ನರೇಗಾ; ಮುಂಗಡ ಪಾವತಿಸುವ ಮಾತಿರಲಿ ಕೂಲಿ ಹಳೇ ಬಾಕಿ 1 ಸಾವಿರ ಕೋಟಿಯನ್ನೇ ಕೊಟ್ಟಿಲ್ಲ

ಬೆಂಗಳೂರು; ಕೊರೋನಾ ವೈರಸ್‌ನ್ನು ಎದುರಿಸುವ  ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮುಂದಿನ 2 ತಿಂಗಳ  ಅವಧಿಗೆ  ಮುಂಗಡವಾಗಿ ಕೂಲಿ ಹಣವನ್ನು ಪಾವತಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು  ಎರಡು  ದಿನದ ಹಿಂದೆಯಷ್ಟೇ  ಹೇಳಿಕೆ ನೀಡಿದ್ದರು. ಹೇಳಿಕೆ ನೀಡಿದ ಎರಡು ದಿನದ  ಅಂತರದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕರ್ನಾಟಕಕಕ್ಕೆ ಬರಬೇಕಿದ್ದ 1,744.33 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂಬ  ಮಾಹಿತಿ ಹೊರಬಿದ್ದಿದೆ.  

1 ಸಾವಿರ  ಕೋಟಿ ಗೂ ಅಧಿಕ  ಮೊತ್ತವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದ್ದರೆ, ರಾಜ್ಯ ಸರ್ಕಾರವು ಕೂಡ ಕೂಲಿ ಹಣದ ಪೈಕಿ ಒಟ್ಟು 755.39 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2000 ಕೋಟಿ ರೂ.ಗಳನ್ನು ವಿತರಿಸಲು ಕೇರಳ ಸರ್ಕಾರ ತೀರ್ಮಾನಿಸಿದ್ದರೆ, ಕರ್ನಾಟಕ ಸರ್ಕಾರ ಈವರೆವಿಗೂ ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ. 

ಉದ್ಯೋಗ ಖಾತ್ರಿ ಯೋಜನೆಯ ಹಣದ ಪೈಕಿ 1,744.33 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಖುದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ಅವರು ಒಪ್ಪಿಕೊಂಡಿದ್ದಾರೆ. 

2020ರ ಮಾರ್ಚ್ 18ರಂದು ನಡೆದ ಅಧಿವೇಶನದಲ್ಲಿ ಸಿ ಎನ್ ಬಾಲಕೃಷ್ಣ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಈಶ್ವರಪ್ಪ ಅವರು ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆಗೊಳಿಸಬೇಕು ಎಂದು 2020ರ ಮಾರ್ಚ್ 6ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ ರಾಜ್ಯ ಸರ್ಕಾರವೂ 755.39 ಕೋಟಿ ರು. ಮೊತ್ತದಲ್ಲಿ ಕೂಲಿ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. 2018-19ರಲ್ಲಿ ಕೂಲಿ ಪಾವತಿಸಲು 32.81 ಕೋಟಿ ರು., 2019-20ರಲ್ಲಿ 53.60 ಕೋಟಿ ರು., ಬಾಕಿ ಇದೆಯಲ್ಲದೆ, ಸಾಮಗ್ರಿ ಮೊತ್ತ ಪೈಕಿ 2018-19ರಲ್ಲಿ 119.17 ಕೋಟಿ ರು., 2019-20ರಲ್ಲಿ 549.81 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ. 

ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಗುಂಪುಗೂಡುವುದನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಸದ್ಯಕ್ಕೆ ಸ್ಥಗಿತಗೊಂಡಂತಾಗಿದೆ.  ಯೋಜನೆಯಡಿಯಲ್ಲಿ ನೀಡುವ ಕೂಲಿ ಹಣವನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ನಿರುದ್ಯೋಗಿಗಳು, ಹಳೆಯ ಕೂಲಿಯನ್ನೇ ನೀಡದ  ಸರ್ಕಾರ ಮುಂಗಡವಾಗಿ ಹಣ ನೀಡುವುದೇ ಎಂದು ಪ್ರಶ್ನಿಸಲಾರಂಭಿಸಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರ ಸರ್ಕಾರದ ಪರವಾಗಿ 2015-16ರಿಂದ 2019-20ವರೆಗೆ  ಒಟ್ಟು 351332.095 ಲಕ್ಷ ರು.ಗಳನ್ನು ಪಾವತಿಸಿದೆ. ಇದರಲ್ಲಿ 41612.00 ಲಕ್ಷ ರು.ಗಳು ಇನ್ನೂ ಬಾಕಿ ಇದೆ ಎಂಬ ಅಂಶ ದಾಖಲೆಯಿಂದ ತಿಳಿದು ಬಂದಿದೆ. 

ಹಾಸನ ಜಿಲ್ಲಾ ಪಂಚಾಯ್ತಿಯೊಂದಕ್ಕೆ 81.00 ಕೋಟಿ ರು. ಹಣ ಪಾವತಿ ಆಗಬೇಕಿದೆ. ಈ ಪೈಕಿ 2020ರ ಫೆ.19ರ ಅಂತ್ಯಕ್ಕೆ 50.70 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಈಶ್ವರಪ್ಪ ಅವರು ನೀಡಿರುವ ಲಿಖಿತ ಉತ್ತರದಿಂದ ತಿಳಿದು ಬಂದಿದೆ. ಬಾಕಿ ಮೊತ್ತಕ್ಕೆ ಸಂಬಂಧಿಸಿದಂತೆ ಕೂಲಿ ಮತ್ತು ಸಾಮಗ್ರಿ ವೆಚ್ಚದ ಅನುಪಾತವು ಮಾರ್ಗಸೂಚಿಗಳನ್ವಯ ಶೇ.60;40ರ ಮಿತಿಯಲ್ಲಿರಬೇಕಾಗುತ್ತದೆ. 

ಹಾಸನ ಜಿಲ್ಲೆಯಲ್ಲಿ ಸಾಮಗ್ರಿ ವೆಚ್ಚದ ಅನುಪಾತವು ಶೇ.46:89 ಇದೆ. ಸಾಮಗ್ರಿ ವೆಚ್ಚವು ಶೇ.40ಕ್ಕಿಂತ ಹೆಚ್ಚಿರುವುದರಿಂದ ನರೇಗಾ  ತಂತ್ರಾಂಶದಲ್ಲಿ ಹಣ ವರ್ಗಾವಣೆ ಆದೇಶ ಸೃಜಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ಬಾಕಿ ಉಳಿದಿದೆ,’ ಎಂದು ಈಶ್ವರಪ್ಪ ಅವರು ಸಮಜಾಯಿಷಿ ನೀಡಿದ್ದಾರೆ.

ಕಾರ್ಮಿಕರಿಂದ ಕೆಲಸ ತೆಗೆದುಕೊಂಡ ಹದಿನೈದು ದಿನದೊಳಗೆ ಕೂಲಿ ನೀಡಬೇಕು ಎಂದು ನಿಯಮ ಕೇಂದ್ರ  ಮತ್ತು ರಾಜ್ಯ ಸರ್ಕಾರದಿಂದ ನಿಯಮಿತವಾಗಿ ಪಾಲನೆ ಆಗುತ್ತಿಲ್ಲ. ಇದು ಕೆಲಸ ಮಾಡಿದ ಕೂಲಿ ಕಾರ್ಮಿಕರ ಗೋಳಾದರೆ ಕಾಮಗಾರಿಗಳಿಗೆ ಬಳಸಿದ ಸಾಮಾಗ್ರಿಗಳ ಬಿಲ್‌ ಕೂಡ ಹಲವು ಜಿಲ್ಲೆಗಳಲ್ಲಿ ಪಾವತಿಯಾಗದಿರುವುದು ಸಚಿವ ಈಶ್ವರಪ್ಪ ಅವರು ನೀಡಿರುವ ಉತ್ತರದಿಂದ  ಗೊತ್ತಾಗಿದೆ. 

the fil favicon

SUPPORT THE FILE

Latest News

Related Posts