ಬೆಡ್‌ ರೂಂ ರಹಸ್ಯ; ವಾರ್ಡ್‌ರೂಬ್‌ನಲ್ಲಿದ್ದವು 90 ಕೋಟಿ ರು. ನಮೂದಿಸಿದ್ದ ಚೆಕ್‌ ಹಾಳೆಗಳು

ಬೆಂಗಳೂರು; ಸುದೀಂಧ್ರ ರೆಡ್ಡಿ ಎಂಬುವರಿಗೆ ಕೆಎಸ್‌ಆರ್‌ಟಿಸಿ ಛೇರ್‌ಮನ್‌ ಹುದ್ದೆ ಕೊಡಿಸುವುದಾಗಿ ಆಮಿಷ ಒಡ್ಡಿದ್ದ ಪ್ರಕರಣದಲ್ಲಿ ಯುವರಾಜಸ್ವಾಮಿ ಮನೆಯ ಮಾಸ್ಟರ್‌ ಬೆಡ್‌ ರೂಂನ್ನು ಶೋಧಿಸಿದ್ದ ಪೊಲೀಸರು 90 ಕೋಟಿ ರು.ಗೂ ಅಧಿಕ ಮೊತ್ತವನ್ನು ನಮೂದಿಸಿದ್ದ ಹಲವು ಚೆಕ್‌ ಹಾಳೆಗಳನ್ನು ವಶಪಡಿಸಿಕೊಂಡಿದ್ದರು ಎಂಬುದು ಬಹಿರಂಗವಾಗಿದೆ. ಶೋಧನಾ ವೇಳೆಯಲ್ಲಿ ಪತ್ತೆಯಾಗಿರುವ ಚೆಕ್‌ ಹಾಳೆಗಳು ಯುವರಾಜಸ್ವಾಮಿ ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದಂತಾಗಿದೆ.

ನಾಗರಬಾವಿಯಲ್ಲಿರುವ ಮನೆಯಲ್ಲಿನ ಮಾಸ್ಟರ್‌ ಬೆಡ್‌ ರೂಂನ ದಕ್ಷಿಣ ದಿಕ್ಕಿನಲ್ಲಿದ್ದ ವಾರ್ಡ್‌ರೂಬ್‌ನ್ನು ಪರಿಶೀಲಿಸಿದ್ದ ಪೊಲೀಸರು ಬ್ಯಾಂಕ್‌ ದಾಖಲೆಗಳ ವಿವರವುಳ್ಳ ವಿವಿಧ ಬ್ಯಾಂಕ್‌ಗಳ ಚೆಕ್‌ ಹಾಳೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು ಎಂಬ ಸಂಗತಿ ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ವಶಪಡಿಸಿಕೊಂಡಿದ್ದ ಚೆಕ್‌ ಹಾಳೆಗಳಲ್ಲಿ ಬಹುತೇಕ ಚೆಕ್‌ ಹಾಳೆಗಳಲ್ಲಿ ಯುವರಾಜ್‌ ಹೆಸರನ್ನು ನಮೂದಿಸಲಾಗಿತ್ತು. ಕೆಲವು ಚೆಕ್‌ ಹಾಳೆಗಳಲ್ಲಿ ದಿನಾಂಕವನ್ನು ನಮೂದಿಸಿದ್ದರೆ ಇನ್ನು ಹಲವು ಚೆಕ್‌ ಹಾಳೆಗಳಲ್ಲಿ ಮೊತ್ತವನ್ನಷ್ಟೇ ನಮೂದಿಸಿ ದಿನಾಂಕವನ್ನು ನಮೂದಿಸಿರಲಿಲ್ಲ ಎಂಬುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

3 ಚೆಕ್‌ ಹಾಳೆಗಳಲ್ಲಿ 85 ಕೋಟಿ ನಮೂದು

ಏರ್‌ಸನ್‌ ಇಂಡಿಯಾ ಕಂಪನಿಯು 3 ಚೆಕ್‌ ಹಾಳೆಗಳಲ್ಲಿ ಯುವರಾಜ್‌ ಹೆಸರಿಗೆ 85 ಕೋಟಿ ರು.ಮೊತ್ತವನ್ನು ನಮೂದಿಸಿ ಸಹಿ ಮಾಡಿತ್ತು. ಆದರೆ ದಿನಾಂಕವನ್ನು ನಮೂದಿಸಿರಲಿಲ್ಲ. ಸಿಂಡಿಕೇಟ್‌ ಬ್ಯಾಂಕ್‌ನ ಖಾತೆ ಸಂಖ್ಯೆ 17171010001300 ಚೆಕ್‌ ನಂ 6000657, 6000658, 6000659ರ ಚೆಕ್‌ ಹಾಳೆಯಲ್ಲಿ ಯುವರಾಜ್‌ ಹೆಸರಿಗೆ ತಲಾ 25 ಕೋಟಿ ಸೇರಿದಂತೆ 85 ಕೋಟಿ ನಮೂದಿಸಿ ಸಹಿ ಮಾಡಿದ್ದ ಚೆಕ್‌ ಹಾಳೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಈ ಚೆಕ್‌ ಹಾಳೆಗಳಲ್ಲಿ ದಿನಾಂಕವನ್ನು ನಮೂದು ಮಾಡಿರಲಿಲ್ಲ.

ಅದೇ ರೀತಿ ಏರ್‌ಸನ್‌ ಇಂಡಿಯಾ ಕಂಪನಿಯು ಯುವರಾಜಸ್ವಾಮಿ ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆ ಸಂಖ್ಯೆಯ (5502000100052301) 10 ಕೋಟಿ , ದಿನಾಂಕ 2019 ಆಗಸ್ಟ್‌ 28 ಎಂದು ನಮೂದಿಸಿ ಸಹಿ ಮಾಡಿದ್ದ ಚೆಕ್‌ ಹಾಳೆಯನ್ನು ವಶಕ್ಕೆ ತೆಗೆದುಕೊಂಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಅದೇ ರೀತಿ ಡೈರೆಕ್ಟರ್‌ ಮೈಸೂರ್‌ ಪ್ರೂಟ್‌ ಪ್ರಾಡಕ್ಟ್ಸ್‌ ಪ್ರೈ ಲಿ ಅವರ ವಿಜಯಾ ಬ್ಯಾಂಕ್‌ ಅಕೌಂಟ್‌ ನಂ 140100300000034ರ ಚೆಕ್‌ ನಂ 334971, 334968, 334969 ರಲ್ಲಿ ಯುವರಾಜ್‌ ಹೆಸರಿಗೆ ತಲಾ 1 ಕೋಟಿ ಎಂದು ನಮೂದಿಸಿ ಒಟ್ಟು 3 ಕೋಟಿ ನಮೂದಿಸಲಾಗಿತ್ತು. ಇದರಲ್ಲಿ ಒಂದು ಚೆಕ್‌ನಲ್ಲಿ ಮಾತ್ರ 10-04-2020 ಎಂದು ದಿನಾಂಕವನ್ನು ನಮೂದಿಸಿ ಸಹಿ ಮಾಡಲಾಗಿತ್ತು.

ಹಾಗೆಯೇ ತೇಜೇಶ್ವರಿ ಡಿ ಎ ಅವರ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅಕೌಂಟ್‌ 1287000100982010 ಚೆಕ್‌ ನಂ 791447 ಇದರಲ್ಲಿ ಯುವರಾಜ್‌ ಅಕೌಂಟ್‌ ನಂ 5502000100052301 ಗೆ 1 ಕೋಟಿ ಎಂದು ನಮೂದಿಸಿದ್ದ ಚೆಕ್‌ ಹಾಳೆಯಲ್ಲಿ 10-02-2020 ಎಂದು ನಮೂದಿಸಿ ಸಹಿ ಮಾಡಲಾಗಿತ್ತು ಎಂಬುದು ತಿಳಿದು ಬಂದಿದೆ.

ಬಿ ಶ್ರೀರಾಮುಲು ಅವರ ಖಾತೆಗೆ ಯುವರಾಜಸ್ವಾಮಿ ಖಾತೆಯಿಂದ ಒಟ್ಟು 13 ಲಕ್ಷ ರು. ಸಂದಾಯವಾಗಿದ್ದನ್ನು ಸ್ಮರಿಸಬಹುದು. ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಯಿಂದ (ಖಾತೆ ಸಂಖ್ಯೆ; 5502000100052301) ಬಿ ಶ್ರೀರಾಮುಲು ಖಾತೆಗೆ (ಖಾತೆ ಸಂಖ್ಯೆ; KARBH19210399488) 2019ರ ಜುಲೈ 29ರಂದು 5 ಲಕ್ಷ ಹಾಗೂ 2019ರ ಆಗಸ್ಟ್‌ 1ರಂದು 13 ಲಕ್ಷ ರು. (ಖಾತೆ ಸಂಖ್ಯೆ ;KARBH19213654613) ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಆಗಿರುವುದು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್‌ನ ವಹಿವಾಟಿನ ದಾಖಲೆಯಿಂದ ತಿಳಿದು ಬಂದಿತ್ತು.

ಅಲ್ಲದೆ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು.ಗಳು ಸಂದಾಯವಾಗಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts