ಬೆಂಗಳೂರು; ಬೆಳ್ತಂಗಡಿಯ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳಿಂದ ಸರ್ಕಾರಕ್ಕೆ 2 ಕೋಟಿ ರು.ಗೂ ಅಧಿಕ ನಷ್ಟಕ್ಕೆ ಕಾರಣವಾಗಿರುವ ಗಣಿ ಗುತ್ತಿಗೆದಾರರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದ ಗಣಿ, ಭೂ ವಿಜ್ಞಾನ ಇಲಾಖೆಯ ಮಂಗಳೂರಿನ ಉಪ ನಿರ್ದೇಶಕಿ ಎಸ್ ಸುಮಿತ್ರ ಸೇರಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಉಪ ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಉಪ ಲೋಕಾಯುಕ್ತರ ಶಿಫಾರಸ್ಸು ಆಧರಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2020ರ ಜನವರಿ 7ರಂದು ಟಿಪ್ಪಣಿ ಕಳಿಸಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಬೆಂಗಳೂರು ಮೂಲದ ವಕೀಲ ಎ ಕೇಶವಭಟ್ ಎಂಬುವರು ಬೆಳ್ತಂಗಡಿ ತಾಲೂಕಿನ ಮೊಗೂರು ಗ್ರಾಮದ ಸರ್ವೆ ನಂಬರ್ 62 ಮತ್ತು 72ರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣದಲ್ಲಿ ಗಣಿ ಮತ್ತು ಉಪ ನಿರ್ದೇಶಕಿ ಎಸ್ ಸುಮಿತ್ರ, ಎಸ್ ಡಿ ನಾರಾಯಣ ಪೂಜಾರಿ(ಕಾರ್ಯಪಾಲಕ ಅಭಿಯಂತರ), ರಾಜಶೇಖರ್ ಪುರಾಣಿಕ್(ಪರಿಸರ ಅಧಿಕಾರಿ) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯರಾವ್ ಇವರನ್ನು ಪ್ರತಿವಾದಿಗಳನ್ನಾಗಿಸಿದ್ದರು.
ಈ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಉಪ ಲೋಕಾಯುಕ್ತರು, ಪ್ರಕರಣ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 12(3) ಅಡಿಯಲ್ಲಿ ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ಸರ್ಕಾರ ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಬೇಕಲ್ಲದೆ ಈ ಕುರಿತು ಕೈಗೊಂಡ ಕ್ರಮದ ವರದಿಯನ್ನು ಲೋಕಾಯುಕ್ತರಿಗೆ ನೇರವಾಗಿ ಸಲ್ಲಿಸಬೇಕು ಎಂದು ಉಪ ಲೋಕಾಯುಕ್ತರು ವಾಣಿಜ್ಯ, ಕೈಗಾರಿಕೆ ಇಲಾಖೆಗೆ ಪತ್ರ ಬರೆದಿದ್ದಾರೆ.
ಕೇಶವ ಭಟ್ ಅವರು ಸಲ್ಲಿಸಿದ್ದ ದೂರು ಆಧರಿಸಿ ಉಪ ಲೋಕಾಯುಕ್ತರು 2017ರ ಜುಲೈ 2ರಂದು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಅವಧಿಯಲ್ಲಿ ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪ ಸೇರಿದಂತೆ ಇನ್ನುಳಿದ ಇಲಾಖೆಗಳ ನಿರ್ಲಕ್ಷ್ಯವನ್ನು ಹೊರಗೆಡವಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಿದ್ದ ಉಪ ಲೋಕಾಯುಕ್ತರು ಕಾನೂನುಬಾಹಿರ ಚಟುವಟಿಕೆಗಳನ್ನು ಬಹಿರಂಗಗೊಳಿಸಿದ್ದರು.
ತನಿಖಾ ವರದಿಯಲ್ಲೇನಿದೆ?
ಬೆಳ್ತಂಗಡಿ ತಾಲೂಕಿನ ಮೊಗೂರು ಗ್ರಾಮದ ಸರ್ವೆ ನಂಬರ್ 62/1,62/2,72/1, 120/2 ಮತ್ತು 121/6ರಲ್ಲಿ ಪ್ರಸಾದ್ ಕಡ್ತಿಲ್ ಹಾಗೂ ಯೋಗೇಶ್ ಪೂಜಾರಿ ಎಂಬುವರು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ. ಈ ಇಬ್ಬರೂ ಆರೋಪಿಗಳು 76,102 ಮೆಟ್ರಿಕ್ ಟನ್‌ನಷ್ಟು ಖನಿಜವನ್ನು ಅಕ್ರಮವಾಗಿ ಹೊರತೆಗೆದು ಸಾಗಾಣಿಕೆ ಮಾಡಿ ಸರ್ಕಾರಕ್ಕೆ 2,28,30,816 ರು.ನಷ್ಟವಾಗಿದೆ. ಇದಕ್ಕೆ ಅಧಿಕಾರಿಗಳ ಕರ್ತವ್ಯಲೋಪವೇ ಕಾರಣ ಎಂದು ವರದಿಯಲ್ಲಿ ವಿವರಿಸಿರುವ ಉಪ ಲೋಕಾಯುಕ್ತರು ‘ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ಸರ್ಕಾರಕ್ಕೆ ಅಷ್ಟೊಂದು ದೊಡ್ಡ ಪ್ರಮಾಣದ ಹಣ ನಷ್ಟವಾಗಿದೆಯಲ್ಲದೆ ನೈಸರ್ಗಿಕ ಸಂಪನ್ಮೂಲದ ಹಗಲು ದರೋಡೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ,’ ಎಂದು ಅಭಿಪ್ರಾಯಿಸಿದ್ದಾರೆ.
ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಗಡಿ ಗುರುತಿಸಿಲ್ಲ. ಮಂಜೂರಾದ ಭೂಮಿಯ ಗಡಿ ಗುರುತಿಸಿಲ್ಲವಲ್ಲದೆ ಪೋಡಿ ಕೂಡ ಮಾಡಿಲ್ಲ ಎಂಬ ಅಂಶ ತನಿಖಾ ವರದಿಯಿಂದ ತಿಳಿದು ಬಂದಿದೆ.
ಅಲ್ಲದೆ ಸರ್ವೇ ಇಲಾಖೆ ಅಧಿಕಾರಿಗಳು ನೀಡಿದ್ದ ಪಿ ನಂಬರ್‌ಗಳನ್ನು ಆಕ್ಷೇಪ ವ್ಯಕ್ತಪಡಿಸಿದ್ದ ಉಪ ಲೋಕಾಯುಕ್ತರು, ಅಧಿಕಾರಿಗಳು ನೀಡಿದ್ದ ಪಿ ನಂಬರ್‌ಗಳು ಅರಣ್ಯ ಭೂಮಿ ಒತ್ತುವರಿಯಾಗಿರುವುದನ್ನು ಕಂಡು ಹಿಡಿಯಲು ಆಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಭೂ ಮಂಜೂರಾತಿ ಪಡೆದವರು ತಮ್ಮ ಅನುಕೂಲಕ್ಕೆ ತಕ್ಕಂತೆ ಗಡಿಗಳನ್ನು ಗುರುತಿಸಿಕೊಳ್ಳದೆ ಭೂಮಿಯನ್ನು ಉಪಯೋಗಿಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.
ಇದಷ್ಟೇ ಅಲ್ಲ ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಗುತ್ತಿಗೆ ಅವಧಿ ಪೂರ್ಣಗೊಂಡರೂ ಕಾನೂನುಬಾಹಿರ ನಡೆಯುತ್ತಿರುವ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿರುವುದು ವರದಿಯಿಂದ ಗೊತ್ತಾಗಿದೆ.
ಇನ್ನು, ಸರ್ವೆ ನಂಬರ್ 62 ಮತ್ತು 72ರಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಘಟಕಕ್ಕೆ ಸಂಬಂಧಿಸಿದಂತೆ ಮೆಸ್ಕಾಂನ ಎಕ್ಸಿಕ್ಯೂಟಿವ್ ಇಂಜಿನಿಯರ್ ನೀಡಿದ್ದ 78 ವಿದ್ಯುತ್ ಬಿಲ್‌ಗಳನ್ನು ಪರಿಶೀಲಿಸಿದ್ದ ಉಪ ಲೋಕಾಯುಕ್ತರು, ಪರಿಸರ ಅಧಿಕಾರಿಗಳ ನಿರಕ್ಷೇಪಣಾ ಪತ್ರದ ಅವಧಿ ಪೂರ್ಣಗೊಂಡ ನಂತರ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಪುನಃ ವಿದ್ಯುತ್ ಸಂಪರ್ಕವನ್ನು ಮುಂದುವರೆಸಲು ಪರಿಸರ ಅಧಿಕಾರಿಗಳ ನಿರಕ್ಷೇಪಣಾ ಪತ್ರ ಪಡೆದಿದ್ದಾರೆ ಎನ್ನುವ ಬಗ್ಗೆ ಯಾವುದೇ ದಾಖಲೆಗಳನ್ನು ಪ್ರತಿವಾದಿಗಳು ಹಾಜರುಪಡಿಸಿಲ್ಲ. ಹೀಗಾಗಿ ಮೆಸ್ಕಾಂನ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೂಡ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.
ಸರ್ವೆ ನಂಬರ್ 62/1, 62/2 ಮತ್ತು 72/1ರಲ್ಲಿ ಪ್ರಸಾದ್ ಕಡ್ತಿಲ್ ಹಾಗೂ ಯೋಗೇಶ್ ಪೂಜಾರಿ ಎಂಬುವರು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಭೂ ವಿಜ್ಞಾನಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಸಾದ್ ಕಡ್ತಿಲ್ ಎಂಬುವರು ಮಂಜೂರಾದ ಸ್ಥಳವನ್ನು ಹೊರತುಪಡಿಸಿ ಸಂಪೂರ್ಣವಾಗಿ ಹೊರಗೆ ಕಲ್ಲು ಗಣಿಗಾರಿಕೆ ನಡೆಸಿದ್ದಾರಲ್ಲದೆ, ಇದರಿಂದ ಸರ್ಕಾರಕ್ಕೆ ನಷ್ಟವಾಗಿರುವ 2,28,30,186 ರು.ಗಳನ್ನು ಪಾವತಿಸಲು ಆದೇಶಿಸಬೇಕು ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವವರ ವಿರುದ್ಧ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು ಎಂಬ ಮಾಹಿತಿ ವರದಿಯಿಂದ ತಿಳಿದು ಬಂದಿದೆ.
ಮೀಸಲು ಅರಣ್ಯ ಕ್ಷೇತ್ರದಲ್ಲಿ ಗಣಿಗಾರಿಕೆ ನಡೆದರೂ ಸಹ ಅದನ್ನು ಪತ್ತೆ ಹಚ್ಚುವಲ್ಲಿ ಮತ್ತು ಮೀಸಲು ಅರಣ್ಯ ಕ್ಷೇತ್ರದ ಗಡಿ ಗುರುತಿಸಿ ನಿರ್ದಿಷ್ಟ ಕ್ರಮ ಜರುಗಿಸುವಲ್ಲಿ ಆರೋಪಿತ ಅಧಿಕಾರಿಗಳು ವಿಫಲರಾಗಿದ್ದರು ಎಂಬ ಸಂಗತಿ ತನಿಖಾ ವರದಿಯಿಂದ ಗೊತ್ತಾಗಿದೆ.
ಆರೋಪಿತ ಅಧಿಕಾರಿಗಳ ವಿರುದ್ಧ ಶಿಸ್ತು ನಡವಳಿಕೆ ಜರುಗಿಸಬೇಕು ಎಂದು ಶಿಫಾರಸ್ಸು ಮಾಡಿರುವ ಉಪ ಲೋಕಾಯುಕ್ತರು ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿರ್ಬಂಧ ಮತ್ತು ಮೇಲ್ಮನವಿ)ನಿಯಮಗಳು 1957ರ ನಿಯಮ 14-ಎ ರ ಅಡಿಯಲ್ಲಿ ಇಲಾಖೆ ವಿಚಾರಣೆ ನಡೆಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.