ಬೆಂಗಳೂರು; ಬಿಟ್ ಕಾಯಿನ್ ಹ್ಯಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ಬರೆದಿದ್ದಾರೆ ಎನ್ನಲಾಗಿದ್ದ ಸಚಿನ್ ಮಾಮನಿ ಎಂಬುವರ ಪತ್ರದ ಇರುವಿಕೆ ಬಗ್ಗೆಯೇ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದರ ಬೆನ್ನಲ್ಲೇ ಈ ಪತ್ರವನ್ನಾಧರಿಸಿ ಪ್ರಧಾನಮಂತ್ರಿ ಕಾರ್ಯಾಲಯದಿಂದ ಯಾವುದೇ ಪತ್ರ ತಲುಪಿಲ್ಲ ಎಂದು ಒಳಾಡಳಿತ ಇಲಾಖೆಯು ಆರ್‌ಟಿಐಗೆ ಉತ್ತರಿಸಿದೆ.
ಈ ಪತ್ರ ಆಧರಿಸಿ ಬಿಟ್ ಕಾಯಿನ್ ಹ್ಯಾಕಿಂಗ್ ಹಗರಣವನ್ನು ಬೇಧಿಸಲು ಪ್ರಧಾನಿ ಕಚೇರಿ ಸೂಚಿಸಿದೆ ಎಂದೆಲ್ಲಾ ಸದ್ದು ಮಾಡಿತ್ತು. ಆದರೀಗ ಈ ಪತ್ರವನ್ನಾಧರಿಸಿ ಪ್ರಧಾನಿ ಕಚೇರಿಯಿಂದ ಯಾವುದೇ ಪತ್ರವು ಸ್ವೀಕೃತವಾಗಿಲ್ಲ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಮಾಮನಿ ಎಂಬುವರು ಸಲ್ಲಿಸಿದ್ದ ದೂರಿನ ಮೇರೆಗೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಗೆ ಬಂದಿರುವ ಪತ್ರದ ಪ್ರತಿ ಒದಗಿಸಬೇಕು ಎಂದು ‘ದಿ ಫೈಲ್’ 2021ರ ನವೆಂಬರ್ 16ರಂದು ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಗೆ 2021ರ ಡಿಸೆಂಬರ್ 3ರಂದು ಉತ್ತರಿಸಿರುವ ಒಳಾಡಳಿತ ಇಲಾಖೆಯು ‘ಬಿಟ್‌ಕಾಯಿನ್ ಪ್ರಕರಣ ಸಂಬಂಧ ಸಚಿನ್ ಮಾಮನಿ ಎಂಬುವರು ಸಲ್ಲಿಸಿದ್ದ ದೂರಿನ ಮೇರೆಗೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಒಳಾಡಳಿತ ಇಲಾಖೆಗೆ ಯಾವುದೇ ಪತ್ರ ಸ್ವೀಕೃತವಾಗಿಲ್ಲ,’ ಎಂದು ಉತ್ತರಿಸಿದೆ.
ಬಿಟ್ ಕಾಯಿನ್ ಹ್ಯಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಸಚಿನ್ ಮಾಮನಿ ಎಂಬುವವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ ಎನ್ನಲಾದ ದೂರಿನ ಪ್ರತಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಪತ್ರದಲ್ಲಿ ಹಾಲಿ ಸಚಿವರು ಮತ್ತು ಪಕ್ಷವೊಂದರ ರಾಜ್ಯಾಧ್ಯಕ್ಷ, ಕಾಂಗ್ರೆಸ್ ಶಾಸಕರೊಬ್ಬರ ಪುತ್ರ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳ ಹೆಸರು ಈ ಪತ್ರದಲ್ಲಿ ಪ್ರಸ್ತಾಪವಾಗಿತ್ತು.
ಸಚಿನ್ ಮಾಮನಿ ನೀಡಿದ್ದ ದೂರಿನ ಮೇಲೆ ಕಚೇರಿ ಟಿಪ್ಪಣಿಯಂತಿರುವ ಕೆಲವು ಸಾಲುಗಳಿವೆ. ಅದರಲ್ಲಿ ವರದಿಯನ್ನು 4 ವಾರದೊಳಗೆ ನೀಡಬೇಕು ಎಂಬ ಸಹಿ ಇದೆ. ಇದನ್ನು ಪ್ರಧಾನಿ ಮಂತ್ರಿಗಳ ಕಾರ್ಯಾಲಯದಿಂದ ಬಂದಿದೆ ಎಂದು ಹೇಳಲಾಗಿತ್ತು. ಆದರೆ ಈ ಪತ್ರದ ಮೊದಲ ಪುಟದಲ್ಲಿ 18-09-2021 ಎಂಬ ದಿನಾಂಕವನ್ನು ಟಿಪ್ಪಣಿ ರೂಪದಲ್ಲಿ ಬರೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬೋಧಿಸಲಾಗಿರುವ ಈ ಪತ್ರವು ಮೋದಿ ಅವರು ಅಮೇರಿಕ ಪ್ರವಾಸ ಕೈಗೊಂಡಿದ್ದಾಗ ಅಮೇರಿಕ ಸರ್ಕಾರದ ಅಧಿಕಾರಿಗಳು ಅವರ ಗಮನಕ್ಕೆ ಬಿಟ್ ಕಾಯಿನ್ ಹಗರಣದ ಕುರಿತು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಮೋದಿ ಅವರು ಅಮೇರಿಕ ಪ್ರವಾಸ ಕೈಗೊಂಡಿದ್ದು ಸೆ.23ರಿಂದ 26ರವರೆಗೆ. ಹಾಗಾದರೆ 23ರಿಂದ 26ರವರೆಗಿನ ಪ್ರವಾಸದಲ್ಲಿ ನಡೆದಿರಬಹುದಾದ ವಿಷಯದ ಪ್ರಸ್ತಾಪ ಇರುವ ಪತ್ರಕ್ಕೆ ಪ್ರಧಾನಿ ಕಚೇರಿಯಲ್ಲಿ ಪ್ರವಾಸಕ್ಕೂ ಮುಂಚಿನ ಟಿಪ್ಪಣಿ ಹೇಗಿರಲು ಸಾಧ್ಯ ಎಂಬ ಪ್ರಶ್ನೆಗಳೂ ಇವೆ.
‘ಸಚಿನ್ ಮಾಮನಿ ಎಂಬುವರು ಪ್ರಧಾನಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಸಾಕಷ್ಟು ಗಂಭೀರ ವಿಚಾರಗಳಿದ್ದವು ಮತ್ತು ರಾಜ್ಯದ ಪ್ರಮುಖ ರಾಜಕಾರಣಿಗಳ, ಮಂತ್ರಿಗಳ, ಕುಟುಂಬಸ್ಥರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಗುರುತರ ಆರೋಪಗಳಿವೆ. ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಂಚಿಕೆಯಾಗಿತ್ತು ಮತ್ತು ರಾಜ್ಯದ ಲಕ್ಷಾಂತರ ಜನ ಅದನ್ನು ಓದಿರುವ ಸಾಧ್ಯತೆ ಇದೆ. ಇದೇ ಪತ್ರದ ಆಧಾರದ ಮೇಲೆಯೇ ವಿರೋಧ ಪಕ್ಷಗಳ ನಾಯಕರು ಸರ್ಕಾರದ ಮೇಲೆ ಮತ್ತು ಬಿಜೆಪಿ ಪ್ರಮುಖರ ಮೇಲೆ ದಾಳಿ ಮಾಡಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೆ ಈ ಪತ್ರದ ಅಸ್ತಿತ್ವದ ಕುರಿತು ಸರ್ಕಾರ ಏನೂ ಹೇಳುತ್ತಿಲ್ಲ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.
ಪ್ರಧಾನಿ ಕಚೇರಿಯಿಂದ ಈ ಪತ್ರ ಬರಲಿ ಬಿಡಲಿ, ರಾಜ್ಯ ಸರ್ಕಾರವೇ ಮುಂದಾಗಿ ಸಾರ್ವಜನಿಕವಾಗಿ ಈ ವಿಚಾರದ ಕುರಿತು ಸ್ಪಷ್ಟನೆ ನೀಡಬೇಕಿತ್ತು. ಮತ್ತು ಅದರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಕುರಿತು ಸ್ಪಷ್ಟೀಕರಣ ಅಥವಾ ಹೇಳಿಕೆ ನೀಡಬೇಕಿತ್ತು. ಪ್ರಧಾನಿ ಕಚೇರಿಯಿಂದ ಇವರಿಗೆ ಪತ್ರ ಬಂದಿದೆಯೋ ಇಲ್ಲವೋ ಎನ್ನುವುದು ಇಡೀ ಹಗರಣದ ಅಗಾಧತೆಯ ಹಿನ್ನೆಲೆಯಲ್ಲಿ ನಗಣ್ಯ,’ ಎಂದೂ ಅಭಿಪ್ರಾಯಿಸಿದ್ದಾರೆ ರವಿಕೃಷ್ಣಾರೆಡ್ಡಿ.
ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ ಎಂಬ ಕುರಿತಾಗಿ ಸಾಕ್ಷಿಯನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಒತ್ತಾಯಿಸಿದ್ದರು.ರಾಜ್ಯದ ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ನಡೆಸಿದ್ದು ಸರ್ಕಾರವೇ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ವಹಿಸಿದೆ ಎಂದು ಹೇಳಿದ್ದಾರೆ. ಸಮಗ್ರ ತನಿಖೆ ನಡೆಸಿದ್ದರೆ ಹೆಚ್ಚಿನ ತನಿಖೆಗೆ ಇಡಿ ಮತ್ತು ಸಿಬಿಐಗೆ ಒಪ್ಪಿಸುವ ಅನಿವಾರ್ಯತೆ ಯಾಕೆ ಬಂತು? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.
ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಇಬ್ಬರು ಪ್ರಭಾವಿಗಳು ಇದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಆದರೆ ಅವರ ಹೆಸರುಗಳನ್ನು ಪ್ರತಿಪಕ್ಷಗಳ ನಾಯಕರು ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಆ ಹೆಸರುಗಳು ನಿಗೂಢವಾಗಿದೆ. ಈಗಾಗಲೇ ಪ್ರಕರಣದ ತನಿಖೆ ನಡೆಸುವ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ರಾಜ್ಯ ಸರ್ಕಾರವು ಪತ್ರ ಬರೆದಿರುವುದನ್ನು ಸ್ಮರಿಸಬಹುದು.