143 ತಾಲೂಕುಗಳಲ್ಲಿ ಕೋವಿಡ್‌ ನಿಯಂತ್ರಣದಲ್ಲಿಲ್ಲ, 25 ತಾಲೂಕುಗಳಲ್ಲಿದೆ ಶೇ.30ಕ್ಕಿಂತಲೂ ಹೆಚ್ಚಿನ ದರ

ಬೆಂಗಳೂರು; ರಾಜ್ಯದ ಹಲವೆಡೆ ಕೋವಿಡ್‌ 19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ರಾಜ್ಯದ ಒಟ್ಟು ತಾಲೂಕುಗಳ ಪೈಕಿ 25 ತಾಲೂಕುಗಳಲ್ಲಿ ಕೋವಿಡ್‌ 19 ಸೋಂಕಿನ ಖಚಿತ ಪ್ರಕರಣಗಳ ದರ ಶೇ.30ಕ್ಕಿಂತಲೂ ಹೆಚ್ಚಿದೆ. 118 ತಾಲೂಕುಗಳಲ್ಲಿ ಶೇ.5ರಿಂದ 30ರವರೆಗೆ ಖಚಿತ ಪ್ರಕರಣಗಳ ದರವಿದೆ. ಒಟ್ಟಾರೆ 143 ತಾಲೂಕುಗಳಲ್ಲಿ ಕೋವಿಡ್‌ ಸೋಂಕು ಹತೋಟಿಗೆ ಸಿಕ್ಕಿಲ್ಲ ಎಂಬ ಆಘಾತಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ.

ಜೂನ್‌ 7ರವರೆಗೆ ಜಾರಿಯಲ್ಲಿರುವ ಲಾಕ್‌ಡೌನ್‌ ವಿಸ್ತರಿಸಬೇಕೇ ಬೇಡವೇ ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗೊಂದಲ ಕಾಣಿಸಿಕೊಂಡಿರುವ ಬೆನ್ನಲ್ಲೇ ಕೋವಿಡ್‌ ಸೋಂಕಿನ ಖಚಿತ ಪ್ರಕರಣಗಳ ದರದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿದ್ಧಪಡಿಸಿರುವ ಪಟ್ಟಿಯು ಮುನ್ನೆಲೆಗೆ ಬಂದಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಲಾಕ್‌ಡೌನ್‌ ಜಾರಿಗೊಳಿಸಿದ ದಿನದಿಂದ ಈವರೆವಿಗೆ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಹಲವು ಸಚಿವರು ಪ್ರತಿಪಾದಿಸುತ್ತಿದ್ದಾರಾದರೂ ಒಟ್ಟಾರೆ 143 ತಾಲೂಕುಗಳಲ್ಲಿ ಕೋವಿಡ್‌ ಸೋಂಕಿನ ಖಚಿತ ಪ್ರಕರಣಗಳ ದರ ಶೇ.5ಕ್ಕೆ ಇಳಿದಿಲ್ಲ ಎಂಬುದು ಲಾಕ್‌ಡೌನ್‌ ಮಾರ್ಗಸೂಚಿಗಳು ಪರಿಣಾಮಕಾರಿಯಾಗಿ ಪಾಲನೆಯಾಗಿಲ್ಲ ಎಂಬುದಕ್ಕೆ ಕೈಗನ್ನಡಿಯಾಗಿದೆ.

ಕೋವಿಡ್‌ ದೃಢಪಡುತ್ತಿರುವ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು, ಆದರೆ ಕಳೆದ ಒಂದೆರಡು ವಾರಗಳಲ್ಲಿ ರ್ಯಾಪಿಡ್‌ ಪರೀಕ್ಷೆಯೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಈಗ ಒಟ್ಟು ಪರೀಕ್ಷೆಗಳಲ್ಲಿ ಅದರ ಪಾಲೇ ಮೂರನೇ ಒಂದು ಭಾಗದಷ್ಟಿದೆ. ಈ ಹಿನ್ನೆಲೆಯಲ್ಲಿ ದೃಢಪಡುತ್ತಿರುವ ಪ್ರಮಾಣವನ್ನು ಕೇವಲ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನೇ ಪರಿಗಣಿಸಬೇಕು. ಅದು ಮಾತ್ರ ನೈಜವಾದ ಚಿತ್ರಣವನ್ನು ನೀಡುತ್ತದೆ. ಒಟ್ಟಾರೆಯಾಗಿ ನೋಡಿದಾಗ ರಾಜ್ಯದಲ್ಲಿ ಸೋಂಕು ಹತೋಟಿಗೆ ಬಂದಿಲ್ಲ ಎನ್ನುವುದು ಎದ್ದು ಕಾಣುತ್ತಿದೆ.

 

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು

 

ಕರ್ನಾಟಕ ರಾಷ್ಟ್ರಸಮಿತಿ

ಮೇ 31ಕ್ಕೆ ಕೊನೆಗೊಂಡಂತೆ ಉತ್ತರ ಕನ್ನಡ, ಕೋಲಾರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹಾಸನ, ಮಂಡ್ಯ, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ರಾಮನಗರ, ಮತ್ತು ಮೈಸೂರು ಜಿಲ್ಲೆಯ ಒಟ್ಟು 25 ತಾಲೂಕುಗಳಲ್ಲಿ ಕೋವಿಡ್‌ 19 ಸೋಂಕಿನ ಖಚಿತ ಪ್ರಕರಣಗಳ ದರವು ಶೇ.30ಕ್ಕಿಂತಲೂ ಹೆಚ್ಚಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

ಕೋವಿಡ್ ನಿಯಂತ್ರಣಕ್ಕೆ ಬಂದಿದೆಯೋ ಇಲ್ಲವೋ ಎಂಬುದನ್ನು ಗುರುತಿಸುವುದಕ್ಕೆ ಇರುವ ಪ್ರಮುಖ ಮಾನದಂಡ, ಪಾಜಿಟಿವಿಟಿ ರೇಟ್. ಸರ್ಕಾರದ ದಾಖಲೆಗಳ ಪ್ರಕಾರವೇ ಶೇ.5ಕ್ಕಿಂತ ಕಡಿಮೆ ಪ್ರಮಾಣದ ಪಾಜಿಟಿವಿಟಿ ಇರುವ ತಾಲ್ಲೂಕುಗಳ ಸಂಖ್ಯೆ ಬೆರಳೆಣಿಕೆಯಷ್ಟು. ಕೆಲವು ತಾಲ್ಲೂಕುಗಳಲ್ಲಿ ಇನ್ನೂ ಶೇ. 30ಕ್ಕಿಂತ ಹೆಚ್ಚು ಪಾಜಿಟಿವಿಟಿ ಇದೆ. ಇದು ಒಳ್ಳೆಯ ಸೂಚನೆ ಅಲ್ಲ. ಕೇವಲ ಲಾಕ್ ಡೌನ್ ಮಾಡಿ, ಕೋವಿಡ್ ತಡೆಯುತ್ತೇವೆ ಎನ್ನುವುದು ದೊಡ್ಡ ಭ್ರಮೆ. ಸರ್ಕಾರದ ಬಳಿ ಈಗಲೂ ಕೋವಿಡ್ ಎದುರಿಸುವ ಪರಿಣಾಮಕಾರಿ ಉಪಕ್ರಮಗಳು ಇಲ್ಲ ಎಂಬುದಕ್ಕೆ ಇದು ಸಾಕ್ಷಿ.

ದಿನೇಶ್ ಕುಮಾರ್ ಎಸ್.ಸಿ

ಮುಖ್ಯಸ್ಥರು, ಕರವೇ ಸಾಮಾಜಿಕ ಜಾಲತಾಣ

ಅದೇ ರೀತಿ 38 ತಾಲೂಕುಗಳಲ್ಲಿ ಶೇ.5ಕ್ಕಿಂತಲೂ ಕಡಿಮೆ ದರವಿದೆ. ಶೇ.5ರಿಂದ 10ರಷ್ಟು ದರ 25 ತಾಲೂಕುಗಳಲ್ಲಿದ್ದರೆ ಶೇ.10ರಿಂದ 15 ರಷ್ಟು ದರ 37 ತಾಲೂಕು, ಶೇ.15ರಿಂದ 20ರ ದರ 24 ತಾಲೂಕು, ಶೇ.20ರಿಂದ 25ರ ದರ 19 ತಾಲೂಕು, ಶೇ.25ರಿಂದ 30ರಷ್ಟು ದರ 13 ತಾಲೂಕುಗಳಲ್ಲಿ ವರದಿಯಾಗಿದೆ.

ಶೇ.30ಕ್ಕಿಂತ ಹೆಚ್ಚಿನ ದರ ಇರುವ ತಾಲೂಕುಗಳ ಪಟ್ಟಿ

ಸಿದ್ದಾಪುರ (ಉತ್ತರ ಕನ್ನಡ), ಶ್ರೀನಿವಾಸಪುರ (ಕೋಲಾರ) ಶಿವಮೊಗ್ಗ (ಶಿವಮೊಗ್ಗ) ದೊಡ್ಡಬಳ್ಳಾಪುರ (ಬೆಂ.ಗ್ರಾಮಾಂತರ) ಹೊಸಪೇಟೆ (ಬಳ್ಳಾರಿ) ದಾವಣಗೆರೆ (ದಾವಣಗೆರೆ), ಚಿತ್ರದುರ್ಗ (ಚಿತ್ರದುರ್ಗ), ಬೇಲೂರು (ಹಾಸನ), ಚನ್ನಗಿರಿ (ದಾವಣಗೆರೆ ), ಹರಿಹರ (ದಾವಣಗೆರೆ), ಶ್ರೀರಂಗಪಟ್ಟಣ (ಮಂಡ್ಯ), ಹರಪನಹಳ್ಳಿ (ಬಳ್ಳಾರಿ), ಸಿಂಧಗಿ( ವಿಜಯಪುರ), ಹೊನ್ನಾಳಿ (ದಾವಣಗೆರೆ), ಕೂಡ್ಲಿಗಿ (ಬಳ್ಳಾರಿ), ಸಕಲೇಶಪುರ (ಹಾಸನ), ಹುಣಸಗಿ (ಯಾದಗಿರಿ), ಎನ್‌ ಆರ್‌ ಪುರ (ಚಿಕ್ಕಮಗಳೂರು) ಶಿರಸಿ (ಉತ್ತರ ಕನ್ನಡ), ಪಿರಿಯಾಪಟ್ಟಣ, ಎಚ್‌ ಡಿ ಕೋಟೆ, ಕೆ ಆರ್‌ ನಗರ, ನಂಜನಗೂಡು, ಹುಣಸೂರು (ಮೈಸೂರು) ತಾಲೂಕಿನಲ್ಲಿ ಕೋವಿಡ್‌ ಸೋಂಕಿನ ಖಚಿತ ಪಟ್ಟ ಪ್ರಕರಣಗಳ ದರ ಶೇ.30ಕ್ಕಿಂತಲೂ ಹೆಚ್ಚಿದೆ.

ಹಾಗೆಯೇ ಮಾಗಡಿ, ಕುಂದಗೋಳ, ಬಸವಕಲ್ಯಾಣ, ನವಲಗುಂದ, ಹುಮ್ನಾಬಾದ್‌, ಬೀದರ್‌, ಕಲಘಠಗಿ, ಭಾಲ್ಕಿ, ಬೀದರ್‌, ಯಾದಗಿರಿ, ರಾಯಭಾಗ್‌, ಅಫ್ಜಲ್‌ಪುರ, ಖಾನಾಪುರ, ನಾಗಮಂಗಲ, ಚಿಂಚೋಳಿ, ಬ್ಯಾಡಗಿ, ಜೇವರ್ಗಿ, ಶಿಗ್ಗಾಂವ್‌, ಹಾನಗಲ್‌, ಸೇಡಂ, ಬೈಲಹೊಂಗಲ, ತುರುವೇಕೆರೆ, ದೇವದುರ್ಗ, ಬೆಂಗಳೂರು ಪಶ್ಚಿಮ, ಕಲ್ಬುರ್ಗಿ, ಬೆಂಗಳೂರು ಉತ್ತರ, ಆಲೂರು, ವಡಗೇರಾ, ಇಂಡಿ, ಹಾವೇರಿ, ಗೋಕಾಕ್‌, ಅಳಂದ, ಹಿರೇಕೆರೂರ, ರಾಮದುರ್ಗ, ವಿಜಯಪುರ, ಹುಬ್ಬಳ್ಳಿ, ಸವಣೂರು ಮತ್ತು ಚಿತ್ತಾಪುರ ತಾಲೂಕುಗಳಲ್ಲಿ ಮಾತ್ರ ಕೋವಿಡ್‌ ಸೋಂಕಿನ ಖಚಿತ ಪ್ರಕರಣಗಳ ದರವು ಶೇ.5ಕ್ಕಿಂತ ಕಡಿಮೆ ಇದೆ. ಇನ್ನುಳಿದ ತಾಲೂಕುಗಳಲ್ಲಿ ಶೇ.5ರಿಂದ 10, ಶೇ10ರಿಂದ 15, ಶೇ.15ರಿಂದ 20, ಶೇ.20ರಿಂದ 25, ಶೇ.25ರಿಂದ 30ರಷ್ಟು ಖಚಿತಪಟ್ಟ ಪ್ರಕರಣಗಳಿವೆ ಎಂಬುದು ಲಭ್ಯವಿರುವ ಪಟ್ಟಿಯಿಂದ ಗೊತ್ತಾಗಿದೆ.

 

2021ರ ಏಪ್ರಿಲ್‌ 30ರಲ್ಲಿ ಇದರ ದರ ಶೇ.23.03ರಷ್ಟಿದ್ದರೇ ಮೇ 6ರ ಹೊತ್ತಿಗೆ ಅದು ಶೇ. 30.69ಕ್ಕೇರಿತ್ತು. ಕಠಿಣ ಕಫ್ಯ್ರೂ ಮತ್ತು ವಾರಾಂತ್ಯದ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆಯು ಇನ್ನಷ್ಟು ಏರುಗತಿ ಕಂಡಿತ್ತು.

ಅತಿ ಹೆಚ್ಚು ಮಟ್ಟದಲ್ಲಿ ಸೋಂಕು ಇರುವ ತಾಲ್ಲೂಕುಗಳನ್ನು ಕೇಂದ್ರೀಕರಿಸಿ ಆರೈಕೆ ಕೇಂದ್ರ, ಮದ್ದು, ತಡೆಮದ್ದು ಪೂರೈಸುವ ನಿಟ್ಟಿನಲ್ಲಿ ತುರ್ತಾಗಿ ಕಾರ್ಯ ಪಡೆಯನ್ನು ರಚಿಸಿ ಮೈಕ್ರೋ ಮ್ಯಾನೇಜ್ಮೆಂಟ್ ಮಾಡಬೇಕು. ತಾಲೂಕು ಮಟ್ಟದಲ್ಲಿ ಜನರನ್ನು ಹೆಚ್ಚು ಜಾಗರೂಕ ರನ್ನಾಗಿಸುವುದು ಅನಿವಾರ್ಯ. ಎಲ್ಲ ನಿರ್ಧಾರವನ್ನು ಬೆಂಗಳೂರು ಅಥವಾ ದೆಹಲಿಯಿಂದ ಕೈಗೊಳ್ಳುವ ಕೆಟ್ಟ ಪರಂಪರೆಯನ್ನು ಕೊನೆಗಾಣಿಸದೇ ಹೋದರೆ ಸಾವಿರಾರು ಮಂದಿ ಸಾವು ಬದುಕಿನ ನಡುವೆ ಹೋರಾಟ ಮಾಡಬೇಕಾದೀತು.

ಕೆಬಿಕೆ ಸ್ವಾಮಿ, ವಕೀಲರು

ಏಪ್ರಿಲ್ 27 ರಿಂದ ಮೇ 7 ವೇಳೆಗೆ ಸಕ್ರಿಯ ಸೋಂಕಿನ ಸಂಖ್ಯೆ 3 ಲಕ್ಷದಿಂದ 5.36 ಲಕ್ಷಕ್ಕೆ ಏರಿತ್ತು. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣ ಶೇ 24ರಷ್ಟು ಹೆಚ್ಚಿತ್ತು. ಚೇತರಿಕೆ ಪ್ರಮಾಣ ಶೇ. 98.28ರಿದ್ದೆ (ಫೆ)ರಿಂದ 69.9% ಮೇ8ಕ್ಕೆ ಇದರ ಪ್ರಮಾಣವು ಶೇ. 28.2ರಷ್ಟು ಕುಸಿದಿತ್ತು. ಬೆಂಗಳೂರು ನಗರದಲ್ಲಿ ಇದರ ಪ್ರಮಾಣವು ಶೇ. 61-62 ರಷ್ಟು ಕುಸಿದು ಪರಿಸ್ಥಿತಿ ಹದಗೆಟ್ಟಿತ್ತು.

ಏಪ್ರಿಲ್‌ 30ರಿಂದ ಮೇ 7ರವರೆಗೆ ಕೋವಿಡ್‌ ದೃಢಪಟ್ಟ ಪ್ರಕರಣಗಳ ದರ

ಏಪ್ರಿಲ್‌,30- ಶೇ.23.03
ಮೇ 1- ಶೇ.23.82
ಮೇ 2- ಶೇ. 29.80
ಮೇ 3- ಶೇ.29.03
ಮೇ 4- ಶೇ.32.28
ಮೇ 5- ಶೇ. 29.83
ಮೇ 6- ಶೇ.30.69
ಮೇ 7- ಶೇ. 30.28
ಮೇ 8- ಶೇ. 32.71

ಕೋವಿಡ್‌ ಸೋಂಕಿನ ಖಚಿತಪಟ್ಟ ಪ್ರಕರಣಗಳ ದರವು ಮೇ 25ರಂದು ಶೇ.21.13ರಷ್ಟಿತ್ತು. ಅದೇ ರೀತಿ ಮೇ 27ರಂದು ಶೇ.19.48, ಮೇ 28ರಂದು ಶೇ.16.42, ಮೇ 29ರಂದು ಶೇ. 14.95, ಮೇ 30ರಂದು ಶೇ.14.68, ಮೇ 31ರಂದು ಶೇ.13.57, ಜೂನ್‌ 1ರಂದು ಶೇ.12.30, ಜೂನ್‌ 2ರಂದು ಶೇ.11.22ರಷ್ಟು ದರವಿತ್ತು.

ದೇಶಾದ್ಯಂತ ಕೋವಿಡ್‌ ಪರೀಕ್ಷೆಗಳಲ್ಲಿ ಎಲ್ಲಾ ಮಾದರಿಗಳಲ್ಲಿ 2021ರ ಫೆ.11ರಂದು ದೃಢಪಟ್ಟ ಪ್ರಕರಣಗಳು ಶೇ.1.58ರಷ್ಟಿತ್ತು. ಇದು ಸ್ಥಿರವಾಗಿ ಏರುತ್ತಲೇ ಇದೆ. ಫೆ.28ರ ಹೊತ್ತಿಗೆ ಇದು ಶೇ.2 ಮತ್ತು ಮಾರ್ಚ್‌ 16ರ ವೇಳೆಗೆ ಶೇ.3 ಮತ್ತು ಮಾರ್ಚ್‌ 27ರ ಹೊತ್ತಿಗೆ ಶೇ.5ರಷ್ಟರ ಗಡಿ ದಾಟಿತ್ತು. ಆರೋಗ್ಯ ತಜ್ಞರು ನಡೆಸಿದ್ದ ಈ ವಿಶ್ಲೇಷಣೆ ಪ್ರಕಾರ ದೇಶದಲ್ಲಿ ಮಾರ್ಚ್‌ 27ರ ನಂತರ ಕೋವಿಡ್‌ ತನ್ನ ಹತೋಟಿಯನ್ನು ಕಳೆದುಕೊಂಡಿತ್ತು ಎಂದು ಹೇಳಬಹುದು.

ಕೋವಿಡ್‌ ಸಾಂಕ್ರಾಮಿಕ ರೋಗವು ಎಷ್ಟು ಬೇಗನೆ ಹರಡುತ್ತಿದೆ ಎಂಬುದು ಪ್ರಕರಣಗಳ ದ್ವಿಗುಣಗೊಳ್ಳುವುದನ್ನಾಧರಿಸಿರುತ್ತದೆ. ಹೊಸ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದಂತೆ, ದ್ವಿಗುಣಗೊಳಿಸುವ ಸಮಯವೂ ಹೆಚ್ಚುತ್ತಲೇ ಇರುತ್ತದೆ. ಈ ಸೂಚಕವು ಕಡಿಮೆಯಾಗಲು ಪ್ರಾರಂಭಿಸಿದಾಗ, ಇದು ಪ್ರತಿದಿನ ಹೊಸ ಪ್ರಕರಣಗಳಲ್ಲಿ ಉಲ್ಬಣಗೊಳ್ಳುವುದು ಮುಂದಿನ ಅಪಾಯದ ಎಚ್ಚರಿಕೆಯ ಮುನ್ಸೂಚನೆಯಾಗಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.

SUPPORT THE FILE

Latest News

Related Posts