Friday | August 14, 2026 |

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ, ರಾಜಧನ, ಆದಾಯ ತೆರಿಗೆ, ಕಾರ್ಮಿಕ ಕಲ್ಯಾಣ ನಿಧಿ, ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಧಿ ರೂಪದಲ್ಲಿ ಬಿಲ್‌ಗಳಲ್ಲಿ ಕಟಾಯಿಸಿದ್ದ 68.58 ಕೋಟಿ ರುಪಾಯಿನಲ್ಲಿ 51.30 ಕೋಟಿ ರುಪಾಯಿ ಮಾತ್ರ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಿ ಬಾಕಿ 17.28 ಕೋಟಿ ರುಪಾಯಿ ಜಮೆ ಮಾಡಿಲ್ಲ. ಅದೇ ರೀತಿ   ಶಾಸನಬದ್ಧ  ಇತರೆ ತೆರಿಗೆ ಮೊತ್ತವಾದ 19.21 ಕೋಟಿ ರುಪಾಯಿಯನ್ನು ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಬಯಲಿಗೆಳೆದಿದೆ.

ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಅವಧಿಯಲ್ಲಿ (2023-24ನೇ ಸಾಲಿನ 2024ರ ಮಾರ್ಚ್‌ ಅಂತ್ಯಕ್ಕೆ) ರಾಜ್ಯದ ಗ್ರಾಮ ಪಂಚಾಯ್ತಿಗಳ ವಾರ್ಷಿಕ ಕ್ರೋಢೀಕೃತ ಲೆಕ್ಕ ಪರಿಶೋಧನೆಯಲ್ಲಿ ಪಂಚಾಯ್ತಿಗಳಿಗೆ ಆಗಿರುವ ಆದಾಯದ ನಷ್ಟದ ಕುರಿತು ವಿವರಿಸಿದೆ.

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿರುವ ವಾರ್ಷಿಕ ಕ್ರೋಢೀಕೃತ ಲೆಕ್ಕಪರಿಶೋಧನಾ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಸರ್ಕಾರದ ನಿಯಮಾನುಸಾರ ಗ್ರಾಮ ಪಂಚಾಯ್ತಿಗಳು ಪ್ರತಿಯೊಂದು ಬಿಲ್‌ಗಳನ್ನು ಪಾವತಿಸುವಾಗ ಅನ್ವಯಿಸುವ ಶಾಸನಬದ್ಧ ತೆರಿಗೆಗಳಾದ ಆದಾಯ ತೆರಿಗೆ, ಮಾರಾಟ ತೆರಿಗೆ, ರಾಜಧನ, ಗುತ್ತಿಗೆದಾರರ ಕ್ಷೇಮಾಭಿವೃದ್ದಿ ನಿಧಿ, ಕಾರ್ಮಿಕ ಕಲ್ಯಾಣ ನಿಧಿ ಸೇರಿದಂತೆ ಇನ್ನಿತರೆ ಶಾಸನಬದ್ಧವಾಗಿ ತೆರಿಗೆ ಮೊತ್ತವನ್ನು ಕಟಾಯಿಸಬೇಕು. ಆದರೆ ರಾಜ್ಯದ ಕೆಲವು ಗ್ರಾಮ ಪಂಚಾಯ್ತಿಗಳು ನಿರ್ಲಕ್ಷ್ಯತನದಿಂದ ಶಾಸನಬದ್ಧ ಕಟಾವಣೆಗಳನ್ನೇ ಕಟಾಯಿಸಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯು ವಿವರಿಸಿದೆ.

ಹಲವು ಪಂಚಾಯ್ತಿಗಳು ನಿಗದಿಪಡಿಸಿದ್ದ ಮೊತ್ತಕ್ಕಿಂತಲೂ ಕಡಿಮೆ ಕಟಾಯಿಸಿವೆ. ಮತ್ತು ಕಟಾಯಿಸಿರುವ ಮೊತ್ತವನ್ನೂ ಸರ್ಕಾರಕ್ಕೆ ಜಮೆ ಮಾಡಿಲ್ಲ. ಅಲ್ಲದೇ ಹಲವೆಡೆ ಈ ಮೊತ್ತವೂ ದುರುಪಯೋಗವೂ ಆಗಿದೆ. ಈ ಬಗ್ಗೆ ಕ್ರಮವಹಿಸಬೇಕಿದ್ದ ಪಂಚಾಯ್ತಿಗಳೂ ಸಹ ದಿವ್ಯ ನಿರ್ಲಕ್ಷ್ಯ ವಹಿಸಿವೆ. ಹೀಗಾಗಿ ಪಂಚಾಯ್ತಿಗಳಿಗೆ ಬರಬೇಕಿದ್ದ ಆದಾಯವೂ ನಷ್ಟವಾಗುತ್ತಿದೆ.

ಅದೇ ರೀತಿ ಕಡಿಮೆ ಮೊತ್ತವನ್ನು ಕಟಾಯಿಸಿರುವ ಮತ್ತು ಕಟಾಯಿಸದೇ ಇರುವ ಹಾಗೂ ಕಟಾಯಿಸಿ ಸರ್ಕಾರಕ್ಕೆ ಜಮೆಯನ್ನೇ ಮಾಡಿರುವ ಮೊತ್ತಕ್ಕೆ ಸಂಬಂಧಿತ ಬಟಾವಡೆ ಅಧಿಕಾರಿಯಿಂದ ಬಡ್ಡಿಯನ್ನು ಸಹ ವಸೂಲಿ ಮಾಡಬೇಕು ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

 

ಸರಕು ಮತ್ತು ಸೇವಾ ತೆರಿಗೆ ವಿಭಾಗದಲ್ಲಿ ಪಂಚಾಯ್ತಿಗಳಲ್ಲಿ ಆರಂಭಿಕ ಶಿಲ್ಕುವಿನ ರೂಪದಲ್ಲಿ  83.25 ಕೋಟಿ ರು., ರಾಜಧನ ರೂಪದಲ್ಲಿ 84.12 ಕೊಟಿ, ಆದಾಯ ತೆರಿಗೆ ರೂಪದಲ್ಲಿ 56.23 ಕೋಟಿ, ಕಾರ್ಮಿಕ ಕಲ್ಯಾಣ ನಿಧಿ ರೂಪದಲ್ಲಿ 21.75 ಕೋಟಿ, ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಧಿಯಲ್ಲಿ 2.95 ಕೋಟಿ ರು ಸೇರಿ ಒಟ್ಟಾರೆ 248.32 ಕೋಟಿ ರು ಇತ್ತು. ಪಂಚಾಯ್ತಿಗಳು ಸರಕು ಮತ್ತು ಸೇವಾ ತೆರಿಗೆ ರೂಪದಲ್ಲಿ 8.68 ಕೋಟಿ, ರಾಜಧನ ರೂಪದಲ್ಲಿ 36.41 ಕೋಟಿ ರು., ಆದಾಯ ತೆರಿಗೆ 12.92 ಕೋಟಿ, ಕಾರ್ಮಿಕ ಕಲ್ಯಾಣ ನಿಧಿ 9.32 ಕೋಟಿ, ಗುತ್ತಿಗೆದಾರರ ಕ್ಷೇಮಾಭಿವೃದ್ದಿ ನಿಧಿ 1.22 ಕೋಟಿ ಸೇರಿ ಒಟ್ಟಾರೆ 68.58 ಕೋಟಿ ರು ಕಟಾಯಿಸಿತ್ತು.

 

 

ಈ ಪೈಕಿ ಸರ್ಕಾರಕ್ಕೆ  6.09 ಕೋಟಿ ಮೊತ್ತದ ಸರಕು ಸೇವಾ ತೆರಿಗೆ, ರಾಜಧನ 28.30 ಕೋಟಿ, ಆದಾಯ ತೆರಿಗೆ 9.33 ಕೋಟಿ, ಕಾರ್ಮಿಕ ಕಲ್ಯಾಣ ನಿಧಿ 6.69 ಕೋಟಿ, ಗುತ್ತಿಗೆದಾರರ ಕ್ಷೇಮಾಭಿವೃದ್ದಿ ನಿಧಿ 86.41 ಲಕ್ಷ ರು. ಸೇರಿ ಒಟ್ಟಾರೆ  51.30 ಕೋಟಿ ಮಾತ್ರ ಜಮೆ ಮಾಡಿತ್ತು.  ವಸೂಲು ಮಾಡಿದ್ದ ಆರಂಭಿಕ ಶಿಲ್ಕುವಿನಲ್ಲಿದ್ದ 248.32 ಕೋಟಿ ರು ಗೆ ಹೋಲಿಸಿದರೇ  ಒಟ್ಟು ಮೊತ್ತದ ಪೈಕಿ ಸರ್ಕಾರಕ್ಕೆ  197.02 ಕೋಟಿ ರು ಜಮೆಯಾಗಿಲ್ಲ ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.

 

 

ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಈ ಕಾಮಗಾರಿ ಬಿಲ್‌ಗಳಲ್ಲಿ ಗಣಿ ಮತ್ತು ಭೂಗರ್ಭ ಇಲಾಖೆಯ ಸುತ್ತೋಲೆ ಪ್ರಕಾರ 13.30 ಲಕ್ಷ ರು ರಾಜಧನ ಕಟಾಯಿಸಬೇಕಿತ್ತು. ಆದರೆ ಕೇವಲ 4.71 ಲಕ್ಷ ರುಪಾಯಿ ಮಾತ್ರ ಕಟಾಯಿಸಲಾಗಿದೆ. ಹೀಗಾಗಿ ಇನ್ನುಳಿದ 8.60 ಲಕ್ಷ ರು ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

 

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಿಲ್‌ಗಳಲ್ಲಿ 13.37 ಲಕ್ಷ ರು ರಾಜಧನ ಕಟಾಯಿಸಬೇಕಿತ್ತು. ಆದರೆ ಪಂಚಾಯ್ತಿಯು ರಾಜಧನವನ್ನು ಕಟಾಯಿಸದೇ ಗುತ್ತಿಗೆದಾರರಿಗೆ ಪಾವತಿಸಿದೆ. ಹೀಗಾಗಿ 13.37 ಲಕ್ಷ ರು ಗಳನ್ನು ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದೆ.

ಅದೇ ರೀತಿ ರಾಜ್ಯದ ಗ್ರಾಮ ಪಂಚಾಯ್ತಿಗಳು ಕೆಟಿಪಿಪಿ ಕಾಯ್ದೆಯನ್ನು ಪಾಲಿಸದೇ ನೇರವಾಗಿ ಉಲ್ಲಂಘಿಸುತ್ತಿವೆ. ಈ ಸಂಬಂಧ ಲೆಕ್ಕ ಪರಿಶೋಧಕರು ಹಲವು ಪ್ರಕರಣಗಳನ್ನು ವರದಿಯಲ್ಲಿ ವಿವರಿಸಿದೆ.

ರಾಜ್ಯದ 23 ಜಿಲ್ಲೆಗಳ 461 ಪಂಚಾಯ್ತಿಗಳು ಕೈಗೊಂಡಿದ್ದ ವಿವಿಧ ಕಾಮಗಾರಿಗಳಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಲಾಗಿದೆ. ಇದರ ಮೊತ್ತವೇ  23.40 ಕೋಟಿ ಮೊತ್ತ ರುಪಾಯಿನಷ್ಟಿದೆ ಎಂದು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

 

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4 (ಇಇ) (ii) ರಲ್ಲಿ ಗ್ರಾಮ ಪಂಚಾಯ್ತಿಯು 1 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಇತರೆ ಎಲ್ಲಾ ಸಂಗ್ರಹಣೆಗೆ ಸಂಬಂಧಿಸಿದಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ ಅನುಸಾರ ಕಡ್ಡಾಯವಾಗಿ ಟೆಂಡರ್ ಪ್ರಕ್ರಿಯೆ ಪಾಲಿಸಬೇಕು. ಅಲ್ಲದೆ 5 ಲಕ್ಷ ಮೀರುವ ಸಂದರ್ಭದಲ್ಲಿ ಖರೀದಿ, ಸೇವೆಯನ್ನು ಪಾರದರ್ಶಕತೆ ನಿಯಮ ಅನುಸರಿಸಿ ಇ-ಸಂಗ್ರಹಣೆ ಮೂಲಕ ಟೆಂಡರ್ ಕರೆದು ನಿರ್ವಹಿಸಬೇಕು ಎಂದು ಹೇಳಲಾಗಿದೆ.

 

ಆದರೆ ಗ್ರಾಮ ಪಂಚಾಯ್ತಿಗಳು ನೀರು ಸರಬರಾಜು, ಬೀದಿ ದೀಪ ಖರೀದಿ, ರಿಪೇರಿ ಮತ್ತು ಸಾಮಗ್ರಿಗಳ ಖರೀದಿಯಲ್ಲಿ ಟೆಂಡರ್, ಕೊಟೇಷನ್‌ಗಳನ್ನು ಆಹ್ವಾನಿಸದೇ ಕೊಟೇಷನ್‌ಗಳಿಗೆ ಸಹಿ ಇಲ್ಲದೇ ಖರೀದಿ ಮತ್ತು ರಿಪೇರಿ ಪ್ರಕ್ರಿಯೆ ನಡೆಸಿವೆ. ಇದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮ 2000ನ್ನು ನೇರವಾಗಿ ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಈ ಅಧಿನಿಯಮವನ್ನು ಉಲ್ಲಂಘಿಸುವ ಅಧಿಕಾರಿ, ನೌಕರರಿಗೆ ಕಲಂ 23ರ ಅನ್ವಯ 3 ವರ್ಷ ಮೀರಿದ ಜೈಲುವಾಸ ಮತ್ತು 5,000 ದಂಡ ವಿಧಿಸುವಂತಹ ಗಂಭೀರವಾದ ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಈ ಬಗ್ಗೆ ಆಡಳಿತ ಇಲಾಖೆಗಳು ಗಮನಹರಿಸಬೇಕಾಗಿದೆ.

ಅದೇ ರೀತಿ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಚಾಂದಕವಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿ 03 ಸರಬರಾಜುದಾರರಿಂದ 35.49 ಲಕ್ಷ ರು ಸಾಮಗ್ರಿ/ಸೇವೆಗಳನ್ನು  ಪಡೆದಿತ್ತು. ಇದನ್ನು 1 ಲಕ್ಷ ರುಪಾಯಿಯೊಳಗೆ ವಿವಿಧ 21 ಬಿಲ್‌ಗಳನ್ನಾಗಿ ವಿಭಜಿಸಿದ್ದವು. ಸರ್ಕಾರದ ಸುತ್ತೋಲೆ ( ಸಂಖ್ಯೆ; ಪಿಡಬ್ಲ್ಯೂಡಿ 1359/3ಸ್‌.ಒ/ಎಫ್‌ ಸಿ 2001- ದಿನಾಂಕ 25.10.2002) ಯನ್ನು ನೇರವಾಗಿ ಉಲ್ಲಂಘಿಸಿದಂತಾಗಿದೆ. ಹೀಗಾಗಿ 21 ವಿವಿಧ ಬಿಲ್‌ಗಳನ್ನಾಗಿ ವಿಭಜಿಸಿ ಖರೀದಿಸಿದ ಮೊತ್ತ 35.49 ಲಕ್ಷ ರು.ಗಳನ್ನು ಲೆಕ್ ಪರಿಶೋಧನೆಯಲ್ಲಿ ಆಕ್ಷೇಪಣೆಯಲ್ಲಿರಿಸಲಾಗಿದೆ.

 

 

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಯೋಜನೆಗಳಡಿಯಲ್ಲಿ ಮೋಟಾರ್ ರಿವೈಂಡಿಂಗ್‌, ನೀರು ಸರಬರಾಜು ಸಾಮಗ್ರಿ ಸೇರಿದಂತೆ ಒಟ್ಟು 7 ಕಾಮಗಾರಿಗಳಿಗೆ ಟೆಂಡರ್‍‌ ಕರೆದಿರಲಿಲ್ಲ. ಬದಲಿಗೆ ಈ  ಕಾಮಗಾರಿಗಳನ್ನು ವಿಭಜಿಸಲಾಗಿತ್ತು. ದರ ಪಟ್ಟಿ ಮುಖೇನ 52.75 ಲಕ್ಷ ವೆಚ್ಚ ಭರಿಸಿದ್ದವು. ಈ ಪ್ರಕರಣದಲ್ಲಿಯೂ ಕೆಟಿಪಿಪಿ ನಿಯಮಗಳ ನೇರ ಉಲ್ಲಂಘನೆಯಾಗಿದೆ. ಹೀಗಾಗಿ ಈ ಮೊತ್ತವನ್ನೂ ಲೆಕ್ಕ ಪರಿಶೋಧನೆಯಲ್ಲಿ ಆಕ್ಷೇಪಣೆಯಲ್ಲಿರಿಸಿರುವುದು ತಿಳಿದು ಬಂದಿದೆ.

Hot this week

ಮಹಿಳಾ ಸ್ವೀಕಾರ ಕೇಂದ್ರದಿಂದ ಹೆಣ್ಣು ಮಕ್ಕಳ ಬಿಡುಗಡೆ; ಐಎಎಸ್ ಅಧಿಕಾರಿಗಳ ಹೆಸರು ಉಲ್ಲೇಖ, ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ದೂರು ಸಲ್ಲಿಸಿದ ಸಮಿತಿ

ಬೆಂಗಳೂರು; ಮಹಿಳಾ ಸ್ವೀಕಾರ ಕೇಂದ್ರಗಳಲ್ಲಿನ ಹೆಣ್ಣು ಮಕ್ಕಳನ್ನು ಐಎಎಸ್‌ ಅಧಿಕಾರಿಗಳ ಮನೆಗೆಲಸಕ್ಕೆ...

ಚಿಲುಮೆ ಪ್ರಕರಣ; ನಿರ್ದಿಷ್ಟ, ಖಚಿತ, ಸ್ಪಷ್ಟವಾಗಿ ಕೋರಿದ್ದ ಮಾಹಿತಿಯೇ ‘ಮಾಹಿತಿ ವ್ಯಾಖ್ಯಾನದಡಿಯಲ್ಲಿಲ್ಲವೆಂದ’ ಇಲಾಖೆ, ಮತದಾರರ ದತ್ತಾಂಶ ಕಳ್ಳತನ ಮುಚ್ಚಿ ಹಾಕಿತೇ ಕಾಂಗ್ರೆಸ್?

ಬೆಂಗಳೂರು;  ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರವು...
Please Scan to make Your Contribution

Topics

ಮಹಿಳಾ ಸ್ವೀಕಾರ ಕೇಂದ್ರದಿಂದ ಹೆಣ್ಣು ಮಕ್ಕಳ ಬಿಡುಗಡೆ; ಐಎಎಸ್ ಅಧಿಕಾರಿಗಳ ಹೆಸರು ಉಲ್ಲೇಖ, ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ದೂರು ಸಲ್ಲಿಸಿದ ಸಮಿತಿ

ಬೆಂಗಳೂರು; ಮಹಿಳಾ ಸ್ವೀಕಾರ ಕೇಂದ್ರಗಳಲ್ಲಿನ ಹೆಣ್ಣು ಮಕ್ಕಳನ್ನು ಐಎಎಸ್‌ ಅಧಿಕಾರಿಗಳ ಮನೆಗೆಲಸಕ್ಕೆ...

ಗಣಿ ಗುತ್ತಿಗೆಯ 14 ಬ್ಲಾಕ್‌ಗಳ ಹರಾಜಿಗೆ ತರಾತುರಿ; ಗಣಿ ಅಧಿಕಾರಿಗಳ ಕುತ್ತಿಗೆ ಮೇಲೆ ಕುಳಿತ ಮುಖ್ಯಮಂತ್ರಿ?

ಬೆಂಗಳೂರು; ರಾಮಗಢ್, ದೋಣಿಮಲೈ, ಡೆಕ್ಕನ್ ಮೈನಿಂಗ್, ಕುಮಾರಸ್ವಾಮಿ ಬ್ಲಾಕ್, ಹನುಮಾನ್ ಮೈನ್ಸ್‌...

ಶೇ.60ರಷ್ಟು ವಸೂಲಾಗದ ತೆರಿಗೆಯೇತರ ಆದಾಯ, ತೆರಿಗೆ ಪಾವತಿಯಲ್ಲಿ ದುರ್ಬಳಕೆ; ಜಮೆಯಾಗದ 13.07 ಕೋಟಿ ತೆರಿಗೆ ಹಣ, 1,478 ಪಂಚಾಯ್ತಿಗಳಲ್ಲಿ ಅಕ್ರಮ?

ಬೆಂಗಳೂರು;  ರಾಜ್ಯದ ಗ್ರಾಮ ಪಂಚಾಯ್ತಿಗಳು  ಶೇಕಡ 60ರಷ್ಟು  ತೆರಿಗೆಯೇತರ ಆದಾಯವನ್ನು ವಸೂಲಿ...

Related Articles

Popular Categories

error: Content is protected !!