ಬೆಂಗಳೂರು: ಕರ್ನಾಟಕ ಭೂ ಸುಧಾರಣೆ ಕಾಯ್ದೆ ಉಲ್ಲಂಘಿಸಿ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಡೆ ಅಧ್ಯಕ್ಷರಾಗಿರುವ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿಯು ಕ್ರಯಕ್ಕೆ ಪಡೆದುಕೊಂಡಿದ್ದ 131 ಎಕರೆ ಜಮೀನುಗಳನ್ನು ಅಸಿಂಧು ಎಂದು ಪುತ್ತೂರು ಉಪ ವಿಭಾಗದ ಹಿಂದಿನ ಸಹಾಯಕ ಆಯುಕ್ತರು 5 ವರ್ಷದ ಹಿಂದೆ ಹೊರಡಿಸಿದ್ದ ಆದೇಶವನ್ನು ಹಾಲಿ ಸಹಾಯಕ ಆಯುಕ್ತರು ರದ್ದುಪಡಿಸಿದ್ದಾರೆ.
ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಸುಗ್ರಿವಾಜ್ಞೆಯು 2020ರ ಜುಲೈ 13ರಂತೆ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ 1961ರ ಕಲಂ 79 ಎ, 79 ಬಿ ಮತ್ತು 79 ಸಿ ಯನ್ನು 1974ರ ಮಾರ್ಚ್ 1ರಿಂದ ಅನ್ವಯವಾಗುವಂತೆ ನಿರಸನಗೊಂಡಿರುವುದನ್ನು ಮುಂದಿಟ್ಟುಕೊಂಡು 5 ವರ್ಷದ ಹಿಂದೆ ಅಸಿಂಧು ಎಂದು ಹೊರಡಿಸಿದ್ದ ಆದೇಶವನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ ಯತೀಶ್ ಉಲ್ಲಾಳ್ ಅವರು ರದ್ದುಗೊಳಿಸಿದ್ದಾರೆ. 2020ರ ಆಗಸ್ಟ್ 14ರಂದು ತೆರೆದ ನ್ಯಾಯಾಲಯದಲ್ಲಿ ಈ ಆದೇಶವನ್ನು ಘೋಷಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ಭೂ ಸುಧಾರಣೆ ಕಾಯಿದೆ 79(ಎ), 79(ಬಿ) ಮತ್ತು 79(ಸಿ) ಉಲ್ಲಂಘಿಸಿ ಕ್ರಯಕ್ಕೆ ಪಡೆದಿರುವ ಕೃಷಿ ಜಮೀನುಗಳನ್ನ ಅಸಿಂಧು ಎಂದು ಘೋಷಿಸಿರುವ ಸಹಾಯಕ ಆಯುಕ್ತರು, ಕಂದಾಯ ದಾಖಲೆಗಳಲ್ಲಿ ಸರ್ಕಾರ ಎಂದು ನಮೂದಿಸಲು ಬೆಳ್ತಂಗಡಿ ತಾಲೂಕು ತಹಶೀಲ್ದಾರ್‌ಗೆ ಆದೇಶಿಸಬಹುದು ಎಂದು ಹಿಂದಿನ ಸಹಾಯಕ ಆಯುಕ್ತರ ಅಭಿಪ್ರಾಯವನ್ನು ಈಗಿನ ಸಹಾಯಕ ಆಯುಕ್ತರು ತಳ್ಳಿ ಹಾಕಿದ್ದಾರೆ.
‘ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ಕಂದಾಯ ಮೇಲ್ಮನವಿ ಸಂಖ್ಯೆ778/2015 ನ್ನು 2020ರ ಜೂನ್ 3ರಂದು ಹೊರಡಿಸಿದ ಆದೇಶದಂತೆ ನಿಯಮಾನುಸಾರ ಪಹಣಿ ದಾಖಲಿಸುವ ಕುರಿತು ಅಗತ್ಯ ಕ್ರಮ ವಹಿಸಬೇಕು,’ ಎಂದು ಬೆಳ್ತಂಗಡಿ ತಹಶೀಲ್ದಾರ್‌ಗೆ ಸೂಚಿಸಿ ಆದೇಶಿಸಿದ್ದಾರೆ.
ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಸುಗ್ರೀವಾಜ್ಞೆ 2020ರ ಅನ್ವಯ ಕಾಯ್ದೆಯ ಸೆಕ್ಷನ್ 79 ಬಿ ತೆಗೆದು ಹಾಕಲಾಗಿರುವುದರಿಂದ ದೂರಿನಲ್ಲಿ ನಮೂದಿಸಿರುವ ಜಮೀನುಗಳನ್ನು ಪ್ರತಿವಾದಿಗಳು ಖರೀದಿಸುವಲ್ಲಿ ಕೆ ಎಲ್ ಆರ್ ಕಾಯ್ದೆಯ ಸೆಕ್ಷನ್ 79 ಬಿ ಉಲ್ಲಂಘನೆ ಆಗಿದೆಯೆಂದು ಕೆಎಲ್‌ಆರ್ ಕಾಯ್ದೆಯ ಸೆಕ್ಷನ್ 83ರ ಅಡಿಯಲ್ಲಿ ದಾಖಲು ಮಾಡಿರುವ ಪ್ರಕರಣವು ನ್ಯಾಯ ಸಮ್ಮತವೇ , ಸೆಕ್ಷನ್ 79 ರ ಅಡಿ ಆರೋಪಿಸಲಾದ ಉಲ್ಲಂಘನೆ ಕುರಿತಂತೆ ಈ ಪ್ರಾಧಿಕಾರವು ಪ್ರಕರಣದ ವಿಚಾರಣೆ ನಡೆಸಬಹುದೇ ಎಂಬ ಅಂಶವನ್ನು ಚರ್ಚಿಸಿತ್ತು.
ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಸುಗ್ರಿವಾಜ್ಞೆ ಯು 2020ರ ಜುಲೈ 13ರಂತೆ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ 1961ರ ಕಲಂ 79 ಎ, 79 ಬಿ ಮತ್ತು 79 ಸಿ ಯನ್ನು 1974ರ ಮಾರ್ಚ್ 1ರಿಂದ ಅನ್ವಯವಾಗುವಂತೆ ನಿರಸನಗೊಳಿಸಲಾಗಿದೆ. ಆದ್ದರಿಂದ ಈ ಕಾಯ್ದೆಯು ಪ್ರಕಟವಾದ ದಿನಾಂಕದಂದು ಇತ್ಯರ್ಥಕ್ಕೆ ಬಾಕಿ ಇರುವ ಸೆಕ್ಷನ್ 79 ಎ, 79 ಬಿ ಮತ್ತು 79 ಸಿ ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ತತ್ಪರಿಣಾಮವಾಗಿ ಕಾನೂನುಯುತವಾಗಿ ಮುಕ್ತಾಯಗೊಳ್ಳುತ್ತದೆ ಎಂದು ಸಹಾಯಕ ಆಯುಕ್ತ ಡಾ ಯತೀಶ್ ಉಲ್ಲಾಳ್ ಅವರು ತೀರ್ಮಾನ ಕೈಗೊಂಡಿರುವುದು ಆದೇಶದಿಂದ ತಿಳಿದು ಬಂದಿದೆ.
ಕಾಯ್ದೆ ಉಲ್ಲಂಘಿಸಿ ಕ್ರಯಕ್ಕೆ ಪಡೆದುಕೊಂಡಿದ್ದ ಜಮೀನಿನ ಪರವಾಗಿ ಸಮರ್ಥನೆ ಮಾಡಿಕೊಂಡಿದ್ದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಡೆ ಅವರಿಗೆ ಹಿಂದಿನ ಸಹಾಯಕ ಆಯುಕ್ತ ಬಸವರಾಜು ಅವರು ಹೊರಡಿಸಿದ್ದ ಆದೇಶದಿಂದ ಹಿನ್ನಡೆಯಾಗಿತ್ತು. ಈ ಆದೇಶವನ್ನು ಆಗಲೇ ಜಾರಿಗೊಳಿಸಿದ್ದರೆ 131 ಎಕರೆ ಜಮೀನು ಸರ್ಕಾರದ ಸುಪರ್ದಿಗೆ ಬರಲಿತ್ತು. ಆದರೆ ಬಸವರಾಜು ಅವರು ಹೊರಡಿಸಿದ್ದ ಆದೇಶ ಜಾರಿಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಧರ್ಮಸ್ಥಳದ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ, ಕರ್ನಾಟಕ ಭೂ ಸುಧಾರಣೆ ಕಾಯ್ದೆ ಉಲ್ಲಂಘಿಸಿ ಕೃಷಿ ಜಮೀನು ಹೊಂದಿದೆ ಎಂದು ಗುರುವಾಯನಕೆರೆಯ ರಂಜನ್ರಾವ್ ಎಂಬುವರು ಪುತ್ತೂರು ವಿಭಾಗದ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಮೇ 18, 2015ರಿಂದ ಜೂನ್ 6, 2015ರವರೆಗೆ ಪ್ರಕರಣದ ವಿಚಾರಣೆ ನಡೆದಿತ್ತು.
ಪ್ರಕರಣದ ಹಿನ್ನೆಲೆ
ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕುವೆಟ್ಟು ಗ್ರಾಮದ 71 ವಿವಿಧ ಸರ್ವೆ ನಂಬರ್ಗಳಲ್ಲಿ ವಿವಿಧ ವ್ಯಕ್ತಿಗಳಿಂದ 131 ಎಕರೆ ಕೃಷಿ ಜಮೀನನ್ನು ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ ಕ್ರಯ ಮಾಡಿಕೊಂಡಿತ್ತು.
ಕರ್ನಾಟಕ ಭೂ ಸುಧಾರಣೆ ಕಾಯಿದೆ ಕಲಂ 63ರ ಉಪ ಕಲಂ(7)ರಲ್ಲಿ ಉಲ್ಲೇಖಿಸಿದ್ದ ಒಂದು ಸಂಸ್ಥೆ ಅಥವಾ ಸಂಘ ಅಥವಾ ವಿಶ್ವಸ್ಥ ಸಂಸ್ಥೆ ಅಲ್ಲದ ಒಂದು ಶೈಕ್ಷಣಿಕ, ಧಾರ್ಮಿಕ ಅಥವಾ ಧರ್ಮಾರ್ಥ ಸಂಸ್ಥೆ, ಸಂಘ ಅಥವಾ ವಿಶ್ವಸ್ಥ ಸಂಸ್ಥೆಯು ಸ್ವತ್ತನ್ನ ಹೊಂದಲು ಸಮರ್ಥವುಳ್ಳ ಯಾವುದೇ ಭೂಮಿ ಹೊಂದಲು ಕಾನೂನುಬದ್ಧವಾಗಿರತಕ್ಕದ್ದಲ್ಲ ಎಂದು ಸಹಾಯಕ ಆಯುಕ್ತರು, ಅಭಿಪ್ರಾಯ ಪಟ್ಟಿದ್ದರು.
ಮೈಸೂರು ಉಪ ವಿಭಾಗಾಧಿಕಾರಿಗಳ ಫೆಬ್ರುವರಿ 20, 1993ರ ನಡವಳಿಯಂತೆ ಕೃಷಿ ಜಮೀನನ್ನು ಕರ್ನಾಟಕ ಭೂ ಸುಧಾರಣೆ ಕಾಯಿದೆ ಕಲಂ 80ರಂತೆ ಖರೀದಿಸಿರುವುದನ್ನ ಕಲಂ 83ರ ಅಡಿಯಲ್ಲಿ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿಯಮಬಾಹಿರವಾಗಿ ಹೊರಡಿಸಿದ್ದ ಮ್ಯುಟೇಷನ್ ಆದೇಶವನ್ನು ಸಹಾಯಕ ಆಯುಕ್ತರು ರದ್ದುಗೊಳಿಸಿದ್ದರು.
ಕರ್ನಾಟಕ ಭೂ ಸುಧಾರಣೆ 1961ರ ಕಲಂ 63(7)ರ ಅನ್ವಯ ಸಂಘ ಸಂಸ್ಥೆಗಳು ತಿದ್ದುಪಡಿ ಕಾಯಿದೆಯು ಜಾರಿಗೆ ಬರುವ ಮುನ್ನ ಹೊಂದಿರುವ ಕೃಷಿ ಜಮೀನಿನಲ್ಲಿ 20 ಯುನಿಟ್ಗಳವರೆಗೆ ಇಟ್ಟುಕೊಳ್ಳಲು ಅವಕಾಶವಿದೆ. ಆದರೆ, ಈ ಕಲಂನಂತೆ ಹೊಸದಾಗಿ ಕೃಷಿ ಜಮೀನನ್ನ ಸೇರ್ಪಡೆ ಮಾಡಲು ಅವಕಾಶ ಇಲ್ಲ. ಈ ಕಾಯಿದೆ ಕಲಂ 80 ರಂತೆಯೂ ಸಂಘ ಸಂಸ್ಥೆಗಳು ಕೃಷಿ ಜಮೀನು ಖರೀದಿಸಲು ಅವಕಾಶ ಇಲ್ಲ ಎಂದು ಪುತ್ತೂರಿನ ಸಹಾಯಕ ಆಯುಕ್ತರು ಆದೇಶದಲ್ಲಿ ಹೇಳಿದ್ದರು.
ಡಿ.ವೀರೇಂದ್ರ ಹೆಗ್ಡೆ ಅಧ್ಯಕ್ಷರಾಗಿರುವ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿಗೆ ಕೃಷಿ ಜಮೀನನ್ನು ಉಪ ನೋಂದಣಾಧಿಕಾರಿಗಳು ನೋಂದಾಯಿಸುವ ಮೊದಲು ಕಾಯಿದೆ ಮತ್ತು ನಿಯಮಗಳನ್ನು ಪಾಲಿಸದೆ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ನೋಂದಣಿ ಕ್ರಯಪತ್ರದಂತೆ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿಗೆ ಮ್ಯುಟೇಷನ್ ಆದೇಶವನ್ನು ಹೊರಡಿಸುವ ಮುನ್ನ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಕರ್ನಾಟಕ ಭೂ ಸುಧಾರಣೆ ಕಾಯಿದೆ 1961/74 ಕಲಂ 79(ಬಿ)ಯಲ್ಲಿನ ಅಂಶಗಳನ್ನ ಮನವರಿಕೆ ಮಾಡಿಕೊಂಡಿಲ್ಲ. ಮೈಸೂರಿನ ಉಪ ವಿಭಾಗಾಧಿಕಾರಿಗಳು ಫೆಬ್ರುವರಿ 20, 1993ರಲ್ಲಿ ಬರೆದಿದ್ದ ಪತ್ರಕ್ಕೆ ಸಂಬಂಧಪಟ್ಟವರಿಂದ ಯಾವುದೇ ಸ್ಪಷ್ಟೀಕರಣ ಪಡೆಯದೇ ನಿಯಮ ಉಲ್ಲಂಘಿಸಿ ಖಾತೆ ಮಾಡಿಕೊಟ್ಟಿರುವುದು ಸ್ಪಷ್ಟವಾಗಿದೆ ಎಂದು ಸಹಾಯಕ ಆಯುಕ್ತರು ಆದೇಶದಲ್ಲಿ ವಿವರಿಸಿದ್ದರು.
ಧರ್ಮಸ್ಥಳದ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ, ಸೊಸೈಟಿ ನೋಂದಣಿ ಕಾಯ್ದೆ ಅನ್ವಯ ನೋಂದಣಿ ಆಗಿದೆ. ಈ ಸಂಸ್ಥೆ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನ ನಡೆಸುತ್ತಿದೆ. ಸಾರ್ವಜನಿಕರಿಗೆ ಉಚಿತ ಶಿಕ್ಷಣ ಮತ್ತು ಗ್ರಾಮಾಭಿವೃದ್ದಿ ಯೋಜನೆ ಅಡಿಯಲ್ಲಿ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನ ನಡೆಸುತ್ತಿರುವ ಹಿನ್ನಲೆಯಲ್ಲಿ ಈ ಸಂಸ್ಥೆ ಮೈಸೂರು ನಗರದಲ್ಲಿ ಸಾಮಾಜಿಕ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿತ್ತು.
ಈ ಸಂಸ್ಥೆಗೆ ಯಾವುದೇ ಕೃಷಿ ಭೂಮಿ ಇಲ್ಲ. ಮತ್ತು ಕೃಷಿ ಭೂಮಿಯಿಂದ ಬರುವ ಉತ್ಪನ್ನ ಹಾಗೂ ಆದಾಯವನ್ನು ಸಂಸ್ಥೆಯ ಧೈಯೋದ್ದೇಶಕ್ಕೆ ಉಪಯೋಗಿಸುವುದರಿಂದ ಈ ಸಂಸ್ಥೆಗೆ ಕೃಷಿ ಭೂಮಿ ಹೊಂದಲು ಅನುಮತಿ ನೀಡಬೇಕು ಎಂದು ಸಂಸ್ಥೆ ಅಧ್ಯಕ್ಷ ಡಿ.ವೀರೇಂದ್ರ ಹೆಗ್ಡೆ ಮೈಸೂರು ಉಪ ವಿಭಾಗದ ಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದನ್ನು ಸ್ಮರಿಸಬಹುದು.
ಈ ಅರ್ಜಿಯನ್ವಯ ಕೆಲ ಷರತ್ತುಗಳನ್ನು ವಿಧಿಸಿ ಫೆಬ್ರುವರಿ 20,1993ರಂದು ಜಮೀನು ಹೊಂದಲು ಶಿಫಾರಸ್ಸು ಮಾಡಿದ್ದರು. ಹಾಗೆಯೇ, ಕರ್ನಾಟಕ ಮೇಲ್ಮನವಿಗಳ ಪ್ರಾಧಿಕಾರ, ಕರ್ನಾಟಕ ಲಾ ಜರ್ನಲ್ 49ರಲ್ಲಿ ನೀಡಿರುವ ತೀರ್ಪು, ಕರ್ನಾಟಕ ಭೂ ಸುಧಾರಣೆ ಕಾಯಿದೆ 1961ರ ವಿಧಿ 63(7)ರ ಪ್ರಕಾರ ಕೃಷಿ ಭೂಮಿ ಹೊಂದಲು ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಅವಕಾಶವಿದೆ.
ಅಂತಹ ಸಂಸ್ಥೆಯು ಜಮೀನಿನಿಂದ ಬಂದ ಸಂಪೂರ್ಣ ಉತ್ಪನ್ನವನ್ನ ಸಂಸ್ಥೆಯ ಧೈಯೋದ್ದೇಶಕ್ಕೆ ಮಾತ್ರ ಉಪಯೋಗಿಸಿದಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ವಿಧಿ 79(ಬಿ) ಉಲ್ಲಂಘನೆ ಆಗುವುದಿಲ್ಲ. ಹಾಗೆಯೇ ಅಂತಹ ಸಂಸ್ಥೆಯು 20 ಯುನಿಟ್ ಕೃಷಿ ಜಮೀನು ಹೊಂದಲು ಅವಕಾಶವಿದೆ ಎಂದು ಮೈಸೂರು ಉಪ ವಿಭಾಗಾಧಿಕಾರಿ, ಶಿಫಾರಸ್ಸಿನ ನಡವಳಿಯಲ್ಲಿ ಹೇಳಿದ್ದನ್ನು ಸ್ಮರಿಸಬಹುದು.