ಬೆಂಗಳೂರು; ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಪ್ರವೇಶಗಳ ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ ಉಂಟಾಗಿದೆ. ಇದಕ್ಕೆ ದೇಶದ 47 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿಯೇ ಉತ್ತಮ ಪುರಾವೆಯಾಗಿದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ರಾಷ್ಟ್ರೀಯ ಪರೀಕ್ಷೆಗಳ ಬಗೆಗಿನ ಒಳನೋಟವನ್ನು ಬೀರಿದೆ.
ಅದಷ್ಟೆ ಅಲ್ಲ, ಘಟಕ ಕಾಲೇಜುಗಳನ್ನಾಗಿ ಪರಿವರ್ತಿಸುವುದಕ್ಕೆ ಸಹಮತಿ ವ್ಯಕ್ತಪಡಿಸಿಲ್ಲ. ಉನ್ನತ ಶಿಕ್ಷಣದಲ್ಲಿನ ಅಸಮತೋಲನ ಕುರಿತೂ ವಿಶ್ಲೇಷಿಸಿರು ಆಯೋಗವು ರಾಜ್ಯದಲ್ಲಿ ಹೊಸ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಗಮನಸೆಳೆದಿದೆ. ಹಾಗೆಯೇ ಗ್ರಾಮೀಣ ಕಾಲೇಜುಗಳನ್ನು ನಗರ ವಿಶ್ವವಿದ್ಯಾಲಯಗಳಲ್ಲಿ ವಿಲೀನಗೊಳಿಸುವುದರಿಂದ ಅಥವ ಕೇಂದ್ರೀಕರಿಸುವುದರಿಂದ ಹಿಂದುಳಿದ ಮತ್ತು ಗ್ರಾಮೀಣ ಜಿಲ್ಲೆಯ ವಿದ್ಯಾರ್ಥಿಗಳ ಜೀವನ ನಿರ್ವಹಣೆಗೂ ಕಷ್ಟವಾಗಲಿದೆ ಎಂದು ಎಚ್ಚರಿಸಿದೆ.
ಸುಖ್‌ದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸರ್ಕಾರಕ್ಕೆ ನೀಡಿರುವ ವರದಿಗಳಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎನ್‌ಇಪಿ 2020ರ ಪರಿಕಲ್ಪನೆಯನ್ನೂ ವಿವರವಾಗಿ ಚರ್ಚಿಸಿದೆ. ಈ ವರದಿ ಕುರಿತು ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟವು ಇನ್ನೂ ಚರ್ಚಿಸಿಲ್ಲ.
ಆಯೋಗವು ನೀಡಿರುವ ಸಮಗ್ರ ವರದಿಗಳ ಸಂಪುಟಗಳು ದಿ ಫೈಲ್ ಗೆ ಲಭ್ಯವಾಗಿವೆ.


ಘಟಕ ಕಾಲೇಜುಗಳಿಂದ ಹಣಕಾಸು-ನಿರ್ವಹಣಾ ಸಮಸ್ಯೆ
ಸಂಯೋಜಿತ ವಿಶ್ವವಿದ್ಯಾಲಯಗಳನ್ನು ಏಕೀಕೃತ ಸಂಸ್ಥೆಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಕಾಲೇಜುಗಳ ವ್ಯಾಪಕ ಭೌಗೋಳಿಕ ಪ್ರಸರಣದಿಂದಾಗಿ ಗಮನಾರ್ಹ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಅಡೆತಡೆಗಳು ಉಂಟಾಗಲಿದೆ. ಇದಲ್ಲದೇ ಸಂಯೋಜಿತ ಕಾಲೇಜುಗಳನ್ನು ಒಂದೇ ವಿಶ್ವವಿದ್ಯಾಲಯದ ರಚನೆಯ ಅಡಿಯಲ್ಲಿ ಘಟಕ ಕಾಲೇಜುಗಳನ್ನಾಗಿ ಪರಿವರ್ತಿಸುವುದರಿಂದ ಹಣಕಾಸು ಮತ್ತು ನಿರ್ವಹಣಾ ಸಮಸ್ಯೆಗಳೂ ಉಂಟಾಗುತ್ತವೆ ಎಂದು ಆಯೋಗವು ಸರ್ಕಾರವನ್ನು ಎಚ್ಚರಿಸಿದೆ.
ಆಯೋಗವು ಎನ್‌ಇಪಿ 2020ರಲ್ಲಿ ಸಂಯೋಜಿತ ವ್ಯವಸ್ಥೆಯ ಶಿಫಾರಸ್ಸುಗಳನ್ನು ಪರಿಶೀಲಿಸಿದೆ. ಕರ್ನಾಟಕವು ಸುಮಾರು 43 ರಾಜ್ಯ ಮಟ್ಟದ ವಿಶ್ವವಿದ್ಯಾಲಯಗಳನ್ನು ಹೊಂದಿದೆ. 2021-22ರ ಎಐಎಸ್‌ಎಚ್‌ಇ ದತ್ತಾಂಶದ ಪ್ರಕಾರ ರಾಜ್ಯವು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸಂಸ್ಥೆಗಳನ್ನು ಒಳಗೊಂಡಂತೆ ಸುಮಾರು 4,430 ಕಾಲೇಜುಗಳು 43 ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮತ್ತು ಬೆಂಗಳೂರು ನಗರದವೊಂದರಲ್ಲೇ ಸುಮಾರು 1,106 ಸಂಸ್ಥೆಗಳಿವೆ.

2,700ಕ್ಕೂ ಹೆಚ್ಚು ಖಾಸಗಿ ಕಾಲೇಜುಗಳು ಮತ್ತು ಸುಮಾರು 281 ಸರ್ಕಾರಿ ಕಾಲೇಜುಗಳನ್ನು ಎನ್ಇಪಿ 2020ರ ಕಲ್ಪನೆಯಂತೆ ಏಕೀಕೃತ, ಸಂಶೋಧನೆ-ತೀವ್ರ ಅಥವಾ ಬೋಧನೆ ತೀವ್ರ ವಿಶ್ವವಿದ್ಯಾಲಯಗಳನ್ನಾಗಿ ಗುಂಪು ಮಾಡಿದರೇ ರಾಜ್ಯಾದಾದ್ಯಂತ ಕಾಲೇಜುಗಳ ವಿತರಣೆ ಮತ್ತು ಪ್ರತಿ ಕಾಲೇಜಿಗೆ ಸರಾಸರಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯು ತಾರ್ಕಿಕವಾಗಿ ಕಾರ್ಯಸಾಧ್ಯವಾಗುವುದಿಲ್ಲ ಎಂದು ವಿಶ್ಲೇಷಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಆರ್ಥಿಕವಾಗಿಯೂ ಸಹ ಕರ್ನಾಟಕದ ಸಂಯೋಜಿತ ವಿಶ್ವವಿದ್ಯಾಲಯಗಳು ಸಂಯೋಜನೆ, ಪ್ರವೇಶಾತಿ ಮತ್ತು ಪರೀಕ್ಷಾ ಶುಲ್ಕಗಳಿಂದ ಬರುವ ಆಂತರಿಕ ಆದಾಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದರು ಈ ಮಾದರಿಯ ಮೇಲೆ ಪರಿಣಾಮ ಬೀರಿ ಹೆಚ್ಚಿನ ನಷ್ಟ ಉಂಟು ಮಾಡುವ ಸಂಭಾವ್ಯತೆ ಇದೆ.

‘ಈ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಸಂಯೋಜಿತ ವಿಶ್ವವಿದ್ಯಾಲಯ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಜತೆಗೆ ಪಾರಂಪರಿಕ ಸಂಸ್ಥೆಗಳಾದ ಮೈಸೂರು, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳನ್ನು ಬಲಪಡಿಸುವ ಮೂಲಕ ಸಂಶೋಧನಾ ಕ್ಷೇತ್ರದ ಮೇಲೆ ಅವುಗಳ ಗಮನ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಬೇಕು,’ ಎಂದು ಆಯೋಗವು ಶಿಫಾರಸ್ಸು ಮಾಡಿದೆ.
ರಾಷ್ಟ್ರೀಯ ಮಟ್ಟದ ಪರೀಕ್ಷೆ- ಎಸ್‌ಸಿ ಎಸ್ ಟಿ ದಾಖಲಾತಿಯಲ್ಲಿ ಕುಸಿತ
ಇದಲ್ಲದೇ ಎನ್‌ಇಪಿ 2020 ಪ್ರಸ್ತಾವನೆಯಿಂದಾಗಿ ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗೆಳ ನೋಂದಾವಣೆಯಲ್ಲಿ ಇಳಿಕೆ ಉಂಟಾಗುವ ಅಪಾಯವೂ ಇಲ್ಲದಿಲ್ಲ. ಈ ನಿಟ್ಟಿನಲ್ಲಿ 47 ಕೇಂದ್ರೀಯ ವಿಶ್ವವಿದ್ಯಾಲಯಗಳು ಒದಗಸಿವು ಸ್ಪಷ್ಟ ಪುರಾವೆಗಳು ಅಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ಜಾರಿಗೆ ತಂದಿದ್ದರಿಂದ ಎಸ್ ಸಿ ಎಸ್ ಟಿ ದಾಖಲಾತಿಯಲ್ಲಿ ಇಳಿಕೆಗೆ ಕಾರಣವಾಗಿದ್ದನ್ನು ಎತ್ತಿ ತೋರಿಸಿದೆ. ಇದು ಗಂಭೀರ ಕಾಳಜಿಯ ಸಂಗತಿಯಾಗಿದೆ ಎಂದು ಆಯೋಗವು ವರದಿಯಲ್ಲಿ ವಿವರಿಸಿದೆ.
ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ
ಸಾಮಾನ್ಯ ಶಿಕ್ಷಣ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರವೇಶ ಪರೀಕ್ಷೆಗಳನ್ನು ಪರಿಚಯಿಸುವುರಿಂದ ಶಿಕ್ಷಣದ ಲಭ್ಯತೆಗೆ ತೊಡಕಾಗುವ ಸಾಧ್ಯತೆಯಿದೆ. 47 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರೀಯ ಪರೀಕ್ಷೆಗಳನ್ನು ಪರಿಚಯಿಸಿದ್ದರಿದ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ ಉಂಟಾಗಿವೆ. ಈ ವಿಧಾನವು ಶಿಕ್ಷಣದ ಒಟ್ಟಾರೆ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಸಂಯೋಜಿತ ವಿಶ್ವವಿದ್ಯಾಲಯ ವ್ಯವಸ್ಥೆಯು ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಬೋಧನೆಯ ಜವಾಬ್ದಾರಿಯನ್ನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ವಿಭಜಿಸುತ್ತದೆ.ಸಾಮಾನ್ಯವಾಗಿ ಉಲ್ಲೇಖಿಸಲಾಗುವಂತೆ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವಿಭಾಗಗಳ ಹಿರಿಯ ಅಧ್ಯಾಪಕರು ಬೋಧನೆ ಮಾಡದಿರುವುದು ಈ ಮಾದರಿಯ ನ್ಯೂನತೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೂ ಸಂಯೋಜಿತ ವ್ಯವಸ್ಥೆಯ ಪ್ರಮುಖ ಬಲವು ಅದರ ಪ್ರವೇಶ ಸಾಧ್ಯತೆಯಲ್ಲಿದೆ. ಸಂಯೋಜಿತ ಕಾಲೇಜುಗಳು ಮಧ್ಯಮ ಪಟ್ಟಣಗಳು ಸಣ್ಣ ಪಟ್ಟಣಗಳು ಮ್ತು ದೊಡ್ಡ ಹಳ್ಳಿಗಳಲ್ಲಿ ಕಾರ್ಯಾಚರಿಸುತ್ತಿವೆ. ಇದರಿಂದಾಗಿ ಉನ್ನತ ಶಿಕ್ಷಣವನ್ನು ಕೈಗೆಟುಕುವಂತೆ ಮತ್ತು ಸುಲಭ ಲಭ್ಯವಾಗುವಂತೆ ಒದಗಿಸುತ್ತವೆ. ಇದರಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಯೋಜನವಾಗುತ್ತವೆ ಎಂದು ವಿವರಿಸಿದೆ.
ಬಹುಶಿಸ್ತೀಯ ವಿಶ್ವವಿದ್ಯಾಲಯ ಸ್ಥಾಪನೆ- ಉನ್ನತ ಶಿಕ್ಷಣ ಅವಕಾಶ ಕಡಿಮೆ
ಮತ್ತೊಂದೆಡೆ ಎನ್‌ಇಪಿ 2020 ಪ್ರಸ್ತಾವನೆಯಂಗೆ ಪ್ರಾಥಮಿಕವಾಗಿ ಪ್ರಮುಖ ನಗರಗಳಲ್ಲಿ ದೊಡ್ಡ ಬಹುಶಿಸ್ತೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರೇ ಈ ಗುಂಪುಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೇ ಈ ಪ್ರಸ್ತಾವನೆಯಲ್ಲಿ ಸೂಚಿಸಲಾಗಿರುವಂತೆ ಸಣ್ಣ ಗ್ರಾಮೀಣ ಕಾಲೇಜುಗಳನ್ನು ನಗರ ವಿಶ್ವವಿದ್ಯಾಲಯಗಳಲ್ಲಿ ವಿಲೀನಗೊಳಿಸುವುದರಿಂದ ಅಥವಾ ಕೇಂದ್ರೀಕರಿಸುವುದರಿಂದ, ಹಿಂದುಳಿದ ಮತ್ತು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳ ಜೀವನ ನಿರ್ವಹಣೆ ಮತ್ತು ಶೈಕ್ಷಣಿಕ ವೆಚ್ಚಗಳಲ್ಲಿನ ಹೆಚ್ಚಿನ ವೆಚ್ಚಕ್ಕೆ ಕಾರಣವಾಗಬಹುದು. ಇದು ಉನ್ನತ ಶಿಕ್ಷಣದ ಸಮಾನ ಲಭ್ಯತೆಯ ಮೆಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಿದೆ.

ಉನ್ನತ ಶಿಕ್ಷಣದಲ್ಲಿಯೂ ಪ್ರಾದೇಶಿಕ ಅಸಮತೋಲನ
ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯು ಪ್ರಸ್ತುತ ಗಣನೀಯ ಪ್ರಾದೇಶಿಕ ಅಸಮತೋಲವನ್ನು ಎದುರಿಸುತ್ತಿದೆ. ಬೆಂಗಳೂರು ವಿಭಾಗವು ಶೈಕ್ಷಣಿಕ ಸಂಸ್ಥೆಗಳು (ಶೇ.41) ಮತ್ತ ವಿದ್ಯಾರ್ಥಿಗಳ ದಾಖಲಾತಿ (ಶೇ.45) ಎರಡರಲ್ಲೂ ಅಸಮಾನವಾಗಿ ದೊಡ್ಡ ಪಾಲನ್ನು ಹೊಂದಿದೆ. ಮೈಸೂರು, ಬೆಳಗಾವಿ ಮತ್ತು ಗುಲ್ಬರ್ಗ ವಿಭಾಗಗಳಲ್ಲಿನ ಈ ಪ್ರಮಾಣವು ಗಣನೀಯವಾಗಿ ಕಡಿಮೆ ಇದೆ. ಈ ಅಸಮಾನತೆಗಳು ಕೇವಲ ವಿಭಾಗಗಳ ನಡುವೆ ಮಾತ್ರವಲ್ಲ, ಜಿಲ್ಲೆಗಳಲ್ಲಿಯೂ ಅಸ್ತಿತ್ವದಲ್ಲಿವೆ.
ಅಗತ್ಯವಿರವಲ್ಲಿ ಮಾತ್ರ ಹೊಸ ಕಾಲೇಜು-ಸ್ವತಂತ್ರ ಸಂಸ್ಥೆಗಳಿರಲಿ
ಬೆಂಗಳೂರು ನಗರವು ಕಾಲೇಜುಗಳಿಗೆ ಹೋಗುವ ಜನಸಂಖ್ಯೆಯ ಅಗತ್ಯಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸಾಂದ್ರತೆಯನ್ನು ಹೊದಿದೆ. ಆದರೆ ಇತರ ಹಲವು ಜಿಲ್ಲೆಗಳು ಕಡಿಮೆ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ದಾಖಲಾತಿಯೊಂದಿಗೆ ಹೆಣಗುತ್ತಿವೆ. ಈ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರವು ಅಂತಹ ವಿಭಾಗಗಳಲ್ಲಿ ದಾಖಲಾತಿಯ ಹೆಚ್ಚಳವನ್ನು ಸಕ್ರೀಯವಾಗಿ ಪ್ರೋತ್ಸಾಹಿಸಬೆಕು. ಹೀಗಾಗಿ ಅತ್ಯಂತ ಅಗತ್ಯವಿರುವಲ್ಲಿ ಹೊಸ ಕಾಲೇಜುಗಳು ಮತ್ತು ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ.
ಹೆಚ್ಚುವರಿಯಾಗಿ ತಮ್ಮ ಪ್ರದೇಶಗಳ ಹೊರಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಬಯಸುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನೂ ವಿಸ್ತರಿಸಬೇಕು. ಅಂತಿಮವಾಗಿ ಕರ್ನಾಟಕದಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಿರುವುದರಿಂದ ಯಾವುದೇ ಹೊಸ ಶಿಕ್ಷಣ ಸಂಸ್ಥೆಗಳಿಗೆ ಅನುಮೋದನೆ ನೀಡುವ ಮೊದಲು ಸಂಪೂರ್ಣ ಕಾರ್ಯಸಾಧ್ಯತೆ ಅಧ್ಯಯನಗಳನ್ನು ಕಡ್ಡಾಯಗಳಿಸಬೇಕು ಎಂದು ಸಲಹೆ ನೀಡಿದೆ.
ಕರ್ನಾಟಕವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 11.5 ಲಕ್ಷ ಪ್ರವೇಶಾತಿಯ ಸಾಮರ್ಥ್ಯ ಹೊಂದಿದೆ. ಆದರೂ ಸಹ 2023-24ರಲ್ಲಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿನ ಸ್ನಾತಕ ಪದವಿ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೇವಲ 4,29,303ರಷ್ಟಿತ್ತು. ಕರ್ನಾಟಕದಲ್ಲಿ ಸಮಸ್ಯೆ ಪೂರೈಕೆಯಲ್ಲಿಲ್ಲ, ಬೇಡಿಕೆಯಲ್ಲಿದೆ. ಸಂಸ್ಥೆಗಳ ಒಟ್ಟು ಸಾಮರ್ಥ್ಯವು ಬಳಕೆಯಾಗುತ್ತಿಲ್ಲ. ದಾಖಲಾತಿ ಬೆಳವಣಿಗೆ ನಿಧಾನ ಗತಿಯಲ್ಲಿದೆ. ಮತ್ತು ಒಟ್ಟು ದಾಖಲಾತಿ ಅನುಪಾತವು ಮೂರನೇ ಒಂದು ಭಾಗದ ಹತ್ತಿರದಲ್ಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೇ ಈ ಕಡಿಮೆ ದಾಖಲಾತಿಯ ಗಂಭೀರ ಕಾಳಜಿಯ ಸಂಗತಿಯಾಗಿದೆ.

ಬೆಂಗಳೂರಿನಲ್ಲಿ ತುಂಬಿ ತುಳಕಿದ ಕಾಲೇಜು, ವಿವಿಗಳು
ಈ ಹಿನ್ನೆಲೆಯಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕಾಲೇಜುಗಳ ಸಂಖ್ಯೆಯನ್ನು ಪರಿಗಣಿಸಿದರೇ ಇತರ ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕವು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ತುಂಬಿ ತುಳುಕುತ್ತಿದೆ. ಅನೇಕ ಕಾಲೇಜುಗಳು ಒಟ್ಟು 100 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದರೆ ಪ್ರತಿ ಕಾಲೇಜಿಗೆ ಸರಾಸರಿ ದಾಖಲಾತಿ ಸುಮಾರು 450 ಮತ್ತು ಅದಕ್ಕಿಂತ ಹೆಚ್ಚಿದೆ. ಈ ಸನ್ನಿವೇಶವನ್ನು ಗಮನಿಸಿದರೇ ರಾಜ್ಯದಲ್ಲಿ ಹೊಸ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುವುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಮತ್ತು ಸಮರ್ಥ ಪ್ರಾಧಿಕಾರದ ಮೂಲಕ ಕಾರ್ಯಸಾಧ್ಯತೆ ಕುರಿತ ಅಧ್ಯಯನಕ್ಕೆ ಒಳಪಡಿಸಬೇಕು ಎಂದು ಸಲಹೆ ನೀಡಿದೆ.
ಕರ್ನಾಟಕದಲ್ಲಿ 2019-20ರಲ್ಲಿ ಒಟ್ಟು ವಿಶ್ವವಿದ್ಯಾಲಯಗಲಲ್ಲಿ ಸುಮಾರು ಶೇ. 43.46ರಷ್ಟು ಅನುದಾನಿತ ಸಂಯೋಜಿತ ವಿಶ್ವವಿದ್ಯಾಲಯಗಳು ಮತ್ತು ಶೇ.50.72ರಷ್ಟು ಏಕೀಕೃತ ವಿಶ್ವವಿದ್ಯಾಲಯಗಳಿವೆ. ಸುಮಾರು ಶೇ.80ರಷ್ಟು ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಉನ್ನತ ಶಿಕ್ಷಣ ಇಲಾಖೆಯು ನಿರ್ವಹಿಸುತ್ತಿದೆ.




