ಬೆಂಗಳೂರು; ಒಳಾಡಳಿತ ಇಲಾಖೆಯ ಅನುಮೋದನೆ ಇಲ್ಲದೆಯೇ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳ ಬೆಂಗಾವಲು ಕರ್ತವ್ಯಕ್ಕೆ ಬೆಂಗಳೂರಿನಿಂದ ಜೈಪುರಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಪ್ರಕರಣ ಇದೀಗ ಹೊರಬಿದ್ದಿದೆ.
ಅನುಮೋದನೆ ನೀಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ಒಳಾಡಳಿತ ಇಲಾಖೆಗೆ ಯಾವ ಮಾಹಿತಿಯನ್ನೂ ನೀಡದಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆಯಲ್ಲದೆ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಮಾಡಿದ್ದ ಶಿಫಾರಸ್ಸು, ಆರ್ಥಿಕ ಇಲಾಖೆ ಹೊರಡಿಸಿದ್ದ ಮಾರ್ಗಸೂಚಿಗಳು ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವಿಮಾನ ಪ್ರಯಾಣಕ್ಕೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ವಿರುದ್ಧವಾಗಿ ಪೊಲೀಸ್ ಅಧಿಕಾರಿಗಳು ಜೈಪುರಕ್ಕೆ ತೆರಳಿದ್ದರೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಅಲ್ಲದೆ, ಒಳಾಡಳಿತ ಇಲಾಖೆಯ ಅನುಮೋದನೆ ಇಲ್ಲದೆಯೇ ಜೈಪುರಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿಗಳು, ಇದಕ್ಕೆ ಸೂಕ್ತ ಸಮರ್ಥನೆಯನ್ನೂ ಒದಗಿಸಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ 2020ರ ಫೆ.7ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮ 487(1)ಎ() ಅನ್ವಯ 74,000 ರು. ಮತ್ತು ಅದಕ್ಕೂ ಹೆಚ್ಚಿನ ವೇತನ ಪಡೆಯುತ್ತಿರುವ ಅಧಿಕಾರಿ, ನೌಕರರು ಮಾತ್ರ ವಿಮಾನದಲ್ಲಿ ಪ್ರಯಾಣಿಸಲು ಅರ್ಹರು. ಈ ನಿಯಮಗಳನ್ನು ಸಡಿಲಿಸಲು ಕೇವಲ ಆರ್ಥಿಕ ಇಲಾಖೆಗೆ ಮಾತ್ರ ಅಧಿಕಾರವಿದೆ. ಆದರೆ ಜೈಪುರಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿಗಳು ಈ ನಿಯಮವನ್ನು ಪಾಲಿಸಿಲ್ಲ ಎಂಬುದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬರೆದಿರುವ ಪತ್ರದಿಂದ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ವಿಮಾನ ಪ್ರಯಾಣಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಸಡಿಲಿಸಲು ಆರ್ಥಿಕ ಇಲಾಖೆಗಷ್ಟೇ ಅಧಿಕಾರ ಪ್ರತ್ಯಾಯೋಜಿಸಿದೆಯೇ ವಿನಃ ಇಲಾಖೆ ಮುಖ್ಯಸ್ಥರಿಗೆ ಅಧಿಕಾರ ನೀಡಿರುವುದಿಲ್ಲ. ಪೊಲೀಸ್ ಇಲಾಖೆಯ ಮುಖ್ಯಸ್ಥರು ಒಂದೊಮ್ಮೆ ಅಧಿಕಾರವನ್ನು ಬಳಸಿದ್ದಾರೆ ಎಂದು ಹೇಳಿದರೂ ಇಲಾಖೆ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕರು ಕೂಡ ನಿಯಮ ಉಲ್ಲಂಘನೆಗೆ ಆರೋಪಕ್ಕೆ ಗುರಿಯಾಗಲಿದ್ದಾರೆ.
ಅಷ್ಟೇ ಅಲ್ಲ, ವಿಮಾನದಲ್ಲಿ ಪ್ರಯಾಣಿಸುವ ಅನಿವಾರ್ಯತೆ ಇದೆ ಎಂದಾದರೆ ಇಲಾಖೆ ಕಾರ್ಯದರ್ಶಿಗಳ ಪೂರ್ವಾನುಮೋದನೆಯನ್ನಾದರೂ ಪಡೆಯವುದು ಅತ್ಯವಶ್ಯಕ. ಆದರೆ ಈ ಪ್ರಕರಣದಲ್ಲಿ ಇಲಾಖೆ ಕಾರ್ಯದರ್ಶಿಗಳನ್ನು ಕತ್ತಲಲ್ಲಿಟ್ಟು ಪ್ರಯಾಣಿಸಿದ್ದರೇ ಎಂಬ ಸಂಶಯಗಳು ವ್ಯಕ್ತವಾಗಿವೆ. ಪೊಲೀಸ್ ಅಧಿಕಾರಿಗಳ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರಿಂದ ವಿವರಣೆ ಕೇಳಿ ಪತ್ರ ಬರೆದಿದ್ದಾರೆ.
‘ಪ್ರಸ್ತುತ ಪ್ರಕರಣದಲ್ಲಿ ವಿಮಾನ ಪ್ರಯಾಣಗಳನ್ನು ಕೈಗೊಳ್ಳಲು ಯಾವ ಹಂತದಲ್ಲಿ ಅನುಮೋದಿಸಲಾಗಿದೆ ಎಂಬ ಬಗ್ಗೆ ಪರಿಶೀಲಿಸಲು ಸಂಬಂಧಿಸಿದ ಮಾಹಿತಿಯನ್ನು ಒದಗಿಸಿರುವುದಿಲ್ಲ. ಆದ್ದರಿಂದ ಈ ಎಲ್ಲಾ ಅಂಶಗಳಿಗೆ ಸೂಕ್ತ ಸಮರ್ಥನೆಯೊಡನೆ ಇವರು ಕೈಗೊಂಡ ವಿಮಾನ ಪ್ರಯಾಣದ ಅಧಿಕೃತ ಮಾಹಿತಿ, ನಿಯೋಜನೆಯ ಆದೇಶದ ಪ್ರತಿ, ದೃಢೀಕೃತ ಟಿಕೆಟ್, ಮೂಲ ಬೋರ್ಡಿಂಗ್ ಪಾಸ್ ಮಾಹಿತಿಗಳನ್ನು ಒದಗಿಸಬೇಕು,’ ಎಂದು ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಅಧಿಕಾರಿಗಳ ಪ್ರಯಾಣ ಭತ್ಯೆಯ ದರಗಳ ಪರಿಷ್ಕರಣೆ ಮತ್ತು ಅರ್ಹತೆಗಳ ಮಾರ್ಪಾಡಿನ ಬಗ್ಗೆ 6ನೇ ವೇತನ ಆಯೋಗ 2019ರ ಜನವರಿ 11ರಂದು ಶಿಫಾರಸ್ಸು ಮಾಡಿತ್ತು. ಅದರಂತೆ ಪ್ರಯಾಣ ಭತ್ಯೆಯ ಉದ್ದೇಶಗಳಿಗಾಗಿ ಎ , ಬಿ ಸಿ ಮತ್ತು ಡಿ ಗುಂಪಿನ ನೌಕರರನ್ನು ವರ್ಗೀಕರಣ ಮಾಡಲಾಗಿತ್ತು.
ಪ್ರವಾಸ ಕಾಲದಲ್ಲಿ ವಿಮಾನದ ಮೂಲಕ ಪ್ರಯಾಣ ಮಾಡುವ ಬಗ್ಗೆ ಆರ್ಥಿಕ ಇಲಾಖೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರ ಪ್ರಕಾರ 74,000 ಅಥವಾ ಅದಕ್ಕೂ ಮೇಲ್ಪಟ್ಟು ವೇತನ ಪಡೆಯುವ ಸರ್ಕಾರಿ ನೌಕರನು ರಾಜ್ಯದ ಹೊರಗಿನ ಪ್ರವಾಸದ ಸಂದರ್ಭದಲ್ಲಿ ಮಾಡುವ ಪ್ರಯಾಣವನ್ನು ವಿಮಾನದ ಮೂಲಕ ಕೈಗೊಳ್ಳಲು ಹಕ್ಕು ಹೊಂದಿದ್ದಾರೆ.
ಹಾಗೆಯೇ 61,150 ರು. ವೇತನ ಅಥವಾ ಅದಕ್ಕೂ ಮೇಲ್ಪಟ್ಟು ವೇತನ ಪಡೆಯುವ ಅಧಿಕಾರಿ, ನೌಕರನು ರಾಜ್ಯದೊಳಗೆ ಪ್ರವಾಸದ ಸಂದರ್ಭದಲ್ಲಿ ವಿಮಾನದ ಮೂಲಕ ಪ್ರಯಾಣ ಮಾಡಬಹುದು. ಇನ್ನು, 61,150 ರು. ವೇತನ ಮತ್ತು ಅದಕ್ಕೂ ಮೇಲ್ಪಟ್ಟ ಸರ್ಕಾರಿ ನೌಕರನು ಕರ್ತವ್ಯದ ಮೇಲೆ ಬೆಂಗಳೂರಿನಿಂದ ಬೀದರ್ ಜಿಲ್ಲೆಯ ಯಾವುದೇ ಸ್ಥಳಕ್ಕೆ, ಬೆಂಗಳೂರಿನಿಂದ ಗುಲ್ಬರ್ಗಕಕ್ಕೆ ಮತ್ತೆ ಅದೇ ರೀತಿಯಾಗಿ ಹಿಂದಕ್ಕೆ ಪ್ರವಾಸವನ್ನು ಕೈಗೊಳ್ಳಬಹುದು. ಅದೇ ರೀತಿ ಹೈದರಾಬಾದ್ ಮೂಲಕ ವಿಮಾನದಲ್ಲಿ ಪ್ರಯಾಣ ಕೈಗೊಳ್ಳಲು ಅಧಿಕಾರ ನೀಡಿರುವುದು ಅರ್ಥಿಕ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಿಂದ ತಿಳಿದು ಬಂದಿದೆ.
ಇದಷ್ಟೇ ಅಲ್ಲ, ಪರಿಷ್ಕೃತ ವೇತನ ಶ್ರೇಣಿಯಲ್ಲಿ 74,400 ರು. ಅಥವಾ ಅದಕ್ಕಿಂತ ಹೆಚ್ಚು ವೇತನ ಪಡೆಯುವ ಸರ್ಕಾರಿ ನೌಕರನು ವರ್ಗಾವಣೆಯಾದಾಗ ಮಾತ್ರ ವಿಮಾನದ ಮೂಲಕ ಪ್ರಯಾಣಿಸಲು ಹಕ್ಕು ಹೊಂದಿದ್ದಾರೆ. ಅಲ್ಲದೆ ತನಗಾಗಿ ಒಂದು ಪ್ರಯಾಣ ದರ ಹಾಗೂ ತನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗಾಗಿ ಒಂದು ಹೆಚ್ಚುವರಿ ಪ್ರಯಾಣ ದರವನ್ನು ಕ್ಲೈಮ್ ಮಾಡಲು ಹಕ್ಕು ನೀಡಲಾಗಿದೆ.
ವಿಮಾನ ಪ್ರಯಾಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳು ಮತ್ತು ಆರ್ಥಿಕ ಇಲಾಖೆಗಿದ್ದ ಅಧಿಕಾರವನ್ನು ಯಾವುದೇ ಸಮರ್ಥನೆ ಇಲ್ಲದೆಯೇ ಬಳಸಿಕೊಂಡಿದ್ದೇಕೆ ಎಂಬ ಪ್ರಶ್ನೆಗಳಿಗೆ ಪೊಲಿಸ್ ಇಲಾಖೆ ಇದುವರೆಗೂ ಉತ್ತರಿಸಿಲ್ಲ ಎಂದ ತಿಳಿದು ಬಂದಿದೆ.