ಬೆಂಗಳೂರು; ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸರ್ಕಾರವೇ ಒಂದು ತಿಂಗಳ ಹಿಂದೆಯಷ್ಟೇ ಸ್ಪಷ್ಟಪಡಿಸಿದ್ದರೂ ಶೀಘ್ರವೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಹೇಳಿದ್ದಾರೆ.
ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನ ಸದಸ್ಯ ಬಿಜೆಪಿಯ ಎನ್ ರವಿಕುಮಾರ್ ಅವರು 2020ರ ಸೆ. 23ರಂದು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದ ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವನೆಯೇ ಇಲ್ಲ ಎಂದಿದ್ದರು.
ಲಿಖಿತ ಉತ್ತರ ನೀಡಿದ ಒಂದೇ ತಿಂಗಳ ಅಂತರದಲ್ಲಿ ಕನ್ನಡ ಸಂಸ್ಕೃತಿ ಸಚಿವ ಸಿ ಟಿ ರವಿ ಅವರು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ ಎಂದು ಟ್ವೀಟ್ ಮಾಡಿರುವುದು ಸರ್ಕಾರದ ನಿಲುವನ್ನೇ ಅಣಕಿಸಿದಂತಾಗಿದೆ.
ವಿವಾಹದ ಉದ್ದೇಶಕ್ಕಾಗಿ ಮತಾಂತರವನ್ನು ನಿಷೇಧಿಸುವ ಕಾನೂನು ತರಲಾಗುವುದು ಎಂದು ಸಿ ಟಿ ರವಿ ಅವರು ಸಮರ್ಥಿಸಿಕೊಂಡಿದ್ದರಾದರೂ, ಮತಾಂತರದ ಕುರಿತು ಸರ್ಕಾರದ ಮುಂದೆ ಯಾವ ಪ್ರಸ್ತಾವನೆಯೇ ಇಲ್ಲ ಎಂದು ಸರ್ಕಾರ ಉತ್ತರಿಸಿದ ನಂತರವೂ ಟ್ವೀಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಸಿ ಟಿ ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗಷ್ಟೇ ಅಧಿಕಾರವಹಿಸಿಕೊಂಡಿದ್ದರು. ಅಲ್ಲದೆ ಬಿಜೆಪಿ ಹೈಕಮಾಂಡ್ ಕರ್ನಾಟಕ ಸೇರಿ ದಕ್ಷಿಣ ಭಾರತದ ಉಸ್ತುವಾರಿಯನ್ನೂ ನೀಡಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಹೇಳಿರುವ ಮಾತು ಮುನ್ನೆಲೆಗೆ ಬಂದಿದೆ.
ಸಿ ಟಿ ರವಿ ಹೇಳಿರುವುದೇನು?
ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಕರ್ನಾಟಕ ಸರ್ಕಾರ ಕೂಡ ವಿವಾಹದ ಉದ್ದೇಶಕ್ಕಾಗಿ ಮತಾಂತರವನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲಿದೆ. ಜಿಹಾದಿಗಳು ನಮ್ಮ ಸಹೋದರಿಯರ ಘನತೆಯನ್ನು ಹಾಳು ಮಾಡುವಾಗ ನಾವು ಮೌನವಾಗಿರುವುದಿಲ್ಲ. ಮತಾಂತರದ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಮತ್ತು ತ್ವರಿತ ಶಿಕ್ಷೆ ವಿಧಿಸಬೇಕಾಗಿದೆ,’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ , ಕೇವಲ ಮದುವೆ ಉದ್ದೇಶಕ್ಕಾಗಿ ಮತಾಂತರ ಆಗುವುದನ್ನು ಒಪ್ಪಲಾಗದು ಎಂದು ತೀರ್ಪು ನೀಡಿತ್ತು. ತಮ್ಮ ಮದುವೆ ಬಳಿಕ ಮೂರು ತಿಂಗಳ ರಕ್ಷಣೆ ನೀಡುವಂತೆ ಮನವಿ ಮಾಡಿದ ಜೋಡಿಯೊಂದರ ಅರ್ಜಿಗೆ ಮಧ್ಯಪ್ರವೇಶಿಸಲು ನಿರಾಕರಿಸುತ್ತಾ ಕೋರ್ಟ್ ಈ ತೀರ್ಪು ನೀಡಿದ್ದನ್ನು ಸ್ಮರಿಸಬಹುದು.
ಕೇಂದ್ರ ಸರ್ಕಾರ ‘ಮತಾಂತರ ನಿಷೇಧ ಕಾಯ್ದೆ’ಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯ 2015ರಲ್ಲೇ ಹೇಳಿತ್ತು. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ವಿಷಯ ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಕಾಯ್ದೆ ಜಾರಿಗೊಳಿಸಲು ಸಾದ್ಯವಿಲ್ಲ ಎಂದು ಕಾನೂನು ಸಚಿವಾಲಯ ಹೇಳಿದ್ದನ್ನು ಸ್ಮರಿಸಬಹುದು.
ಮತಾಂತರದ ವಿಷಯದ ಬಗ್ಗೆ ಸಂಸತ್‌ನಲ್ಲಿ ತೀವ್ರ ಚರ್ಚೆ ನಡೆದಾಗ, ಮತಾಂತರ ನಿಷೆಧ ಕಾಯ್ದೆ ಜಾರಿಗೊಳಿಸುವ ಸಂಬಂಧ ಗೃಹ ಇಲಾಖೆ, ಕಾನೂನು ಸಚಿವಾಲಯದ ಸಲಹೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಸಚಿವಾಲಯ, ಮತಾಂತರದ ವಿಷಯ ಸಂಪೂರ್ಣವಾಗಿ ರಾಜ್ಯಗಳಿಗೆ ಸಂಬಂಧಿಸಿರುವ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಕಾನೂನು ತರಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಒಡಿಶಾ ಹಾಗೂ ಮಧ್ಯಪ್ರದೇಶದಲ್ಲಿ ಜಾರಿಗೆ ತರಲಾಗಿದ್ದ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ 1977ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿರುವ ಕಾನೂನು ಸಚಿವಾಲಯ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದರ ಸಂಬಂಧ ರಾಜ್ಯಸರ್ಕಾರದ ಪರಮಾಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು ಎಂದು ಹೇಳಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ವಿ.ಹೆಚ್.ಪಿ ನಡೆಸಿದ್ದ ಘರ್ ವಾಪಸಿ ಕಾರ್ಯಕ್ರಮದಿಂದಾಗಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯುತ್ತಿದೆ.