ಬೆಂಗಳೂರು; ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ಹಲವು ಸಮಿತಿಗಳು ವರದಿಗಳಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕಿದ್ದ ಅಧಿಕಾರಶಾಹಿ ನಿರಾಸಕ್ತಿ ವಹಿಸುತ್ತಿದೆ. ಅಲ್ಲದೆ ಸಮಿತಿಗಳು ಕೇಳುವ ಮಾಹಿತಿ ಮತ್ತು ಪ್ರಶ್ನೆಗಳಿಗೆ ನೀಡುತ್ತಿರುವ ಉತ್ತರ ಹಾಗೂ ಬೇಜವಾಬ್ದಾರಿ ವಾಕ್ಯ ಬಳಸುವ ಮೂಲಕ ಅಧಿಕಾರಿಶಾಹಿಯು ಸಮಿತಿಗಳ ಕಾರ್ಯವಿಧಾನದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸುತ್ತಿರುವುದು ಇದೀಗ ಬಹಿರಂಗವಾಗಿದೆ.
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಸಭೆಯ ಮುಂದಿಡಲಾದ ಕಾಗದಪತ್ರಗಳ ಸಮಿತಿ, ಅರ್ಜಿಗಳ ಸಮಿತಿ, ಅಂದಾಜುಗಳ ಸಮಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಸೇರಿದಂತೆ ಹಲವು ಸಮಿತಿಗಳು ಸಲ್ಲಿಸಿರುವ ವರದಿ ಮೇಲೆ ಕೈಗೊಂಡ ಕ್ರಮಗಳ ಕುರಿತು ಮತ್ತು ಅಕ್ಷೇಪಣೆಗಳ ಕುರಿತು ಅಧಿಕಾರಶಾಹಿಯ ಸಲ್ಲದ ವರ್ತನೆ ಕುರಿತು ಸ್ವತಃ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು 2021ರ ಆಗಸ್ಟ್ 23ರಂದು ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ವರ್ತನೆ ಸರಿಪಡಿಸಿಕೊಳ್ಳುವಂತೆ ಟಿಪ್ಪಣಿ ಮುಖೇನ ಎಚ್ಚರಿಸಿದ್ದರು. ಆದರೂ ಇಲಾಖಾ ಮುಖ್ಯಸ್ಥರು ತಮ್ಮ ಧೋರಣೆ ಬದಲಿಸಿಕೊಂಡಿಲ್ಲ. ಹೀಗಾಗಿಯೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಕ್ಟೋಬರ್ 5ರಂದು ಮತ್ತೊಂದು ಪತ್ರವನ್ನು ಬರೆದಿದ್ದಾರೆ.
ಮುಖ್ಯ ಕಾರ್ಯದರ್ಶಿಗಳ ಟಿಪ್ಪಣಿಗೂ ಸೊಪ್ಪು ಹಾಕದ ಅಧಿಕಾರಿಶಾಹಿಯು ತನ್ನ ವರ್ತನೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ 2021ರ ಅಕ್ಟೋಬರ್ 5ರಂದು ಮುಖ್ಯ ಕಾರ್ಯದರ್ಶಿಗೆ ಖಾರವಾದ ಪತ್ರ ಬರೆದಿದ್ದಾರೆ. ಈ ಎರಡೂ ಪತ್ರಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಸ್ಪೀಕರ್ ಬರೆದಿರುವ ಪತ್ರದಲ್ಲೇನಿದೆ?
ಇತ್ತೀಚಿನ ದಿನಗಳಲ್ಲಿ ವಿಧಾನಮಂಡಲದ ಸಮಿತಿಗಳು ನೀಡಿರುವ ವರದಿಯಲ್ಲಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸುವುದರಲ್ಲಿ ನಿರಾಸಕ್ತಿ ತೋರಿಸುವುದು ಅಥವಾ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ವಿಧಾನಮಂಡಲದ ಸ್ಥಾಯಿ ಸಮಿತಿಗಳು ಮಾಡಿರುವ ಶಿಫಾರಸ್ಸುಗಳನ್ನು ಕಾಲಮಿತಿಯಲ್ಲಿ ಸರ್ಕಾರವು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಸಂಸದೀಯ ಪದ್ಧತಿಯು ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ.
ಸ್ಥಾಯಿ ಸಮಿತಿಗಳು ಸದನಕ್ಕೆ ಸಲ್ಲಿಸಿದ ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸಂಬಂಧಪಟ್ಟ ಇಲಾಖೆಗಳು ಕಾಲಮಿತಿಯಲ್ಲಿ ಜಾರಿಗೊಳಿಸಿ ಕೈಗೊಂಡ ಕ್ರಮದ ಬಗ್ಗೆ ಕಡ್ಡಾಯವಾಗಿ ವಿಧಾನಮಂಡಲದ ಸಮಿತಿಗಳಿಗೆ ವರದಿಯನ್ನು ಸಲ್ಲಿಸುವಂತೆ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಬೇಕು,’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಕರ್ನಾಟಕದ ನಗರ ಪ್ರದೇಶಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ವೃದ್ಧಿಸುವಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪಾತ್ರದ ಕುರಿತು 2021ರ ಆಗಸ್ಟ್ 10ರಂದು ನಡೆದಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿರಲಿಲ್ಲ.
ಅಲ್ಲದೆ ಇದೇ ವಿಷಯದ ಕುರಿತು ಮಹಾಲೇಖಪಾಲರ ಆಕ್ಷೇಪಣೆಗಳಿಗೆ ಉತ್ತರ ನೀಡುವಾಗ ಬೇಜವಾಬ್ದಾರಿ ವಾಕ್ಯಗಳನ್ನು ಬಳಸಿದ್ದರು ಎಂದು ಗೊತ್ತಾಗಿದೆ. ಈ ಕುರಿತು ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ 2021ರ ಆಗಸ್ಟ್ 19ರಂದು ತಂದಿದ್ದರು.
‘ಲೆಕ್ಕ ಪರಿಶೋಧನಾ ಟೀಕೆಗಳು ಸತ್ಯಕ್ಕೆ ದೂರವಾಗಿರುತ್ತದೆ. ಆಡಿಟ್ ವರದಿಯಲ್ಲಿ ಸಕಾರಣಗಳಿಲ್ಲದೆಯೇ ಕಂಡಿಕೆಗಳನ್ನು ಪುನಶ್ಚರಣ ಮಾಡಿರುವುದರಿಂದ ಆಡಿಟ್ ಟೀಕೆಗಳು ನ್ಯಾಯಯುತವಾಗಿಲ್ಲ. ಆಡಿಟ್ ಆಕ್ಷೇಪಣೆಗಳಿಗೆ ಸ್ಪಷ್ಟನೆ ನೀಡಿದ್ದರೂ ಲೆಕ್ಕ ಪರಿಶೋಧನೆಯು ಟೀಕೆಯನ್ನು ಮಾಡಿದ್ದು ಅದು ಸಮರ್ಥನೀಯವಾಗಿಲ್ಲ. ವಾಸ್ತವಾಂಶಗಳನ್ನು ಪರಿಗಣಿಸಿದಾಗ ಲೆಕ್ಕ ಪರಿಶೋಧನಾ ಟೀಕೆಗಳು ಊರ್ಜಿತವಾಗುವುದಿಲ್ಲ,’ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಉತ್ತರಿಸಿದ್ದರು ಎಂಬುದು ವಿಶಾಲಾಕ್ಷಿ ಅವರು ಬರೆದಿದ್ದ ಪತ್ರದಿಂದ ತಿಳಿದು ಬಂದಿದೆ.
ಅಲ್ಲದೆ ಶಾಸನಸಭೆಯಿಂದ ರಚಿತಗೊಂಡಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸದನದಷ್ಟೇ ಮಹತ್ವ ಹೊಂದಿದೆ. ಅಂತಹ ಸಮಿತಿಗೆ ಉತ್ತರವನ್ನು ಸಲ್ಲಿಸುವಾಗ ಬಳಸುವ ಪದ ಪ್ರಯೋಗವು ಜವಾಬ್ದಾರಿಯುತವಾಗಿಲ್ಲ. ಅಲ್ಲದೆ ಇಲಾಖೆ ಟಿಪ್ಪಣಿಯು ಸಮಿತಿಯ ಕಾರ್ಯವಿಧಾನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಮಿತಿಯೂ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.
ವಿಧಾನಮಂಡಲದಲ್ಲಿ ಹಲವು ಸ್ಥಾಯಿಸಮಿತಿಗಳಿವೆ. ಪ್ರತಿಯೊಂದು ಸಮಿತಿಯು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ವಿಧಾನಮಂಡಲದ ಪರವಾಗಿ ರಚನೆಯಾಗಿರುವ ಈ ಸಮಿತಿಗಳು ಪ್ರತಿ ವಾರ ಸಭೆ ಸೇರಿ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ವಿವಿಧ ಇಲಾಖೆಗಳ ಕಾರ್ಯವೈಖರಿ, ಸರ್ಕಾರದ ನೀತಿ, ಕಾರ್ಯಕ್ರಮಗಳ ಅನುಷ್ಠಾನ, ಆಗಿರುವ ಲೋಪ ದೋಷಗಳು ಸೇರಿದಂತೆ ಇತ್ಯಾದಿ ವಿಚಾರಗಳ ಕುರಿತು ಸಮಗ್ರವಾಗಿ ಪರಿಶೀಲಿಸಿ ಹಲವು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ವಿಧಾನಮಂಡಲಕ್ಕೆ ಸಲ್ಲಿಸುತ್ತವೆ.
ಈ ಶಿಫಾರಸ್ಸುಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವುದು ಸರ್ಕಾರದ ಅಧೀನದಲ್ಲಿರುವ ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿರುತ್ತದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.