ಏಪ್ರಾನ್‌ ಖರೀದಿಯಲ್ಲಿ ಅಕ್ರಮ; ಅಧಿಕಾರಿಗಳ ಪಾತ್ರ ದೃಢಪಡಿಸಿದ ತನಿಖೆ

ಬೆಂಗಳೂರು; ಅಕ್ಷರ ದಾಸೋಹ ಯೋಜನೆಯಡಿ ಅಗ್ನಿ ನಂದಕ ಏಪ್ರಾನ್‌  ಖರೀದಿಯಲ್ಲಿ ನಡೆದಿರುವ ಅಕ್ರಮಗಳಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌  ಅಧಿಕಾರಿಗಳು ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಪಾತ್ರವಿರುವುದು ದೃಢಪಟ್ಟಿದೆ. 

ಸರ್ಕಾರಕ್ಕೆ ಸಲ್ಲಿಕೆಯಾಗಿರುವ ನಿವೃತ್ತ  ಜಿಲ್ಲಾ ನ್ಯಾಯಾಧೀಶರ ನೇತೃತ್ವದ ವಿಚಾರಣೆ ವರದಿ ಅಕ್ರಮದ ಒಳಸುಳಿಯನ್ನು ತೆರೆದಿಟ್ಟಿದೆ. ಅಲ್ಲದೆ ಶಾಲಾ ಹಂತದಲ್ಲಿಯೇ ಏಪ್ರಾನ್‌ ಖರೀದಿಯಾಗಿರುವ ಕಾರಣ  ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಉಪ ನಿರ್ದೇಶಕರುಗಳನ್ನು ವಿಚಾರಣಾಧಿಕಾರಿಗಳು ದೋಷಮುಕ್ತಗೊಳಿಸಿರುವುದು ತಿಳಿದು ಬಂದಿದೆ. 

ಏಪ್ರಾನ್‌ ಖರೀದಿಯಲ್ಲಿ ನಡೆದಿರುವ ಅಕ್ರಮದಲ್ಲಿ ಭಾಗಿ ಆಗಿರುವ  ಉತ್ತರ  ಕನ್ನಡ, ಶಿರಸಿ ಶೈಕ್ಷಣಿಕ ಜಿಲ್ಲೆಗಳ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಅಧಿಕಾರಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರುಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ  ಜರುಗಿಸಬೇಕು ಎಂದು ವಿಚಾರಣಾಧಿಕಾರಿ ಶಿಫಾರಸ್ಸು ಮಾಡಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದ ಶಿಕ್ಷಣಾಧಿಕಾರಿ, ಕಾರವಾರ ಜಿಲ್ಲಾ  ಪಂಚಾಯತ್‌ ಹಾಗೂ 11 ತಾಲೂಕುಗಳಲ್ಲಿ   ಕಾರ್ಯನಿರ್ವಹಿಸುತ್ತಿರುವ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರುಗಳಿಗೆ ಕಾರಣ ಕೇಳುವ ನೋಟೀಸ್‌ ನೀಡಿ ಕೈ ತೊಳೆದುಕೊಂಡಿದೆಯೇ ವಿನಃ ವಿಚಾರಣಾಧಿಕಾರಿ ಒಂದು ವರ್ಷದ ಹಿಂದೆಯೇ ಮಾಡಿರುವ ಶಿಫಾರಸ್ಸು ಆಧರಿಸಿ ಮಾಡಿ ಈವರೆವಿಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. 

‘ಶಾಲಾ ಹಂತದಲ್ಲಿಯೇ ಖರೀದಿ ಪ್ರಕ್ರಿಯೆ ನಡೆದಿರುವುದು ದೃಢಪಟ್ಟಿದೆ. ಆದ್ದರಿಂದ ಹೆಚ್ಚುವರಿಯಾಗಿ ಪಾವತಿಯಾಗಿರುವ ಹಣವನ್ನು ಸಂಬಂಧಿಸಿದ  ಶಾಲೆಗಳ  ಮುಖ್ಯ ಶಿಕ್ಷಕರಿಂದಲೇ ವಸೂಲು ಮಾಡುವುದು ಅನಿವಾರ್ಯವಾಗಿದೆ, ಎಂದು ಪ್ರಾಥಮಿಕ  ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ವಿಧಾನಪರಿಷತ್‌ನ ಸದಸ್ಯ ಘೋಟ್ನೇಕರ  ಶ್ರೀಕಾಂತ  ಲಕ್ಷ್ಮಣ  ಅವರಿಗೆ ಸದನದಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಈ ಉತ್ತರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. 

ಏಪ್ರಾನ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಂಡು ಬಂದಲ್ಲಿ ಅಂತಹ ಶಾಲಾ ಮುಖ್ಯಸ್ಥರುಗಳಿಂದ  ಸರ್ಕಾರಕ್ಕೆ ನಷ್ಟವಾಗಿರುವ ಹೆಚ್ಚುವರಿ ಹಣವನ್ನು ಶೇ.15ರ ಬಡ್ಡಿ  ದರದಲ್ಲಿ ವಸೂಲಿ ಮಾಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಸೂಚಿಸಿರುವುದು ಗೊತ್ತಾಗಿದೆ. 

ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 2013-14ನೇ ಸಾಲಿನಲ್ಲಿ ಅಕ್ಷರ  ದಾಸೋಹ ಕಾರ್ಯಕ್ರಮದಡಿಯಲ್ಲಿ ಸುರಕ್ಷತೆ ಮತ್ತು ಶುಚಿತ್ವ ಕಾಪಾಡುವ ಉದ್ದೇಶದಿಂದ ಅಗ್ನಿನಂದಕ ಏಪ್ರಾನ್‌ ಖರೀದಿಸಲು ಇಲಾಖೆ  ಸೂಚಿಸಿತ್ತು. ಅದರಂತೆ ಶಾಲೆಯಲ್ಲಿನ ಅಡುಗೆಯವರ ಸಂಖ್ಯೆಗನುಗುಣವಾಗಿದ ತಲಾ 1,000 ರು.ಗಳಂತೆ ಶಿರಸಿ ಮತ್ತು ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಗಳಿಗೆ ಸಂಬಂಧಿಸಿದ ತಾಲೂಕು ಪಂಚಾಯ್ತಿಗಳಿಂದ 43,24,000 ರು.ಗಳು ನೇರವಾಗಿ ಅಕ್ಷರ ದಾಸೋಹ ಖಾತೆಗೆ ಜಮಾ  ಮಾಡಲಾಗಿತ್ತು. 

ಈ ಪೈಕಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10,87,378 ರು., ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ 19,74,642 ರು. ಸೇರಿ ಒಟ್ಟು 30,62,020 ರು.ಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯ ಶಿಕ್ಷಕರು ಎಸ್‌ಡಿಎಂಸಿಗಳ ಮೂಲಕ ಏಜೆನ್ಸಿಗಳಿಂದ ಖರೀದಿಸಿದ್ದರು. 

Your generous support will help us remain independent and work without fear.

Latest News

Related Posts