಯಗಳನ್ನು ಕೈಗೊಳ್ಳಿ. ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕೆಂಬ ಪದಗಳ ಅರ್ಥವನ್ನು ನಮ್ಮ ಆಡಳಿತ ಯಂತ್ರಕ್ಕೆ ಒಮ್ಮೆ ತಿಳಿಸಿಕೊಡಿ,’ ಎಂದು ಎಚ್‌ ಕೆ ಪಾಟೀಲ್‌  ಅವರು ಪತ್ರದಲ್ಲಿ ಸಲಹೆ ನೀಡಿದ್ದಾರೆ.

the fil favicon

SUPPORT THE FILE

Latest News

Related Posts