1,861 ಕೋಟಿ ರು ಹಳೇ ಬಾಕಿಗಷ್ಟೇ ಸೀಮಿತ; ನರೇಗಾ ಕೂಲಿಕಾರರ ಭವಿಷ್ಯದ ವೇತನಕ್ಕೆಲ್ಲಿದೆ ಹಣ?

ಬೆಂಗಳೂರು; ರಾಜ್ಯದ ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ಕಡೆಗೂ ಅನುದಾನ  ಬಿಡುಗಡೆ ಮಾಡಿದೆ. ಆದರೆ ಕೇಂದ್ರ ಸರ್ಕಾರ ನೀಡಿರುವ ಹಣದ ಬಹುತೇಕ ಭಾಗ ಹಿಂದಿನಿಂದ ಉಳಿಸಿಕೊಂಡು ಬಂದಿರುವ ಕೂಲಿ ಕಾರ್ಮಿಕರ ಬಾಕಿ ಹಣಕ್ಕೆ  ಸರಿದೂಗಿಸಬಹುದೇ ಹೊರತು, ಕೊರೊನಾ ಹಿನ್ನೆಲೆಯಲ್ಲಿ ನಿರುದ್ಯೋಗಿಗಳಾಗಿರುವ ಕೂಲಿ ಕಾರ್ಮಿಕರಿಗೆ ಮುಂದಿನ ದಿನದ  ಕೂಲಿ ಹಣವನ್ನು ಹೇಗೆ ಹೊಂದಿಸಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ರಾಜ್ಯದ ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ₹ 1,861 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ₹ 1,039 ಕೋಟಿ ಬಾಕಿ ಪಾವತಿಸಿದಲ್ಲಿ ₹ 822 ಕೋಟಿ ಉಳಿಯಲಿದೆಯಷ್ಟೆ. ಈ ಮೊತ್ತಕ್ಕೆ ರಾಜ್ಯ ಸರ್ಕಾರ 257 ಕೋಟಿ ರು.ಗಳ ಅನುದಾನವನ್ನು ಸೇರಿಸಿದರೆ 1,079 ಕೋಟಿ ರು. ಆಗಲಿದೆ. ಇದು ಸಚಿವ ಈಶ್ವರಪ್ಪ ಅವರ ಲೆಕ್ಕಾಚಾರ. 

ಆದರೆ ಈ ವಿಚಾರದಲ್ಲಿ ಕೇರಳ  ಸರ್ಕಾರದ  ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಿಲ್ಲ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2000 ಕೋಟಿ ರೂ.ಗಳನ್ನು ವಿತರಿಸಲು ಕೇರಳ ಸರ್ಕಾರ ತೀರ್ಮಾನಿಸಿದ್ದನ್ನು ಸ್ಮರಿಸಬಹುದು.  

ಇನ್ನು, ಕೇಂದ್ರ ಸರ್ಕಾರ ಇದೀಗ ಬಿಡುಗಡೆ ಮಾಡಿರುವ ಹಣ ಪ್ರಸಕ್ತ ಸಾಲಿನದ್ದೇ ಅಥವಾ ಬಾಕಿ ಹಣವೇ ಎಂಬುದು ಸ್ಪಷ್ಟವಾಗಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಹಣದ ಪೈಕಿ ಕೇಂದ್ರ ಸರ್ಕಾರ 1,744.33 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು 2020ರ ಮಾರ್ಚ್ 18ರಂದು ನಡೆದ ಅಧಿವೇಶನದಲ್ಲಿ ಸಿ ಎನ್ ಬಾಲಕೃಷ್ಣ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವ  ಈಶ್ವರಪ್ಪ ಅವರು ಉತ್ತರಿಸಿದ್ದರು. 

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹ 1,861 ಕೋಟಿ, ಹಳೆಯ ಬಾಕಿ ತೀರಿಸಿದರೂ ಉಳಿದ ಹಣವನ್ನು ಹೊಂದಿಸುವುದು ಅಷ್ಟು ಸುಲಭದ ಮಾತಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ.  ಇಂತಹ ಪರಿಸ್ಥಿತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ವೇತನ ಪಾವತಿಸಲು ಬೇರೆ ಯಾವ ಸಂಪನ್ಮೂಲಗಳಿವೆ?

ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರ ಸರ್ಕಾರದ ಪರವಾಗಿ 2015-16ರಿಂದ 2019-20ವರೆಗೆ  ಒಟ್ಟು 351332.095 ಲಕ್ಷ ರು.ಗಳನ್ನು ಪಾವತಿಸಿದೆ. ಇದರಲ್ಲಿ 41612.00 ಲಕ್ಷ ರು.ಗಳು ಇನ್ನೂ ಬಾಕಿ ಇದೆ ಎಂಬ ಅಂಶ ದಾಖಲೆಯಿಂದ ತಿಳಿದು ಬಂದಿದೆ. 

ಇದಲ್ಲದೆ ರಾಜ್ಯ ಸರ್ಕಾರವೂ 755.39 ಕೋಟಿ ರು. ಮೊತ್ತದಲ್ಲಿ ಕೂಲಿ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. 2018-19ರಲ್ಲಿ ಕೂಲಿ ಪಾವತಿಸಲು 32.81 ಕೋಟಿ ರು., 2019-20ರಲ್ಲಿ 53.60 ಕೋಟಿ ರು., ಬಾಕಿ ಇದೆಯಲ್ಲದೆ, ಸಾಮಗ್ರಿ ಮೊತ್ತ ಪೈಕಿ 2018-19ರಲ್ಲಿ 119.17 ಕೋಟಿ ರು., 2019-20ರಲ್ಲಿ 549.81 ಕೋಟಿ ರು. ಬಾಕಿ ಉಳಿಸಿಕೊಂಡಿದೆ ಎಂದು ‘ದಿ ಫೈಲ್‌’ 2020ರ ಮಾರ್ಚ್ 26ರಂದು ದಾಖಲೆ ಸಮೇತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು. 

ಯೋಜನೆಯಡಿಯಲ್ಲಿ ನೀಡುವ ಕೂಲಿ ಹಣವನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ನಿರುದ್ಯೋಗಿಗಳು, ಹಳೆಯ ಕೂಲಿಯನ್ನೇ ನೀಡದ  ಸರ್ಕಾರ ಮುಂಗಡವಾಗಿ ಹಣ ನೀಡುವುದೇ ಎಂದು ಪ್ರಶ್ನಿಸಲಾರಂಭಿಸಿದ್ದಾರೆ.

SUPPORT THE FILE

Latest News

Related Posts