ಯುಜಿಸಿ ಹಿಂಬಾಕಿ ಮೊತ್ತದಲ್ಲಿ ಗೋಲ್ಮಾಲ್‌; ಪಿ ಡಿ ಖಾತೆಯಲ್ಲಿ 101 ಕೋಟಿ ವ್ಯತ್ಯಾಸ

ಬೆಂಗಳೂರು; ಉಪ ನೋಂದಣಿ ಮತ್ತು ಖಜಾನೆ ಇಲಾಖೆಯ ಖಾತೆಗಳಲ್ಲಿನ ಸರ್ಕಾರದ ಹಣವು ಹವಾಲಾದಂತಹ ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಪಿ ಡಿ ಖಾತೆಗಳಲ್ಲಿ ಭಾರೀ ವ್ಯತ್ಯಾಸಗಳಾಗಿವೆ. ಯುಜಿಸಿ ಪರಿಷ್ಕೃತ ವೇತನ ಶ್ರೇಣಿ ಹಿಂಬಾಕಿ ಖಾತೆಯಲ್ಲಿ 101 ಕೋಟಿ ರು. ವ್ಯತ್ಯಾಸ ಕಂಡು ಬಂದಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಬಹಿರಂಗಗೊಳಿಸುತ್ತಿದೆ.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಪಿ ಡಿ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತ ಮತ್ತು ಅದನ್ನು ಮುಂದುವರೆಸುವ ಸಂಬಂಧ ಸರ್ಕಾರಕ್ಕೆ ಸಲ್ಲಿಸುತ್ತಿರುವ ಪ್ರಸ್ತಾವನೆಗಳಲ್ಲಿ ನಮೂದಿಸುತ್ತಿರುವ ಮೊತ್ತದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇಲಾಖೆ ಆಯುಕ್ತರ ಪಿ ಡಿ ಖಾತೆಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಕೋಟ್ಯಂತರ ಮೊತ್ತವನ್ನು ಇಲಾಖೆ ಅಧಿಕಾರಿಗಳು ಅನ್ಯ ಉದ್ದೇಶಕ್ಕೆ, ಹವಾಲಾದಂತಹ ಚಟುವಟಿಕೆ ಅಥವಾ ವೈಯಕ್ತಿಕ ವಹಿವಾಟುಗಳಿಗೆ ಬಳಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಯುಜಿಸಿ ಪರಿಷ್ಕೃತ ವೇತನ ಶ್ರೇಣಿ ಹಿಂಬಾಕಿ ಖಾತೆಯಲ್ಲಿ 101 ಕೋಟಿ ರು. ವ್ಯತ್ಯಾಸ ಕಂಡು ಬಂದಿದ್ದರೂ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್‌ನಾರಾಯಣ್‌ ಅವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ!

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ 2021ರ ಜುಲೈ 8ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕಾಲೇಜು ಶಿಕ್ಷಣ ಆಯುಕ್ತರ ಪಿ ಡಿ ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ 2006 ಮತ್ತು 2016ರ ಪರಿಷ್ಕೃತ ಯುಜಿಸಿ ವೇತನದ ಹಿಂಬಾಕಿ ಮೊತ್ತ ಪಾವತಿಸುವ ಸಂಬಂಧ ಇಲಾಖೆಯು 2021ರ ಮಾರ್ಚ್‌ 18 ಮತ್ತು ಏಪ್ರಿಲ್‌ 26ರಂದು ಬರೆದಿದ್ದ ಪತ್ರದಲ್ಲಿ 101 ಕೋಟಿ ರು. ವ್ಯತ್ಯಾಸವಿರುವುದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

101 ಕೋಟಿ ವ್ಯತ್ಯಾಸ

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರು 2021ರ ಮಾರ್ಚ್‌ 18ರಂದು ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ಪಿ ಡಿ ಖಾತೆಯಲ್ಲಿ 123.74 ಕೋಟಿ ರು. ಬಾಕಿ ಉಳಿದಿದೆ ಎಂದು ನಮೂದಿಸಿದ್ದರು. ಇದೇ ಖಾತೆಯನ್ನು 2021ರ ಏಪ್ರಿಲ್‌ 1ರಿಂದ 2021ರ ಜುಲೈ 31ರವರೆಗೆ ಮುಂದುವರೆಸುವಂತೆ ಕೋರಿ 2021ರ ಏಪ್ರಿಲ್‌ 26ರಂದು ಬರೆದಿದ್ದ ಪತ್ರದಲ್ಲಿ ಯುಜಿಸಿ ಬಾಕಿ ಮೊತ್ತ 224.69 ಕೋಟಿ ರು. (2021 ಮಾರ್ಚ್‌ 31ರಲ್ಲಿದ್ದಂತೆ) ಎಂದು ನಮೂದಿಸಿದ್ದರು. ಇಲಾಖೆ ಆಯುಕ್ತರು ನಮೂದಿಸಿರುವ ಮೊತ್ತದಲ್ಲಿ ಒಟ್ಟು 101 ಕೋಟಿ ವ್ಯತ್ಯಾಸ ಕಂಡು ಬಂದಿದೆ. ಈ ಎರಡೂ ಪತ್ರವನ್ನು ಪರಿಶೀಲಿಸಿರುವ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವ್ಯತ್ಯಾಸಕ್ಕೆ ಕಾರಣ ಕೇಳಿ ಪತ್ರ ಬರೆದಿರುವುದು ಗೊತ್ತಾಗಿದೆ.

‘ಸರ್ಕಾರದಿಂದ ಬಿಡುಗಡೆಯಾದ 2016ರ ಯುಜಿಸಿ ಪರಿಷ್ಕೃತ ವೇತನ ಶ್ರೇಣಿ ಹಿಂಬಾಕಿ ಒಟ್ಟು ಮೊತ್ತದಲ್ಲಿ ಪಿ ಡಿ ಖಾತೆಯಲ್ಲಿ ವಾಸ್ತವವಾಗಿ ಮಾಡಲಾದ ಮೊತ್ತವೆಷ್ಟು, ಬಾಕಿ ಉಳಿದ ಮೊತ್ತವೆಷ್ಟು,’ ಮಾಹಿತಿ ಕೇಳಿರುವುದು ಪತ್ರದಿಂದ ತಿಳಿದು ಬಂದಿದೆ.

ಇದಷ್ಟೇ ಅಲ್ಲ, ಕೆಲವು ವಿಶ್ವವಿದ್ಯಾಲಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡಿರುವುದು ಪತ್ರದಿಂದ ಗೊತ್ತಾಗಿದೆ. ಸರ್ಕಾರಕ್ಕೆ ಜಮೆ ಮಾಡಿಕೊಂಡಿರುವ ಹಾಗೂ ಮಾಡಿಕೊಳ್ಳಲು ಬಾಕಿ ಇರುವ ಮೊತ್ತ ಸಂಪೂರ್ಣ ಮಾಹಿತಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೇಳಿದ್ದಾರೆ.

ಇನ್ನು, 7ನೇ ವೇತನದ ಹಿಂಬಾಕಿ 3.70 ಕೋಟಿ ರು. ಬಿಲ್‌ಗಳು ಖಜಾನೆಯಿಂದ ಹಿಂತಿರುಗಿಸಲಾಗಿದೆ. ಆದರೆ ಯಾವ ಕಾರಣಕ್ಕೆ ಹಿಂದಿರುಗಿಸಲಾಗಿದೆ, ಈ ಬಿಲ್‌ಗಳು ಯಾಔ ಬೋಧಕರಿಗೆ ಸಂಬಂಧಿಸಿದ್ದು ಎಂಬ ಮಾಹಿತಿಯನ್ನು ಆಯುಕ್ತರು ಸರ್ಕಾರಕ್ಕೆ ಒದಗಿಸಿಲ್ಲ ಎಂಬ ಸಂಗತಿಯೂ ಪತ್ರದಿಂದ ತಿಳಿದು ಬಂದಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೊಂದಿದ್ದ ಬ್ಯಾಂಕ್‌ ಖಾತೆಗಳಲ್ಲಿ ಅಂದಾಜು 2,000 ಕೋಟಿ ರು. ಕಬಳಿಸಲಾಗಿತ್ತು. ಈ ಕುರಿತು ಅಂದಿನ ಸಚಿವ ಎಚ್‌ ಕೆ ಪಾಟೀಲ್‌ ಅವರು ತನಿಖೆಗೆ ಆದೇಶಿಸಿದ್ದರು. ತನಿಖಾ ವರದಿ ಬಂದರೂ ಸರ್ಕಾರವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದೇ ರೀತಿ ನೋಂದಣಿ ಮತ್ತು ಮುದ್ರಾಂಕ, ಖಜಾನೆ ಇಲಾಖೆ ಹೊಂದಿರುವ ಖಾತೆಗಳಲ್ಲಿರುವ ಸರ್ಕಾರಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಖುದ್ದು ಉಪ ನೋಂದಣಾಧಿಕಾರಿಗಳೇ ವರದಿ ಮಾಡುತ್ತಿದ್ದರೂ ಸರ್ಕಾರವು ತನಿಖೆಗೆ ಮುಂದಾಗಿಲ್ಲ.

SUPPORT THE FILE

Latest News

Related Posts