56 ಲಕ್ಷ ಮಕ್ಕಳಿಗೆ ಮೊಟ್ಟೆ; 665 ಕೋಟಿ ಹೊರೆಯೆಂದು ಹಿಂದೆ ಸರಿದ ಸರ್ಕಾರ

ಬೆಂಗಳೂರು; ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿನ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುತ್ತಿರುವ ಶಿಕ್ಷಣ ಇಲಾಖೆಯು ಇಡೀ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಅನುದಾನದ ಕೊರತೆಯ ನೆಪವನ್ನು ಮುಂದಿರಿಸಿದೆ. ರಾಜ್ಯದಾದ್ಯಂತ ಇರುವ 56 ಲಕ್ಷ ಶಾಲಾ ಮಕ್ಕಳಿಗೂ ಮೊಟ್ಟೆ ವಿತರಿಸಬೇಕೆಂದರೆ ಪ್ರತಿ ವರ್ಷ ಬೊಕ್ಕಸಕ್ಕೆ 665 ಕೋಟಿ ರು. ಹೊರೆಯಾಗಲಿದೆ ಎಂಬ ಲೆಕ್ಕಾಚಾರ ಮಾಡಿರುವ ಇಲಾಖೆಯು ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ಹಿಂದೆ ಸರಿದಿದೆ.

ಆಯವ್ಯಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ನೀಡುತ್ತಿರುವ 25,000 ಕೋಟಿ ಅನುದಾನದ ಪೈಕಿ ಶೇ. 99ರಷ್ಟು ಅನುದಾನ ಶಿಕ್ಷಕರ ವೇತನಕ್ಕೆ ವೆಚ್ಚವಾಗಲಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಅನುದಾನ ಸಾಲದು ಎಂದು ಶಿಕ್ಷಣ ಇಲಾಖೆ ವ್ಯಕ್ತಪಡಿಸಿರುವ ಅಸಹಾಯಕತೆಯ ಹಿಂದೆ ಮೊಟ್ಟೆ ವಿತರಣೆಗೆ ಸರ್ಕಾರ ಇಚ್ಛಾಶಕ್ತಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆಗೆ ಪರ ಮತ್ತು ವಿರೋಧ ಮಾತುಗಳು ಕೇಳಿ ಬರುತ್ತಿದೆ. ಈ ಮಧ್ಯೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಿದರೆ ಬೊಕ್ಕಸಕ್ಕೆ ಹೊರೆಯುಂಟಾಗಲಿದೆ ಎಂದು ಶಿಕ್ಷಣ ಇಲಾಖೆಯು ಮುಂದಿರಿಸಿರುವ ಲೆಕ್ಕಾಚಾರವು ಚರ್ಚೆಗೆ ಗ್ರಾಸವಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮೊತ್ತವನ್ನು ಹೆಚ್ಚಳ ಮಾಡಿದರೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಬಹುದು. ಆಯವ್ಯಯದಲ್ಲಿ ಅನುದಾನ ಹೆಚ್ಚಳ ಮಾಡದ ಹೊರತು ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಮೊಟ್ಟೆ ವಿತರಣೆ ಮಾಡುವುದು ಅಸಾಧ್ಯದ ಮಾತು ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಸರ್ಕಾರವು ಮಧ್ಯಾಹ್ನದ ಬಿಸಿಯೂಟಕ್ಕೆ ವಾರ್ಷಿಕ 560 ಕೋಟಿ ರು. ಅನುದಾನ ನೀಡುತ್ತಿದೆ. ಇದರಲ್ಲಿ ರಾಜ್ಯದ ಪಾಲು ಶೇ.40ರಷ್ಟಿದೆ. ಇದು 1ರಿಂದ 8ನೇ ತರಗತಿಗೆ ನೀಡುವ ಅನುದಾನದ ಮೊತ್ತವಾಗಿದೆ. ರಾಜ್ಯ ಸರ್ಕಾರವು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಮತ್ತು 1ರಿಂದ 10ವರೆಗಿನ ಮಕ್ಕಳಿಗೆ ಹಾಲನ್ನು ನೀಡುತ್ತಿದೆ. ಅಲ್ಲದೆ ಅಡುಗೆ ಸಹಾಯಕರಿಗೆ ಭತ್ಯೆ ನೀಡಿದರೆ ಮೊಟ್ಟೆ ವಿತರಣೆಗೆ ಹಣ ಎಲ್ಲಿಂದ ತರುವುದು ಎಂದು ಪ್ರಶ್ನಿಸುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.

ಆಯವ್ಯಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಒಟ್ಟು 25,000 ಕೋಟಿ ರು. ನಿಗದಿಪಡಿಸಲಾಗಿದೆ. ಈ ಪೈಕಿ 22,000 ಕೋಟಿ ರುಪಾಯಿ ನೌಕರರ ವೇತನಕ್ಕೆ ವೆಚ್ಚವಾಗಲಿದೆ. ಉಳಿದ 3,000 ಕೋಟಿ ರು. ನಲ್ಲಿ ವಿದ್ಯಾರ್ಥಿಗಳ ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಇನ್ನಿತರೆ ವೆಚ್ಚಗಳಿಗೆ ಹೊಂದಾಣಿಕೆಯಾಗಲಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಬೈಸಿಕಲ್‌ ನೀಡುವ ಯೋಜನೆಯನ್ನೂ ಕೈಬಿಡಲಾಗಿದೆ. ಹೀಗಾಗಿ 300 ಕೋಟಿ ರು. ಉಳಿತಾಯವಾಗುತ್ತಿದೆ ಎಂದು ಕಂಡು ಬಂದರೂ ಬಿಸಿಯೂಟ ಯೋಜನೆಗೆ ರಾಜ್ಯದ ಪಾಲನ್ನೂ ಭರಿಸಲು ಏದುಸಿರು ಬಿಡಬೇಕಾಗುತ್ತದೆ ಎನ್ನುತ್ತಾರೆ ಮತ್ತೊಬ್ಬ ಅಧಿಕಾರಿ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(NFHS)ಯ 5ನೇ ಸುತ್ತಿನ ಪ್ರಕಾರ, ಬಹುತೇಕ ಮಕ್ಕಳು ಆಯಾ ಪ್ರಾಯಕ್ಕೆ ಸರಿಯಾದ ಉದ್ದ ಮತ್ತು ತೂಕ ಹೊಂದಿರುವುದಿಲ್ಲ. ಮಕ್ಕಳ ವಯಸ್ಸಿಗಿಂತ ಶೇಕಡಾ 35.4ರಷ್ಟು ಮಕ್ಕಳು ಕಡಿಮೆ ಎತ್ತರ ಮತ್ತು ಶೇಕಡಾ 32.9ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿರುತ್ತಾರೆ. ಬಡವರು, ದುರ್ಬಲ ವರ್ಗದ ಸಮುದಾಯದ ಪೋಷಕರ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪೋಷಕರ ಆರ್ಥಿಕ ಸಮಸ್ಯೆಯಿಂದ ಮಕ್ಕಳ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಉಂಟುಮಾಡಿರಬಹುದು, ಹೀಗಾಗಿ ಮಕ್ಕಳ ದೇಹಕ್ಕೆ ಉತ್ತಮ ಪೋಷಕಾಂಶ ಸಿಗಲು ಮೊಟ್ಟೆ ನೀಡಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.

ಕಲ್ಯಾಣ ಕರ್ನಾಟಕದ ನಾಲ್ಕು ತಾಲೂಕಿನಲ್ಲಿರುವ 2000ಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳ ಅನಾರೋಗ್ಯ ಪರಿಸ್ಥಿತಿಯನ್ನು ಎನ್.ಕೆ.ಪಾಟೀಲ್ ಸಮಿತಿ ಗಂಭೀರವಾಗಿ ಪರಿಗಣಿಸಿತ್ತು. ಅಪೌಷ್ಟಿಕ ಮಕ್ಕಳಿಗೆ ಅಡೆತಡೆ ಇಲ್ಲದಂತೆ ಗುಣಮಟ್ಟದ ಕೋಳಿ ಮೊಟ್ಟೆಯನ್ನು ವಿತರಿಸಲು ಹಾಗೂ ಏಕರೂಪತೆ ಕಾಯ್ದುಕೊಳ್ಳುವಂತೆ ಆಹಾರ ಉತ್ಪಾದನೆ ಕೇಂದ್ರಗಳಿಗೆ ಶಿಫಾರಸು ಮಾಡಿತ್ತು.

ಆದರೆ. ಮೊಟ್ಟೆ ವಿತರಣೆ ಮಾಡಲು ಟೆಂಡರ್ ಪಡೆದ ಪೌಲ್ಟ್ರಿ ಫಾರ್ಮ್ ಮಾಲೀಕರು, ಗುಣಮಟ್ಟದ ಮೊಟ್ಟೆಗಳನ್ನು ವಿತರಿಸಿರಲಿಲ್ಲ. ಮೊಟ್ಟೆ ಕಳಪೆ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಮೊಟ್ಟೆ ಕೊಡುವುದನ್ನು ಜಿಲ್ಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದರ ಬದಲಾಗಿ ವಾರದಲ್ಲಿ 6 ದಿನ ಹಾಲು ವಿತರಿಸುತ್ತಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts