ಉತ್ಪಾದಕರಲ್ಲದವರಿಗೆ 3 ಕೋಟಿ ಮೌಲ್ಯದ ಪಿಪಿಇ ಕಿಟ್‌ ಖರೀದಿ ಆದೇಶ

ಬೆಂಗಳೂರು; ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಮಾಸ್ಕ್‌, ಮುಖಗವಸು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಉತ್ಪಾದಿಸದ ಕಂಪನಿಗಳಿಗೆ 3 ಕೋಟಿ ಮೌಲ್ಯದ ಖರೀದಿ ಆದೇಶ ನೀಡಿರುವುದು ಇದೀಗ ಬಹಿರಂಗವಾಗಿದೆ.
ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಯುಕ್ತರಿಗೆ ನೀಡಿರುವ ಸ್ಪಷ್ಟೀಕರಣ ಹಲವು ಮಾಹಿತಿಗಳನ್ನು ಹೊರಗೆಡವಿದೆ.
ಪಿಪಿಇ ಕಿಟ್‌ಗಳ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿ ಮತ್ತು ದಲ್ಲಾಳಿ ಏಜೆನ್ಸಿಗಳಿಗೆ ಮನ್ನಣೆ ನೀಡಿದೆ ಎಂದು ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಉತ್ಪಾದಕ ಕಂಪನಿಗಳಲ್ಲದವರಿಗೆ ನೀಡಿರುವ ಖರೀದಿ ಆದೇಶಗಳು ಮುನ್ನೆಲೆಗೆ ಬಂದಿವೆ. ಅಲ್ಲದೆ, ಕೇಳಿ ಬರುತ್ತಿರುವ ಆರೋಪಗಳಿಗೆ ಇನ್ನಷ್ಟು ಬಲ ಬಂದಂತಾಗಿದೆ.
ವಿಶೇಷವೆಂದರೆ ಸಾಫ್ಟ್‌ವೇರ್‌ ಕಂಪನಿ ಮತ್ತು ಕೃಷಿ ಕ್ಷೇತ್ರ ಮತ್ತು ಇದಕ್ಕೆ ಪೂರಕವಾದ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ 2 ಕಂಪನಿಗಳಿಗೆ ಮಾಸ್ಕ್‌, ಮುಖಗವಸು ಸೇರಿದಂತೆ ಪಿಪಿಇ ಕಿಟ್‌ಗಳ ಖರೀದಿಗೆ ಆದೇಶ ನೀಡಿರುವುದು ಇದರಲ್ಲಿ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಸ್ಪಷ್ಟೀಕರಣದಲ್ಲಿ ಉಲ್ಲೇಖಿಸಿರುವ ಕಂಪನಿಗಳ ಪೈಕಿ 2 ಕಂಪನಿಗಳಿಗೆ ಸರ್ಜಿಕಲ್ ಉತ್ಪನ್ನಗಳ ಉತ್ಪಾದನೆಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಖರೀದಿ ಆದೇಶ ಪಡೆದಿರುವ ಈ 2 ಕಂಪನಿಗಳು ಇದುವರೆಗೂ ಉಪಕರಣಗಳನ್ನು ಸರಬರಾಜು ಮಾಡಿದೆಯೇ ಇಲ್ಲವೇ ಎಂಬ ಬಗ್ಗೆ ಇಲಾಖೆ ಆಯುಕ್ತರಿಗೆ ನೀಡಿರುವ ಸ್ಪಷ್ಟೀಕರಣದಲ್ಲಿ ತಿಳಿಸಿಲ್ಲ. ಖರೀದಿ ಆದೇಶ ಪಡೆದಿರುವ ಕಂಪನಿಗಳು ಸಕಾಲದಲ್ಲಿ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿಲ್ಲ ಎಂದಷ್ಟೇ ಹೇಳಿದೆ.
ರುದ್ರಾಂಶ್ ವಿಗ್‌ ಆಗ್ರೋ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ಗೆ 800 ರು. ದರದಲ್ಲಿ ಒಟ್ಟು 2 ಕೋಟಿ ರು.ಮೊತ್ತದಲ್ಲಿ 25,000 ಸಂಖ್ಯೆಯ ಕಿಟ್‌ಗಳ ಸರಬರಾಜಿಗೆ 2020ರ ಮಾರ್ಚ್‌ 20ರಂದು ಖರೀದಿ ಆದೇಶ ನೀಡಿದೆ. ಈ ಕಂಪನಿ ಮೇಲ್ನೋಟಕ್ಕೆ ಕೃಷಿ ಮತ್ತು ಇದಕ್ಕೆ ಪೂರಕವಾದ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ 9 ವರ್ಷಗಳಿಂದಲೂ ಕೃಷಿ ಮತ್ತು ಇದಕ್ಕೆ ಪೂರಕವಾದ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಅಲ್ಲದೆ ಈ ಕಂಪನಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ ಎಂದು ಗೊತ್ತಾಗಿದೆ. ದೇವೆಂದರ್‌ ರಾಜ್ ಕೊಚ್ಚಾರ್‌, ಭರತ್‌ರಾಜ್‌ ಕೊಚ್ಚಾರ್‌, ರಿಶಿ ಕೊಚ್ಚಾರ್‌, ನಿತಿನ್‌ ಪಾಲಿವಾಲ್‌, ಅರುಣ್‌ ಪಾಲಿವಾಲ್‌ ಮತ್ತು ಸುಭಾಷ್‌ಚಂದ್ರ ಪಾಲಿವಾಲ್‌ ಎಂಬುವರು ಈ ಕಂಪನಿಯ ನಿರ್ದೇಶಕರಾಗಿದ್ದಾರೆ.
ಅದೇ ರೀತಿ ಬೆಂಗಳೂರು ನಗರದ ಎ ಟೆಕ್‌ ಟ್ರೋನ್‌ ಎಂಬ ಕಂಪೆನಿಯೂ ಮಾಸ್ಕ್‌ ಸೇರಿದಂತೆ ಕಿಟ್‌ಗಳನ್ನು ಸರಬರಾಜು ಮಾಡಿದೆ. ಯೂನಿಟ್‌ವೊಂದಕ್ಕೆ 725 ರು. ನಂತೆ ಒಟ್ಟು 1,81,25,000 ರು. ದರದಲ್ಲಿ 25,000 ಕಿಟ್‌ಗಳ ಸರಬರಾಜಿಗೆ 2020ರ ಮಾರ್ಚ್ 20ರಂದು ಖರೀದಿ ಆದೇಶ ನೀಡಿದೆ.
ಬೆಂಗಳೂರಿನ ವಿ ವಿ ಪುರಂನಲ್ಲಿರುವ ಈ ಕಂಪನಿ ಮೂಲತಃ ಸಾಫ್ಟ್‌ವೇರ್‌ ಚಟುವಟಿಕೆ ನಡೆಸುತ್ತಿದೆ. ವಿವಿಧ ಕಂಪನಿಗಳಿಗೆ ವೆಬ್‌ಸೈಟ್‌ ಅಭಿವೃದ್ಧಿಪಡಿಸುವುದಲ್ಲದೆ ಏರ್‌ ಫ್ಯೂರಿಫೈರ್‌, ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂಬುದು ಕಂಪನಿಯ ಅಧಿಕೃತ ಜಾಲತಾಣದಿಂದ ಗೊತ್ತಾಗಿದೆ. ಅಲ್ಲದೆ, ಮಾಸ್ಕ್‌ಗಳನ್ನೂ ಪೂರೈಸುತ್ತಿದೆ ಎಂದು ಕಂಪನಿ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.
ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಬಳಸಿಕೊಂಡು ಎ ಟೆಕ್‌ ಟ್ರೋನ್‌ ಕಂಪೆನಿ, ಬೆಂಗಳೂರು ನಗರದ ವಿವಿಧೆಡೆ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಕೆ ಮಾಡಿದೆ. ಕಂಪನಿಯ ಈ ಚಟುವಟಿಕೆಗಳಿಗೂ ಸರ್ಜಿಕಲ್‌ ಉತ್ಪನ್ನಗಳಿಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
‘ರಾಜ್ಯದ ಲಕ್ಷಾಂತರ ಸಂಖ್ಯೆಯ ಜನ ಕರೊನಾ ವೈರಸ್‌ನಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ತಮ್ಮ ಜೀವನೋಪಾಯಗಳನ್ನು ಕಳೆದುಕೊಂಡು ನರಳುತ್ತಿರುವಾಗ ಸರ್ಕಾರದ ಅಧಿಕಾರಿಗಳು, ರಾಜಕಾರಣಿಗಳು ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡುವುದು ಹೀನ ಕೃತ್ಯ. ಯಾವುದೇ ತರಹದ ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ಅಥವಾ ಮಾರುವುದರ ಹಿನ್ನೆಲೆಯೇ ಇಲ್ಲದ ಕಂಪನಿಗಳಿಂದ ಖರೀದಿ ಮಾಡಿರುವುದರ ಹಿಂದೆ ಅಕ್ರಮಗಳ ವಾಸನೆ ಇದೆ.,’ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.
ನೈಸರ್ಗಿಕ ವಿಕೋಪಗಳು ಸಂಭವಿಸಿದರೆ ಜನಸಾಮಾನ್ಯರಿಗೆ ಕಷ್ಟನಷ್ಟಗಳು ಉಂಟಾಗುತ್ತವೆಯೋ ಇಲ್ಲವೋ, ಆದರೆ ಸರ್ಕಾರದ ಚುಕ್ಕಾಣಿ ಹಿಡಿದಿರುವ ಹಲವರಿಗೆ, ಹಲವು ಜನಪ್ರತಿನಿಧಿಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಪ್ರಾಯಶಃ ಇದು ವರದಾನವಿದ್ದಂತೆ. ಕೋವಿಡ್‌-19ರಲ್ಲೂ ಅಧಿಕಾರಶಾಹಿ ಜೋಳಿಗೆ ಭರ್ತಿ ಮಾಡಿಕೊಳ್ಳಲು ನಿಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
‘ಪಿ.ಪಿ.ಇ. ಕೀಟ್ ಗಳ ತಯಾರಿಕೆಯಲ್ಲಿ, ಖರೀದಿಯಲ್ಲಿ ಮತ್ತು ಸರಬರಾಜಿನಲ್ಲಿ ಪರಿಣತಿಯನ್ನು ಹೊಂದಿರದ ಹಲವಾರು ಸಂಸ್ಥೆಗಳ ಮತ್ತು ದಲ್ಲಾಳಿಗಳ ಮೂಲಕ ಖರೀದಿಸುತ್ತಿರುವ ಮಾಹಿತಿ ನಮಗೂ ಬಂದಿದೆ. ಕಿಟ್ ಗಳ ಉತ್ಪಾದನೆಯಲ್ಲಿ ಪರಿಣತಿಯನ್ನೂ ಹೊಂದಿಲ್ಲ. ಇಂತಹ ಅವ್ಯವಹಾರ ಮತ್ತು ಅಕ್ರಮಗಳಲ್ಲಿ ಭಾಗಿ ಆಗಿರುವವರ ವಿರುದ್ಧ ತನಿಖೆ ನಡೆಸಬೇಕು,’ ಎನ್ನುತ್ತಾರೆ ಲಂಚಮುಕ್ತ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ವಿ ಆರ್‌  ಮರಾಠೆ.
ಕರ್ನಾಟಕ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಸಂಸ್ಥೆ ನೇರವಾಗಿ ಉತ್ಪಾದಕ ಕಂಪನಿಯಿಂದಲೇ ಖರೀದಿ ಮಾಡದೇ ದಲ್ಲಾಳಿಗಳ ಮೂಲಕ ಖರೀದಿ ಮಾಡಿರುವುದರ ಹಿಂದೆ ಕಮಿಷನ್‌ ವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಅಂದಾಜು ಮೂರ್ನಾಲ್ಕು ಕೋಟಿ ರು. ವಹಿವಾಟಿನಲ್ಲಿ ಅಧಿಕಾರಿವರ್ಗಕ್ಕೆ ಕನಿಷ್ಠ 1 ಕೋಟಿ ರು.ಗಳಾದರೂ ಕಮಿಷನ್‌ ನೀಡಿರಬಹುದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

SUPPORT THE FILE

Latest News

Related Posts