ಒಪ್ಪೊತ್ತಿನ ಗಂಜಿಗಾಗಿ ಕಾರ್ಮಿಕರ ಪರದಾಟ; ವೈರ್‌ಲೆಸ್‌ ಉಪಕರಣಗಳಿಗಾಗಿ ಮಣಿವಣ್ಣನ್‌ ಮೊಂಡು ಹಠ?

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಕಾರ್ಮಿಕರಿಗೆ ಅದರಲ್ಲೂ ಹೊರರಾಜ್ಯದ ವಲಸಿಗ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಒಪ್ಪೊತ್ತಿನ ಗಂಜಿಗಾಗಿ  ಪರದಾಡುತ್ತಿದ್ದರೆ, ಇತ್ತ ಇಲಾಖೆಗೆ ಸಂಬಂಧಪಡದೇ ಇರುವ ಪೊಲೀಸ್‌ ವೈರ್‌ಲೆಸ್‌ ಉಪಕರಣಗಳ ಬೇಡಿಕೆ ಇರಿಸಿರುವ ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕ್ಯಾಪ್ಟನ್‌ ಮಣಿವಣ್ಣನ್‌  ಅವರು ಮೊಂಡು ಹಠ ಹಿಡಿದಿರುವುದು ಇದೀಗ  ಬಹಿರಂಗವಾಗಿದೆ.  

ಪೊಲೀಸ್‌ ಸಿಬ್ಬಂದಿಗಳಷ್ಟೇ ಬಳಸುತ್ತಿರುವ ವೈರ್‌ಲೆಸ್‌ ಉಪಕರಣಗಳನ್ನು ನೀಡಲು ಅವಕಾಶವಿಲ್ಲ ಎಂದು ಪೊಲೀಸ್‌ ಇಲಾಖೆಯ ಸಂಪರ್ಕ,  ಸಾಧನ ಮತ್ತು ಆಧುನೀಕರಣ  ವಿಭಾಗದ ಎಡಿಜಿಪಿ ಸ್ಪಷ್ಟವಾಗಿ ಪತ್ರ ಬರೆದಿದ್ದಾರೆ. ಆದರೂ ತಮ್ಮ ಹಠಮಾರಿತನದಿಂದ ಹಿಂದೆ ಸರಿಯದ ಕ್ಯಾಪ್ಟನ್‌ ಮಣಿವಣ್ಣನ್‌ ವೈರ್‌ಲೆಸ್‌ ಉಪಕರಣಗಳು ಬೇಕೇ ಬೇಕು ಎಂದು ರಚ್ಚೆ ಹಿಡಿದಿರುವುದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ.

ಕಾರ್ಮಿಕ ಇಲಾಖೆಗೆ ಒಟ್ಟು 25 ಪೊಲೀಸ್‌  ವೈರ್‌ಲೆಸ್‌ ಉಪಕರಣಗಳಿಗಾಗಿ ಮಣಿವಣ್ಣನ್‌ ಅವರು ಪೊಲೀಸ್‌ ಇಲಾಖೆಗೆ  2020ರ  ಏಪ್ರಿಲ್‌ 7ರಂದು ಪತ್ರ ಬರೆದಿದ್ದರು. ಇದಕ್ಕೆ 2020ರ ಏಪ್ರಿಲ್‌ 13ರಂದು ಉತ್ತರಿಸಿರುವ  ಎಡಿಜಿಪಿ,  ಇಂಡಿಯನ್‌ ಟೆಲಿಗ್ರಾಫ್‌ ಕಾಯ್ದೆ 1885 ಮತ್ತು ಪರವಾನಿಗೆ  ಷರತ್ತುಗಳ ಅನ್ವಯ 25  ವೈರ್‌ಲೆಸ್‌  ಉಪಕರಣಗಳನ್ನು ನೀಡಲು  ಅವಕಾಶವಿಲ್ಲ ಎಂದು ತಳ್ಳಿ ಹಾಕಿದ್ದಾರೆ. ಎಡಿಜಿಪಿ ಬರೆದಿರುವ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. 

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್‌ಗಳನ್ನು ನೋಂದಾಯಿಸಲು ಮುಂದಡಿ  ಇಟ್ಟಿದ್ದ ಕ್ಯಾಪ್ಟನ್‌ ಮಣಿವಣ್ಣನ್‌  ಅವರು ಕಾರ್ಮಿಕ ಇಲಾಖೆಯಿಂದ  ಈಗಾಗಲೇ 19,000 ಪಾಸ್‌ಗಳನ್ನು ಕೊರೊನಾ ವಾರಿಯರ್ಸ್‌ಗಳಿಗೆ ವಿತರಿಸಿದ್ದರು. ಬೆಂಗಳೂರು ನಗರವೊಂದರಲ್ಲೇ 10,000 ಪಾಸ್‌ಗಳನ್ನು ನೀಡಿದ್ದರು ಎಂದು  ತಿಳಿದು ಬಂದಿದೆ. ಆದರೆ ಪಾಸ್‌ ಪಡೆದಿರುವ ವಾರಿಯರ್ಸ್‌ಗಳ್ಯಾರು ಬೀದಿಗಿಳಿದಿಲ್ಲ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ. 

‘ಕಾರ್ಮಿಕ ಇಲಾಖೆಯಿಂದ  ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ  ಅಸಂಘಟಿತ ಕಾರ್ಮಿಕರಿಗೆ ಪೂರೈಸುತ್ತಿರುವ ಸಿದ್ಧ ಆಹಾರಕ್ಕೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಕಾರ್ಮಿಕರು ಇರುವ ಜಾಗಕ್ಕೆ ಸಿದ್ಧ ಆಹಾರವನ್ನು ತಲುಪಿಸಲು ಕಷ್ಟವಾಗುತ್ತಿದೆ. ಸ್ವಯಂ ಸೇವಕರು ಬೆರಳಣಿಕೆಯಷ್ಟಿದ್ದಾರೆ.ಪರಿಸ್ಥಿತಿ ಹೀಗಿರುವಾಗ ಸರ್ಕಾರದ  ಕಾರ್ಯದರ್ಶಿ ಇದರ ಬಗ್ಗೆ ಗಮನಹರಿಸಬೇಕೇ ವಿನಃ ಪೊಲೀಸ್‌ ವೈರ್‌ಲೆಸ್‌ಗಳಿಗಲ್ಲ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

ಅದೇ ರೀತಿ ಲಾಕ್‌ಡೌನ್‌ನಿಂದ  ತೊಂದರೆಗೊಳಗಾಗಿರುವ ಕಟ್ಟಡ  ಕಾರ್ಮಿಕರೂ ಸೇರಿದಂತೆ ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರಿಗೆ ನೆರವಾಗಲು ಆರಂಭಿಸಿದ್ದ ಸಹಾಯವಾಣಿಯೂ ಮುಗ್ಗುರಿಸಿ ಬಿದ್ದಿದೆ. ಅಲ್ಲದೆ, ಬೆಂಗಳೂರು ನಗರದ  198 ವಾರ್ಡ್‌ಗಳ ಮೇಲೆ  ಕಣ್ಗಾವಲು ಇಡಲೆಂದು ಅಭಿವೃದ್ಧಿಗೊಳಿಸಿದ್ದ ಮೊಬೈಲ್‌ ಆಪ್‌ ಕೂಡ  ಸಮರ್ಥವಾಗಿ  ಬಳಕೆ ಆಗುತ್ತಿಲ್ಲ  ಎಂದು ಗೊತ್ತಾಗಿದೆ. 

ಇದೆಲ್ಲದರ ನಡುವೆಯೇ ಪೊಲೀಸ್‌  ವೈರ್‌ಲೆಸ್‌  ಉಪಕರಣಗಳಿಗಾಗಿ ಬೇಡಿಕೆ ಇರಿಸಿರುವ ಮಣಿವಣ್ಣನ್‌ ಅವರ  ನಡೆ ಕುರಿತು ಇಲಾಖೆಯಲ್ಲೇ  ತೀವ್ರ ವಿರೋಧ ವ್ಯಕ್ತವಾಗಿದೆ  ಎಂದು ತಿಳಿದು ಬಂದಿದೆ. 

ಅಲ್ಲದೆ,  ವೈರ್‌ಲೆಸ್‌ಗಳನ್ನು ಬಳಸುವ ಕುರಿತು ಪೊಲೀಸ್‌ ಇಲಾಖೆ ಸಿಬ್ಬಂದಿ  ತರಬೇತಿಯನ್ನು ಪಡೆದುಕೊಂಡಿರುತ್ತಾರೆ. ಆದರೆ ಕಾರ್ಮಿಕ ಇಲಾಖೆಯ ಯಾವೊಬ್ಬ ಅಧಿಕಾರಿ, ಸಿಬ್ಬಂದಿಗೂ ಈ ಬಗ್ಗೆ ಯಾವುದೇ ತರಬೇತಿ ಮತ್ತು ಅನುಭವವೂ ಇಲ್ಲ. ಆದರೂ ವೈರ್‌ಲೆಸ್‌ ಉಪಕರಣಗಳ ಬೇಡಿಕೆ ಇರಿಸಿದ್ದೇಕೆ ಎಂಬುದು ನಿಗೂಢವಾಗಿದೆ. 

‘ಮೊಬೈಲ್‌ ಆಪ್‌ನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರೆ ವೈರ್‌ಲೆಸ್‌ ಉಪಕರಣದ ಅಗತ್ಯತೆಯೇ ಇರುವುದಿಲ್ಲ. ಮೇಲಾಗಿ ಈ ಉಪಕರಣಗಳಿಗೂ ಕಾರ್ಮಿಕ ಇಲಾಖೆಗೂ ಸಂಬಂಧವೇ ಇಲ್ಲ.  ಆದರೂ ಸರ್ಕಾರದ  ಕಾರ್ಯದರ್ಶಿ ಮಣಿವಣ್ಣನ್‌ ಅವರು ವೈರ್‌ಲೆಸ್‌ ಉಪಕರಣಗಳ ಹಿಂದೆ ಯಾಕೆ ಬಿದ್ದಿದ್ದಾರೆ,’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ. 

the fil favicon

SUPPORT THE FILE

Latest News

Related Posts