ಬೆಂಗಳೂರು; ಸುಲಿಗೆ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ಧ ದಾಖಲಾಗಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸದೇ, ತನಿಖೆಯನ್ನೂ ನಡೆಸದ ದೂರರ್ಜಿಯನ್ನು ಏಕಾಏಕೀ ಮುಕ್ತಾಯಗೊಳಿಸಿದ್ದ ಶೇಷಾದ್ರಿಪುರಂ ಠಾಣೆಯ ಇನ್ಸ್‌ಪೆಕ್ಟರ್ ಎಂ ಎಲ್ ಕೃಷ್ಣಮೂರ್ತಿ ಅವರ ವಿರುದ್ಧ ಇದೀಗ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ದಾಖಲಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ. ಐಪಿಸಿ 217 ಅಡಿಯಲ್ಲಿ ಪರಿಷತ್ ದಾಖಲಿಸಿದ್ದ ದೂರನ್ನಾಧರಿಸಿ ಬಿ ವೈ ವಿಜಯೇಂದ್ರ, ಶಶಿಧರ್ ಮರಡಿ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸದೇ ಕಾನೂನಿನ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ ಎಂದು ಖಾಸಗಿ ದೂರಿನಲ್ಲಿ ವಿವರಿಸಲಾಗಿದೆ.
ಫಕ್ರುಮಾಜಾ ಮತ್ತು ಜಾರ್ಖಂಡ್ ಸರ್ಕಾರದ ವಿರುದ್ಧದ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಮತ್ತು ಇನ್ಸ್‌ಪೆಕ್ಟರ್ ಕೆಳಗಿನ ಹಂತದ ಪೊಲೀಸ್ ಅಧಿಕಾರಿ ವಿರುದ್ಧ ಪೂರ್ವಾನುಮತಿ ಅಗತ್ಯವಿಲ್ಲ ಎಂದು 2014ರ ಪ್ರಕರಣವನ್ನು ಉಲ್ಲೇಖಿಸಿರುವ ಜನಾಧಿಕಾರ ಸಂಘರ್ಷ ಪರಿಷತ್, ಎಂ ಎಲ್ ಕೃಷ್ಣಮೂರ್ತಿ ವಿರುದ್ಧ ಖಾಸಗಿ ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ವಾದವನ್ನು ಮುಂದೊಡ್ಡಿದೆ.
ಅಲ್ಲದೆ ಲಲಿತಕುಮಾರಿ ಉತ್ತರ ಪ್ರದೇಶ ವಿರುದ್ಧದ ಪ್ರಕರಣ(2014), ವಿನೀತ್ ನಾರಾಯಣ್ ಮತ್ತು ಭಾರತ ಸರ್ಕಾರದ ವಿರುದ್ಧದ ಪ್ರಕರಣ (1998), ವಿಸಾಕ ವಿ ಮತ್ತು ರಾಜಸ್ಥಾನ ಸರ್ಕಾರ(1997), ಕೇರಳ ಸರ್ಕಾರಮಾರ್ ಅಪರೇಮ್ ಕುರಿ ಕಂಪನಿ ಲಿಮಿಟೆಡ್ (2012), ಯುಕೋ ಬ್ಯಾಂಕ್ ಮತ್ತು ದೀಪಕ್ ದೇಬ್ರಮಾ(2016), ಅನಿಲ್‌ಕುಮಾರ್ ಮತ್ತಿತರರು ಮತ್ತು ಎಂ ಕೆ ಅಯ್ಯಪ್ಪ (2013) ಸೇರಿದಂತೆ ಒಟ್ಟು 10 ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪನ್ನು ಉಲ್ಲೇಖಿಸಿದೆ.
ವಿಜಯೇಂದ್ರ ಮತ್ತಿತರರ ವಿರುದ್ಧ ದಾಖಲಾತಿಗಳ ಸಮೇತ ದೂರು ಸಲ್ಲಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ಗೆ 2020ರ ಅಕ್ಟೋಬರ್ 5ರಂದು ಶೇಷಾದ್ರಿಪುಂರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಿಂಬರಹ ನೀಡಿದ್ದನ್ನು ಸ್ಮರಿಸಬಹುದು.
ಹಿಂಬರಹದಲ್ಲೇನಿತ್ತು?
ಚಂದ್ರಕಾಂತ್ ರಾಮಲಿಂಗಂ ಅವರನ್ನು ವಿಚಾರಣೆ ಮಾಡಿ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದು ಜನಾಧಿಕಾರ ಸಂಘರ್ಷ ಪರಿಷತ್ ಬಗ್ಗೆ ಚಂದ್ರಕಾಂತ್ ರಾಮಲಿಂಗಂರವರಿಗೆ ಪರಿಚಯವಿಲ್ಲ. ಆದರ್ಶ ಐಯ್ಯರ್, ಪ್ರಕಾಶ್‌ಬಾಬು, ವಿಶ್ವನಾಥ್ ಅವರು ಈ ವಿಚಾರವಾಗಿ ನನ್ನನ್ನು ಸಂಪರ್ಕಿಸಿಲ್ಲ. ಜನಾಧಿಕಾರ ಸಂಘರ್ಷ ಪರಿಷತ್‌ರವರು ಕೊಟ್ಟಿರುವ ಅರ್ಜಿ, ಪವರ್ ಟಿ ವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಆಧಾರದ ಮೇಲೆ ನೀಡಿರುತ್ತಾರೆ. ಆದರೆ ಇವರು ದೂರಿನಲ್ಲಿ ತಿಳಿಸಿರುವ ಅಂಶಗಳು ಸತ್ಯಕ್ಕೆ ದೂರವಾಗಿರುತ್ತದೆ ಎಂದು ನುಡಿದಿರುತ್ತಾರೆ. ಹಾಗೂ ನನಗೆ ಆದ ತೊಂದರೆ, ಸುಲಿಗೆಯ ಬಗ್ಗೆ ಕೆ ಪಿ ಅಗ್ರಹಾರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಪ್ರಕರಣ ತನಿಖೆಯಲ್ಲಿರುತ್ತದೆ. ನನಗೆ ಗೊತ್ತಿಲ್ಲದ ಜನಾಧಿಕಾರ ಸಂಘರ್ಷ ಪರಿಷತ್/ರಾಕೇಶ್ ಶೆಟ್ಟಿ ಅವರ ಬೆಂಬಲಿಗರಂತೆ ನನ್ನ ಪರವಾಗಿ ನೀಡಿರುವ ದೂರು ಅರ್ಜಿಯನ್ನು ಮುಕ್ತಾಯ ಮಾಡಬೇಕೆಂದು ಕೋರಿ ಹೇಳಿಕೆಯನ್ನು ನೀಡಿರುತ್ತಾರೆ. ಅಲ್ಲದೆ ಎಚ್‌ಡಿಎಫ್‌ಸಿ ಬ್ಯಾಂಕ್ ಅಕೌಂಟ್‌ನ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿದ್ದು ತಾವು ಆರೋಪಿಸಿರುವ ವಹಿವಾಟು ಇಲ್ಲದೇ ಇದ್ದು ಹಾಗೂ ನೊಂದ ಚಂದ್ರಕಾಂತ್ ರಾಮಲಿಂಗಂ ಅವರು ನೀಡಿರುವ ಹೇಳಿಕೆಯ ಆಧಾರದ ಮೇರೆಗೆ ನೀವು ನೀಡಿರುವ ಅರ್ಜಿಯ ವಿಚಾರಣೆಯನ್ನು ಮುಕ್ತಾಯ ಮಾಡಿರುತ್ತೇವೆ,’ ಎಂದು ಹಿಂಬರಹದಲ್ಲಿ ವಿವರಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ 120 ಗಂಟೆಗಳಾದರೂ ಶೇಷಾದ್ರಿಪುರಂ ಠಾಣೆಯ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಅವರು ಎಫ್‌ಐಆರ್ ದಾಖಲಿಸಿರಲಿಲ್ಲ. ಹೀಗಾಗಿ ಜನಾಧಿಕಾರ ಸಂಘರ್ಷ ಪರಿಷತ್ ಐಪಿಸಿ ಕಲಂ 217ರ ಪ್ರಕಾರ ಅವರ ವಿರುದ್ಧವೇ ದೂರು ದಾಖಲಿಸಿದ್ದನ್ನು ಸ್ಮರಿಸಬಹುದು.
ಪ್ರಕರಣದ ಹಿನ್ನೆಲೆ
ಬಹುಮಹಡಿ ವಸತಿ ಸಮುಚ್ಛಯ ಕಂಪನಿ ನಿರ್ದೇಶಕ ಚಂದ್ರಕಾಂತ್ ರಾಮಲಿಂಗಂ ಎಂಬುವರಿಂದ 7.40 ಕೋಟಿಯನ್ನು ಸುಲಿಗೆ ಮಾಡಿದ್ದಾರೆ ಎಂದು ಐಪಿಸಿ ಸೆಕ್ಷನ್ 384, 120(ಬಿ) ಮತ್ತು 34ನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್ ದೂರು ದಾಖಲಿಸಿತ್ತು.
ಶಶಿಧರ್ ಮರಡಿ ಅವರು ಹೊಂದಿರುವ ಬ್ಯಾಂಕ್ ಖಾತೆಗೆ 7.4 ಕೋಟಿ ರು.ಗಳನ್ನು ನಿರ್ಮಾಣ ಕಂಪನಿ ಆರ್‌ಟಿಜಿಎಸ್ ಮೂಲಕ ಸಂದಾಯ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಅದೇ ರೀತಿ ವಾಟ್ಸಾಪ್ ಸಂಭಾಷಣೆಯಲ್ಲಿ ನಮೂದಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಷಾದ್ರಿಪುರಂ ಶಾಖೆಯಲ್ಲಿ ಶಶಿಧರ್ ಮರಡಿ ಹೊಂದಿರುವ ಉಳಿತಾಯ ಖಾತೆಗೆ ಜನಾಧಿಕಾರ ಸಂಘರ್ಷ ಪರಿಷತ್ 100 ರು. ನಗದನ್ನು ಪಾವತಿಸಿ ಖಾತೆಯನ್ನು ಖಚಿತಪಡಿಸಿಕೊಂಡಿರುವುದನ್ನೂ ದೂರಿನಲ್ಲಿ ಉಲ್ಲೇಖಿಸಿತ್ತು.
ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಬಳಸಿಕೊಂಡು ನಿರ್ಮಾಣ ಕಂಪನಿಯಿಂದ ಲಂಚ ಪಡೆದಿರುವುದು ತಿಳಿದಿದ್ದರೂ ಸಹ ಆ ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದಿರುವುದು ಬಿ ವೈ ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಣ ಕಂಪನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ಪರಿಷತ್ ವಿವರಿಸಿತ್ತು.
ವಾಟ್ಸಾಪ್ ಚಾಟ್‌ಗಳಲ್ಲಿ ಶಶಿಧರ್ ಮರಡಿ ಎಂಬುವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್‌ಟಿಜಿಎಸ್ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.