ಅರಮನೆ ಮೈದಾನ;ಶೆಡ್‌ಗಳಲ್ಲಿ ಅಗ್ನಿಸುರಕ್ಷಾ ಸಾಧನಗಳ ಕಾರ್ಯಕ್ಷಮತೆ ಪರಿಶೀಲನೆಯೇ ನಡೆದಿಲ್ಲ!

ಬೆಂಗಳೂರು; ಹೆಚ್‌ ಹೆಚ್‌ ಪ್ರಮೋದಾದೇವಿ ಒಡೆಯರ್‌ ಸೇರಿದಂತೆ ರಾಜಮನೆತನದ 14 ಮಂದಿ ಹೆಸರಿನಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿರುವ ತಾತ್ಕಾಲಿಕ ಶೆಡ್‌ಗಳಲ್ಲಿ ಅಳವಡಿಸಲಾಗಿರುವ ಅಗ್ನಿಸುರಕ್ಷಾ ಸಾಧನಗಳ ಕಾರ್ಯಕ್ಷಮತೆಯನ್ನು ಮೂರು ವರ್ಷಗಳಾದರೂ ಪರಿಶೀಲಿಸಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

ಮೂರು ವರ್ಷಗಳ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ಇದೀಗ ಅರಮನೆ ಮೈದಾನದಲ್ಲಿರುವ ತಾತ್ಕಾಲಿಕ ಶೆಡ್‌ಗಳಲ್ಲಿರುವ ಅಗ್ನಿ ಸುರಕ್ಷತಾ ಸಾಧನಗಳ ಕಾರ್ಯಕ್ಷಮತೆ ಪರಿಶೀಲಿಸಲು ಮುಂದಾಗಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಿರ್ಮಾಣ ಮಾಡಿರುವ 14 ತಾತ್ಕಾಲಿಕ ಶೆಡ್‌ಗಳಲ್ಲಿ ರಾಷ್ಟ್ರೀಯ ಕಟ್ಟಡ ಸಂಹಿತೆ 2005 (ಎನ್‌ಬಿಸಿ) ಭಾಗ -4 ನಿಯಮ 3.1.5 ರಂತೆ ಅಗ್ನಿ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಳ್ಳಬೇಕು. ಆದರೆ ಮೂರು ವರ್ಷಗಳಿಂದಲೂ ಈ ಸಾಧನಗಳ ಕಾರ್ಯಕ್ಷಮತೆ ಪರಿಶೀಲಿಸದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ವರ್ಚುಸ್ವಿನ್‌ ಎಸ್‌ ಎಸ್‌ ರಾಜೇ ಅರಸ್‌ ಅವರ ಹೆಸರಿನಲ್ಲಿರುವ ಪ್ರಿನ್ಸ್‌ಸ್‌ ಅಕಾಡೆಮಿಯಲ್ಲಿರುವ ಅನಂತ್ಯ ಜಾಗದಲ್ಲಿ ಅಳವಡಿಸಿಕೊಂಡಿರುವ ಅಗ್ನಿ ಶಮನ ಉಪಕರಣಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ 2021ರ ಡಿಸೆಂಬರ್‌ 8ರಂದು ನಿರ್ದೇಶಿಸಿದ್ದಾರೆ.

ಅದೇ ರೀತಿ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಕಾರ್ಯಕ್ರಮ ನಡೆಸಬಾರದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಎಸ್‌ ಎಸ್‌ ರಾಜೇ ಅರಸ್‌ ಅವರಿಗೂ ಪತ್ರ ಬರೆದಿದ್ದಾರೆ.

ಅರಮನೆ ಮೈದಾನದಲ್ಲಿ ಅನಧಿಕೃತವಾಗಿ ತಾತ್ಕಾಲಿಕ ಕಟ್ಟಡಗಳು ತಲೆ ಎತ್ತಿವೆ ಮತ್ತು ಅವುಗಳಿಂದ ಸಿಗುತ್ತಿರುವ ಕೋಟ್ಯಂತರ ರುಪಾಯಿ ಬಾಡಿಗೆಯಲ್ಲಿ ಸರ್ಕಾರಕ್ಕೆ ಬಿಡಿಗಾಸೂ ಸಿಗುತ್ತಿಲ್ಲ ಎಂಬ ಆರೋಪಗಳ ನಡುವೆಯೇ 14 ತಾತ್ಕಾಲಿಕ ಶೆಡ್‌ಗಳಲ್ಲಿ ಅಳವಡಿಸಲಾಗಿರುವ ಅಗ್ನಿ ಸುರಕ್ಷತಾ ಸಾಧನಗಳು ಮೂರು ವರ್ಷಗಳ ಹಿಂದಿನದ್ದು ಎಂಬುದು ಇದೀಗ ಮುನ್ನೆಲೆಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿರುವ ತಾತ್ಕಾಲಿಕ ಶೆಡ್‌ಗಳಲ್ಲಿ 3 ವರ್ಷಗಳ ಹಿಂದೆಯೇ ಅಳವಡಿಸಲಾಗಿರುವ ಅಗ್ನಿ ಸುರಕ್ಷಾ ಸಾಧನಗಳನ್ನು ಪರಿಶೀಲಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಕರ್ನಾಟಕ ಅಗ್ನಿ ಶಾಮಕ ಮತ್ತು ತುರ್ತು ಸೇವೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನಿರ್ದೇಶನಾಲಯದ ಪೊಲೀಸ್‌ ಮಹಾನಿರ್ದೇಶಕರಿಗೆ 2021ರ ಡಿಸೆಂಬರ್‌ 8ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅರಮನೆ ಮೈದಾನದಲ್ಲಿರುವ ಶೆಡ್‌ಗಳ ಪಟ್ಟಿ

ಹೆಚ್‌ ಹೆಚ್‌ ಪ್ರಮೋದಾದೇವಿ ಒಡೆಯರ್‌ (ಟೆನ್ನಿಸ್‌ ಪೆವಿಲಿಯನ್‌ ಗೇಟ್‌ ನಂ 1), ಇಂದ್ರಾಕ್ಷಿ ದೇವಿ (ವೈಟ್‌ ಪೆಟಲ್‌ ಗೇಟ್‌ ನಂ 2), ಇಂದ್ರಾಕ್ಷಿ ದೇವಿ (ತ್ರಿಪುರ ವಾಸಿನಿ ಗೇಟ್‌ ನಂ 3), ಚದುರಂಗ ಕಾಂತರಾಜ ಅರಸ್‌ (ಗಾಯತ್ರಿ ವೃಕ್ಷ ಗೇಟ್‌ ನಂ 04), ಚದುರಂಗ ಕಾಂತರಾಜ ಅರಸ್‌ (ಗಾಯತ್ರಿ ವಿಹಾರ್‌ ಗೇಟ್‌ ನಂ 5), ವಿಶಾಲಾಕ್ಷಿ ದೇವಿ (ಕಿಂಗ್ಸ್‌ ಕೋರ್ಟ್‌ ಗೇಟ್‌ ನಂ 05)ವಿಶಾಲಾಕ್ಷಿ ದೇವಿ ( ನಲಪಾದ್‌ ಪೆವಿಲಿಯನ್‌ ಗೇಟ್‌ ನಂ 5), ವಿಶಾಲಾಕ್ಷಿ ದೇವಿ (ದಿ ಗ್ರ್ಯಾಂಡ್‌ ಕ್ಯಾಸಲ್‌ ಗೇಟ್‌ ನಂ 06), ಕಾಮಾಕ್ಷಿ ದೇವಿ (ಶೀಷ್‌ ಮಹಲ್‌ ಗೇಟ್‌ ನಂ 7), ಕಾಮಾಕ್ಷಿ ದೇವಿ (ಶ್ರೀನಗರ್ ಪ್ಯಾಲೇಸ್‌ ಗೇಟ್‌ ನಂ 08), ವರ್ಚುಸ್ವಿನ್‌ ಎಸ್‌ ಎಸ್‌ ರಾಜೇ ಅರಸ್‌ ( ಪ್ರಿನ್ಸಸ್‌ ಶ್ರೈನ್‌ ಗೇಟ್‌ ನಂ 09), ವರ್ಚುಸ್ವಿನ್‌ ಎಸ್‌ ಎಸ್‌ ರಾಜೇ ಅರಸ್‌ (ಪ್ರಿನ್ಸ್‌ಸ್‌ ಗ್ರೀನ್‌ ಗೇಟ್‌ ನಂ 09), ವರ್ಚುಸ್ವಿನ್‌ ಎಸ್‌ ಎಸ್‌ ರಾಜೇ ಅರಸ್‌ (ಪ್ರಿನ್ಸ್‌ಸ್‌ ಗಾಲ್ಫ್‌ ಗೇಟ್‌ ನಂ 09)

ಈ ತಾತ್ಕಾಲಿಕ ಶೆಡ್‌ಗಳಲ್ಲಿ 3 ವರ್ಷಗಳ ಹಿಂದೆ (2018ರ ಆಗಸ್ಟ್‌ 9) ಅಳವಡಿಸಿಕೊಂಡಿರುವ ಅಗ್ನಿ ಸುರಕ್ಷತೆ ಸಾಧನಗಳು ನವೀಕರಣಗೊಳ್ಳಬೇಕಿದೆ. ‘ ಮೇಲ್ಕಂಡ ಶೆಡ್‌ಗಳಲ್ಲಿ ಪ್ರತಿನಿತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದು ಈ ಕಾರ್ಯಕ್ರಮಗಳಲ್ಲಿ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಭಾಗವಹಿಸುತ್ತಿದ್ದು, ಅವರುಗಳ ಸುರಕ್ಷತೆಯ ಹಿತದೃಷ್ಟಿಯಿಂದ ಮೂರು ವರ್ಷಗಳ ಹಿಂದೆ ಅಳವಡಿಸಿಕೊಳ್ಳಲಾಗಿರುವ ಅಗ್ನಿ ಸುರಕ್ಷತಾ ಸಾಧನಗಳ ಕಾರ್ಯಕ್ಷಮತೆ ಬಗ್ಗೆ ಪರಿಶೀಲಿಸುವುದು ಅವಶ್ಯಕವಾಗಿರುತ್ತದೆ,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಅಗ್ನಿ ಸುರಕ್ಷಾ ಸಾಧನಗಳ ನವೀಕರಣದ ಅವಧಿಯು ಎಷ್ಟು ಎಂಬ ಬಗ್ಗೆ ದಾಖಲೆ ಆಧರಿತ ಮಾಹಿತಿ ಹಾಗೂ ಒಂದು ವೇಳೆ ನವೀಕರಣ ಅವಧಿಯು ಮುಕ್ತಾಯಗೊಂಡಿದ್ದಲ್ಲಿ ಈ ಬಗ್ಗೆ ಸಂಬಂಧಪಟ್ಟ ವಾರಸುದಾರರುಗಳಿಗೆ ನಿಯಮಾನುಸಾರ ನೋಟೀಸ್‌ ನೀಡಿ ನವೀಕರಿಸಿದ ಬಗ್ಗೆ ಸರ್ಕಾರಕ್ಕೆ ದಾಖಲೆ ಆಧರಿತ ಮಾಹಿತಿ ನೀಡಬೇಕು,’ ಎಂದು ಡಿಪಿಎಆರ್‌ ಅಗ್ನಿ ಶಾಮಕ ತುರ್ತು ಸೇವೆಗಳ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿರುವುದು ಪತ್ರದಿಂದ ತಿಳಿದು ಬಂದಿದೆ.

ಅರಮನೆ ಮೈದಾನದಲ್ಲಿರುವ 80 ಕಟ್ಟಡಗಳು ಪರಿವರ್ತನೆ ಯುಗದ ಭೂಮಿಯಲ್ಲಿ ನಿರ್ಮಾಣಗೊಂಡಿವೆ. ಆ ಕಟ್ಟಡಗಳಿಂದ ದಿನಕ್ಕೆ ರು.10 ಲಕ್ಷದವರೆಗೂ ಬಾಡಿಗೆ ವಸೂಲಿಯಾಗುತ್ತಿದ್ದು, ವರ್ಷಕ್ಕೆ ರು.5000 ಕೋಟಿವರೆಗೂ ಸಂಗ್ರಹ ವಾಗುತ್ತಿದೆ. ಆದರೆ ಇದರಲ್ಲಿ ಸರ್ಕಾರಕ್ಕೆ ಕಿಂಚಿತ್ತೂ ಸಿಗುತ್ತಿಲ್ಲ ಎಂದರೆ ಇದಕ್ಕೆ ಹೇಗೆ? ಹಾಗಿದ್ದರೆ ಅಲ್ಲಿನ ಬಾಡಿಗೆ ಹಣ ಯಾರಿಗೆ ಹೋಗುತ್ತಿದೆ ಎಂದು ಈ ಹಿಂದೆ ವಿಧಾನಪರಿಷತ್‌ನ ಸದಸ್ಯರಾಗಿದ್ದ ವಿ ಎಸ್‌ ಉಗ್ರಪ್ಪ ಅವರು ಅನುಮಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

ಅರಮನೆ ಮೈದಾನದಲ್ಲಿರುವ ತಾತ್ಕಾಲಿಕ ಕಟ್ಟಡಗಳಿಂದ ಸಿಗುವ ಬಾಡಿಗೆ ಸರ್ಕಾರಕ್ಕೆ ಸಿಗುವಂತಾಗಲು ಕಾನೂನು ಚೌಕಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹೇಳಿಕೆ ನೀಡಿದ್ದರು.

ಸುಪ್ರೀಂ ಕೋರ್ಟ್ 1998 ಮತ್ತು 2010ರಲ್ಲಿ ನೀಡಿದ ಮಧ್ಯಂತರ ಆದೇಶದಲ್ಲಿ ರಾಜ ಮನೆತನಕ್ಕೆ ಅರಮನೆಯಲ್ಲಿ ತಾತ್ಕಾಲಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಸಿಕ್ಕಿದೆ. ಈಗ ಅಲ್ಲಿ ತಾತ್ಕಾಲಿಕ ಕಟ್ಟಡಗಳು ನಿರ್ಮಾಣವಾಗಿದ್ದು ಅದರಿಂದ ಬರುವ ಬಾಡಿಗೆ ಹಣವನ್ನು ರಾಜ ವಂಶಸ್ಥರೇ ವಸೂಲಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಅರೋಪಗಳಿವೆ.

ಆದರೆ ಆ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದ ಸಮಿತಿಯು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ಆದರೂ ಅರಮನೆ ಜಾಗ ಮತ್ತು ಕಟ್ಟಡಗಳ ನಿಯಂತ್ರಣ ಸರ್ಕಾರದ ಬಳಿ ಇದ್ದರೂ ಸ್ವಾಧೀನ ರಾಜ ಮನೆತನದವರ ಬಳಿಯೇ ಇದೆ. ಅರಮನೆ ವಿವಾದ ಕೋರ್ಟ್ ನಲ್ಲಿರುವುದರಿಂದ ಸರ್ಕಾರಕ್ಕೆ ಯಾವುದೇ ಆದಾಯ ಸಿಗುತ್ತಿಲ್ಲ ಎನ್ನಲಾಗಿದೆ.

SUPPORT THE FILE

Latest News

Related Posts