ಕೊರೊನಾ ಸೋಂಕು ಹರಡಿರುವುದರ ಹಿಂದಿನ ಮುಖ್ಯ ಕಾರಣ ಬಹಿರಂಗ; ಬಯಲಾಯಿತು ಸರ್ಕಾರದ ನಿರ್ಲಕ್ಷ್ಯ

ಬೆಂಗಳೂರು; ಕೋವಿಡ್‌-19 ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಮನೆಗಳಲ್ಲಿ ಪ್ರತ್ಯೇಕವಾಗಿರಿಸಿದ್ದರೂ ವೈದ್ಯಕೀಯ ಸೂಚನೆ ಪ್ರಕಾರ  ಶಿಷ್ಟಾಚಾರ ಅನುಸರಿಸುತ್ತಿಲ್ಲ ಎಂಬ ಹೊಸ ಮಾಹಿತಿ ಹೊರಬಿದ್ದಿದೆ. ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕದಲ್ಲಿದವರು ಶಿಷ್ಟಾಚಾರ ಅನುಸರಿಸದಿರುವುದೇ ಕರ್ನಾಟಕ ನಿರ್ಣಾಯಕ ಘಟ್ಟಕ್ಕೆ ತಲುಪಲು ಮೂಲ ಕಾರಣ ಎಂಬ ಹೊಸ  ಅಂಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಗೆಡವಿದೆ.

ಅಲ್ಲದೆ, ಮಾರ್ಚ್‌  19ರಿಂದ 28 ರವರೆಗೂ ಈ ಬಗ್ಗೆ ಮುಂಜಾಗರೂಕತೆ ವಹಿಸದ  ಇಲಾಖೆ ಅಧಿಕಾರಿಗಳು ಇದೀಗ ನಿರ್ಣಾಯಕ ಘಟ್ಟಕ್ಕೆ ತಲುಪಿದ ನಂತರ ಪ್ರಾಥಮಿಕ ಸಂಪರ್ಕಗಳನ್ನು ಮನೆಯಿಂದ ಹೊರತುಪಡಿಸಲು ಮುಂದಾಗಿದ್ದಾರೆ.  ಇದು ಇಲಾಖೆ ಮಾತ್ರವಲ್ಲದೆ ರಾಜ್ಯ ಸರ್ಕಾರದ ಭಂಡ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 

ಕೋವಿಡ್‌ 19 ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಮೇಲ್ವಿಚಾರಣೆ ನಡೆಸುವಲ್ಲಿಯೂ ಸತತವಾಗಿ ವಿಫಲವಾಗಿದೆಯಲ್ಲದೆ, ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳುವಲ್ಲಿಯೂ ಎಡವಿ ಬಿದ್ದಿದೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ.  

2020ರ ಮಾರ್ಚ್ 28ರಂದು ಮತ್ತೊಮ್ಮೆ ಬಿಗಿಯಾದ ಮಾರ್ಗಸೂಚಿಗಳನ್ನು ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದ ಆಯುಕ್ತರು ಪ್ರಾಥಮಿಕ ಸಂಪರ್ಕವನ್ನು ಹೋಮ್‌ ಕ್ವಾರಂಟೀನ್‌ಗೆ ಒಳಪಡಿಸುವುದು ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು, ಸೋಂಕು ಹರಡದಂತೆ ತಡೆಯುವುದು ಮತ್ತು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕಗಳನ್ನು ಸರ್ಕಾರದ ಪ್ರತ್ಯೇಕ ಕ್ವಾರಂಟೀನ್‌ ಸೌಲಭ್ಯವಿರುವ ಕೇಂದ್ರಗಳ ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಲು ನಿರ್ಧರಿಸಿದ್ದಾರೆ. 

ಹಾಗೆಯೇ ಕೋವಿಡ್‌ ದೃಢಪಟ್ಟವರೊಂದಿಗೆ ಸಂಪರ್ಕದಲ್ಲಿದ್ದ ಪ್ರಾಥಮಿಕ ಸಂಪರ್ಕಿತರನ್ನು ಅವರ  ಮನೆಯಿಂದ ಕ್ವಾರಂಟೀನ್‌ ಕೇಂದ್ರಗಳಿಗೆ ಸ್ಥಳಾಂತರ  ಮಾಡಲು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿರುವುದು ಡಿಎಚ್‌ಒಗಳಿಗೆ ಬರೆದಿರು ಪತ್ರದಿಂದ ತಿಳಿದು ಬಂದಿದೆ.

ಅಲ್ಲದೆ ಸಾಮಾಜಿಕ ಅಂತರಕ್ಕೆ ಕೊಡುತ್ತಿರುವ ಒತ್ತನ್ನು, ಶಾರೀರಕ  ಅಂತರಕ್ಕೆ ಕೊಡುತ್ತಿಲ್ಲ. ಇದು ಕೂಡ ವೈರಾಣು ಇನ್ನಷ್ಟು ವೇಗದಲ್ಲಿ ಹಬ್ಬಲು ಕಾರಣವಾಗಬಲ್ಲದು ಎಂಬ ಹೊಸ ಅಂಶವನ್ನು ಆರೋಗ್ಯ ಶಿಕ್ಷಣಾಧಿಕಾರಿಗಳು  ಬಹಿರಂಗಪಡಿಸಿದ್ದಾರೆ. 

‘ದಿ ಫೈಲ್‌’ ಜತೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಆರೋಗ್ಯ ಶಿಕ್ಷಣಾಧಿಕಾರಿಯೊಬ್ಬರು ‘ಮನೆಗಳಲ್ಲಿ ಪ್ರತ್ಯೇಕವಾಗಿರಿಸಿವವರ ಸುರಕ್ಷತೆ  ಹೇಗಿದೆ,  ಹೇಗೆ ಇತರರಿಂದ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಸಮೀಕ್ಷೆ ನಡೆಸಲು ಮಾರ್ಗಸೂಚಿಗಳನ್ನೇ ಹೊರಡಿಸಿಲ್ಲ. ಅಲ್ಲದೆ ಹೇಗೆ ಸಮೀಕ್ಷೆ  ಮಾಡಬೇಕು ಎಂಬ ಬಗ್ಗೆಯೂ ತುರ್ತು ತರಬೇತಿಯನ್ನೂ ನೀಡಿಲ್ಲ,’ ಎಂದು ಅಳಲು ತೋಡಿಕೊಂಡರು. 

ಈಗ  ಕಂಡು ಬಂದಿರುವ ಒಟ್ಟು ಪ್ರಕರಣಗಳ ಪೈಕಿ ಶೇ.25ರಷ್ಟು ಪ್ರಕರಣಗಳನ್ನು ಕೋವಿಡ್‌ 19 ಪ್ರಕರಣದ ಪ್ರಾಥಮಿಕ ಸಂಪರ್ಕಗಳೆಂದು ಪರಿಗಣಿಸಿದೆ. ‘ಕರ್ನಾಟಕ  ಸರ್ಕಾರದ ಈಗಿರುವ ಶಿಷ್ಟಾಚಾರದ ಪ್ರಕಾರ ಕೋವಿಡ್‌-19  ಪಾಸಿಟಿವ್‌ ರೋಗಿಯ ಪ್ರಾಥಮಿಕ ಸಂಪರ್ಕವನ್ನು ಅವರ ಮನೆಗಳಲ್ಲಿಯೇ ಇರಿಸಬೇಕಾಗಿತ್ತು. ಹೋಮ್‌ ಕ್ವಾರಂಟೀನ್‌ಗೆ ಒಳಗಾಗಿರುವ ವ್ಯಕ್ತಿಯ ವೈಯಕ್ತಿಕ ಶಿಸ್ತು ಅತ್ಯಂತ ನಿರ್ಣಾಯಕವಾಗಿದೆ. ಪ್ರಾಥಮಿಕ ಸಂಪರ್ಕಗಳನ್ನು ಹೊಂದಿದ ವ್ಯಕ್ತಿಗಳು ಹೋಮ್‌ ಕ್ವಾರಂಟೀನ್‌ ಶಿಷ್ಟಾಚಾರವನ್ನು ಅನುಸರಿಸುತ್ತಿಲ್ಲ. ಇದು ಸೋಂಕು  ಹರಡಲು ಮುಖ್ಯ ಕಾರಣವಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಪ್ರಾಥಮಿಕ  ಸಂಪರ್ಕವನ್ನು ಹೋಮ್‌ ಕ್ವಾರಂಟೀನ್‌ಗೆ ಒಳಪಡಿಸುವುದು ಕಷ್ಟದ  ಕೆಲಸವಾಗುತ್ತಿದೆ,’ ಎಂದು ಆಯುಕ್ತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಸೋಂಕು ಉಲ್ಬಣಗೊಳ್ಳುವ ಮುನ್ನವೇ ಎಚ್ಚೆತ್ತುಕೊಳ್ಳದ  ಅಧಿಕಾರಶಾಹಿ ಸೋಂಕಿತರನ್ನು ಮತ್ತು ವಿದೇಶದಿಂದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಗೆ ಆಗಮಿಸಿದ ಅಂದಾಜು 26,000 ಮಂದಿಯನ್ನು ಮನೆಗೆ ಕಳಿಸದೇ ಪ್ರತ್ಯೇಕ ವಸತಿ ಸೌಕರ್ಯ ಕಲ್ಪಿಸಬೇಕಿತ್ತು. ಕೇವಲ ಸಂಶಯ ಇರುವ ಪ್ರಕರಣಗಳನ್ನಷ್ಟೇ ಪರಿಗಣಿಸಿ ಉಳಿದವರನ್ನು ಮನೆಗಳಿಗೆ ಕಳಿಸುವ ಮೂಲಕ ಇಲಾಖೆ ಅತಿ ದೊಡ್ಡ ಲೋಪವನ್ನೆಸಗಿದೆ ಎಂದು ಇಲಾಖೆಯ ಮತ್ತೊಬ್ಬ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.

SUPPORT THE FILE

Latest News

Related Posts