ಬೆಂಗಳೂರು; ಗೃಹ ಲಕ್ಷ್ಮಿ ಯೋಜನೆಗೆ ಆರ್ಹರಾಗಿದ್ದ ಒಟ್ಟು ಫಲಾನುಭವಿಗಳಲ್ಲಿ ಮೃತ ಫಲಾನುಭವಿಗಳಿಗೆ ಹಣ ಪಾವತಿಯಾಗುತ್ತಿದೆ ಎಂಬ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು ನೀಡಿರುವ ಅಂಕಿ ಅಂಶಗಳಿಗೂ ರಾಜ್ಯಮಟ್ಟದ ಬ್ಯಾಂಕ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ತುಸು ವ್ಯತ್ಯಾಸ ಕಂಡುಬಂದಿದೆ.
ಮೃತ ಫಲಾನುಭವಿಗಳಿಗೂ 2,000 ರುಪಾಯಿ ಪಾವತಿಯಾಗುತ್ತಿದೆ, ಇದರ ಮೊತ್ತವೇ 225 ಕೋಟಿ ಇದೆ ಎಂದು ಸಿಎಜಿಯು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದಿಂದ ಸ್ಪಷ್ಟೀಕರಣ ಬಯಸಿ ಪತ್ರ ಬರೆದಿತ್ತು. ಈ ಪತ್ರವನ್ನಾಧರಿಸಿ ಹಲವು ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿದ್ದವು. ಈ ವರದಿಗಳಿಗೆ ಸಂಬಂಧಿಸಿದಂತೆ ಇಲಾಖೆಯು ಬಿಡುಗಡೆಗೊಳಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ ಎಸ್‌ಎಲ್‌ಬಿಸಿಯನ್ನೂ ಉಲ್ಲೇಖಿಸಿ ಅಂಕಿ ಅಂಶಗಳನ್ನು ಒದಗಿಸಿತ್ತು.
ಇದರ ಬೆನ್ನಲ್ಲೇ ಎಸ್‌ಎಲ್‌ಬಿಸಿಗೆ ಇಲಾಖೆಯು ನೀಡಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ಇಲಾಖೆಯು ಪತ್ರಿಕಾ ಹೇಳಿಕೆಯಲ್ಲಿ ನೀಡಿರುವ ಅಂಕಿ ಅಂಶಗಳ ಪ್ರಕಾರ 1,08,755 ಮೃತ ಫಲಾನುಭವಿಗಳಿಗೆ 115 ಕೋಟಿ ರು ಧನಸಹಾಯ ಪಾವತಿಯಾಗಿದೆ. ಆದರೆ ಎಸ್‌ಎಲ್‌ಬಿಸಿಗೆ ಇಲಾಖೆಯೇ ಕೊಟ್ಟಿದ್ದ ಅಂಕಿ ಅಂಶಗಳ ಪ್ರಕಾರ 56,548 ಮೃತ ಫಲಾನುಭವಿಗಳಿಗೆ ಹಣ ಪಾವತಿಯಾಗಿತ್ತು. ಮೃತ ಫಲಾನುಭವಿಗಳಿಗೆ ಹಣ ಪಾವತಿಯಾಗಿರುವ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಇಲಾಖೆಯು ನೀಡಿರುವ ಅಂಕಿ ಸಂಖ್ಯೆಗೂ ಎಸ್‌ಎಲ್‌ಬಿಸಿಗೆ ನೀಡಿದ್ದ ಅಂಕಿ ಅಂಶಗಳ ಮಧ್ಯೆ 52,207 ಸಂಖ್ಯೆಯ ಫಲಾನುಭವಿಗಳ ವ್ಯತ್ಯಾಸ ಕಂಡು ಬಂದಿದೆ.
ಎಸ್‌ಎಲ್‌ಬಿಸಿಯು 2026ರ ಮಾರ್ಚ್ 31ರಂದು ನಡೆದಿದ್ದ 175ನೇ ಸಭೆಯಲ್ಲಿ ಗೃಹ ಲಕ್ಷ್ಮಿ ಯೋಜನೆ ಹಣ ಪಾವತಿ ಕುರಿತಾಗಿ ಚರ್ಚಿಸಿತ್ತು.

ದಿ ಫೈಲ್ ಈ ಸಭೆಯ ನಡವಳಿಯನ್ನು ಪರಿಶೀಲನೆ ಮಾಡಿತು. ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳನ್ನು ಎಸ್‌ಎಲ್‌ಬಿಸಿ ಸಭೆಗೆ ಇಲಾಖೆ ಒದಗಿಸಿರುವ ಅಂಕಿ ಅಂಶಗಳನ್ನು ದಿ ಫೈಲ್ ತುಲನೆ ಮಾಡಿದೆ. ಈ ವೇಳೆ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಫಲಾನುಭವಿಯ ಮರಣದ ನಂತರ ಬಿಡುಗಡೆಗೊಂಡ ಗೃಹಲಕ್ಷ್ಮಿ ಯೋಜನೆಯ ಪಾವತಿಗಳ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಕೈಗೊಂಡಿರುವ ಕ್ರಮಗಳ ಪ್ರಗತಿಯ ಪರಿಶೀಲನೆ ನಡೆಸಿತ್ತು.
ಬ್ಯಾಂಕ್‌ಗಳು ಒಟ್ಟಾಗಿ ಮೊತ್ತವನ್ನು ಜಮಾ ಮಾಡಲು ಅನುಕೂಲವಾಗುವಂತೆ ಏಕೈಕ ನೋಡಲ್ ಖಾತೆಯನ್ನು ಒದಗಿಸುವ ಸರಳೀಕೃತ ವಿಧಾನವನ್ನು ತಿಳಿಸಬೇಕು ಎಂದು 2026ರ ಜನವರಿ 14ರಂದೇ ಇ-ಆಡಳಿತ ಕೇಂದ್ರದ (Centre for e-Governance) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅವರಿಗೆ ಮನವಿ ಮಾಡಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು, ಮೃತ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಜಮೆಯಾಗಿರುವ ಮೊತ್ತವನ್ನು ಮರುಭರಣ ಮಾಡಿಕೊಳ್ಳಲು 2026ರ ಮೇ 7ರಂದು ಏಕೈಕ ನೋಡಲ್ ಖಾತೆಯನ್ನು ಒದಗಿಸಿತ್ತು.
ಈ ಏಕೈಕ ನೋಡಲ್ ಖಾತೆಯ ವಿವರಗಳನ್ನು ಮೊತ್ತವನ್ನು ಜಮಾ ಮಾಡುವ ಉದ್ದೇಶಕ್ಕಾಗಿ ಸದಸ್ಯ ಬ್ಯಾಂಕ್‌ಗಳಿಗೆ ತಿಳಿಸಿತ್ತು. ಬ್ಯಾಂಕ್‌ಗಳು ಲೆಕ್ಕಶೀರ್ಷಿಕೆಗೆ (HOA) HOA: 2235-02-911-0-14: Deduct – Refund of Over payments – Gruhalakshmi OH-364 (Khajane–II) ಸಂಬಂಧಿಸಿದಂತೆ ಯಾವ ಆಯ್ಕೆಯನ್ನು ಬಳಸಬೇಕೆಂಬ ಬಗ್ಗೆ ಇಲಾಖೆಯಿಂದ ಮಾರ್ಗದರ್ಶನವನ್ನು ಕೋರಿದ್ದವು.
ಅದೇ ರೀತಿ ಬ್ಯಾಂಕ್‌ಗಳು ತಮ್ಮಲ್ಲಿ ಸ್ಥಗಿತಗೊಳಿಸಿರುವ (Freezed) ಮೊತ್ತವನ್ನು 2026ರ ಜೂನ್ 30ರೊಳಗೆ ಏಕೈಕ ನೋಡಲ್ ಖಾತೆಗೆ ಜಮಾ ಮಾಡಬೇಕು ಎಂದು ಕೋರಿತ್ತು.
ಪತ್ರಿಕಾ ಹೇಳಿಕೆಯಲ್ಲಿನ ಇಲಾಖೆಯ ಲೆಕ್ಕವೆಷ್ಟು?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು ಬಿಡುಗಡೆ ಮಾಡಿದ್ದ ಅಂಕಿ ಅಂಶಗಳ ಪ್ರಕಾರ ಈ ಯೋಜನೆಗೆ ನೋಂದಣಿಯಾಗಿದ್ದ ಒಟ್ಟು ಫಲಾನುಭವಿಗಳ ಪೈಕಿ 2,88,376 ಮಹಿಳೆಯರು ಮರಣ ಹೊಂದಿದ್ದಾರೆ. ಈ ಪೈಕಿ 1,03,922 ಫಲಾನುಭವಿಗಳು ಮೃತ ಕುಟುಂಬದ ಯಜಮಾನಿಯ ಹೆಸರನ್ನು ಬದಲಾಯಿಸಿ ಆಹಾರ ನಾಗರೀಕ ಸರಬರಾಜು ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿ ಪಡೆದು ಮರು ನೋಂದಣಿ ಮಾಡಿಕೊಂಡು ಧನ ಸಹಾಯ ಪಡೆಯುತ್ತಿರುತ್ತಾರೆ.
1,08,755 ಮೃತ ಫಲಾನುಭವಿಗಳ ಮರಣದ ಮಾಹಿತಿಯು ಸಕಾಲದಲ್ಲಿ ಲಭ್ಯವಾಗದೇ ಇರುವುದರಿಂದ ಮೃತ ಫಲಾನುಭವಿಗಳ ಖಾತೆಗೆ 115 ಕೋಟಿ ರು ಮೊತ್ತದ ಧನಸಹಾಯ ಪಾವತಿಯಾಗಿದೆ. ಈ ಧನಸಹಾಯ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಮರು ಭರಣ ಮಾಡಿಕೊಳ್ಳುವ ಕುರಿತು ಎಸ್‌ಎಲ್‌ಬಿಸಿ, ಅಂಚೆ ಕಚೇರಿ, ಸಹಕಾರ ಬ್ಯಾಂಕ್, ಖಾಸಗಿ ಬ್ಯಾಂಕ್‌ಗಳೊಂದಿಗೆ ಸಭೆ ನಡೆಸಿ ಕ್ರಮ ವಹಿಸಲಾಗಿದೆ. ಇಲ್ಲಿಯವರೆಗೆ 15.24 ಕೋಟಿ ರು ಮರುಭರಣವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಎಸ್‌ಎಲ್‌ಬಿಸಿಗೆ ಕೊಟ್ಟಿದ್ದ ಅಂಕಿ ಸಂಖ್ಯೆಗಳಲ್ಲೇನಿತ್ತು?
ಎಸ್‌ಎಲ್‌ಬಿಸಿಯು 2026ರ ಮಾರ್ಚ್ 31ರಂದು ನಡೆದಿದ್ದ 175ನೇ ಸಭೆಗೆ ಸರ್ಕಾರವು ಕೊಟ್ಟಿದ್ದ ಅಂಕಿ ಅಂಶಗಳ ಪ್ರಕಾರ ಗೃಹಲಕ್ಷ್ಮಿ ಯೋಜನೆಯಡಿ ಧನಸಹಾಯ ಪಡೆದಿದ್ದವರ ಪೈಕಿ 1,14,922 ಮೃತ ಫಲಾನುಭವಿಗಳಿದ್ದರು. ಇವರಿಗೆ ಒಟ್ಟು 66.05 ಕೋಟಿ ರು ಪಾವತಿಯಾಗಿತ್ತು.

ಮೃತ 56,548 ಫಲಾನುಭವಿಗಳಿಗೆ ಹಣ ಪಾವತಿ
ಮರಣಾ ನಂತರವೂ 56,548 ಫಲಾನುಭವಿಗಳಿಗೆ ಗೃಹಲಕ್ಷ್ಮಿ ಮೊತ್ತ ಜಮೆಯಾಗಿತ್ತು. ಮರಣಾ ನಂತರವೂ 57,519 ಫಲಾನಭವಿಗಳಿಗೆ ಧನಸಹಾಯ ಮೊತ್ತವು ಜಮೆಯಾಗಿರಲಿಲ್ಲ. ಈ ಮಧ್ಯೆ ಬ್ಯಾಂಕ್‌ಗಳು 25.44 ಕೋಟಿ ರು ಮೊತ್ತವನ್ನು ಸ್ಥಗಿತಗೊಳಿಸಿದ್ದವು.

ಹಾಗೆಯೇ ಇ-ಆಡಳಿತ ಇಲಾಖೆಯು ಹೊಸ ವಿಧಾನ ಅನುಸಾರ ಬ್ಯಾಂಕ್‌ಗಳು ಕರ್ನಾಟಕ ಸರ್ಕಾರಕ್ಕೆ 3.71 ಕೋಟಿ ರುಪಾಯಿ ವರ್ಗಾಯಿಸಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (W&CD) ವಿಧಾನಾನುಸಾರ ಬ್ಯಾಂಕ್‌ಗಳು ಕರ್ನಾಟಕ ಸರ್ಕಾರಕ್ಕೆ 2.87 ಕೋಟಿ ರುಪಾಯಿಯನ್ನು ವರ್ಗಾಯಿಸಿತ್ತು.




ಒಟ್ಟಾರೆ ಕರ್ನಾಟಕ ಸರ್ಕಾರಕ್ಕೆ ಒಟ್ಟಾರೆ 6.58 ಕೋಟಿ ರು ವರ್ಗಾವಣೆಯಾಗಿತ್ತು.
ಫಲಾನುಭವಿಯ ಮರಣದ ನಂತರ ಬಿಡುಗಡೆಗೊಂಡ ಗೃಹಲಕ್ಷ್ಮಿ ಯೋಜನೆಯ ಪಾವತಿಗಳ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಕೈಗೊಂಡಿರುವ ಕ್ರಮಗಳ ಪ್ರಗತಿಯ ಪರಿಶೀಲನೆ ನಡೆಸಿತ್ತು.
ಬ್ಯಾಂಕ್‌ಗಳು ಒಟ್ಟಾಗಿ ಮೊತ್ತವನ್ನು ಜಮಾ ಮಾಡಲು ಅನುಕೂಲವಾಗುವಂತೆ ಏಕೈಕ ನೋಡಲ್ ಖಾತೆಯನ್ನು ಒದಗಿಸುವ ಸರಳೀಕೃತ ವಿಧಾನವನ್ನು ತಿಳಿಸಬೇಕು ಎಂದು 2026ರ ಜನವರಿ 14ರಂದೇ ಇ-ಆಡಳಿತ ಕೇಂದ್ರದ (Centre for e-Governance) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅವರಿಗೆ ಮನವಿ ಮಾಡಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು, ಮೃತ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಜಮೆಯಾಗಿರುವ ಮೊತ್ತವನ್ನು ಮರುಭರಣ ಮಾಡಿಕೊಳ್ಳಲು 2026ರ ಮೇ 7ರಂದು ಏಕೈಕ ನೋಡಲ್ ಖಾತೆಯನ್ನು ಒದಗಿಸಿತ್ತು.
ಈ ಏಕೈಕ ನೋಡಲ್ ಖಾತೆಯ ವಿವರಗಳನ್ನು ಮೊತ್ತವನ್ನು ಜಮಾ ಮಾಡುವ ಉದ್ದೇಶಕ್ಕಾಗಿ ಸದಸ್ಯ ಬ್ಯಾಂಕ್‌ಗಳಿಗೆ ತಿಳಿಸಿತ್ತು. ಬ್ಯಾಂಕ್‌ಗಳು ಲೆಕ್ಕಶೀರ್ಷಿಕೆಗೆ (HOA) HOA: 2235-02-911-0-14: Deduct – Refund of Overpayments – Gruhalakshmi OH-364 (Khajane–II) ಸಂಬಂಧಿಸಿದಂತೆ ಯಾವ ಆಯ್ಕೆಯನ್ನು ಬಳಸಬೇಕೆಂಬ ಬಗ್ಗೆ ಇಲಾಖೆಯಿಂದ ಮಾರ್ಗದರ್ಶನವನ್ನು ಕೋರಿದ್ದವು. ಅದೇ ರೀತಿ ಬ್ಯಾಂಕ್‌ಗಳು ತಮ್ಮಲ್ಲಿ ಸ್ಥಗಿತಗೊಳಿಸಿರುವ (Freezed) ಮೊತ್ತವನ್ನು 2026ರ ಜೂನ್ 30ರೊಳಗೆ ಏಕೈಕ ನೋಡಲ್ ಖಾತೆಗೆ ಜಮಾ ಮಾಡಬೇಕು ಎಂದು ಕೋರಿತ್ತು.
ಗೃಹಲಕ್ಷ್ಮಿ ಯೋಜನೆಯಡಿ ಧನಸಹಾಯ ಪಾವತಿ ಪ್ರಕ್ರಿಯೆಯು ಎಬಿಪಿಎಸ್ ಆಗಿರುವುದರಿಂದ ಫಲಾನುಭವಿಗಳಿಗೆ ಒಂದು ತಿಂಗಳಿಗೆ ಒಂದಕ್ಕಿಂತ ಹೆಚ್ಚು ಸಲ ಧನಸಹಾಯ ಪಾವತಿಯಾಗಿಲ್ಲ. ಅದೇ ರೀತಿ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿರುವುದಿಲ್ಲ ಎಂದು ಸಮಜಾಯಿಷಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇದರಲ್ಲಿ ಯಾವುದೇ ಲೋಪಗಳು ನಡೆದಿಲ್ಲ ಎಂದು ಪ್ರತಿಪಾದಿಸಿತ್ತು.
ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ಪಾವತಿಯಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ ಸಿಎಜಿಯ ಪತ್ರ ಆಧರಿಸಿ 225 ಕೋಟಿ ಅಕ್ರಮವಾಗಿದೆ ಎಂದು ಹಲವು ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದ್ದವು. ಮಾಧ್ಯಮಗಳಲ್ಲಿ ಈ ಕುರಿತಾದ ವರದಿಗಳು ಪ್ರಕಟಗೊಳ್ಳುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.
ಹೇಳಿಕೆಯಲ್ಲೇನಿತ್ತು?
ಎಬಿಪಿಎಸ್ (ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ವ್ಯವಸ್ಥೆಯಲ್ಲಿ ಅಧಾರ್ ಸಂಖ್ಯೆಯನ್ನು ಹಣಕಾಸಿನ ವಿಳಾಸವಾಗಿ ಬಳಸಲಾಗುತ್ತದೆ. ಪಾವತಿ ಕಡತದಲ್ಲಿರುವ ಆಧಾರ್ ಸಂಖ್ಯೆಯನ್ನು ಎನ್‌ಪಿಸಿಐ ಮ್ಯಾಪರ್‍ನಲ್ಲಿ ಪರಿಶೀಲಿಸಿದ ನಂತರ ಸಂಬಂಧಿತ ಬ್ಯಾಂಕ್‌ಗೆ ಕಳುಹಿಸಬಹುದು. ಈ ಕುರಿತು ಪರಿಶೀಲನೆ ನಡೆಸಿದಾಗ ನಂತರದ ತಿಂಗಳುಗಳಲ್ಲಿ ಬ್ಯಾಂಕ್ ಖಾತೆ ವಿವರಗಳೊಂದಿಗೆ ಪ್ರತಿಕ್ರಿಯೆ ಕಡತವನ್ನು ಬ್ಯಾಂಕ್ ಒದಗಿಸಿತ್ತು.
ಹೀಗಾಗಿ ಗೃಹಲಕ್ಷ್ಮಿ ಯೋಜನೆಯಡಿ ಧನಸಹಾಯ ಪಾವತಿ ಪ್ರಕ್ರಿಯೆಯು ಎಬಿಪಿಎಸ್ ಆಗಿರುವುದರಿಂದ ಫಲಾನುಭವಿಗಳಿಗೆ ಒಂದು ತಿಂಗಳಿಗೆ ಒಂದಕ್ಕಿಂತ ಹೆಚ್ಚು ಸಲ ಧನ ಸಹಾಯ ಪಾವತಿಯಾಗಿಲ್ಲ. ಅದೇ ರೀತಿ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿರುವುದಿಲ್ಲ ಎಂದು ಪ್ರತಿಪಾದಿಸಿತ್ತು.

ಕೆಲವೊಮ್ಮೆ ಫಲಾನುಭವಿಗಳ ಬ್ಯಾಂಕ್‌ನ ತಾಂತ್ರಿಕ ಸಮಸ್ಯೆಯಿಂದ ಖಾತೆ ವಿವರಗಳಿಲ್ಲದ ಪ್ರತಿಕ್ರಿಯೆ ಲಭ್ಯವಾಗಿರುವುದರಿಂದ ಬ್ಯಾಂಕ್ ಖಾತೆ ತೋರಿಸುತ್ತಿರುವುದಿಲ್ಲ. ಆದರೆ ಈ ಖಾತೆಗಳಿಗೆ ಧನ ಸಹಾಯ ಜಮೆಯಾಗಿರುತ್ತದೆ. ಇದನ್ನು ಪರಿಶೀಲನೆ ನಡೆಸಿದಾಗ ನಂತರ ತಿಂಗಳುಗಳಲ್ಲಿ ಪ್ರತಿಕ್ರಿಯೆ ಕಡತವನ್ನು ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡುಬಂದಿದೆ ಎಂದು ಇಲಾಖೆಯು ವಿವರಿಸಿತ್ತು.
‘ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದ್ದು ಅನರ್ಹರನ್ನು ಹೊರತುಪಡಿಸಿ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಧನಸಹಾಯ ಪಾವತಿಯಾಗುತ್ತಿದೆ,’ ಎಂದು ಸಮರ್ಥಿಸಿಕೊಂಡಿತ್ತು.
ಬಹು ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿದ್ದಾರೆ ಎಂದು ಸಿಎಜಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಇಲಾಖೆಯು ಈ ಅಂಶವನ್ನು ಒಪ್ಪಿರಲಿಲ್ಲ.
ಎಬಿಪಿಎಸ್ (ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ವ್ಯವಸ್ಥೆಯಲ್ಲಿ ಅಧಾರ್ ಸಂಖ್ಯೆಯನ್ನು ಹಣಕಾಸಿನ ವಿಳಾಸವಾಗಿ ಬಳಸಲಾಗುತ್ತದೆ. ಪಾವತಿ ಕಡತದಲ್ಲಿರುವ ಆಧಾರ್ ಸಂಖ್ಯೆಯನ್ನು ಎನ್‌ಪಿಸಿಐ ಮ್ಯಾಪರ್‍ನಲ್ಲಿ ಪರಿಶೀಲಿಸಿದ ನಂತರ ಸಂಬಂಧಿತ ಬ್ಯಾಂಕ್‌ಗೆ ಕಳಿಸಲಾಗುತ್ತದೆ. ಸಂಬಂಧಿತ ಬ್ಯಾಂಕ್ ತನ್ನ ಸಿಬಿಎಸ್ (ಕೋರ್ ಬ್ಯಾಂಕಿಂಗ್ ಸಿಸ್ಟಂ) ವ್ಯವಸ್ಥೆಯಲ್ಲಿ ಆಧಾರ್ ಜೋಡಣೆಯನ್ನು ಪರಿಶೀಲಿಸಿ ಫಲಾನುಭವಿಯ ಖಾತೆಗೆ ಹಣವನ್ನು ಜಮಾ ಮಾಡಿ ಪ್ರತಿಕ್ರಿಯೆ ಕಡತದ ಭಾಗವಾಗಿ ಬ್ಯಾಂಕ್ ಖಾತೆಗಳ ವಿವರಗಳನ್ನು ಹಂಚಿಕೊಳ್ಳುತ್ತದೆ ಎಂದು ವಿವರಿಸಿತ್ತು.
ಒಂದೇ ಬ್ಯಾಂಕ್ ಖಾತೆಯಡಿ ಸಂಖ್ಯೆಯಡಿ ಬಹು ಫಲಾನುಭವಿಗಳು ಕಂಡು ಬರುವುದಕ್ಕೆ ಎರಡು ಕಾರಣಗಳನ್ನು ನೀಡಿರುವ ಇಲಾಖೆಯು ಜಂಟಿ ಬ್ಯಾಂಕ್ ಖಾತೆಯಿದ್ದಲ್ಲಿ ಒಂದೇ ಬ್ಯಾಂಕ್ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಸರ್ಕಾರಿ ಸೌಲಭ್ಯ ಜಮೆಯಾಗಿರಬಹುದು ಎಂದು ಹೇಳಿತ್ತು.
ಅದೇ ರೀತಿ ಫಲಾನುಭವಿಯು ಖಾತೆ ಹೊಂದಿರುವ ಬ್ಯಾಂಕ್‌ನ ತಾಂತ್ರಿಕ ದೋಷದಿಂದ ತಪ್ಪಾದ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದಲ್ಲಿ ಹಂಚಿಕೆಯಾಗಿರಬಹುದು ಎಂದು ಹೇಳಿಕೆಯಲ್ಲಿ ವಿವರಿಸಿತ್ತು.
‘ಈ ಎರಡೂ ಕಾರಣಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಇಂತಹ ಪ್ರಕರಣಗಳ ಕುರಿತು ಅಧಿಕಾರಿಗಳ ಮೂಲಕ ಭೌತಿಕವಾಗಿ ಕ್ಷೇತ್ರ ಭೇಟಿ ನಡೆಸಿ, ಪರಿಶೀಲನೆ ನಡೆಸಲಾಗಿದೆ. ಜಂಟಿ ಖಾತೆ ಇರುವಂತಹ ಫಲಾನುಭವಿಗಳ (ಅತ್ತೆ-ಸೊಸೆ, ತಾಯಿ-ಮಗಳು) ಬ್ಯಾಂಕ್ ಖಾತೆಗೆ ಅನುದಾನ ಪಾವತಿಯಾಗಿರುವುದು ಕಂಡು ಬಂದಿರುತ್ತದೆ,’ ಎಂದು ಸ್ಪಷ್ಟೀಕರಣ ನೀಡಿತ್ತು.
ಈ ಫಲಾನಭವಿಗಳು ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರುವುದರಿಂದ ಎರಡೂ ಫಲಾನುಭವಿಗಳ ಧನಸಹಾಯ ಮೊತ್ತವು ಒಂದೇ ಖಾತೆಗೆ ಪಾವತಿಯಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸುವ ಜವಾಬ್ದಾರಿಯು ಸಂಪೂರ್ಣವಾಗಿ ಫಲಾನುಭವಿಯದ್ದಾಗಿದೆ. ಫಲಾನುಭವಿಯು ಸರ್ಕಾರಿ ಸೌಲಭ್ಯ ಪಡೆಯಲು ತಾನು ಬಯಸುವ ಯಾವುದೇ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು. ಅಗತ್ಯವಿದ್ದಲ್ಲಿ ಲಿಖಿತ ಒಪ್ಪಿಗೆ ಮೂಲಕ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಬಹುದು ಎಂದು ವಿವರಿಸಿತ್ತು.

ಎನ್‌ಪಿಸಿಐ ಮ್ಯಾಪರ್‍ನಲ್ಲಿ ಈ ಬದಲಾವಣೆ ನವೀಕರಿಸಿದ ನಂತರ ಸರ್ಕಾರಿ ಸೌಲಭ್ಯ ಹೊಸದಾಗಿ ಜೋಡಿಸಲಾದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಬ್ಯಾಂಕ್ ಈ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಅನುಸರಿಸಿ ಈ ಬದಲಾವಣೆ ಮಾಡುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ಅಥವಾ ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಒಂದೇ ಫಲಾನುಭವಿಯ ವಿವಿಧ ಖಾತೆಗಳಿಗೆ ಬೇರೆ ಬೇರೆ ತಿಂಗಳ ಧನಸಹಾಯ ಪಾವತಿ ಅವಕಾಶವಿದೆ. ಆದರೆ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿರುವುದಿಲ್ಲ ಎಂದು ವಿವರಿಸಿತ್ತು.
ಬ್ಯಾಂಕ್ ಖಾತೆ ವಿವರಗಳಿಲ್ಲದ ಫಲಾನುಭವಿಗಳಿಗೆ ಪಾವತಿ
ಎಬಿಪಿಎಸ್ (ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ವ್ಯವಸ್ಥೆಯಲ್ಲಿ ಅಧಾರ್ ಸಂಖ್ಯೆಯನ್ನು ಹಣಕಾಸಿನ ವಿಳಾಸವಾಗಿ ಬಳಸಲಾಗುತ್ತದೆ. ಪಾವತಿ ಕಡತದಲ್ಲಿರುವ ಆಧಾರ್ ಸಂಖ್ಯೆಯನ್ನು ಎನ್‌ಪಿಸಿಐ ಮ್ಯಾಪರ್‍ನಲ್ಲಿ ಪರಿಶೀಲಿಸಿದ ನಂತರ ಸಂಬಂಧಿತ ಬ್ಯಾಂಕ್‌ಗೆ ಕಳುಹಿಸಬಹುದು. ಈ ಕುರಿತು ಪರಿಶೀಲನೆ ನಡೆಸಿದಾಗ ನಂತರದ ತಿಂಗಳುಗಳಲ್ಲಿ ಬ್ಯಾಂಕ್ ಖಾತೆ ವಿವರಗಳೊಂದಿಗೆ ಪ್ರತಿಕ್ರಿಯೆ ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡು ಬಂದಿತ್ತು.
ಹೀಗಾಗಿ ಗೃಹಲಕ್ಷ್ಮಿ ಯೋಜನೆಯಡಿ ಧನಸಹಾಯ ಪಾವತಿ ಪ್ರಕ್ರಿಯೆಯು ಎಬಿಪಿಎಸ್ ಆಗಿರುವುದರಿಂದ ಫಲಾನುಭವಿಗಳಿಗೆ ಒಂದು ತಿಂಗಳಿಗೆ ಒಂದಕ್ಕಿಂತ ಹೆಚ್ಚು ಸಲ ಧನಸಹಾಯ ಪಾವತಿಯಾಗಿಲ್ಲ. ಅದೇ ರೀತಿ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿರುವುದಿಲ್ಲ ಎಂದು ಸಮಜಾಯಿಷಿ ನೀಡಿತ್ತು.

ಕೆಲವೊಮ್ಮೆ ಫಲಾನುಭವಿಗಳ ಬ್ಯಾಂಕ್‌ನ ತಾಂತ್ರಿಕ ಸಮಸ್ಯೆಯಿಂದ ಖಾತೆ ವಿವರಗಳಿಲ್ಲದ ಪ್ರತಿಕ್ರಿಯೆ ಲಭ್ಯವಾಗಿರುವುದರಿಂದ ಬ್ಯಾಂಕ್ ಖಾತೆ ತೋರಿಸುತ್ತಿರುವುದಿಲ್ಲ ಆದರೆ ಸದರಿ ಖಾತೆಗಳಿಗೆ ಧನ ಸಹಾಯ ಜಮೆಯಾಗಿರುತ್ತದೆ. ಪರಿಶೀಲನೆ ನಡೆಸಿದಾಗ ನಂತರ ತಿಂಗಳುಗಳಲ್ಲಿ ಪ್ರತಿಕ್ರಿಯೆ ಕಡತವನ್ನು ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡುಬಂದಿದೆ.. ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದ್ದು ಅನರ್ಹರನ್ನು ಹೊರತುಪಡಿಸಿ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಧನಸಹಾಯ ಪಾವತಿಯಾಗುತ್ತಿದೆ ಎಂದು ಹೇಳಿಕೆಯಲ್ಲಿ ವಿವರಿಸಿತ್ತು.





