ಕೋವಿಡ್‌; 25 ಕೋಟಿ ಎಸ್‌ಎಂಎಸ್‌ ಸೇವೆಗೆ ಉತ್ತರಪ್ರದೇಶದ ಕಂಪನಿಗೆ ರತ್ನಗಂಬಳಿ

ಬೆಂಗಳೂರು; ಮೊಬೈಲ್‌ ಒನ್‌ ಅಡಿಯಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿ ನಾಗರಿಕರಿಗೆ ಎಸ್‌ಎಂಎಸ್‌ ಸೇವೆ ಒದಗಿಸುತ್ತಿದ್ದ ಭಾರತ ಸರ್ಕಾರದ ಅಧೀನ ಸಂಸ್ಥೆ ಸಿ ಡಾಕ್‌ ಸಂಸ್ಥೆಯನ್ನು ಬದಿಗಿರಿಸಿ ಕೋವಿಡ್‌ ವೈರಾಣು ಸೋಂಕಿನ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಪರೀಕ್ಷೆಗೊಳಪಟ್ಟ ನಂತರ ಸೋಂಕಿನ ಕುರಿತು 25 ಕೋಟಿ ಎಸ್‌ಎಂಎಸ್‌ ಸೇವೆ ಪಡೆಯಲು ಉತ್ತರ ಪ್ರದೇಶ ಮೂಲದ ಖಾಸಗಿ ಕಂಪನಿ ವಿ ಕನೆಕ್ಟ್‌ ಸಿಸ್ಟಂ ಸರ್ವಿಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 4 (ಜಿ) ವಿನಾಯಿತಿ ನೀಡಿರುವುದು ಇದೀಗ ಬಹಿರಂಗವಾಗಿದೆ.

ಒಂದು ಎಸ್‌ಎಂಎಸ್‌ಗೆ 10.57 ಪೈಸೆಯಂತೆ ಒಟ್ಟು 25 ಕೋಟಿ ಎಸ್‌ಎಂಎಸ್‌ಗೆಳಿಗೆ 2.4 ಕೋಟಿ ರು. ಈ ಕಂಪನಿಗೆ ಪಾವತಿಯಾಗಲಿದೆ. ಭಾರತ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಸಿ ಡಾಕ್‌ ಸಂಸ್ಥೆಯು ಇದೇ ದರದಲ್ಲಿಯೇ ಎಸ್‌ಎಂಎಸ್‌ ಸೇವೆ ನೀಡುತ್ತಿದ್ದರೂ ಅದನ್ನು ಬದಿಗಿರಿಸಿರುವ ರಾಜ್ಯ ಬಿಜೆಪಿ ಸರ್ಕಾರವು ವಿ ಕನೆಕ್ಟ್‌ ಸಿಸ್ಟಂ ಸರ್ವಿಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಮಣೆ ಹಾಕಿದೆ. ಈ ಸಂಬಂಧ ಸಮಗ್ರ ದಾಖಲೆಗಳನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

ಮೊಬೈಲ್‌ ಒನ್‌ ಮೊಬೈಲ್‌ ಸಾಫ್ಟ್‌ವೇರ್‌ ಡೆಲಿವರಿ ಗೇಟ್‌ವೇ ಸಿಸ್ಟಂಗೆ 2021ರ ಜನವರಿ 1ರಿಂದ ಮುಂದಿನ 2 ವರ್ಷಗಳ ಅವಧಿಗೆ ಭಾರತ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಸಿ ಡಾಕ್‌ ಸೇವೆಯನ್ನು 10.57 ಪೈಸೆ ದರದಲ್ಲಿ ಎಸ್‌ಎಂಎಸ್‌ ಸೇವೆ ಪಡೆಯಲು ಟ್ರಾಯ್‌ ದರದಲ್ಲಿ ನೇರವಾಗಿ ಪಡೆಯಲು ಕೆಟಿಪಿಪಿ ಕಾಯ್ದೆ ಅಡಿಯಲ್ಲಿ 4(ಜಿ) ವಿನಾಯಿತಿಯನ್ನು 2020ರ ನವೆಂಬರ್‌ 11ರಂದೇ ಅಧಿಸೂಚನೆ ಹೊರಡಿಸಿತ್ತು.

ಇದರ ಪ್ರಕಾರ ಸಿ ಡಾಕ್‌ ಸಂಸ್ಥೆಗೆ 2023ರ ಡಿಸೆಂಬರ್‌ 31ರವರೆಗೂ ಎಸ್‌ಎಂಎಸ್‌ ಸೇವೆ ಪಡೆಯಲು ಅವಕಾಶವಿದೆ. ಆದರೆ ಎರಡು ವರ್ಷ ಪೂರ್ಣಗೊಳ್ಳುವ ಮುನ್ನವೇ ಆರ್ಥಿಕ ಇಲಾಖೆಯು ಭಾರತ ಸರ್ಕಾರದ ಅಧೀನ ಸಂಸ್ಥೆಯನ್ನು ಬದಿಗಿರಿಸಿ ಉತ್ತರ ಪ್ರದೇಶ ಮೂಲದ ವಿ ಕನೆಕ್ಟ್‌ ಕಂಪನಿಗೆ ರತ್ನಗಂಬಳಿ ಹಾಸಿದೆ. ವಿ ಕನೆಕ್ಟ್‌ ಸಿಸ್ಟಂ ಸರ್ವಿಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 3 ತಿಂಗಳ ಅವಧಿಗೆ ನೀಡಿದ್ದ 4 (ಜಿ) ವಿನಾಯಿತಿಯಲ್ಲಿ ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿ ಮುಕ್ತಾಯಗೊಂಡಿತ್ತು. ಆದರೂ 2021ರ ಜುಲೈ 2ರಿಂದ ಮತ್ತೆ ಮೂರು ತಿಂಗಳ ಅವಧಿಗೆ 4 (ಜಿ) ವಿನಾಯಿತಿ ವಿಸ್ತರಿಸಲು 2021ರ ಆಗಸ್ಟ್‌ 26ರಂದು ಆರ್ಥಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.


ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಘಟನೋತ್ತರವಾಗಿ ವಿನಾಯಿತಿ ನೀಡಲು ಅವಕಾಶ ಇಲ್ಲದಿದ್ದರೂ ಆರ್ಥಿಕ ಇಲಾಖೆ ಹೊರಡಿಸಿದ್ದ ಈ ಅಧಿಸೂಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ವಿ ಕನೆಕ್ಟ್‌ ಸಿಸ್ಟಂ ಮತ್ತು ಸರ್ವಿಸ್‌ ಪ್ರೈವೈಟ್‌ ಲಿಮಿಟೆಡ್‌ನಿಂದ 2021ರ ಜುಲೈ 2ರಿಂದ 2021ರ ಅಕ್ಟೋಬರ್‌ 2ರವೆಗೆ ಒಟ್ಟು 25 ಕೋಟಿ ಎಸ್‌ಎಂಎಸ್‌ಗಳನ್ನು 10.57 ಪೈಸೆ (ತೆರಿಗೆ ಹೊರತುಪಡಿಸಿ) ಮತ್ತು ಪುನರ್‌ ಯತ್ನದ ಎಸ್‌ಎಂಎಸ್‌ಗಳಿಗೆ 0.05 ಪೈಸೆ ದರದಲ್ಲಿ ಸೇವೆಯನ್ನು ನೇರವಾಗಿ ಪಡೆಯಲು ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಸೆಕ್ಷನ್‌ 4 (ಜಿ) ಅಡಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಇ-ಆಡಳಿತ) ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ ಆಡಳಿತ ಇಲಾಖೆಯು ದಿನಾಂಕ 02-07.2021ರಿಂದ ಮೂರು ತಿಂಗಳ ಅವಧಿಗೆ ಪ್ರಸ್ತಾಪಿತ ಸೇವೆಯನ್ನು ಪಡೆಯಲು ಕೆಟಿಪಿಪಿ ಕಾಯ್ದೆ ಸೆಕ್ಷನ್‌ 4 (ಜಿ) ಅಡಿ ವಿನಾಯಿತಿ ಕೋರಿದೆ. ಆದರೆ ಮೂರು ತಿಂಗಳ ಅವಧಿಯಲ್ಲಿ ಈಗಾಗಲೇ ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಯು ಮುಕ್ತಾಯಗೊಂಡಿರುವುದರಿಂದ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಘಟನೋತ್ತರವಾಗಿ ವಿನಾಯಿತಿ ನೀಡಲು ಅವಕಾಶವಾಗುವುದಿಲ್ಲ,’ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ಲಿಖಿತವಾಗಿ ನೀಡಿತ್ತು.

ಸಿ ಡಾಕ್‌ ಸಂಸ್ಥೆಯು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳ ಯೋಜನೆ, ನೀತಿ ಸೇರಿದಂತೆ ಇನ್ನಿತರೆ ಜಾಗೃತಿ ಕುರಿತಂತೆ ಫಲಾನುಭವಿಗಳಿಗೆ ಎಸ್‌ಎಂಎಸ್‌ ಸೇವೆ ಒದಗಿಸುತ್ತಿತ್ತು. ಇದರಲ್ಲಿ ನೋಂದಣಿ ಮುದ್ರಾಂಕ ಇಲಾಖೆ, ಕಾವೇರಿ ಆನ್‌ಲೈನ್‌, ವಿದ್ಯಾರ್ಥಿ ವೇತನದ ಪೋರ್ಟಲ್‌ ಸೇವೆಯೂ ಒಂದಾಗಿತ್ತು. ಆದರೆ ಇದರಲ್ಲಿ ಕೆಲವು ನ್ಯೂನತೆಗಳು ಕಂಡು ಬಂದಿವೆ ಎಂಬುದನ್ನು ಮುಂದಿರಿಸಿಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರವು ಕೋವಿಡ್‌ ಕುರಿತಾದ ಜಾಗೃತಿ ಮತ್ತು ಪರೀಕ್ಷೆಯ ಫಲಿತಾಂಶದ ಎಸ್‌ಎಂಎಸ್‌ ಸೇವೆ ಒದಗಿಸಲು ವಿ ಕನೆಕ್ಟ್‌ ಕಂಪನಿಗೆ 4(ಜಿ) ವಿನಾಯಿತಿ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಈ ಕಂಪನಿಯು 2021ರ ಏಪ್ರಿಲ್‌ 28ರಿಂದ ಮೇ 28ರವರೆಗೆ ಒಟ್ಟು 4.25 ಕೋಟಿ ಎಸ್‌ಎಂಎಸ್‌ಗಳನ್ನು ಜಿಒಕೆಒಟಿಪಿ ಸೇರಿದಂತೆ ಒಟ್ಟು 10 ಐಡಿಗಳಡಿಯಲ್ಲಿ ಒದಗಿಸಿತ್ತು. ಇದಕ್ಕೆ ಒಟ್ಟಾರೆ 48, 99, 812 ರು.ಗಳು ವೆಚ್ಚವಾಗಿತ್ತು . ಅದೇ ರೀತಿ ಇದೇ ಕಂಪನಿಯು 2021ರ ಜೂನ್‌ 20ರಿಂದ 2021ರ ಜುಲೈ 1ರವರೆಗೆ ಒದಗಿಸಿದ್ದ ಎಸ್‌ಎಂಎಸ್‌ ಸೇವೆಗೆ ಒಟ್ಟು 63.00 ಲಕ್ಷ ರು. ವೆಚ್ಚವಾಗಿತ್ತು. ಇದೀಗ ಈ ಸೇವೆಯನ್ನು 2021ರ ಜುಲೈ 2ರಿಂದ 2021ರ ಅಕ್ಟೋಬರ್‌ 2ರವರೆಗೆ ಮುಂದುವರೆಸಿರುವುದರಿಂದ ಒಟ್ಟು 63 ಲಕ್ಷ ರು. ವೆಚ್ಚವಾಗಿದೆ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

‘ಅತ್ಮೀಯ…ನಿಮ್ಮಕೋವಿಡ್‌ 19 ಸ್ವಾಬ್‌ ಪರೀಕ್ಷೆ ಎಸ್‌ಆರ್‌ಎಫ್‌ ಸಂಖ್ಯೆ ಫಲಿತಾಂಶವು ನೆಗೆಟಿವ್‌ ಆಗಿರುತ್ತದೆ. ಸುರಕ್ಷಿತವಾಗಿರಿ. ಯಾವುದೇ ಲಕ್ಷಣಗಳು ಕಂಡು ಬಂದರೆ 14410ಗೆ ಕರೆ ಮಾಡಿ. ನಿಮ್ಮ ಪರೀಕ್ಷೆ ಫಲಿತಾಂಶವನ್ನು ಇಲ್ಲಿ ನೋಡಬಹುದು,’ ಎಂಬ ಸಂದೇಶ ಮತ್ತು ‘ನಿಮ್ಮ ಕೋವಿಡ್‌ 19 ಪರೀಕ್ಷೆ ವರದಿಯು ಎಸ್‌ಎಆರ್‌ಎಫ್‌ ಐಡಿ ಪಾಸಿಟಿವ್‌ ಇದ್ದು ನಿಮ್ಮ ಜಿಲ್ಲಾ ರೋಗಿ ಕೋಡ್‌ ಡಿಕೆ-103216 ಆಗಿದೆ.ಕರ್ನಾಟಕ ಸರ್ಕಾರ, ತಮಗೆ ಸೂಕ್ತ ಆರೋಗ್ಯ ಸೇವೆ ಯೋಜಿಸಲು ಆಪ್ತಮಿತ್ರ ಸಂಖ್ಯೆ ಕರೆ ಬರುತ್ತದೆ.ಉಸಿರಾಟದ ತೊಂದರೆಯಾದಲ್ಲಿ 108 ಗೆ ಕರೆ ಮಾಡಿ ಕರ್ನಾಟಕ ಸರ್ಕಾರ,’ ಎಂಬ ಸಂದೇಶ ಬಂದಿರುವುದನ್ನು ಸ್ಮರಿಸಬಹುದು.

ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿಯೂ ಸಾಕಷ್ಟು ಅಕ್ರಮಗಳನ್ನು ನಡೆಸಿತ್ತು. ಈ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ದಾಖಲೆ ಸಮೇತ ಪ್ರಕಟಿಸಿತ್ತು. 2021ರ ಸೆಪ್ಟಂಬರ್‌ನಲ್ಲಿ ನಡೆದಿದ್ದ ವಿಧಾನಸಭೆ ಅಧಿವೇಶನದಲ್ಲಿಯೂ ‘ದಿ ಫೈಲ್‌’ ವರದಿ ಅಧರಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts