ಬೆಂಗಳೂರು; ಪರಿಶಿಷ್ಟ ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306 ಕೋಟಿ ರು ಅನುದಾನ ಹಂಚಿಕೆ ಮಾಡಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್ (ಜೆರಾಕ್ಸ್) ಮಿಷನ್ ಇಲ್ಲದೇ ಒದ್ದಾಡುತ್ತಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವಾಲಯದ ಶಾಖೆಯೊಂದಕ್ಕೆ ಪ್ರಿಂಟರ್ ಮತ್ತು ಸ್ಕ್ಯಾನರ್ ಕೂಡ ಲಭ್ಯವಿಲ್ಲದಂತಾಗಿತ್ತು. ಈ ಸಂಗತಿಯು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೂ ಪ್ರಿಂಟರ್ (ಜೆರಾಕ್ಸ್) ಮಿಷನ್ ಲಭ್ಯವಿಲ್ಲ ಎಂಬ ಸಂಗತಿಯು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಪ್ರಿಂಟರ್ (ಜೆರಾಕ್ಸ್) ಮಿಷನ್ಗಾಗಿ ಕರ್ನಾಟಕ ಮಹಿರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಂದೆ ಕೈಯೊಡ್ಡಿ ನಿಂತಿದೆ. ವಿಶೇಷವೆಂದರೇ ಸಚಿವರ ಕಚೇರಿಯಲ್ಲಿಯೇ 1,50,000 ಪ್ರತಿಗಳಿಗೂ ಹೆಚ್ಚು ಪ್ರಿಂಟ್ ನಿರ್ವಹಿಸಿದ್ದ ಜೆರಾಕ್ಸ್ ಮಿಷನ್ನ್ನು ಇಲಾಖೆಯ ಸಚಿವಾಲಯಕ್ಕೆ ನೀಡಿತ್ತು. ಹೀಗಾಗಿ ಈ ಪ್ರಿಂಟರ್, ಇಲಾಖೆಯ ಸಚಿವಾಲಯದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಸುಸ್ಥಿತಿಯಲ್ಲಿರುವ ಜೆರಾಕ್ಸ್ ಮಿಷನ್ ಒದಗಿಸಬೇಕು ಎಂದು ನಿಗಮದ ಮುಂದೆ ಕೈ ಚಾಚಿದೆ.
ಈ ಸಂಬಂಧ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2026ರ ಅಕ್ಟೋಬರ್ 19ರಂದೇ ಪತ್ರ ಬರೆದಿತ್ತು. ಈ ಪತ್ರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಸರ್ಕಾರದ ಕಾರ್ಯದರ್ಶಿ ಪತ್ರದಲ್ಲೇನಿದೆ?
ಪರಿಶಿಷ್ಟ ಪಂಗಡಳ ಕಲ್ಯಾಣ ಇಲಾಖೆಯ ಸಚಿವರ ಕಚೇರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಜೆರಾಕ್ಸ್ ಮಿಷನ್ನ್ನು ಕಚೇರಿಯ ಕರ್ತವ್ಯಕ್ಕೆ ನೀಡಿತ್ತು. ಸಚಿವರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರಿಂಟರ್ನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯದಲ್ಲಿ ಜೆರಾಕ್ಸ್ ಪ್ರಿಂಟರ್ ಇಲ್ಲದ ಕಾರಣ, ಶಾಖೆಗೆ 2024-25ನೇ ಸಾಲಿನಲ್ಲಿ ತರಲಾಗಿತ್ತು. ಈ ಪ್ರಿಂಟರ್, ಸಚಿವರ ಕಚೇರಿಯಲ್ಲಿಯೇ 1,50,000 ಪ್ರತಿಗಳಿಗೂ ಹೆಚ್ಚು ಪ್ರಿಂಟ್ಗಳನ್ನು ನಿರ್ವಹಿಸಿತ್ತು ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಇಲಾಖೆಯಲ್ಲಿ ಈ ಪ್ರಿಂಟರ್ ಸ್ವೀಕೃತವಾದ ನಂತರ 3,00,000 ಸಂಖ್ಯೆಯ ಪ್ರಿಂಟ್ಗಳನ್ನು ತೆಗೆದಿದೆ. ಹೀಗಾಗಿ ಈ ಪ್ರಿಂಟರ್ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಯಂತ್ರವನ್ನು ದುರಸ್ತಿ ಮಾಡಿಸಿ ನವೀನವಾದ ಬಿಡಿ ಭಾಗಗಳನ್ನು ಅಳವಡಿಸಿದ್ದರೂ ಸಹ ಪ್ರಿಂಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಹೀಗಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ದೈನಂದಿನ ಕೆಲಸಕ್ಕೆ ತೊಡಕಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ ಸೂಕ್ತ ಸಮಯಕ್ಕೆ ದಿನದ ಕಾರ್ಯಕಲಾಪಗಳ ಪಟ್ಟಿಯ ಜೊತೆಗೆ ಗಮನಸೆಳೆಯುವ ಸೂಚನೆಗಳು, ನಿಯಮ 351, 330 ನಿಯಮ 73, 72 ಇನ್ನಿತರೆ ಕಾರ್ಯಕಲಾಪಗಳ ವಿಧಾನಸಭೆ, ವಿಧಾನ ಪರಿಷತ್ ಸಚಿವಾಲಯಕ್ಕೆ ಸಕಾಲದಲ್ಲಿ ಉತ್ತರಗಳನ್ನು ಕಳಿಸುವ ಹೊಣೆಗಾರಿಕೆ ಇದೆ. ಹಾಗೂ ಕ್ರೋಢಿಕೃತ ಉತ್ತರಗಳನ್ನು ಒದಗಿಸುವ ಪ್ರಕರಣಗಳಲ್ಲಿ ಜೆರಾಕ್ಸ್ ಮಿಷನ್ ಅವಶ್ಯಕವಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನ ಸೆಳೆದಿರುವುದು ಗೊತ್ತಾಗಿದೆ.
ಸರ್ಕಾರದ ಕಾರ್ಯದರ್ಶಿಯು ಈ ಪತ್ರ ಬರೆಯುವ ಮುನ್ನ ಸಚಿವ ಟಿ ರಘುಮೂರ್ತಿ ಅವರೊಂದಿಗೆ ಚರ್ಚಿಸಿದ್ದರು ಎಂದು ತಿಳಿದು ಬಂದಿದೆ.

‘ಪ್ರಸ್ತುತ ಶಾಖೆಯಲ್ಲಿ ದುರಸ್ತಿಯಲ್ಲಿರುವ ಕ್ಯನಾನ್ ಡಿಎಕ್ಸ್ 2825ನ್ನು ನಿಗಮಕ್ಕೆ ಮರಳಿ ಹಿಂಪಡೆಯಬೇಕು. ಹೊಸದಾದ ಕ್ಯನಾನ್ ರನ್ನರ್ ಡಿಎಕ್ಸ್ 2925 ಜೆರಾಕ್ಸ್ ಮಿಷನ್ನ್ನು ಜರೂರಾಗಿ ಸಚಿವಾಲಯದ ಇಲಾಖೆಗೆ ಒದಗಿಸಬೇಕು,’ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಿರುವುದು ತಿಳಿದು ಬಂದಿದೆ.
ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ ಆರ್ಥಿಕ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ನಡುವೆಯೇ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವಾಲಯದ ಶಾಖೆಯೊಂದಕ್ಕೆ ಪ್ರಿಂಟರ್ ಮತ್ತು ಸ್ಕ್ಯಾನರ್ ಕೂಡ ಲಭ್ಯವಿಲ್ಲ ಎಂಬ ಸಂಗತಿ ಚರ್ಚೆಗೆ ಕಾರಣವಾಗಿತ್ತು.
ಹೊಸ ಯೋಜನೆಗಳನ್ನು ಘೋಷಿಸುವ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿತ್ತು. ಈ ಪತ್ರವು ಸೋರಿಕೆಯಾಗುತ್ತಿದ್ದಂತೆ ಪ್ರತಿಪಕ್ಷಗಳು ವಿಧಾನಮಂಡಲದಲ್ಲಿಯೇ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದವು. ಅಲ್ಲದೇ ರಾಜ್ಯದ ಬೊಕ್ಕಸ ಬರಿದಾಗಿದೆ, ಸರ್ಕಾರವು ದಿವಾಳಿಯಾಗಿದೆ ಎಂದೆಲ್ಲಾ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪದವಿಪೂರ್ವ ಶಿಕ್ಷಣ ಶಾಖೆಗೆ ಪ್ರಿಂಟರ್ ಮತ್ತು ಸ್ಕ್ಯಾನರ್ ಕೂಡ ಲಭ್ಯವಿಲ್ಲವಾಗಿದೆ ಎಂದು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು 2026ರ ಸೆ.9ರಂದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ( ಸಂಖ್ಯೆ; ಇಪಿ 08 ಎಸ್ ಹೆಚ್ ಹೆಚ್ 2026- ದಿನಾಂಕ 09/09/2026) ಹೊರಡಿಸಿದ್ದರು.
ಅನಧಿಕೃತ ಟಿಪ್ಪಣಿಯಲ್ಲೇನಿತ್ತು?
ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ (ಪದವಿಪೂರ್ವ)ಯಲ್ಲಿ ಟಪಾಲುಗಳನ್ನು ಹೆಚ್ಚಿನ ದಕ್ಷತೆಯಿಂದ ನಿರ್ವಹಿಸಲು ಹಾಗೂ ಅನಗತ್ಯ ವಿಳಂಬ ತಪ್ಪಿಸಲು ಎಲ್ಲಾ ಕ್ಷೇತ್ರ ಇಲಾಖೆಗಳ ಕಚೇರಿಗಳಿಗೆ ಪತ್ರ, ಆದೇಶ, ಅಧಿಸೂಚನೆ, ಅಧಿವೇಶನ, ಸಮಿತಿ ಇತರೆ ಎಲ್ಲಾ ದಾಖಲೆಗಳನ್ನು ಇ-ಮೇಲ್ ಮುಖಾಂತರ ಸಂಬಂಧಪಟ್ಟ ಶಾಖೆಯಲ್ಲಿಯೇ ನಿರ್ವಹಿಸಬೇಕು ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಶಾಖೆಗೆ ಸೂಚಿಸಿದ್ದರು ಎಂದು ಡಿಪಿಎಆರ್ (ಆಡಳಿತ) ಅಧೀನ ಕಾರ್ಯದರ್ಶಿಗೆ ಹೊರಡಿಸಿರುವ ಅನಧಿಕೃತ ಟಿಪ್ಪಣಿಯಲ್ಲಿ ತಿಳಿಸಿದ್ದರು.
ಪದವಿಪೂರ್ವ ಶಿಕ್ಷಣ ಶಾಖೆಯಲ್ಲಿ ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳ (ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಖಾಸಗಿ) ಸೇವಾ ವಿಷಯಗಳು, ಅನುದಾನಿತ ಸಂಸ್ಥೆಯ ವೇತನಾನುದಾನ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ನ್ಯಾಯಾಲಯ ಪ್ರಕರಣಗಳು ಸೇರಿದಂತೆ ಹಲವು ವಿಷಯಗಳನ್ನು ನಿರ್ವಹಿಸಲಾಗುತ್ತಿದೆ. ಇದರಿಂದಾಗಿ ಈ ಶಾಖೆಯಲ್ಲಿ ಹೆಚ್ಚಿನ ಕಾರ್ಯದೊತ್ತಡ ಇದೆ ಎಂದು ವಿವರಿಸಿದ್ದರು.
‘ಶಾಖೆಯಲ್ಲಿದ್ದ 01 ಪ್ರಿಂಟರ್ ಮತ್ತು 01 ಸ್ಕ್ಯಾನರ್ ಸಹ ಲಭ್ಯವಿಲ್ಲದೇ ದುರಸ್ತಿಗೆ ಒಳಗಾಗಿದೆ. ಹೀಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಸೂಚನೆಯಂತೆ ಯಾಔಉದೇ ಟಪಾಲುಗಳನ್ನು ಕ್ಷೇತ್ರ ಇಲಾಖೆಗಳಿಗೆ ಇ-ಮೇಲ್ ಮಾಡುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ಕೂಡಲೇ ಪದವಿಪೂರ್ವ ಶಿಕ್ಷಣ ಶಾಖೆಗೆ 01 ಪ್ರಿಂಟರ್ ಮತ್ತು 01 ಸ್ಕ್ಯಾನರ್ ಯಂತ್ರವನ್ನು ಒದಗಿಸಬೇಕು,’ ಎಂದು ಕೋರಿದ್ದರು.
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಹಾವೇರಿ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಸಂಯೋಜಿತ ಜಿಲ್ಲಾಸ್ಪತ್ರೆಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಪಾವತಿಸಲು ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವುದನ್ನು ದಿ ಫೈಲ್ ದಾಖಲೆ ಸಹಿತ ಬಹಿರಂಗಪಡಿಸಿತ್ತು.
ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್ನಲ್ಲೂ ಆರ್ಥಿಕ ಮುಗ್ಗಟ್ಟು
ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಯೋಜಿತ ಜಿಲ್ಲಾ ಆಸ್ಪತ್ರೆಗೆ ಸ್ವಚ್ಛತಾ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್ ಗಳ ಹುದ್ದೆಯ ವೆಚ್ಚವನ್ನೂ ಭರಿಸಲು ಏದುಸಿರು ಬಿಡುತ್ತಿದೆ. ಅಲ್ಲದೆ ಕೆಲವು ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಸರ್ಕಾರದ ಅನುಮೋದನೆಯಿಲ್ಲದೆಯೇ ಹೆಚ್ಚುವರಿ ವೆಚ್ಚ ಮಾಡುತ್ತಿವೆ ಎಂದು ವರದಿಯಲ್ಲಿ ಹೇಳಿತ್ತು.
ವೇತನ ಪಾವತಿಸಲು ಕಷ್ಟಸಾಧ್ಯವಾಗುತ್ತಿದೆಯೇ?
ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಯೋಜಿತ ಜಿಲ್ಲಾ ಆಸ್ಪತ್ರೆಗೆ 25 ಸ್ವಚ್ಚತಾ ಸಿಬ್ಬಂದಿ ಮತ್ತು 10 ಮಂದಿ ಸೆಕ್ಯುರಿಟಿ ಗಾರ್ಡ್ ಹುದ್ದೆಗಳ ವೆಚ್ಚವನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲಗಳಿಂದ ಭರಿಸುವ ಷರತ್ತಿಗೆ ಒಳಪಟ್ಟು ನೇಮಕಾತಿಗೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಅನುಮತಿ ನೀಡಿತ್ತು. ಮಾಡಲ್ ಬಿಡ್ ಡಾಕ್ಯುಮೆಂಟ್ ಪ್ರಕಾರ ನಿಯಮಗಳ ಅನ್ವಯ ಏಜೆನ್ಸಿಗಳ ಮೂಲಕ ಸೇವಾ ಗುತ್ತಿಗೆ ಆಧಾರದ ಮೂಲಕ ಪಡೆಯಲು 2026ರ ಮೇ 13ರಂದು ಆದೇಶದ ಮೂಲಕ ಅನುಮತಿ ನೀಡಿತ್ತು.
ಆದರೆ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಂತರಿಕ ಖಾತೆಯಲ್ಲಿ (ಸಂಖ್ಯೆ 32690100031142) ಕೇವಲ 3 ಕೋಟಿ ರು ಮಾತ್ರ ಉಳಿದಿದೆ. ಇದರಲ್ಲಿ ಹಿಮ್ಸ್ ಬೋಧನಾ ಆಸ್ಪತ್ರೆ ಮತ್ತು ಸಮಸ್ಥೆಯ ನಿರ್ವಹಣೆಗೆ ಈ ಮೊತ್ತವು ಅವಶ್ಯಕವಾಗಿದೆ. ಇದರಲ್ಲಿಯೇ ವೇತನ ಪಾವತಿಸಲು ಕಷ್ಟಸಾಧ್ಯವಾಗುತ್ತದೆ ಎಂಬ ಸಂಗತಿಯನ್ನು ಹಿಮ್ಸ್ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿರುವುದು ಸರ್ಕಾರದ ಆದೇಶದಿಂದ ತಿಳಿದು ಬಂದಿದೆ.

’25 ಸ್ವಚ್ಛತಾ ಸಿಬ್ಬಂದಿ ಮತ್ತು 10 ಸೆಕ್ಯೂರಿಟಿ ಹುದ್ದೆಗಳೀಗೆ ಕಾರ್ಮಿಕ ಇಲಾಖೆಯ ಕನಿಷ್ಟ ವೇತನ ಕಾಯ್ದೆ ಅನ್ವಯ ವಾರ್ಷಿಕವಾಗಿ 89,40,055 ರು ಮೊತ್ತ ಅವಶ್ಯಕತೆ ಇದೆ. ಈ ಹುದ್ದೆಗಳಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಹಿಮ್ಸ್ ತನ್ನ ಪ್ರಸ್ತಾವನೆಯಲ್ಲಿ ವಿವರಿಸಿತ್ತು. ಹಿಮ್ಸ್ ನಲ್ಲಿ (ಲೆಕ್ಕ ಶೀರ್ಷಿಕೆ; 2210-05-105-1067-115) ಅನುದಾನದಲ್ಲಿ ಲಭ್ಯವಿದ್ದ 2.53 ಕೋಟಿ ರು ಪೈಕಿ ಮೂರನೇ ತ್ರೈಮಾಸಿಕ ಕಂತನ್ನು ಬಿಡುಗಡೆ ಮಾಡಿದೆ.

ಅಲ್ಲದೇ ಕೆಲವೊಂದು ಸಂಸ್ಥೆಗಳು ಸಾಮಾನ್ಯ ವೆಚ್ಚಗಳಿಗಾಗಿ ಗುತ್ತಿಗೆ- ಹೊರ ಗುತ್ತಿಗೆನೌಕರರ ವೇತನ ಪಾವತಿಗಾಗಿ ಆಯವ್ಯಯದಲ್ಲಿ ಒದಗಿಸಿದ್ದ ಅಂದಾಜು ಮಿತಿಗಿಂತಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ವೆಚ್ಚ ಮಾಡಲಾಗುತ್ತಿದೆ. ಈ ರೀತಿಯ ವೆಚ್ಚಗಳಿಗೆ ಆರ್ಥಿಕ ಸಮಿತಿ, ಆಡಳಿತ ಮಂಡಳಿ ಮತ್ತು ಸರ್ಕಾರದ ಅನುಮೋದನೆಯೇ ಇಲ್ಲ. ಆದರೂ ಹೆಚ್ಚುವರಿಯಾಗಿ ವೆಚ್ಚ ಮಾಡುತ್ತಿವೆ. ಹೀಗಾಗಿ ಸರ್ಕಾರವು ಹೆಚ್ಚುವರಿ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಆರ್ಥಿಕ ಇಲಾಖೆಯ ತೀವ್ರ ಆಕ್ಷೇಪಣೆಗೆ ಒಳಪಡುವಂತಾಗಿದೆ ಎಂದು ಆದೇಶದಲ್ಲಿ ವಿವರಿಸಿತ್ತು.

‘ಹೆಚ್ಚುವರಿ ವೆಚ್ಚದ ಅಗತ್ಯವಿದ್ದಲ್ಲಿ ಮೊದಲಿಗೆ ಸರ್ಕಾರದ ಹಾಗೂ ಆರ್ಥಿಕ ಇಲಾಖೆಯ ಅನುಮೋದನೆ ಪಡೆದ ನಂತರವೇ ಹೆಚ್ಚುವರಿ ವೆಚ್ಚ ಮಾಡಲು ಕ್ರಮ ವಹಿಸಬೇಕು. ತಪ್ಪಿದಲ್ಲಿ ಇದಕ್ಕೆ ಸಂಸ್ಥೆಯ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು,’ ಎಂದು ಎಚ್ಚರಿಸಿತ್ತು.
ಹಿಮ್ಸ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಹಲವು ಅಕ್ರಮಗಳಾಗಿವೆ ಎಂದು ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೂ ಈ ವರದಿ ಬಗ್ಗೆ ಸರ್ಕಾರವು ಇದುವರೆಗೂ ಯಾವುದೇ ಕ್ರಮವಹಿಸಿರಲಿಲ್ಲ.
ಅನುದಾನ ಕೊರತೆ, ಪಾಲನೆಯಾಗದ ಮಾನದಂಡ; ಪ್ರಸಕ್ತ ಸಾಲಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶಾತಿಗೂ ಕಷ್ಟ
ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಪೈಕಿ ಚಿತ್ರದುರ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಯೂ ಅನುದಾನ ಕೊರತೆ ಎದುರಾಗಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ದಿ ಫೈಲ್ ಪ್ರಕಟಿಸಿದ್ದ ವರದಿಯನ್ನು ಮುಂದಿರಿಸಿದ್ದ ಜಾತ್ಯತೀತ ಜನತಾದಳವೂ ಸಹ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಹಾಗೂ ಭ್ರಷ್ಟಾಚಾರ ಮಾಡಲು ಕೋಟಿ ಕೋಟಿ ಲೂಟಿಯಾಗುತ್ತಿದೆ. ಆದರೆ ಬಡ ನೌಕರರಿಗೆ ಸಂಬಳ ಕೊಡಲು ನಿಮ್ಮ ಬಳಿ ಹಣವಿಲ್ಲವೇ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿತ್ತು. ದಿ ಫೈಲ್ ಪ್ರಕಟಿಸಿರುವ ವರದಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಜೆಡಿಎಸ್ ಈ ಕುರಿತು ಟ್ವೀಟ್ ಮಾಡಿದ್ದನ್ನು ಸ್ಮರಿಸಬಹುದು.




