ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ವಿಶ್ವನಾಥ್ ಪಿ ಹಿರೇಮಠ್ ಅವರಿಗಷ್ಟೇ ಸೀಮಿತಗೊಳಿಸಿ ಗ್ರೂಪ್ -ಎ (ಕೆಎಎಸ್ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ 49 ಕೆಎಎಸ್ ಅಧಿಕಾರಿಗಳು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಜಾರಿಗೊಳಿಸಿದ್ದ ನೋಟೀಸ್‌ಗೆ 8 ದಿನಗಳಾದರೂ ರಾಜ್ಯ ಸರ್ಕಾರ ಮತ್ತು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಿಲ್ಲ.
49 ಕೆಎಎಸ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಹೈಕೋರ್ಟ್ ಈ ಸಂಬಂಧ ನವೆಂಬರ್ 12ರಂದು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಸದಿರುವ ವಿಚಾರ ತಿಳಿದು ಬಂದಿದೆ.
ಈ ಅರ್ಜಿಗೆ ಸಂಬಂಧಿಸಿದಂತೆ ಎದುರುದಾರರಿಗೆ ಆಕ್ಷೇಪಣೆ ಸಲ್ಲಿಸುವ ಇರಾದೆ ಇದ್ದರೆ ಮುಂದಿನ ದಿನಾಂಕದೊಳಗೆ ಸಲ್ಲಿಸಲು ಕಾಲಾವಕಾಶ ನೀಡಿದ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ.
4ನೇ ಎದುರುದಾರ ವಿಶ್ವನಾಥ್ ಹಿರೇಮಠ್ ಅವರು ಕೆಎಎಸ್ ಗ್ರೂಪ್-ಎ ವೃಂದದಿಂದ ತಮ್ಮ ಮೂಲ ಪದವಿಗೆ ಮರಳಬೇಕು. ಇಲ್ಲದಿದ್ದರೆ ಅವರ ಪದವಿಗೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಅರ್ಜಿದಾರರ ಪರ ವಕೀಲ ನಟರಾಜು ಟಿ ಅವರ ಪರವಾಗಿ ಹಿರಿಯ ವಕೀಲ ಎಚ್ ಎನ್ ಶೇಷಾದ್ರಿ ಅವರು ವಾದ ಮಂಡಿಸಿದರು.
ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಅಧಿಕಾರಿಗಳ ಪಟ್ಟಿಯಲ್ಲಿ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರ ಆಪ್ತ ಕಾರ್ಯದರ್ಶಿ ಸತೀಶ್‌ಕುಮಾರ್, ಕಂದಾಯ ಸಚಿವ ಆರ್ ಅಶೋಕ್ ಅವರ ಆಪ್ತ ಕಾರ್ಯದರ್ಶಿ ಡಾ ಆರ್ ಪ್ರಶಾಂತ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರ ಆಪ್ತ ಕಾರ್ಯದರ್ಶಿ ಪಿ ಎಸ್ ಕಾಂತರಾಜು, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ನಾಗರಾಜ್ ಸಿಂಗ್ರೇರ್ ಕೂಡ ಇದ್ದಾರೆ.
ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಯಲ್ಲಿ (12040/2020(ಎಸ್-ಕೆಎಟಿ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರನ್ನು ಮೊದಲ ಪ್ರತಿವಾದಿಯನ್ನಾಗಿಸಿದ್ದರೆ, ಡಿಪಿಎಆರ್‌ನ ಪ್ರಧಾನ ಕಾರ್ಯದರ್ಶಿ ಹೇಮಲತಾ, ಕೆಪಿಎಸ್ಸಿ ಕಾರ್ಯದರ್ಶಿ ಮತ್ತು ವಿಶ್ವನಾಥ್ ಹಿರೇಮಠ್ ಅವರನ್ನೂ ಪ್ರತಿವಾದಿಯನ್ನಾಗಿಸಲಾಗಿದೆ.
ಪ್ರಕರಣದ ಹಿನ್ನೆಲೆ
1998, 99 ಮತ್ತು 2004ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ್ದ ಯಾವ ತೀರ್ಪನ್ನು ಪಾಲಿಸದೇ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರವು, ಲಾಕ್‌ಡೌನ್ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ (1)ಯಾಗಿರುವ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಸೀಮಿತಗೊಳಿಸಿ 2020ರ ಜುಲೈ 13ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ರೂಪ್-ಎ (ಕೆಎಎಸ್ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿತ್ತು.
ವಿಶ್ವನಾಥ ಪಿ ಹಿರೇಮಠ ಅವರು ಸೇರಿದಂತೆ ಒಟ್ಟು 5 ಅಭ್ಯರ್ಥಿಗಳನ್ನು 2009ರ ಮಾರ್ಚ್ 19ರಂದು ಶಾಖಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು. ನಂತರದಲ್ಲಿ ಇವರು ಕೆಎಟಿಯಲ್ಲಿ ಸಲ್ಲಿಸಿದ್ದ ಅರ್ಜಿ( ಸಂಖ್ಯೆ 2121/2010)ಗೆ ಸಂಬಂಧಿಸಿದಂತೆ 2017ರ ಡಿಸೆಂಬರ್ 15ರಂದು ತೀರ್ಪು ನೀಡಿತ್ತು. ವಿಶೇಷವೆಂದರೆ ಕೆಎಟಿಯಲ್ಲಿ ಈ ಅರ್ಜಿ 10 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಆಕ್ಷೇಪಣೆಯನ್ನೇ ಸಲ್ಲಿಸಿರಲಿಲ್ಲ.
ಅಲ್ಲದೆ ಪ್ರಕರಣವು ಕೆಎಟಿಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಎಟಿಯ ಆಡಳಿತಾತ್ಮಕ ಸದಸ್ಯರೊಬ್ಬರು ಆಕ್ಷೇಪಣೆ ಎತ್ತಿದ್ದರು. ಹಾಗೆಯೇ ಅವರು ರಜೆ ಮೇಲೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಅಂದಿನ ನ್ಯಾಯಾಂಗ ಸದಸ್ಯರೋರ್ವರು ಸರ್ಕಾರ ಆಕ್ಷೇಪಣೆ ಸಲ್ಲಿಸದೇ ಇದ್ದರೂ ಈ ಪ್ರಕರಣದಲ್ಲಿ ವಿಶ್ವನಾಥ ಪಿ ಹಿರೇಮಠ ಅವರಿಗೆ ಗ್ರೂಪ್ ಎ ಹುದ್ದೆಯನ್ನು ನೀಡಲು ತೀರ್ಪು ನೀಡಿದ್ದರು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಒಬ್ಬ ಪ್ರತಿವಾದಿಯಾಗಿದ್ದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೇಲ್ಮನವಿ ಸಲ್ಲಿಸಿರಲಿಲ್ಲ.
2017ರಲ್ಲಿ ಕೆಎಟಿ ನೀಡಿದ್ದ ತೀರ್ಪು 3 ವರ್ಷಗಳಾದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಅಲ್ಲದೆ ಸರ್ಕಾರವೂ ಮೇಲ್ಮನವಿಯನ್ನೂ ಸಲ್ಲಿಸಿರಲಿಲ್ಲ. ಈ ಮಧ್ಯೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಶ್ವನಾಥ ಹಿರೇಮಠ ಅವರು 2019ರಲ್ಲಿ ಸರ್ಕಾರದ ವಿರುದ್ಧ ಕರ್ನಾಟಕ ನ್ಯಾಯ ಮಂಡಳಿಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ(104/2019) ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಬಾಕಿ ಇದೆ. ಇದರ ಮಧ್ಯೆಯೇ ರಾಜ್ಯ ಸರ್ಕಾರ ಇವರಿಗೆ ಗ್ರೂಪ್ ಎ ಹುದ್ದೆಯನ್ನು ಕರುಣಿಸಿರುವುದು ಸಂಶಯಗಳಿಗೆ ಕಾರಣವಾಗಿತ್ತು.
ಅಲ್ಲದೆ ಇದೇ ಪ್ರಕರಣದಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಅವರು ರಾಜ್ಯ ಸರ್ಕಾರವೇ ಹೊರಡಿಸಿರುವ ರೋಸ್ಟರ್ ಬಿಂದುವಿನ ಆದೇಶ ಮತ್ತು ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ನೀಡಿರುವ ಆದೇಶಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದರು.
ಗ್ರೂಪ್ ಎ ಹುದ್ದೆಯನ್ನು ಕರುಣಿಸಿರುವ ರಾಜ್ಯ ಸರ್ಕಾರ, ಕೆಪಿಎಸ್‌ಸಿಯ ನೇಮಕಾತಿ ಅಧಿಸೂಚನೆ 2004ರ ನವೆಂಬರ್ 4ರ ಪ್ರಕಾರ ಕೆಎಎಸ್(ಕಿರಿಯ ಶ್ರೇಣಿ) ಹುದ್ದೆಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಅನ್ವಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಅನ್ವಯಿಸಿ ಗ್ರೂಪ್ ಎ ಹುದ್ದೆಯನ್ನು ಕರುಣಿಸಿತ್ತು.
1998, 99 ಹಾಗೂ 2004ನೇ ಸಾಲಿನಲ್ಲಿ ಒಟ್ಟು 60 ಕೆಎಎಸ್ ಸಹಾಯಕ ಆಯುಕ್ತರ ಹುದ್ದೆಗಳು ಲಭ್ಯವಿದ್ದವು. ಇದರಲ್ಲಿ ಸಂಖ್ಯಾತಿರಿಕ್ತ ಹುದ್ದೆಯನ್ನು ಸೃಜಿಸಲಾಗಿತ್ತು. ಆದರೆ ವಿಶ್ವನಾಥ ಪಿ ಹಿರೇಮಠ ಅವರು ಈ ಹುದ್ದೆಯನ್ನು ಪಡೆಯಲು ರೋಸ್ಟರ್ ಬಿಂದುವಾಗಲಿ, ಅರ್ಹತೆಯನ್ನಾಗಲಿ ಹೊಂದಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.