ಬೆಂಗಳೂರು; ಯಲಹಂಕ ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಡಲು ಅತ್ಯಾಸಕ್ತಿ ವಹಿಸಿದ್ದ ಬಿಜೆಪಿ ಸರ್ಕಾರ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಸ್ಥಾಪಿಸಲು ಬಿಡಿಗಾಸು ನೀಡದಿರುವುದು ಬಹಿರಂಗವಾಗಿದೆ.
ಸಾವರ್ಕರ್‌ಗೆ ಭಾರತರತ್ನ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಎದ್ದಿದ್ದ ಹೊತ್ತಿನಲ್ಲಿ ರಾಜ್ಯದ 10 ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ಸದ್ದಿಲ್ಲದೆ ಬಿರುಸಿನ ಚಾಲನೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದರು. ಆದರೀಗ ಇದ್ದಕ್ಕಿದ್ದಂತೆ ತನ್ನ ನಿರ್ಧಾರವನ್ನೇ ಬದಲಿಸಿರುವ ಬಿಜೆಪಿ ಸರ್ಕಾರ ತನ್ನ ಅಸಹನೆಯನ್ನು ಪ್ರದರ್ಶಿಸಿದೆ. ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ಈವರೆವಿಗೂ ಯಾವ ವಿಶ್ವವಿದ್ಯಾಲಯಕ್ಕೂ ಅನುದಾನ ಒದಗಿಸಿಲ್ಲ ಎಂದು ಒಪ್ಪಿಕೊಂಡಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರ ಎನ್ ಆರ್ ಎರೆಕುಪ್ಪಿ ಅವರು 2020ರ ಜೂನ್ 26ರಂದು ಪತ್ರ ಬರೆದಿದ್ದಾರೆ. ಈ ಪತ್ರ ‘ದಿ ಫೈಲ್’ಗೆ ಲಭ್ಯವಾಗಿದೆ.
ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲು ತುಮಕೂರು ವಿಶ್ವವಿದ್ಯಾಲಯ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಉತ್ತರಿಸಿರುವ ಉನ್ನತ ಶಿಕ್ಷಣ ಇಲಾಖೆ ‘ಯಾವುದೇ ವಿಶ್ವವಿದ್ಯಾಲಯಕ್ಕೂ ಗಾಂಧಿ ಅಧ್ಯಯನ ಮತ್ತು ಸಂಶೋಧನ ಕೇಂದ್ರವನ್ನು ಸ್ಥಾಪಿಸಲು 2019-20ನೇ ಆರ್ಥಿಕ ವರ್ಷದಲ್ಲಿ ಅನುದಾನವನ್ನು ಒದಗಿಸಿರುವುದಿಲ್ಲ. ವಿಶ್ವವಿದ್ಯಾಲಯವು ಗಾಂಧಿ ಅಧ್ಯಯನ ಮತ್ತು ಸಂಶೋಧನ ಕೇಂದ್ರವನ್ನು ಸ್ಥಾಪಿಸಲು ಪರಿನಿಯಮಗಳನ್ನು ರಚಿಸಿಕೊಂಡ ನಂತರ ಅನುದಾನ ಬಿಡುಗಡೆ ಬಗ್ಗೆ ಪರಿಶೀಲಿಸಬೇಕಾಗುತ್ತದೆ,’ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದೆ.
ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರ ಸ್ಥಾಪನೆಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದದ್ದೇ ಅಗಿದ್ದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವ ಸಂಬಂಧ ಪರಿನಿಯಮಗಳನ್ನು ರಚಿಸಿಕೊಳ್ಳಲು ಸೂಚನೆ ನೀಡುತ್ತಿತ್ತು. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಕರ್ನಾಟಕ ಮತ್ತು ಕರ್ನಾಟಕ ಮುಕ್ತ ವಿವಿ ಗಳಲ್ಲಿ ಈಗಾಗಲೇ ಗಾಂಧಿ ಅಧ್ಯಯನ ಕೇಂದ್ರಗಳಿವೆ. ಇವನ್ನು ಹೊರತುಪಡಿಸಿ 10 ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಮತ್ತು ಸಂಶೋಧನ ಕೇಂದ್ರಗಳನ್ನು ಸ್ಥಾಪಿಸುವ ಸಂಬಂಧ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಿರಿಸಿದ್ದರು.
‘ಗಾಂಧೀಜಿ ಚಿಂತನೆ ಮತ್ತು ಸಿದ್ಧಾಂತಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಕೇಂದ್ರ ಇರಬೇಕಿತ್ತು. ಆದರೆ, ಅದೇಕೋ ಈ ವಿಷಯದಲ್ಲಿ ಹಿನ್ನಡೆಯಾಗಿದೆ. ಸರಿಪಡಿಸಲು ಕೂಡಲೇ ಸೂಚನೆ ನೀಡಲಾಗುವುದು’ ಎಂದು ಯಡಿಯೂರಪ್ಪ ಅವರು ಹೇಳಿದ್ದನ್ನು ಸ್ಮರಿಸಬಹುದು.
ರಾಜೀವ್‌ಗಾಂಧಿ ಆರೋಗ್ಯ ವಿ ವಿ, ಬೆಳಗಾವಿಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿ ವಿ, ಗೋಟಗೋಡಿಯಲ್ಲಿನ ಜಾನಪದ ವಿ ವಿ, ಬೆಂಗಳೂರಿನಲ್ಲಿರುವ ಸಂಸ್ಕೃತ ವಿ ವಿ, ಮೈಸೂರಿನಲ್ಲಿರುವ ಸಂಗೀತ ವಿ ವಿ ಗಳನ್ನು ಗಾಂಧಿ ಅಧ್ಯಯನ ಕೇಂದ್ರ ಸ್ಥಾಪನೆಯಿಂದ ಹೊರಗಿಡಲಾಗಿದೆ ಎಂದು ಗೊತ್ತಾಗಿದೆ.
ತಲಾ ಅಧ್ಯಯನ ಕೇಂದ್ರಕ್ಕೆ ಕೇವಲ 1 ಕೋಟಿ ರು. ಸೇರಿದಂತೆ ಒಟ್ಟು 10 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. ಆದರೆ ಅಧ್ಯಯನ ಕೇಂದ್ರ ನಡೆಸಲು ಕೇವಲ 1 ಕೋಟಿ ರು. ಅನುದಾನ ಸಾಲುವುದಿಲ್ಲ. ಈ ಹಣವನ್ನು ಠೇವಣಿ ಇರಿಸಿದಲ್ಲಿ 60,000 ರು. ಬಡ್ಡಿ ಹಣ ಒಬ್ಬರ ವೇತನಕ್ಕೂ ಸಾಲುವುದಿಲ್ಲ ಎಂಬ ಅಭಿಪ್ರಾಯವನ್ನು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷವೆಂದರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಗಾಂಧಿ ಅಧ್ಯಯನ ಕೇಂದ್ರದಲ್ಲೇ ವಿದ್ಯಾರ್ಥಿಗಳ ಕೊರತೆ ಇದೆ. ಕಳೆದ 3 ವರ್ಷಗಳಿಂದ ಗಾಂಧಿ ಜೀವನ ವಿಷಯ ಅಧ್ಯಯನಕ್ಕೆ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಆಸಕ್ತಿ ತೋರಿಸಿಲ್ಲ. ಈ ಕೇಂದ್ರ ಆರಂಭವಾದಾಗ ವರ್ಷಕ್ಕೆ ಕನಿಷ್ಠ 20 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಗುರಿಯನ್ನು ತಲುಪಿಲ್ಲ. ಹೀಗಿರುವಾಗ ರಾಜ್ಯದ 10 ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಮತ್ತು ಸಂಶೋಧನೆ ಕೇಂದ್ರಗಳನ್ನು ಸ್ಥಾಪಿಸುವ ವಿಚಾರವನ್ನು ಕೈ ಬಿಡುವುದು ಒಳಿತು ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.
21ನೇ ಶತಮಾನದ ಎರಡು ದಶಕಗಳು ಕೊನೆ ತಿರುವಿಗೆ ಬಂದು ನಿಂತಿರುವ ಹೊತ್ತಿನಲ್ಲಿ ರಾಷ್ಟ್ರಪಿತ ಗಾಂಧಿ ಕುರಿತು ಅರಿತುಕೊಳ್ಳಲು ಎಷ್ಟು ಮಂದಿಯಲ್ಲಿ ಉತ್ಸಾಹ, ಆಸಕ್ತಿ ಇದೆ ಎಂಬ ಪ್ರಶ್ನೆಯೂ ಎದ್ದಿದೆ. ಗಾಂಧಿ ಅಧ್ಯಯನ ಕುರಿತು ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಎದ್ದು ಕಾಣುತ್ತಿರುವುದು ಇತ್ತೀಚಿನ ಸಮೀಕ್ಷೆಯೊಂದು ಹೊರಗೆಡವಿತ್ತು.
ಉದ್ಯೋಗಾವಕಾಶಗಳ ಸಂಖ್ಯೆ ಕಡಿಮೆ ಇರುವುದು ಸೇರಿದಂತೆ ಇನ್ನಿತರೆ ಕಾರಣಗಳಿಂದ ಗಾಂಧಿ ಮತ್ತು ಅವರ ವಿಚಾರಧಾರೆ ಕುರಿತ ಅಧ್ಯಯನವನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳುತ್ತಿಲ್ಲ. ಸಂಶೋಧನೆಯಲ್ಲಿ ಅತ್ಯಾಸಕ್ತಿ ಇರುವವರು ಮಾತ್ರ ಅಧ್ಯಯನಕ್ಕೆ ಮುಂದಾಗುತ್ತಾರೆ ಎಂದು ಹೇಳಬಹುದಾದರೂ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ ಗಾಂಧಿ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳಿಲ್ಲದೇ ಬಣಗುಡುತ್ತಿರುವ ಹೊತ್ತಿನಲ್ಲಿ 10 ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರ ಆರಂಭಿಸುವುದು ಎಷ್ಟು ಸೂಕ್ತ ಎಂಬ ಮಾತುಗಳು ಕೇಳಿ ಬಂದಿವೆ.