ಬೆಂಗಳೂರು; ಖರೀದಿಗಳ ಮೇಲಿನ ತೆರಿಗೆ ಜಮೆ ಹೆಸರಿನಲ್ಲಿ ರಾಜ್ಯದ ವರಮಾನವನ್ನೂ ಕೊರೆದು ಹಾಕಲಾಗುತ್ತಿದೆ. ಇದನ್ನು ತಡೆಗಟ್ಟಬೇಕಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಈವರೆವಿಗೂ ಯಾವುದೇ ಮಾರ್ಗವನ್ನು ಕಂಡುಕೊಂಡಿಲ್ಲ.
ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು ಖರೀದಿಗಳ ಮೇಲಿನ ತೆರಿಗೆ ಜಮೆಯನ್ನು ವಿಶ್ಲೇಷಿಸಿದೆ. ತೆರಿಗೆ ಜಮೆ ಹೆಸರಿನಲ್ಲಿ ರಾಜ್ಯದ ವರಮಾನವನ್ನು ಕೊರೆದು ಹಾಕುವುದನ್ನು ತಡೆಯುವ ಸಲುವಾಗಿ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ.
ಅಲ್ಲದೆ ಖರೀದಿಗಳ ಮೇಲಿನ ತೆರಿಗೆ ಜಮೆ ಕೋರಿಕೆಗಳನ್ನು ಪರಿಶೀಲಿಸುವ, ಖಚಿತಪಡಿಸಿಕೊಳ್ಳುವ ಸಲುವಾಗಿ ಸ್ಥಳೀಯ ಕಚೇರಿಗಳಲ್ಲಿ ಪರಿಶೀಲನಾ ಪ್ರಕ್ರಿಯೆ ಕೈಗೊಳ್ಳುವ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದೂ ಶಿಫಾರಸ್ಸು ಮಾಡಿದೆ.
2018 ಮೇ ಮತ್ತು ಜನವರಿ 2019ರ ನಡುವೆ ಬೆಂಗಳೂರು, ಹಾಸನ, ಬಳ್ಳಾರಿ, ದಾವಣಗೆರೆ ಜಿಲ್ಲಾ ಕಚೇರಿ ವ್ಯಾಪ್ತಿಯಲ್ಲಿನ ವರ್ತಕರು ಖರೀದಿಗಳ ಮೇಲೆ ಕೋರಿದ್ದ ಖರೀದಿ ಮೇಲಿನ ತೆರಿಗೆ ಜಮೆ ಮೊತ್ತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾರಾಟಗಳ ಮೇಲಿನ ತೆರಿಗೆ ಪಾವತಿಸಿದ್ದರು ಎಂದು ಸಿಎಜಿ ವರದಿ ವಿವರಿಸಿದೆ.
ಖರೀದಿಗಳ ಮೇಲಿನ ತೆರಿಗೆ ಜಮೆಗೆ ಅನುಗುಣವಾಗಿ 32 ಮಾರಾಟಗಳನ್ನು ಮಾಡಿದ ವರ್ತಕರಿದ್ದರು. ಇ-ಎಫ್‌ಎಸ್‌ನಲ್ಲಿನ ಮಾರಾಟಗಳನ್ನು ಮಾಡುವ ವರ್ತಕರು ವಿವರಗಳನ್ನು ಪರಿಶೀಲಿಸಿದ್ದ ಸಿಎಜಿ, ಖರೀದಿಗಳ ಮೇಲಿನ ತೆರಿಗೆ ಜಮೆಗೆ ಅನುಮತಿಸಿದ್ದಂತಹ ಅವಧಿಯಲ್ಲಿ 14 ವರ್ತಕರು ನೋಂದಣಿಯನ್ನು ರದ್ದುಗೊಳಿಸಿದ್ದರು ಅಥವಾ ನೋಂದಣಿಯನ್ನೇ ಮಾಡಿಸಿರಲಿಲ್ಲ ಎಂದೂ ಪತ್ತೆ ಹಚ್ಚಿದ್ದಾರೆ.
ಖರೀದಿಗಳನ್ನು ಮಾಡಿದ ವರ್ತಕರು ಕೋರಿದ್ದಂತಹ ಖರೀದಿಗಳ ಮೇಲಿನ ತೆರಿಗೆ ಜಮೆ ಮೊತ್ತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾರಾಟಗಳ ಮೇಲಿನ ತೆರಿಗೆ ಪಾವತಿಸಿದ್ದರು. ಇದರಿಂದಾಗಿ ಇಲಾಖೆಯು ಅನುಮತಿ ನೀಡಿದ್ದ 0.59 ಕೋಟಿ ಮೊತ್ತದಷ್ಟು ಖರೀದಿಗಳ ಮೇಲಿನ ತೆರಿಗೆ ಜಮೆಗೆ ಪ್ರಮಾಣಕ್ಕನುಗುಣವಾಗಿ ಘೋಷಿಸಿದ್ದ ಮಾರಾಟಗಳ ಮೇಲಿಕನ ತೆರಿಗೆ ಕೇವಲ 0.03 ಕೋಟಿ ಆಗಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಪ್ರಮಾಣಕ್ಕಗುನುಗುಣವಾಗಿ ಮಾರಾಟಗಳ ಮೇಲಿನ ತೆರಿಗೆಯನ್ನು ವಸೂಲು ಮಾಡದೆಯೇ ಖರೀದಿಗಳ ಮೇಲಿನ ತೆರಿಗೆ ಜಮೆಯನ್ನು ಅನುಮತಿಸಿದ್ದು 0.56 ಕೋಟಿ ಮೊತ್ತದಷ್ಟು ವರಮಾನ ನಷ್ಟಕ್ಕೆ ಕಾರಣವಾಗಿದೆ. ಅಲ್ಲದೆಯೇ 0.06 ಕೋಟಿ ಮೊತ್ತದಷ್ಟು ದಂಡ ಹಾಗೂ 0.53 ಕೋಟಿ ಮೊತ್ತದಷ್ಟು ಬಡ್ಡಿಯನ್ನು ವಿಧಿಸಬೇಕಿತ್ತು. ಇದೆಲ್ಲರ ಒಟ್ಟಾರೆ ಬಾಕಿ 1.15 ಕೋಟಿ ಆಗುತ್ತದೆ ಎಂದು ಸಿಎಜಿ ವರದಿ ವಿವರಿಸಿದೆ.
ಮಾರಾಟ ಮಾಡಿದ ವರ್ತಕರು ತಾವು ಖರೀದಿಯನ್ನು ಮಾಡಿದ ವರ್ತಕರಿಂದ ತೆರಿಗೆ ಸಂಗ್ರಹಿಸಿದ ಸಮಯದಲ್ಲಿ ನೋಂದಾಯಿತ ವರ್ತಕರಾಗಿರಲಿಲ್ಲ ಎಂದು ಪತ್ತೆ ಹಚ್ಚಿದ ಸಿಎಜಿ, ಈ ರೀತಿ ಸಂಗ್ರಹಿಸಲಾದ ಮೊತ್ತವು ಇ-ಎಫ್‌ಎಸ್‌ನಲ್ಲಿ ಪಾವತಿಸಿರಲಿಲ್ಲ ಎಂದೂ ಹೇಳಿದೆ.
‘ಯಾರಿಂದ ತೆರಿಗೆ ವರಮಾನವನ್ನು ವಸೂಲಾತಿ ಮಾಡಬೇಕು ಎಂಬುದನ್ನು ಹೊರತುಪಡಿಸಿದಂತೆ ಮಾರಾಟಗಳನ್ನು ಮಾಡಿದ ವರ್ತಕರು ಮಾರಾಟಗಳ ಮೇಲಿನ ತೆರಿಗೆಯನ್ನು ಪಾವತಿಸದಿದ್ದಲ್ಲಿ ಹಾಗೂ ಖರೀದಿಗಳನ್ನು ಮಾಡಿದ ವರ್ತಕರು ಖರೀದಿಗಳ ಮೇಲಿನ ತೆರಿಗೆ ಜಮೆ ಕೋರಿದಲ್ಲಿ ರಾಜ್ಯದ ರಾಜಸ್ವ ವರಮಾನವು ಕಳೆದುಹೋಗುತ್ತದೆ,’ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.
ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೆರಿಗೆದಾರರ ಹಣವನ್ನು ಅಪವ್ಯಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿಯೇ ಈಗ ಅಧಿಕಾರದಲ್ಲಿದ್ದರೂ ರಾಜಸ್ವ ವರಮಾನವನ್ನು ಕೊರೆದು ಹಾಕುವುದನ್ನು ತಡೆಯಲು ಈವರೆವಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಸಕ್ತ ಸಾಲಿನಲ್ಲಿಯೂ ರಾಜಸ್ವ ವರಮಾನ ಮತ್ತಷ್ಟು ಖೋತಾ ಆಗುವ ಸಾಧ್ಯತೆಗಳು ಹೆಚ್ಚಿವೆ.