ಬೆಂಗಳೂರು; ರಾಜ್ಯಕ್ಕೆ ಪಿಪಿಇ ಕಿಟ್ ಮತ್ತು ಮೂರು ಪದರುಳ್ಳ ಮುಖಗವಸುಗಳನ್ನು ಸರಬರಾಜು ಮಾಡಿರುವ ಮಹಾರಾಷ್ಟ್ರದ ಅಮರಾವತಿ ಮೂಲದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್, ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ನಿತಿನ್ ಗಡ್ಕರಿ ಜತೆ ನಂಟು ಹೊಂದಿದೆಯೇ?
ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ನೀಡಿರುವ ಸ್ಪಷ್ಟೀಕರಣದ ಬೆನ್ನಲ್ಲೇ ಇಂತಹದೊಂದು ಅನುಮಾನಗಳು ವ್ಯಕ್ತವಾಗಿವೆ.
ಕೋವಿಡ್-19ನ್ನು ಹಿಮ್ಮೆಟ್ಟಿಸಲು ಪಿಪಿಇ ಕಿಟ್‌ಗಳ ಸರಬರಾಜಿಗೆ ಸಂಬಂಧಿಸಿದಂತೆ ಸಣ್ಣ ಕೈಗಾರಿಕೆಗಳ ಪೈಕಿ ಅಮರಾವತಿ ಮೂಲದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ನ ಉತ್ಪನ್ನಗಳನ್ನು ಖರೀದಿಸಲು ನಿತಿನ್ ಗಡ್ಕರಿ ಒಲವು ವ್ಯಕ್ತಪಡಿಸಿದ್ದರು. ನಾಗ್ಪುರದಲ್ಲಿನ ಉತ್ಪಾದಕ ಕಂಪನಿ ಮತ್ತು ಅಮರಾವತಿಯಲ್ಲಿರುವ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಜತೆ ಮಾತುಕತೆ ನಡೆಯುತ್ತಿದೆ ಎಂದು ಕಳೆದ ಮಾರ್ಚ್‌ನಲ್ಲಿ ಪಿಐಬಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು. ಗಡ್ಕರಿ ಅವರೊಂದಿಗೆ ಕಂಪನಿಯ ನಂಟು ಇರುವ ಬಗ್ಗೆ ಎದ್ದಿರುವ ಅನುಮಾನಗಳಿಗೆ ಪಿಐಬಿ ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆ ಇನ್ನಷ್ಟು ಪುಷ್ಠಿ ನೀಡುತ್ತಿದೆ.
ಈ ಹೇಳಿಕೆ ಬಿಡುಗಡೆಗೊಂಡ ಅತ್ಯಲ್ಪ ದಿನಗಳಲ್ಲಿ ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆಯೂ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ನಿಂದ ಪಿಪಿಇ ಕಿಟ್‌ಗಳನ್ನು ಖರೀದಿಸುವ ಮೂಲಕ ಅನುಮಾನಗಳನ್ನು ಇನ್ನಷ್ಟು ಬಲಗೊಳಿಸಿದೆ.
ಅದೇ ರೀತಿ ಮಾಸ್ಕ್‌ಗಳನ್ನು ಖರೀದಿಸುವ ಸಂಬಂಧ ಭಾರತ ಸರ್ಕಾರದ ರಾಷ್ಟ್ರೀಯ ಔಷಧ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಐಎಎಸ್ ಅಧಿಕಾರಿ ಶುಭ್ರಸಿಂಗ್ ಅವರು 2020ರ ಮಾರ್ಚ್ 28ರಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕಳಿಸಿದ್ದ ಉತ್ಪಾದಕರ ಪಟ್ಟಿಯಲ್ಲಿ ಪ್ಲಾಸ್ಟಿ ಸರ್ಜಿ ಇಂಡಸ್ಟ್ರಿಸ್ ಇರಲಿಲ್ಲ ಎಂಬುದು ತಿಳಿದು ಬಂದಿದೆ.
ಆದರೂ ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆ ಅಮರಾವತಿ ಮೂಲದ ಪ್ಲಾಸ್ಟಿ ಸರ್ಜಿ ಇಂಡಸ್ಟ್ರಿಸ್‌ನಿಂದ ಒಟ್ಟು 350000 ಪಿಪಿಇ ಕಿಟ್‌ಗಳಿಗೆ ಆದೇಶ ನೀಡಿತ್ತು. ಒಟ್ಟು 11,56,40,000 ರು. ಮೌಲ್ಯದ ಉತ್ಪನ್ನಗಳಿಗೆ ಇದೇ ಕಂಪನಿಗೆ 2020ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಖರೀದಿ ಆದೇಶ ನೀಡಿರುವುದು ಸಂಸ್ಥೆ ನೀಡಿರುವ ಸ್ಪಷ್ಟೀಕರಣದಿಂದ ಗೊತ್ತಾಗಿದೆ.
ಅಲ್ಲದೆ ಈ ಕಂಪನಿ ರಾಜ್ಯಕ್ಕೆ ಪೂರೈಸಿರುವ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಹಲವು ದೂರುಗಳು ಕೇಳಿ ಬಂದ ಕಾರಣ, 125000 ಪಿಪಿಇ ಕಿಟ್‌ಗಳ ಆದೇಶವನ್ನು ಹಿಂಪಡೆದಿದೆ.
ಹಾಗೆಯೇ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಸಂಸ್ಥೆ ಸರಬರಾಜು ಮಾಡಿದ್ದ ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಸ್ವೀಕೃತವಾಗಿವೆ. ಪ್ರತಿ ಸ್ವೀಕೃತಿಯಲ್ಲೂ ತಿದ್ದುಪಡಿಗಳನ್ನು ತಿಳಿಸಿದ್ದರೂ ಗುಣಮಟ್ಟದ ಕಿಟ್ ಪೂರೈಸಲು ಕಂಪನಿ ಕ್ರಮ ಕೈಗೊಂಡಿರಲಿಲ್ಲ.
‘ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಲು ಈ ಸಂಸ್ಥೆಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ದೂರುಗಳು ಸ್ವೀಕೃತವಾಗಿರುವ ಕಿಟ್‌ಗಳನ್ನು ಹಿಂಪಡೆಯಬೇಕು,’ ಎಂದು ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆಯ ಹೆಚ್ಚುವರಿ ನಿರ್ದೇಶಕಿ ಮಂಜುಶ್ರೀ ಅವರು 2020ರ ಏಪ್ರಿಲ್ 7ರಂದು ಇ-ಮೇಲ್ ಮತ್ತು ಪತ್ರದ ಮೂಲಕ ಸೂಚಿಸಿದ್ದರು ಎಂಬುದು ಆಯುಕ್ತರಿಗೆ ನೀಡಿರುವ ಸ್ಪಷ್ಟೀಕರಣದಿಂದ ತಿಳಿದು ಬಂದಿದೆ.
ವಿಶೇಷವೆಂದರೆ, ಚೀನಾ ಪೂರೈಸಿದ್ದ ಕಿಟ್‌ಗಳು ದೋಷಪೂರಿತವಾಗಿವೆ ಎಂದು ಟ್ವೀಟ್ ಮಾಡಿದ್ದ ಈ ಕಂಪನಿ ನಿರ್ದೇಶಕ ರಾಜೇಶ್ ದಾಗಾ, ಮೇಕ್ ಇನ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಬೇಕು ಎಂದಿದ್ದರು. ಆದರೆ ಕರ್ನಾಟಕಕ್ಕೆ ಪೂರೈಸಿದ್ದ ಕಿಟ್‌ಗಳು ಗುಣಮಟ್ಟದಿಂದ ಕೂಡಿರಲಿಲ್ಲ.
ಪಿಪಿಇ ಕಿಟ್‌ನ ಘಟಕವೊಂದಕ್ಕೆ ಎರಡು ದರಗಳನ್ನು ನಮೂದಿಸಿದೆ. 2020ರ ಮಾರ್ಚ್ 9ರಂದು ಹೊರಡಿಸಿದ್ದ ಖರೀದಿ ಅದೇಶದಲ್ಲಿ ಘಟಕವೊಂದಕ್ಕೆ (15,000 ಪ್ರಮಾಣ) 330.40 ರು ಮತ್ತು 2020ರ ಮಾರ್ಚ್ 14ರಂದು ಹೊರಡಿಸಿದ್ದ ಖರೀದಿ ಆದೇಶದಲ್ಲಿ(10,000 ಪ್ರಮಾಣ) ಘಟಕವೊಂದಕ್ಕೆ 725 ರು.ಗಳನ್ನು ನೀಡಿರುವುದು ಸಂಸ್ಥೆಯ ಸ್ಪಷ್ಟೀಕರಣದಿಂದ ಗೊತ್ತಾಗಿದೆ.
ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಪೂರೈಸಿದ್ದ ಕಿಟ್‌ನಲ್ಲಿ 8 ವಸ್ತುಗಳಿದ್ದವು. 2020ರ ಮಾರ್ಚ್ 31ರ ಅಂತ್ಯಕ್ಕೆ ಒಟ್ಟು 38,100 ಕಿಟ್‌ಗಳನ್ನು ಸಂಸ್ಥೆ ದಾಸ್ತಾನಿಗೆ ತೆಗೆದುಕೊಂಡಿತ್ತು. ಅಲ್ಲದೆ 2020ರ ಏಪ್ರಿಲ್ 2ರಂದು ಸ್ವೀಕರಿಸಿದ್ದ 10,800, ಏಪ್ರಿಲ್ 4ರಂದು 9,600 ಏಪ್ರಿಲ್ 7ರಂದು ಸ್ವೀಕರಿಸಿದ್ದ 21,600 ಕಿಟ್‌ಗಳು ಸೇರಿದಂತೆ ಒಟ್ಟು 42,000 ಕಿಟ್‌ಗಳು ನಿಗದಿತ ಪ್ರಮಾಣಕ್ಕಿಂತ ಚಿಕ್ಕದಾಗಿದ್ದವು ಎಂದು ಸ್ಪಷ್ಟೀಕರಣದಲ್ಲಿ ತಿಳಿಸಿದೆ.
ಹಾಗೆಯೇ ಬೆಂಗಳೂರಿನ ವಿ ವಿ ಪುರಂನಲ್ಲಿರುವ ಎ ಟೆಕ್ ಟ್ರೋನ್ ಕಂಪನಿಗೆ ಘಟಕವೊಂದಕ್ಕೆ 725 ರು.(ಪ್ರಮಾಣ- 25,000) ರುದ್ರಾಂಶ್ ವಿಗ್ ಆಗ್ರೋ ಇಂಡಿಯಾ ಪ್ರೈವೈಟ್ ಲಿಮಿಟೆಡ್‌ಗೆ ಘಟಕವೊಂದಕ್ಕೆ 800 ರು.(;ಪ್ರಮಾಣ- 25,000), ಎಚ್‌ಎಲ್‌ಎಲ್ ಲೈಫ್‌ಕೇರ್ ಪ್ರೈವೈಟ್ ಲಿಮಿಟೆಡ್‌ಗೆ ಘಟಕವೊಂದಕ್ಕೆ 1,078.48 ರು .(ಪ್ರಮಾಣ- 500000), ಇಂಡಸ್ ಬಯೋ ಸೈನ್ಸ್‌ಗೆ ಘಟಕವೊಂದಕ್ಕೆ 656.25 ರು.,( ಪ್ರಮಾಣ-5,000) ಚೀನಾ ಮೂಲದ ಡಿಎಚ್‌ಬಿ ಗ್ಲೋಬಲ್ ಶೆನ್‌ಝೆನ್‌ಗೆ ಘಟಕವೊಂದಕ್ಕೆ 2,117 ರು (100000) ಪಾವತಿಸಿ ಪಿಪಿಇ ಕಿಟ್‌ಗಳನ್ನು ಖರೀದಿಸಿರುವುದು ಸ್ಪಷ್ಟೀಕರಣದಿಂದ ಗೊತ್ತಾಗಿದೆ.