ಲಂಚ ಪ್ರಕರಣಕ್ಕೆ ನೈತಿಕ ಅಧಃಪತನದ ಮುಖವಾಡ; ಕಡ್ಡಾಯ ನಿವೃತ್ತಿಯ ಶಿಫಾರಸ್ಸು ತಿರಸ್ಕರಿಸಿದ ಸರ್ಕಾರ

ಬೆಂಗಳೂರು; ಪರವಾನಗಿ ನವೀಕರಿಸದ ಟಿಂಬರ್‌ ಉದ್ಯಮಿಯೊಬ್ಬರಿಂದ ಲಂಚ ಪಡೆದ ಪ್ರಕರಣವನ್ನು ಕಳೆದ 10 ವರ್ಷಗಳಿಂದ ಸುದೀರ್ಘವಾಗಿ ತನಿಖೆ ನಡೆಸಿ ಆರೋಪಿತ ಸರ್ಕಾರಿ ನೌಕರರನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಬೇಕು ಎಂಬ ಲೋಕಾಯುಕ್ತರ ಶಿಫಾರಸ್ಸನ್ನು ತಿರಸ್ಕರಿಸಿರುವ ಅರಣ್ಯ ಇಲಾಖೆಯು ಇದನ್ನು ‘ನೈತಿಕ ಅಧಃಪತನ’ದ ಮುಖವಾಡ ತೊಡಿಸಿದೆ.

ಸೇವೆಯಿಂದ ಕಡ್ಡಾಯ ನಿವೃತ್ತಿ ಮತ್ತು ನಿವೃತ್ತಿ ವೇತನದಲ್ಲಿ ಶೇ.40ರಷ್ಟನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆ ವಿಧಿಸಬೇಕು ಎಂಬ ಉಪಲೋಕಾಯುಕ್ತರ ಪ್ರಸ್ತಾವನೆಯನ್ನು ಅರಣ್ಯ ಇಲಾಖೆಯು ಒಪ್ಪಿಕೊಂಡಿಲ್ಲ. ಉಪ ಲೋಕಾಯುಕ್ತರ ಶಿಫಾರಸ್ಸನ್ನು ಒಪ್ಪಿಕೊಳ್ಳದ ಅರಣ್ಯ ಇಲಾಖೆಯು ಆರೋಪಿತ ಸರ್ಕಾರಿ ನೌಕರನನ್ನು ನೈತಿಕ ಅಧಃಪತನದ ಅಡಿಯಲ್ಲಿ ವೇತನ ಬಡ್ತಿ ತಡೆಹಿಡಿಯುವ ದಂಡನೆ ವಿಧಿಸಿದೆ. ಈ ಸಂಬಂಧ ಇಲಾಖೆಯು ಹೊರಡಿಸಿರುವ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪ್ರಕರಣದ ವಿವರ

ಬೆಂಗಳೂರು ಜಿಲ್ಲೆಯ ದಾಸನಪುರ ಹೋಬಳಿಯ ಲಕ್ಷ್ಮಿವೆಂಕಟೇಶ್ವರ ಟಿಂಬರ್ಸ್‌ನ್ನು 2008ರಲ್ಲಿ ಖರೀದಿಸಿದ್ದ ಎಲ್‌ ವೆಂಕಟೇಶ್‌ ಅವರು ಪರವಾನಗಿಯನ್ನು ತಮ್ಮ ಹೆಸರಿಗೆ ನವೀಕರಣ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಎಂ ಎನ್‌ ನರಸಿಂಹಮೂರ್ತಿ ಅವರು 17,000 ರು.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ 2011ರಲ್ಲಿ ತನಿಖೆ ಕೈಗೊಂಡಿದ್ದ ಉಪ ಲೋಕಾಯುಕ್ತರು 10 ವರ್ಷಗಳ ನಂತರ ಅಂದರೆ 2020ರಲ್ಲಿ ವಿಚಾಣೆ ವರದಿಯನ್ನು (ಲೋಕ್‌/ಐಎನ್‌ಕ್ಯೂ/14-ಎ/442/2011/ಎಆರ್‌ಇ-4 ದಿನಾಂಕ 25-08-2020) ಸರ್ಕಾರಕ್ಕೆ ಸಲ್ಲಿಸಿದ್ದರು.

ಪ್ರಕರಣ ಕುರಿತು ತನಿಖೆ ನಡೆಸಿದ್ದ ಉಪ ಲೋಕಾಯುಕ್ತರು ‘ ವಿಚಾರಣೆ ವರದಿಯಲ್ಲಿ ಆರೋಪವು ಸಾಬೀತಾಗಿರುವುದಾಗಿ ಅಭಿಪ್ರಾಯಿಸಿದ್ದು, ನಿವೃತ್ತಿ ವೇತನದಿಂದ ಶೇ.40ರಷ್ಟನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆ ಮತ್ತು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆ ವಿಧಿಸಬೇಕು,’ ಎಂದು ಶಿಫಾರಸ್ಸು ಮಾಡಿದ್ದರು.

ಈ ವರದಿಯನ್ನಾಧರಿಸಿ ಆರೋಪಿತ ನೌಕರನಿಂದ ಲಿಖಿತ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಅರಣ್ಯ ಇಲಾಖೆಯು ಜಿ ಎಂ ಟ್ಯಾಂಕ್‌ ವಿರುದ್ಧ ಗುಜರಾತ್‌ ಸರ್ಕಾರ 2006(5) ಎಸ್‌ಸಿಸಿ 466 ಮತ್ತು ಮಧ್ವರಾಜ್‌ ರಾವ್‌ ವಿರುದ್ಧ ಮುಖ್ಯ ಪ್ರಬಂಧಕರು, ಕೆನರಾ ಬ್ಯಾಂಕ್‌ ಬೆಂಗಳೂರು 1995(5) ಕೆಎಸ್‌ಎಲ್‌ಜೆ 428, ಅದೇ ರೀತಿ ಪಂಜಾಬ್‌ ವಿರುದ್ಧ ರಾಮಕೃಷ್ಣನ್‌ ಚೋಪ್ರಾ 1977 (2) ಎಸ್‌ಎಲ್‌ಆರ್‌ 809 (ಪಿಅಂಡ್‌ ಎಚ್‌-ಎಚ್‌ಸಿ) ಪ್ರಕರಣಗಳಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಮಾದರಿಯನ್ನಾಗಿಸಿದೆ.

ಅದರಂತೆ ‘ಉಪ ಲೋಕಾಯುಕ್ತರ ಶಿಫಾರಸ್ಸನ್ನು ಅವಲೋಕಿಸಿದಾಗ ದೂರುದಾರರು ಆರೋಪಿಸಿರುವಂತೆ ಲೈಸೆನ್ಸ್‌ ನವೀಕರಿಸಲು ಆರೋಪಿತ ಸರ್ಕಾರಿ ನೌಕರರು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ಸಾಕಷ್ಟು ಸಾಕ್ಷಿ ಮತ್ತು ಪುರಾವೆಗಳ ಕೊರತೆ ಎದ್ದು ಕಾಣುತ್ತದೆ. ನ್ಯಾಯಿಕ ಮತ್ತು ಅರೆ ನ್ಯಾಯಿಕ ಪ್ರಕರಣಗಳೆರಡಲ್ಲೂ ದೋಷಾರೋಪಣೆ/ಸಾಕ್ಷಿ/ಸಾಕ್ಷಿದಾರರು/ಸಂದರ್ಭಗಳು ಸಮಾನವಾಗಿರುತ್ತವೆ,’ ಎಂಬ ತೀರ್ಮಾನಕ್ಕೆ ಅರಣ್ಯ ಇಲಾಖೆಯು ಬಂದಿರುವುದು ನಡವಳಿಯಿಂದ ತಿಳಿದು ಬಂದಿದೆ.

ಅಲ್ಲದೆ ‘ಇಲಾಖೆ ಶಿಸ್ತು ನಡವಳಿ ಹಾಗೂ ಕ್ರಿಮಿನಲ್‌ ಪ್ರಕರಣವನ್ನು ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಸಮಗ್ರವಾಗಿ ಪರಿಶೀಲಿಸಲಾಗಿದೆ. ವಾಸ್ತವಿಕವಾಗಿ ಇಲಾಖೆ ವಿಚಾರಣೆಗಳಲ್ಲಿ ಕಟ್ಟುನಿಟ್ಟಿನ ಸಾಕ್ಷಿ ಹಾಗೂ ನಡವಳಿಗಳನ್ನು ಪಾಲಿಸಲಾಗುವುದಿಲ್ಲ. ಇಲಾಖೆ ವಿಚಾರಣೆಗಳಲ್ಲಿ ಸಂಭವನೀಯತೆಯ ಗುರುತ್ವದ ಆಧಾರದಲ್ಲಿ ದಾಖಲಿತವಾಗುವ ವಿಚಾರಣೆ ಅಭಿಪ್ರಾಯದ ಅಧಾರದಲ್ಲಿ ಆರೋಪಿತರ ಮೇಲೆ ದಂಡನೆ ವಿಧಿಸಲಾಗುವುದು. ಈ ಪ್ರಕರಣದಲ್ಲಿ ಆರೋಪಿತರ ಮೇಲಿನ ಆರೋಪವನ್ನು ದೃಢೀಕರಿಸಲು ಸಾಕಷ್ಟು ಸಾಕ್ಷಿ/ಪುರಾವೆಗಳ ಕೊರತೆ ಇದ್ದಾಗಿಯೂ ಅವರಮೇಲೆ ಲಂಚದ ಆರೋಪ ಇರುವುದನ್ನು ಪರಿಗಣಿಸಿ ಇದನ್ನು ಆರೋಪಿತರ ‘ನೈತಿಕ ಅಧಃಪತನ,’ ಎಂದು ಪರಿಗಣಿಸಬಹುದು ಎಂದು ಅರಣ್ಯ ಇಲಾಖೆಯು ನಿಲುವು ತಾಳಿರುವುದು ನಡವಳಿಯಿಂದ ಗೊತ್ತಾಗಿದೆ. ಇಲಾಖೆ ಅಧಿಕಾರಿಗಳು ತಳೆದಿರುವ ನಿಲುವನ್ನು ಸಚಿವ ಉಮೇಶ್‌ ಕತ್ತಿ ಅವರು ಅನುಮೋದಿಸಿರುವುದು ಗೊತ್ತಾಗಿದೆ.

ಅಲ್ಲದೆ ಉಪ ಲೋಕಾಯುಕ್ತರು ಆರೋಪಿತರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ಹಾಗೂ ಇವರಿಗೆ ಪಾವತಿಸಲಾಗುವ ನಿವೃತ್ತಿ ವೇತನದಲ್ಲಿ ಶೇ.40ರಷ್ಟನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆ ವಿಧಿಸಲು ಮಾಡಿರುವ ಶಿಫಾರಸ್ಸು, ಆರೋಪಿತರು ಎಸಗಿದ್ದಾರೆಂದು ಹೇಳಲಾಗಿರುವ ದುರ್ನಡತೆಯ ತೀವ್ರತೆಗೆ ಅಸಮ ಪ್ರಮಾಣದ್ದು ಎಂದು ಇಲಾಖೆಯು ಅಭಿಪ್ರಾಯಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯ ವಿಚಾರಣೆ ವರದಿ, ಕಾನೂನಾತ್ಮಕ, ನಿಯಮಬದ್ಧ ಹಾಗೂ ವಿಚಾರಣೆ ನಡವಳಿಯಲ್ಲಿ ದಾಖಲಾಗಿರುವ ಅಂಶಗಳ ಆಧಾರದ ಮೇಲೆ ಆರೋಪಿತ ಪ್ರಥಮ ದರ್ಜೆ ಸಹಾಯಕ ಎಂ ಎನ್‌ ನರಸಿಂಹಮೂರ್ತಿ ವಿರುದ್ಧದ ಆರೋಪಗಳನ್ನು ನೈತಿಕ ಅಧಃಪತನ ಅಡಿಯಲ್ಲಿ 1957ರ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳ ಅನ್ವಯ 02 ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವ ದಂಡನೆ ವಿಧಿಸಿ ಆದೇಶಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts