ಕೊರೋನಾ ವಿರುದ್ಧ ಹೋರಾಟಕ್ಕೇಕೆ ಬೇಕು ದೇಣಿಗೆ? 40 ಸಾವಿರ ಕೋಟಿ ಇದೆಯಲ್ಲ

ಬೆಂಗಳೂರು; ಕೊರೊನಾ ವೈರಸ್‌ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ನಾಗರಿಕರು ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ ಗೆ ಉದಾರವಾಗಿ ದೇಣಿಗೆ ನೀಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಮಾಡಿರುವ ವಿನಂತಿಗೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿವೆ. 

ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಲು  ಸಾರ್ವಜನಿಕರಿಂದ ದೇಣಿಗೆ ನಿರೀಕ್ಷಿಸುತ್ತಿರುವ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು ತೆರಿಗೆ ಹಣ ಎಲ್ಲಿ ಹೋಯಿತು, ರಾಜಸ್ವ ಮೂಲಕ  ಸಂಗ್ರಹಿಸಿದ ಹಣ ಯಾವ ಕೆಲಸಗಳಿಗೆ ಖರ್ಚಾಯಿತು, ಮೊದಲು ಲೆಕ್ಕ ಕೊಡಿ ಎಂಬ ಅಭಿಯಾನವನ್ನೂ ನಡೆಸಿದ್ದಾರೆ.

ಈ ಬೆಳವಣಿಗೆಗಳ ನಡುವೆ ‘ದಿ ಫೈಲ್‌’, ಕರ್ನಾಟಕ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಬಳಕೆಯಾಗದ ಮತ್ತು ವಿವಿಧ ಮೂಲಗಳಿಂದ ಸಂಗ್ರಹವಾಗಿರುವ ರಾಜಸ್ವ ಹಾಗೂ ಸಿ ಕೆಟಗರಿ ಗಣಿ ಪ್ರದೇಶಗಳಲ್ಲಿನ ಅದಿರು ಹರಾಜಿನಿಂದ ಜಮೆ ಆಗಿರುವ ಹಣಕಾಸಿನ  ವಿವರಗಳನ್ನು ಮುಂದಿಟ್ಟಿದೆ.

ಸರ್ಕಾರದ ವಿವಿಧ ಇಲಾಖೆಗಳಿಗೆ ರಾಜಸ್ವ ಮತ್ತು ಅನಧಿಕೃತ ಗಣಿಗಾರಿಕೆ  ಪ್ರಕರಣಗಳಿಂದ ವಸೂಲು ಮಾಡಿರುವ ದಂಡದ ಮೊತ್ತ ಮತ್ತು ಅದಿರು ಹರಾಜಿನಿಂದ ಸಂಗ್ರಹಿಸಿರುವ ಮೊತ್ತ ಸೇರಿದಂತೆ ಅಂದಾಜು 50,000 ಕೋಟಿ ರು.ಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ಈ ಹಣವನ್ನು ಸರ್ಕಾರ ಬಳಸಿಕೊಂಡಿದ್ದೇ ಆದಲ್ಲಿ ಕೊರೋನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಎಳ್ಳಷ್ಟೂ ಹಣಕಾಸಿನ ಕೊರತೆ ಆಗುವುದಿಲ್ಲ. ಸಾರ್ವಜನಿಕರಿಂದ ದೇಣಿಗೆ ಪಡೆಯುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. 

ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಯ ವಿವಿಧ ಗಣಿ ಪ್ರದೇಶಗಳಲ್ಲಿದ್ದ ಅದಿರು ಹರಾಜಿನಿಂದ ಅಂದಾಜು 40,000 ಕೋಟಿ ರು.ಗೂ ಅಧಿಕ ಮೊತ್ತ ಜಮೆಯಾಗಿದೆ. ಈ ಹಣವನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ  ಬಳಸಿಕೊಳ್ಳಬೇಕಿದೆಯಲ್ಲದೆ, ಸದ್ಯದ ಪರಿಸ್ಥಿತಿಯನ್ನು ತಕ್ಷಣವೇ ಮನವರಿಕೆ ಮಾಡಿಕೊಟ್ಟಲ್ಲಿ ಈಗಾಗಲೇ ಜಮೆಯಾಗಿರುವ ಹಣವನ್ನು ಕೊರೋನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲು  ಅವಕಾಶವಿದೆ. 

‘ಅದಿರು ಹರಾಜಿನಿಂದ ಸಂಗ್ರವಾಗಿರುವ ಸಾವಿರಾರು ಕೋಟಿ ರು.ಗಳನ್ನು ಕೊರೋನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಬಳಸಲಾಗುವುದು ಎಂದು ಮುಚ್ಚಳಿಕೆ ಬರೆದುಕೊಟ್ಟಲ್ಲಿ  ಸುಪ್ರೀಂ ಕೋರ್ಟ್ ರಾಜ್ಯದ ಮನವಿಯನ್ನು ಪುರಸ್ಕರಿಸುವ ಸಾಧ್ಯತೆಗಳಿರುತ್ತವೆ. ಸರ್ಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಬೇಕು. ಈ ಎಲ್ಲಾ ಹಣವನ್ನು ಒಟ್ಟುಗೂಡಿಸಿ ತುರ್ತು ನಿಧಿ ಹೆಸರಿನಲ್ಲಿ ಬಳಸಿಕೊಳ್ಳಬೇಕು,’ ಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಹಾಲಿ ಕರ್ನಾಟಕ ರಾಷ್ಟ್ರಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿ ಎನ್‌ ದೀಪಕ್‌ ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ. 

ಇನ್ನು 2019-20ನೇ ಸಾಲಿನಲ್ಲಿ ಮುಖ್ಯ ಖನಿಜ ಮತ್ತು ಉಪ ಖನಿಜಗಳ ಗಣಿಗಾರಿಕೆಯಿಂದ ಸಂಗ್ರಹಿಸಿರುವ ರಾಜಧನವೂ ಸರ್ಕಾರದ  ಬೊಕ್ಕಸದಲ್ಲೇ ಇದೆ. 2020ರ ಫೆ.15ರ ಅಂತ್ಯಕ್ಕೆ ಮುಖ್ಯ ಮತ್ತು ಉಪ ಖನಿಜಗಳ ಗಣಿಗಾರಿಕೆಯಿಂದ ಒಟ್ಟು 2,979 ಕೋಟಿ ರು. ಬೊಕ್ಕಸಕ್ಕೆ ಜಮೆಯಾಗಿರುವುದು ವಾಣಿಜ್ಯ, ಕೈಗಾರಿಕೆ ಇಲಾಖೆಯ ವಾರ್ಷಿಕ ವರದಿಯಿಂದ ತಿಳಿದು ಬಂದಿದೆ. 

ಹಾಗೆಯೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ  ನಡೆಸಿರುವ ಗಣಿ ಗುತ್ತಿಗೆದಾರರಿಂದ  ರಾಜಧನ ವಸೂಲಿ ಮಾಡಿದಲ್ಲಿ ಕನಿಷ್ಠ 1,500 ಕೋಟಿ ರು. ಬೊಕ್ಕಸಕ್ಕೆ ಜಮೆಯಾಗಲಿದೆ. 2019-20ನೇ ಸಾಲಿನಲ್ಲಿ ಅನಧಿಕೃತ ಕಲ್ಲು ಸಾಗಾಣಿಕೆ ಮಾಡಿರುವ ಗಣಿ ಗುತ್ತಿಗೆದಾರರಿಂದ 88.27 ಲಕ್ಷ ಮತ್ತು ಅನಧಿಕೃತ  ಕಲ್ಲು  ಗಣಿಗಾರಿಕೆ ಮಾಡಿರುವ ಗಣಿ ಗುತ್ತಿಗೆದಾರರಿಂದ ವಸೂಲು ಮಾಡಿರುವ ದಂಡದ ಮೊತ್ತವೇ 908.97 ಲಕ್ಷ ರು.ಇದೆ. 

ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಗಣಿ ಗುತ್ತಿಗೆದಾರರಿಂದ 2016-17ನೇ ಸಾಲಿನಿಂದ 2019-20ನೇ ಸಾಲಿನವರೆಗೆ (ಜನವರಿ 2020)  ಒಟ್ಟು 3,25,73,753 ರು.ವಸೂಲು ಮಾಡಿದೆ. 

ಅಕ್ರಮವಾಗಿ  ಮರಳು ಗಣಿಗಾರಿಕೆ ಮಾಡಿರುವವರಿಂದ 124.71 ಲಕ್ಷ ರು.,ಅನಧಿಕೃತ ಮರಳು ಸಾಗಾಣಿಕೆ ಮಾಡಿರುವವರಿಂದ 154.38 ಲಕ್ಷ,  ಅನಧಿಕೃತ ಮರಳು ದಾಸ್ತಾನು ಮಾಡಿರುವರಿಂದ 16.99 ಲಕ್ಷ ಸೇರಿದಂತೆ ಒಟ್ಟು 296.08 ಲಕ್ಷ ರು. ಬೊಕ್ಕಸಕ್ಕೆ  ಜಮೆ ಆಗಿರುವುದು ವಾರ್ಷಿಕ  ವರದಿಯಿಂದ ಗೊತ್ತಾಗಿದೆ.

ಅದೇ ರೀತಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡ ನಂತರವೂ ಜಿಲ್ಲಾಧಿಕಾರಿಗಳ ಪಿ ಡಿ ಖಾತೆಯಲ್ಲಿ 648.70 ಕೋಟಿ ರು (ಜನವರಿ 2020ರ ಅಂತ್ಯಕ್ಕೆ) ಉಳಿದಿದೆ. ಆಯಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಣವನ್ನು ತಕ್ಷಣವೇ ಕೊರೋನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಬಳಸಲು ಅವಕಾಶವಿದೆ. 

ಅಬಕಾರಿ, ಸುಂಕ, ತೆರಿಗೆ ಹಾಗೂ  ವಿವಿಧ  ಶ್ರೇಣಿಯ ಮದ್ಯದ ಮೇಲಿನ ತೆರಿಗೆ ಹೆಸರಿನಲ್ಲಿ ಸರ್ಕಾರಕ್ಕೆ ಜಮೆ ಆಗಿದೆ. 2016-17ರಿಂದ 2018-19ನೇ ಸಾಲಿನವರೆಗೆ ಒಟ್ಟು 54,376.19 ಕೋಟಿ ರು. ಮೊತ್ತದಲ್ಲಿ  ರಾಜಸ್ವ  ಸಂಗ್ರಹವಾಗಿದೆ. ಈ ಪೈಕಿ ಜನಪ್ರಿಯ ಯೋಜನೆಗಳ ಅನುಷ್ಠಾನಕ್ಕೆ  ಬಳಕೆ ಮಾಡಿದ ನಂತರ ಉಳಿದಿರುವ ಹಣವನ್ನು ತುರ್ತು ನಿಧಿ ಹೆಸರಿನಲ್ಲಿ ಸರ್ಕಾರ  ಪಡೆಯಬಹುದು.

ಅದೇ ರೀತಿ ಕರ್ನಾಟಕ ಕಟ್ಟಡ  ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಕಲ್ಯಾಣ ಮಂಡಳಿಯಲ್ಲಿ 2020ರ ಜನವರಿ ಅಂತ್ಯಕ್ಕೆ ಒಟ್ಟು 6,493.69 ಕೋಟಿ ರು. ಇದೆ. ಈ  ಹಣವನ್ನು ತುರ್ತು ನಿಧಿ ಹೆಸರಿನಲ್ಲಿ  ಬಳಕೆ ಮಾಡುವ  ಅವಕಾಶವಿದೆ. ಬಹುತೇಕ ಕಟ್ಟಡ ನಿರ್ಮಾಣ ಸಂಸ್ಥೆಗಳು  ಈಗಾಗಲೇ ಕೆಲಸಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ದಿನನಿತ್ಯ ಬದುಕಿಗೆ ಈ ಹಣವನ್ನು ವಿನಿಯೋಗಿಸಬಹುದು. 

‘ಈಗಾಗಲೇ ಸರ್ಕಾರ ವಿವಿಧ ಯೋಜನೆಗಳಿಗೆ ನಿಗದಿಮಾಡಿರುವ ಹಣ ಖರ್ಚೆ ಆಗುವುದಿಲ್ಲ.  ಬಹುತೇಕ ಯೋಜನೆಗಳು ಮುಂದಿನ ಹಲವು ತಿಂಗಳುಗಳ ಕಾಲ ಆರಂಭವಾಗುವುದಿಲ್ಲ, ಅಥವಾ ಖರ್ಚಾಗುವುದಿಲ್ಲ. ಕಾಮಗಾರಿಯನ್ನೂ  ಕೈಗೆತ್ತಿಕೊಳ್ಳುವುದಿಲ್ಲ. ಜನತೆ ತಬ್ಬಲಿತನ ಅನುಭವಿಸುತ್ತಿರುವ ಹೊತ್ತಿನಲ್ಲಿ ದೇಣಿಗೆ ಕೊಡಿ ಎಂದು ಕೇಳುವುದು ತುಂಬಾ ನಾಚಿಗೇಡಿತನ ಮತ್ತು ಸಂವೇದನೆ ಇಲ್ಲದ  ವರ್ತನೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.  

the fil favicon

SUPPORT THE FILE

Latest News

Related Posts