ಬೆಂಗಳೂರು; ಕೃಷಿ ಉತ್ಪನ್ನ ಮಾರುಕಟ್ಟೆ ಸ್ವಂತ ಪ್ರಾಂಗಣ ಹೊಂದದೇ ಇದ್ದರೂ ಸಹ 2,132 ಕಮಿಷನ್ ಏಜೆಂಟ್ ಲೈಸೆನ್ಸ್‌ಗಳನ್ನು ಮಂಜೂರು ಮಾಡಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ವ್ಯಾಪ್ತಿಯಲ್ಲಿರುವ ಮಳಿಗೆಗಳು ಮತ್ತು ಅಂಗಡಿಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆಯುತ್ತಿವೆ. ಮಳಿಗೆ ಮತ್ತು ಅಂಗಡಿಗಳನ್ನು ಹರಾಜು ಪ್ರಕ್ರಿಯೆಯೇ ಪೂರ್ವ ನಿರ್ಧರಿತವಾಗಿರುತ್ತವೆ. ವ್ಯಾಪಾರಿಗಳ ಗಮನಕ್ಕೂ ತಾರದೆಯೇ ಮಳಿಗೆ ಮತ್ತು ಅಂಗಡಿಗಳನ್ನು ತಮಗೆ ಬೇಕಾದವರಿಗೆ ಹರಾಜು ಹಾಕಲಾಗುತ್ತಿದೆ. ಇಡೀ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಲಂಚಗುಳಿತನ ನಡೆಯುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿರುವ ನಡುವೆಯೇ ಹೊಸಕೋಟೆಯಲ್ಲಿಯೂ ಸಹ 2,132 ಕಮಿಷನ್ ಏಜೆಂಟ್ ಲೈಸೆನ್ಸ್‌ಗಳನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿರುವ ಪ್ರಕರಣಗಳು ಮುನ್ನೆಲೆಗೆ ಬಂದಿವೆ.
ಈ ಕುರಿತು 2025ರ ಸೆ.16ರಂದು ನಿರ್ದೇಶಕರ ಕಚೇರಿಯ ಜಂಟಿ ಪರಿಶೀಲನಾ ತಂಡವು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತ್ತು. ನಂತರ 2025ರ ಡಿಸೆಂಬರ್ 12ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಹೊಸಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾರ್ಯದರ್ಶಿಯಾಗಿದ್ದ ಎಂ ವಿ ಸುಮ ಎಂಬುವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ 1957ರ ನಿಯಮ 11ರ ಅನ್ವಯ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದೆ. ಅಲ್ಲದೇ ಈ ಬಗ್ಗೆ ದೋಷಾರೋಪಣೆ ಪಟ್ಟಿಯನ್ನೂ (ಅನುಬಂಧ 1-4) ಜಾರಿಗೊಳಿಸಿದೆ.
ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ದೋಷಾರೋಪಣೆ ಪಟ್ಟಿ ಹೊರಡಿಸಲು ಅಧಿಕಾರಿಗಳು ಸಚಿವ ಶಿವಾನಂದ ಪಾಟೀಲ್ ಅವರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಎಪಿಎಂಸಿಯಲ್ಲಿ ಮಳಿಗೆಗಳ ಹರಾಜಿನಲ್ಲಿ ಅಕ್ರಮ ಅವ್ಯವಹಾರಗಳು ನಡೆದಿವೆ ಎಂಬ ದೂರುಗಳು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರ ಗಮನಕ್ಕೂ ಬಂದಿದ್ದವು ತಿಳಿದು ಬಂದಿದೆ.
2024ರ ಜುಲೈ 22ರಿಂದ 2025ರ ಎಪ್ರಿಲ್ 16ರವರೆಗೆ ಹೊಸಕೋಟೆ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಆಡಳಿತಾಧಿಕಾರಿಯಾಗಿದ್ದ ಎಂ ವಿ ಸುಮ ಅವರು ಕಾನೂನುಬಾಹಿರವಾಗಿ ಬೃಹತ್ ಪ್ರಮಾಣದ ಒಟ್ಟು 2,132 ಕಮಿಷನ್ ಏಜೆಂಟ್ ಲೈಸೆನ್ಸ್‌ಗಳನ್ನು ಮಂಜೂರು ಮಾಡಿದ್ದರು. ವಿಶೇಷವೆಂದರೇ ಹೊಸಕೋಟೆ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಸ್ವಂತ ಪ್ರಾಂಗಣ ಹೊಂದಿರಲಿಲ್ಲ. ಆದರೂ 2,132 ಕಮಿಷನ್ ಏಜೆಂಟ್ ಲೈಸೆನ್ಸ್‌ಗಳನ್ನು ಮಂಜೂರು ಮಾಡಲಾಗಿತ್ತು.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಕಾಯ್ದೆ ಕಲಂ 72ರಲ್ಲಿ ಕಮಿಷನ್ ಏಜೆಂಟ್ ಲೈಸೆನ್ಸ್ ನೀಡಲು ಅವಕಾಶ ಕಲ್ಪಿಸಿದೆ. ಇದನ್ನು ಕಲಂ 8 ಮತ್ತು 78ರಂತೆ ಪರಿಗಣಿಸದೇ ಕಾನೂನಾತ್ಮಾಕವಾಗಿ ಪರಿಶೀಲಿಸದೆಯೇ ಇಲಾಖೆಯ ಕಾಯ್ದೆಯ ನಿಯಮ ಮತ್ತು ಮೂಲ ಉದ್ದೇಶಗಳನ್ನು ಉಲ್ಲಂಘಿಸಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

ಅರ್ಜಿದಾರರಿಂದ ದಾಖಲೆಗಳನ್ನು ಪಡೆದಿರಲಿಲ್ಲ
ಜಂಟಿ ಪರಿಶೀಲನೆ ಸಮಿತಿಯು ಅನೇಕ ಸಂಗತಿಗಳನ್ನು ಹೊರಗೆಡವಿತ್ತು. ಎಂ ವಿ ಸುಮ ಅವರು ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಒಟ್ಟು 12 ಸಮಿತಿ ಸಭೆ ನಡೆದಿದ್ದವು. ಈ ಸಭೆಗಳಲ್ಲಿ ಒಟ್ಟು ಮಂಜೂರಾದ ಲೈಸೆನ್ಸ್‌ಗಳ ಸಂಖ್ಯೆಗೂ ಮತ್ತು ಸಮಿತಿ ಸಭೆಯಲ್ಲಿ ಮಂಡಿಸದೇ ನೇರವಾಗಿ ಮಂಜೂರಾದ ಲೈಸೆನ್ಸ್‌ಗಳ ಸಂಖ್ಯೆಯಲ್ಲಿ ಅಜಗಜಾಂತರವಿತ್ತು. ಸಮಿತಿ ಮುಂದೆ ಮಂಡಿಸಿ ಮಂಜೂರಾಗಿದ್ದ ಲೈಸೆನ್ಸ್‌ಗಳ ಸಂಖ್ಯೆಯು 2,071 ಇತ್ತು. ಸಮಿತಿ ಸಭೆಯಲ್ಲಿ ಮಂಡಿಸದೇ ಕಾರ್ಯದರ್ಶಿ ನೇರವಾಗಿ 61 ಲೈಸೆನ್ಸ್ ಸೇರಿ 2,132 ಸಂಖ್ಯೆಯಲ್ಲಿ ಲೈಸೆನ್ಸ್‌ಗಳನ್ನು ಮಂಜೂರು ಮಾಡಿದ್ದರು. ಲೈಸೆನ್ಸ್ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಅರ್ಜಿದಾರರಿಂದ ಕಡ್ಡಾಯವಾಗಿ ಪಡೆಯಬೇಕಾದ ದಾಖಲೆಗಳನ್ನೇ ಪಡೆದಿರಲಿಲ್ಲ. ಆದರೂ ನಿಯಮಬಾಹಿರವಾಗಿ ಈ ಅರ್ಜಿದಾರರಿಗೆ ಲೈಸೆನ್ಸ್‌ಗಳನ್ನು ಮಂಜೂರು ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ನಿಯಮಗಳ ಉಲ್ಲಂಘನೆ ಪಟ್ಟಿ ಮಾಡಿದ ಇಲಾಖೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ವ್ಯವಹಾರ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಕಾಯ್ದೆಯ ಕಲಂ 8ರ ಅಡಿ ಘೋಷಿತ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟನ್ನು ಘೋಷಿತ ಮಾರುಕಟ್ಟೆ ಪ್ರಾಂಗಣಗಳಲ್ಲೇ ನಡೆಸಬೇಕು. ಇದು ಕಡ್ಡಾಯ. ಆದರೆ ಹೊಸಕೋಟೆ ಸಮಿತಿಗೆ ಸ್ವಂತ ಪ್ರಾಂಗಣವೇ ಇರಲಿಲ್ಲ. ಸ್ವಂತ ಪ್ರಾಂಗಣವು ನಿರ್ಮಾಣವಾಗುವ ಮುನ್ನವೇ ನಿರ್ದಿಷ್ಟಪಡಿಸದ ಸ್ಥಳಗಳಿಗೆ ಕಮಿಷನ್ ಏಜೆಂಟ್ ಲೈಸೆನ್ಸ್‌ಗಳನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿತ್ತು. ಇದು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಕಾಯ್ದೆಯ ಕಲಂ 8,72,78 ಹಾಗೂ ನಮೂನೆ 41ನ್ನು ಸುಮಾ ಅವರು ಉಲ್ಲಂಘಿಸಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.
ಅಧ್ಯಕ್ಷೀಯ ಅಧಿಕಾರ ದುರುಪಯೋಗ
‘ಇವರು ಒಬ್ಬ ಜವಾಬ್ದಾರಿಯುತ ಸಮಿತಿಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಅಧ್ಯಕ್ಷೀಯ ಅಧಿಕಾರ ದುರುಪಯೋಗಪಡಿಸಿಕೊಂಡು ನಿಯಮಬಾಹಿರವಾಗಿ ಬೃಹತ್ ಪ್ರಮಾಣದ ಕಮಿಷನ್ ಏಜೆಂಟ್ ಲೈಸೆನ್ಸ್ ಮಂಜೂರು ಮಾಡಿರುವುದು ಹಾಗೂ ಸಮಿತಿಯ ಸಭೆಯಲ್ಲಿ ಮಂಡಿಸದೇ ನಿಯಮಬಾಹಿರವಾಗಿ ನೀಡಲಾಗಿರುವ 61 ಲೈಸೆನ್ಸ್‌ಗಳ ಕುರಿತು ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗಮನಹರಿಸದೇ ಇರುವುದು ಕರ್ತವ್ಯಲೋಪಕ್ಕೆ ಕಾರಣರಾಗಿ 2021ರ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳ 3ನೇ ನಿಯಮದ ಸ್ಪಷ್ಟ ಉಲ್ಲಂಘನೆ ಮಾಡಿರುತ್ತಾರೆ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.

ಅಂಗಡಿಗಳ ಪೂರ್ಣ ವಿಳಾಸವೇ ಇಲ್ಲ
ಅರ್ಜಿದಾರರು ಲೈಸೆನ್ಸ್‌ಗಾಗಿ ಸಲ್ಲಿಸಿದ್ದ ನಮೂನೆ 41ರ ಅಡಿಯ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ. ಅರ್ಜಿಯ ಕ್ರಮ ಸಂಖ್ಯೆ 6ರ ವಿಳಾಸ ಕಲಂನಲ್ಲಿ ಹೊಸಕೋಟೆ ತಾಲೂಕು ಕನಕನಗರ, ಹೊಸಕೋಟೆ ಮತ್ತು ಇತರೆ ವಿಳಾಸಗಳನ್ನು ಕಪ್ಪು ಶಾಹಿಯಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಬರೆಯಲಾಗಿತ್ತು. ಈ ರೀತಿ ಒಂದೊಂದು ಲಾಡ್‌ಗಳ ಪ್ರಕಾರ ಸುಮಾರು 20ರಿಂದ 30 ಅರ್ಜಿಗಳಿದ್ದವು. ಇನ್ನು ಕೆಲವು ಅರ್ಜಿಗಳಲ್ಲಿ ಅಂಗಡಿಗಳ ವಿಳಾಸವೇ ಇರಲಿಲ್ಲ.

ಲೈಸೆನ್ಸ್ ಸಂಖ್ಯೆ 0/024/ಸಿ/015ರಿಂದ ಸಂಖ್ಯೆ 0/024/ಸಿ/025 ವರೆಗಿನ ಲೈಸೆನ್ಸ್ ಅರ್ಜಿಗಳಲ್ಲಿ ಬರವಣಿಗೆಯನ್ನು ಒಬ್ಬರೇ ಬರೆದಿದ್ದಾರೆ. ಅದರಲ್ಲಿ ಅಂಗಡಿಯ ವಿಳಾಸದ ಎದುರಿಗೆ ಪ್ರತಿಯೊಂದು ಲೈಸೆನ್ಸ್ ಅರ್ಜಿಗಳಲ್ಲಿ ಮಾರುಕಟ್ಟೆ ಪ್ರಾಂಗಣ ಎಂದು ಮತ್ತೊಬ್ಬರಿಂದ ಬರೆಸಲಾಗಿತ್ತು. ಮತ್ತು ಲೈಸೆನ್ಸ್ ಸಂಖ್ಯೆ 0/024/ಸಿ/001ರಿಂದ ಸಂಖ್ಯೆ 0/024/013, 0/024/36ರಿಂದ 0/024/59, 0/0/024/1/126ರಿಂದ 0/024/1/137 ಹಾಗೂ 0/0/24/1/144ರಿಂದ 0/0/24/1/160 ಹಾಗೂ ಇನ್ನು ಮುಂತಾದ ಲೈಸೆನ್ಸ್ ಅರ್ಜಿಗಳಲ್ಲಿ ಅಂಗಡಿಯ ವಿಳಾಸ ಕಲಂನಲ್ಲಿ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಮೊಹರು ಹಾಕಿ ವಿಳಾಸ ನಮೂದಿಸಿದ್ದನ್ನು ಜಂಟಿ ಪರಿಶೀಲನಾ ಸಮಿತಿಯು ಪತ್ತೆ ಹಚ್ಚಿತ್ತು.

ಅಲ್ಲದೇ ಕೆಲವು ಲೈಸೆನ್ಸ್ ಅರ್ಜಿಗಳಲ್ಲಿ ಅರ್ಜಿದಾರರ ಸಂಸ್ಥೆಯ ಹೆಸರಿನ ಜೊತೆ ಪರವಾಗಿ ಎಂದು ಬರೆದಿರುವುದು ಈ ರೀತಿ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಮೊಹರು ಹಾಕಿ ಅದರ ಕೆಳಗೆ ಅಥವಾ ಮೇಲೆ ಪಕ್ಕ ಮಾರುಕಟ್ಟೆ ಪ್ರಾಂಗಣ ಎಂದು ಎಲ್ಲಾ ಅರ್ಜಿಗಳಲ್ಲಿ ಆಂಗ್ಲ/ಕನ್ನಡ ಭಾಷೆಯಲ್ಲಿ ಬರೆದಿರುವ ಪ್ರಕರಣಗಳು ಕಂಡುಬಂದಿರುತ್ತದೆ ಎಂದು ವರದಿಯಲ್ಲಿ ವಿವರಿಸಿದೆ.
‘ಈ ಬರವಣಿಗೆಯು ಒಂದೇ ತೆರನಾಗಿದ್ದು ಹಾಗೂ ಅರ್ಜಿಯ ಕ್ರಮ ಸಂಖ್ಯೆ 6ರ ಅಂಗಡಿ ವಿಳಾಸ ಕಲಂನಲ್ಲಿ ಮಾರುಕಟ್ಟೆ ಪ್ರಾಂಗಣ ಎಂದು ಕಪ್ಪುಶಾಹಿಯಲ್ಲಿ ಬರೆಯಲಾಗಿರುತ್ತದೆ. ಎಲ್ಲಾ ಅರ್ಜಿಗಳು ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳು ಬರೆದ ಹಾಗೆ ಇರುತ್ತದೆ. ಇದು ಮೂಲ ಅರ್ಜಿದಾರರ ಬರವಣಿಗೆಯಾಗಿರದೇ ಬೇರೆಯವರ ಬರವಣಿಗೆಯಾಗಿರುವುದು ಸ್ಪಷ್ಟವಾಗಿದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.
ಕಮಿಷನ್ ಏಜೆಂಟ್ ಲೈಸೆನ್ಸ್‌ಗಳು ಅಧಿಸೂಚಿತ ಮಾರುಕಟ್ಟೆ ಪ್ರಾಂಗಣದಲ್ಲಿ ಇರುವ ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಅಂಗಡಿಯ ಪೂರ್ಣ ವಿಳಾಸ ಹೊಂದಿಲ್ಲ. ಅಲ್ಲದೇ ಮಂಜೂರು ಮಾಡಲಾದ ಒಟ್ಟು 2,132 ಕಮಿಷನ್ ಏಜೆಂಟ್ಸ್ ಲೈಸೆನ್ಸ್‌ಗಳು ಅಧಿಸೂಚಿತ ಮಾರುಕಟ್ಟೆ ಪ್ರಾಂಗಣದಲ್ಲಿ ಇರುವ ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಅಂಗಡಿಯ ವಿಳಾಸ ಹೊಂದಿಲ್ಲ. ಈ ಪ್ರಕರಣ ಬೆಳಕಿಗೆ ಬಂದ ನಂತರ ಕೆಲವೊಂದು ಲೈಸೆನ್ಸ್ ಅರ್ಜಿಯಲ್ಲಿ ಮಾರುಕಟ್ಟೆ ಸಮಿತಿಯವರು ಮಾರುಕಟ್ಟೆ ಪ್ರಾಂಗಣ ಎಂಧು ನಿಯಮಬಾಹಿರವಾಗಿ ಬೇರೆ ವ್ಯಕ್ತಿಗಳಿಂದ ಬರೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಸಹಜ ಮಂಜೂರು
ಹಾಗೆಯೇ 12 ಸಮಿತಿ ಸಭೆಯಲ್ಲಿ 2,071 ಕಮಿಷನ್ ಏಜೆಂಟ್ ಲೈಸೆನ್ಸ್‌ಗಳನ್ನು ದಿನಗಳ ಅಂತರವಿಲ್ಲದೇ ಸಮಿತಿ ಸಭೆಯಲ್ಲಿ ಮಂಡಿಸಿ ಮಂಜೂರು ಮಾಡಲಾಘಿದೆ. ಒಂದೊಂದು ಸಮಿತಿ ಸಭೆಯಲ್ಲಿ ಕನಿಷ್ಠ 113 ಲೈಸೆನ್ಸ್ ಮತ್ತು ಗರಿಷ್ಠ 300 ಲೈಸೆನ್ಸ್‌ಗಳನ್ನು ಅಸಹಜವಾಗಿ ಮಂಜೂರು ಮಾಡಲಾಗಿದೆ. ಎಲ್ಲಾ ಕಮಿಷನ್ ಲೈಸೆನ್ಸ್ ಅರ್ಜಿಯಲ್ಲಿನ 11 ಕಾಲಂನಲ್ಲಿ ಅರ್ಜಿದಾರರ ಚರಾಸ್ತಿ, ಸ್ಥಿರಾಸ್ತಿ ಕುರಿತು ಯಾವುದೇ ಮಾಹಿತಿ ಪಡೆದಿಲ್ಲ. ಈ ಕಲಂನಲ್ಲಿ NIL ಎಂದು ನಮೂದಿಸಲಾಗಿದೆ. ಹಾಗೆಯೇ ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಪಡೆಯಬಹುದಾದ ಬಾಡಿಗೆ ಕರಾರು ಪತ್ರವನ್ನು 1848 ಪ್ರಕರಣಗಳಲ್ಲಿ ಪಡೆಯದೇ ನಿಯಮಬಾಹಿರವಾಗಿ ಮಂಜೂರು ಮಾಡಿರುವುದನ್ನು ಜಂಟಿ ಪರಿಶೀಲನಾ ಸಮಿತಿಯು ಪತ್ತೆ ಹಚ್ಚಿದೆ.

ಹೊಸಕೋಟೆ ಪ್ರಕರಣದಲ್ಲಿ ನೋಟಿಸ್ ಪಡೆದುಕೊಂಡಿರುವ ಎಂ ವಿ ಸುಮ ಅವರು ಸಿಂಗೇನ ಅಗ್ರಹಾರದಲ್ಲಿನ ಎಪಿಎಂಸಿ ವ್ಯಾಪ್ತಿಯಲ್ಲಿ ಅಂಗಡಿಗಳ ಹಂಚಿಕೆಯಲ್ಲಿ ಅಕ್ರಮಗಳನ್ನು ಎಸಗಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು. ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಕೆಯಾಗಿತ್ತು.
ಸಿಂಗೇನಅಗ್ರಹಾರದಲ್ಲಿರುವ ಹಣ್ಣಿನ ಮಾರುಕಟ್ಟೆಯಲ್ಲಿನ ಇ-32, ಎಫ್ 52 ಮತ್ತು ಎಫ್ 56 ಅಂಗಡಿ ಹಂಚಿಕೆಯಲ್ಲಿ ಗಂಭೀರ ಅಕ್ರಮಗಳು ಮತ್ತು ಉದ್ದೇಶಪೂರ್ವಕವಾಗಿ ದುಷ್ಕೃತ್ಯಗಳು ನಡೆದಿವೆ ಎಂದು ದೂರಿನಲ್ಲಿ ಪ್ರಸ್ತಾವಿಸಲಾಗಿತ್ತು.

ಈ ಮಳಿಗೆಗಳನ್ನು ಹಂಚಿಕೆ ಮಾಡಲು ಹೊರಡಿಸಿರುವ ಅಧಿಸೂಚನೆಯೇ ಅನುಚಿತವಾಗಿದೆ. ಮತ್ತು ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. 2025ರ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿರುವ ಎಪಿಎಂಸಿ ಅಧಿಕಾರಿಗಳು, ಅರ್ಜಿ ಸಲ್ಲಿಸಲು ಕೇವಲ ಮೂರೇ ಮೂರು ದಿನಗಳ ಕಾಲಾವಕಾಶ ನೀಡಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ ಎಂದು ದೂರುದಾರರು ವಿವರಿಸಿದ್ದರು.
ಮಳಿಗೆಗಳ ಹಂಚಿಕೆಗಾಗಿ ಬೆರಳಣಿಕೆಯ ಪತ್ರಿಕೆಗಳಲ್ಲಿ ಮಾತ್ರ ಜಾಹೀರಾತು ನೀಡಲಾಗಿದೆ. ಈ ಪತ್ರಿಕೆಗಳು ಸಹ ಎಪಿಎಂಸಿ ಮಾರುಕಟ್ಟೆ ಆವರಣದ ಒಳಗೆ ಮತ್ತು ಸುತ್ತಮುತ್ತ ವ್ಯಾಪಕವಾಗಿ ಪ್ರಸಾರವಾಗುವುದಿಲ್ಲ. ಇದರಿಂದಾಗಿ ಹೆಚ್ಚಿನ ವ್ಯಾಪಾರಿಗಳಿಗೆ ಮಳಿಗೆಗಳ ಹಂಚಿಕೆಯ ಪ್ರಮುಖ ಸೂಚನೆಯೇ ತಿಳಿದಿಲ್ಲ. ಈ ಸಂಬಂಧ ಅಧಿಕೃತವಾಗಿ ವ್ಯಾಪಾರಿಗಳ ಸಭೆಯನ್ನೂ ನಡೆಸಿಲ್ಲ. ಹಾಗೆಯೇ ಹಂಚಿಕೆ ಪ್ರಕ್ರಿಯೆ ಕುರಿತು ವ್ಯಾಪಾರಿಗಳೊಂದಿಗೆ ಸಮಾಲೋಚನೆಯನ್ನೂ ನಡೆಸಿಲ್ಲ ಎಂದು ದೂರಲಾಗಿದೆ.
‘ಮಳಿಗೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. ಮೊದಲೇ ಪೂರ್ವ ನಿರ್ಧರಿತ ಪಟ್ಟಿಯಲ್ಲಿನ ವ್ಯಾಪಾರಸ್ಥರಿಗೆ ಹಂಚಿಕೆ ಮಾಡುವ ಸಂಚೂ ಕೂಡ ಇದೆ. ಇದರಲ್ಲಿಯೂ ಹಿತಾಸಕ್ತಿ ಸಂಘರ್ಷವೂ ಎದ್ದು ಕಾಣುತ್ತಿದೆ. ಮೂರು ನಿರ್ದಿಷ್ಟ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹಂಚಿಕೆ ಪ್ರಕ್ರಿಯೆ ನಡೆಸಲಾಗಿದೆ. ಉಳಿದ ವ್ಯಾಪಾರಿಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ,’ ಎಂದು ದೂರುದಾರರು ಆರೋಪಿಸಿದ್ದರು.

ಬನಶಂಕರಿ ಫ್ರೂಟ್ಸ್, ಮಂಜುನಾಥ ಫ್ರೂಟ್ಸ್, ಸಿಂಗ್ ಇಂಟರ್‍ನ್ಯಾಷನಲ್ ವ್ಯಾಪಾರಿಗಳಿಗೆ ವಾಮಮಾರ್ಗದಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಮಳಿಗೆಯನ್ನು ಹಂಚಿಕೆ ಮಾಡುವ ಮುನ್ನವೇ ಬಳಕೆದಾರರ ಶುಲ್ಕವನ್ನು ಮೊದಲೇ ಪಾವತಿಸಲಾಗಿದೆ. ಇದು ಪೂರ್ವನಿರ್ಧರಿತ ವ್ಯವಹಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರುದಾರರು ಆಪಾದಿಸಿದ್ದರು.
‘ಈ ಇಡೀ ಪ್ರಕ್ರಿಯೆಯಲ್ಲಿ ಎಪಿಎಂಸಿ ಬಿನ್ನಿಪೇಟೆ ಕಾರ್ಯದರ್ಶಿ ಸುಮಾ, ಆಡಳಿತಾಧಿಕಾರಿ ರಾಜಣ್ಣ ಮತ್ತು ಅಂಗಡಿ ಮಾಲೀಕರು ಶಾಮೀಲಾಗಿದ್ದಾರೆ. ಅರ್ಜಿದಾರರ ಸಂಖ್ಯೆಯನ್ನು ಮಿತಿಗೊಳಿಸಲು ಕುತಂತ್ರ ನಡೆಸಿದ್ದಾರೆ. 1,000ಕ್ಕೂ ಹೆಚ್ಚು ಪರವಾನಿಗೆದಾರರು ಅಂಗಡಿ ಹಂಚಿಕೆಗಾಗಿ ಕಾಯುತ್ತಿದ್ದರೂ ಸಹ ಕೇವಲ 17 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ,’ ಎಂದು ದೂರಿನಲ್ಲಿ ವಿವರಿಸಿದ್ದರು.

ಮಾರುಕಟ್ಟೆ ಸಮಿತಿಯ ಸಹಾಯಕ ಕಾರ್ಯದರ್ಶಿ ಚಿತ್ರಾ ಮತ್ತು ಮಾರುಕಟ್ಟೆ ಮೇಲ್ವಿಚಾರಕಿ ರೇಣುಕಾ ಎಂಬವರು ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಬ್ಬರೂ ಕೆಲವು ವ್ಯಾಪಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಮತ್ತು ಪೂರ್ವ ನಿರ್ಧರಿತ ಅಂಗಡಿಗಳಿಗೆ ಹಂಚಿಕೆ ಮಾಡುತ್ತಿದ್ದಾರೆ. ಎಪಿಎಂಸಿ ನಿಯಮಗಳಿಗೆ ವಿರುದ್ಧವಾಗಿ ಮತ್ತು ಕಾನುನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಕರಣವೊಂದರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇತ್ಯರ್ಥವಾಗದೇ ಇದ್ದರೂ ಸಹ ಲಕ್ಷಾಂತರ ರುಪಾಯಿ ಲಂಚ ಪಡೆದು ಎಪಿಎಂಸಿ ಮಳಿಗೆ ನೋಂದಣಿ ಮಾಡಿಕೊಡಲಾಗಿತ್ತು. ಸಮಿತಿಯ ಕಾರ್ಯದರ್ಶಿ ಮಳಿಗೆದಾರರಿಂದ ಲಂಚ ಪಡೆದು ಅನಧಿಕೃತವಾಗಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ಸಹಕಾರ ಇಲಾಖೆಗೆ ಕನ್ನಡ ಸಮರ ಸೇನೆಯ ಅಧ್ಯಕ್ಷ ಅವಿನಾಶ ದೀನೇ ಎಂಬುವರು ದೂರು ಸಲ್ಲಿಸಿದ್ದರು.
‘ಉಚ್ಛ ನ್ಯಾಯಾಲಯದ ಕಲ್ಬುರ್ಗಿ ಪೀಠದಲ್ಲಿ ಪ್ರಕರಣಗಳು ಬಾಕಿ ಇರುವಾಗಲೇ ಏಕಾಏಕೀ 2024 ಮೇ ಮತ್ತು ಜೂನ್‌ನಲ್ಲಿ ಎಲ್ಲಾ ವ್ಯಾಪಾರಸ್ಥರಿಂದ ಸುಮಾರು 2ರಿಂದ 3 ಲಕ್ಷ ರು ಲಂಚವನ್ನು ಪಡೆದು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಎಲ್ಲರಿಗೂ ನೋಂದಣಿ ಮಾಡಿಕೊಟ್ಟಿರುತ್ತಾರೆ,’ ಎಂದು ದೂರಿನಲ್ಲಿ ವಿವರಿಸಿದ್ದರು.
ಲಕ್ಷಾಂತರ ರುಪಾಯಿ ಲಂಚ; ಹಣ್ಣು, ತರಕಾರಿ ಮಾರುಕಟ್ಟೆ ಮಳಿಗೆಗಳಿಗೆ ಅನಧಿಕೃತ ನೋಂದಣಿ, 4.74 ಕೋಟಿ ನಷ್ಟ
ಮದೀನಾ ಪ್ರೂಟ್ ಕಂಪನಿ, ಕೆ ಜಿ ಎನ್ ಫ್ರೂಟ್ ಕಮಿಷನ್ fಏಜೆಂಟ್, ಮಹ್ಮದ ಮುಜಮಿಲ್ ಅಹ್ಮದ್, ನ್ಯೂ ರಾಯಲ್ ಫ್ರೂಟ್, ಮಹ್ಮದ ಜಮೀಲ್ ಅಹ್ಮದ್, ನ್ಯೂ ಸ್ಟಾರ್ ಮದೀನಾ ಟ್ರೇಡರ್ಸ್, ಎಚ್ ಎಂ ಅಂಡ್ ಕಂಪನಿ, ಶ್ರೀ ಸಾಯಿ ಟ್ರೇಡಿಂಗ್ ಕಂಪನಿ, ಅಲ್ ಹಜ್ ಶೇಖ ಅಹ್ಮದ್ ಫ್ರೂಟ್ ಕಂಪನಿಗೆ ಅನಧಿಕೃತವಾಗಿ ನೋಂದಣಿ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಪಟ್ಟಿಯನ್ನು ಒದಗಿಸಿದ್ದರು.
‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪರಮೇಶ್ವರಿ ಫುಲೇಕರ್ ಅವರು ಪ್ರತಿ ಒಂದು ಅಂಗಡಿಗೆ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಒಟ್ಟು ಮೌಲ್ಯ 13,00,000 ರು. ಮೇಲೆ ಶೇ.12ರಂತೆ ದಂಡ ವಸೂಲಿ ಮಾಡಬೇಕಾಗಿತ್ತು. ಈ ದಂಡವು ಒಂದು ವರ್ಷಕ್ಕೆ 1,56,000 ರು. ರ ಪ್ರಕಾರ ಇಲ್ಲಿಯವರೆಗೆ 8 ವರ್ಷಕ್ಕೆ 4,74,24,000 ರು. ಆಗಲಿದೆ. ಆದರೆ 4.74 ಕೋಟಿ ರು.ಗಳನ್ನು ವಸೂಲಿ ಮಾಡದೇ ಸರ್ಕಾರಕ್ಕೆ ನಷ್ಟವುಂಟಾಗಿದೆ. ಪ್ರತಿ ಅಂಗಡಿಯವರಿಂದ ಸುಮಾರು 5 ಲಕ್ಷ ರು. ಲಂಚ ಪಡೆದು ನೋಂದಣಿ ಮಾಡಿಸಿಕೊಡಲಾಗಿದೆ,’ ಎಂದು ಅವಿನಾಶ ದೀನೇ ಅವರು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.






