ತಜ್ಞರ ಶಿಫಾರಸ್ಸಿಲ್ಲದೇ ಪಿಪಿಇ ಕಿಟ್‌, ಮಾಸ್ಕ್‌, ಉಪಕರಣ ಖರೀದಿ; 815 ಕೋಟಿ ರು. ಏರಿಕೆ ಗುಟ್ಟೇನು?

ಬೆಂಗಳೂರು; ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ವೈದ್ಯಕೀಯ ಶಿಕ್ಷಣ ನಿರ್ದೆಶನಾಲಯ ಸಲ್ಲಿಸಿದ್ದ ಪ್ರಸ್ತಾವನೆಗಳಿಗೆ ತಜ್ಞರ ಅಭಿಪ್ರಾಯ, ತಾಂತ್ರಿಕ ಮಾಹಿತಿ ಮತ್ತು ವಸ್ತುನಿಷ್ಠ ಶಿಫಾರಸ್ಸುಗಳೇ ಇರಲಿಲ್ಲ. ಸರ್ಕಾರ ಬಿಡುಗಡೆ ಮಾಡಿದ್ದ ಮೊತ್ತಕ್ಕೆ ಎದುರಾಗಿ ಎರಡು ಪಟ್ಟು ಹೆಚ್ಚಿನ ಮೊತ್ತದಲ್ಲಿ ಸಾಮಗ್ರಿ, ಉಪಕರಣಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಇದಕ್ಕೆ ಸೂಕ್ತ ಸಮರ್ಥನೆಯನ್ನೇ ನೀಡಿರಲಿಲ್ಲ ಎಂಬ ಹೊಚ್ಚ ಹೊಸ ಮಾಹಿತಿಯನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.


ಉಪಕರಣಗಳ ಗುಣಮಟ್ಟದ ಪರಿಶೀಲನೆಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿದ್ದ ಸಮಿತಿಯನ್ನು ಕತ್ತಲಲ್ಲಿಟ್ಟು ಖರೀದಿಸಲು ಮುಂದಾಗಿತ್ತು ಎಂಬ ಹೊಸ ಅಂಶವನ್ನು ಬಹಿರಂಗಪಡಿಸಿರುವ ‘ದಿ ಫೈಲ್‌’ , ಉಪಕರಣ, ಔಷಧ ಸಾಮಗ್ರಿಗಳ ಖರೀದಿಯಲ್ಲಾಗಿರುವ ಅಕ್ರಮಗಳನ್ನು ಮತ್ತೊಂದು ಮಗ್ಗಲಿಗೆ ಹೊರಳಿಸಿದೆ.


ವೈದ್ಯಕೀಯ ಸಲಕರಣೆ ಮತ್ತು ಔಷಧ ಸಾಮಗ್ರಿಗಳ ಖರೀದಿಯಲ್ಲಿನ ಅಕ್ರಮಗಳ ಕುರಿತಂತೆ ಕೇಳಿ ಬಂದಿರುವ ಸಾಕಷ್ಟು ಆರೋಪಗಳಿಗೆ ಇದೀಗ ಹೊರಬಿದ್ದಿರುವ ಮಾಹಿತಿ, ಇನ್ನಷ್ಟು ಪುಷ್ಟೀಕರಿಸಿ ಮತ್ತಷ್ಟು ಬಲ ತಂದುಕೊಟ್ಟಿದೆ.


ಕೋವಿಡ್‌-19ನ್ನು ನಿರ್ವಹಣೆ ಮಾಡುತ್ತಿರುವ ರಾಜ್ಯದ 17 ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು 4 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಅವಶ್ಯವಿರುವ ಉಪಕರಣಗಳನ್ನು ಖರೀದಿಸಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸಲ್ಲಿಸಿದ್ದ ಅಂದಾಜು ವೆಚ್ಚದ ವಿವರಗಳ ಪರಿಶೀಲನೆ ವೇಳೆಯಲ್ಲಿ ಹಲವು ಕುತೂಹಲಕರ ಮಾಹಿತಿಗಳು ಹೊರಬಿದ್ದಿವೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಮಹತ್ವದ ದಾಖಲೆಗಳು ಲಭ್ಯವಾಗಿವೆ.


10.00 ಲಕ್ಷ ಪ್ರಮಾಣದ ಎನ್‌-95 ಮಾಸ್ಕ್‌ಗಳನ್ನು ಖರೀದಿಸಲು 2020ರ ಏಪ್ರಿಲ್‌ 30ರಂದು ಒಟ್ಟು 29.50 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ 44,99,46,455 ರು. ಮೊತ್ತದಲ್ಲಿ ಎನ್‌-95 ಮಾಸ್ಕ್‌ಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ಲಭ್ಯ ಇರುವ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಈ ಹಿಂದೆ 464.81 ಕೋಟಿ ರು.ಮೊತ್ತದಲ್ಲಿ ಸಾಮಗ್ರಿ/ಉಪಕರಣಗಳನ್ನು ಖರೀದಿಸಲು ಪ್ರಸ್ತಾಪಿಸಿದ್ದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಆ ನಂತರ 815.85 ಕೋಟಿ ರು. ಮೊತ್ತದಲ್ಲಿ ಉಪಕರಣಗಳನ್ನು ಖರೀದಿಸಲು ಪ್ರಸ್ತಾಪಿಸಿತ್ತು. ಆದರೆ ಈ ಮೊತ್ತ ಎರಡು ಪಟ್ಟು ಹೆಚ್ಚಾಗಿರುವುದಕ್ಕೆ ಸೂಕ್ತ ಸಮರ್ಥನೆಯನ್ನೂ ನೀಡಿರಲಿಲ್ಲ ಎಂಬುದು ತಿಳಿದು ಬಂದಿದೆ.


ಇನ್ನು, 815.85 ಕೋಟಿ ರು. ವೆಚ್ಚವನ್ನು ಯಾವ ಮೂಲದಿಂದ ಭರಿಸಬಹುದು ಎಂಬ ಬಗ್ಗೆ ತಜ್ಞರ ವರದಿಯೂ ಮಾಹಿತಿ ನೀಡಿರಲಿಲ್ಲ ಎಂಬುದು ಗೊತ್ತಾಗಿದೆ. ಉಪಕರಣಗಳಿಗೆ 183.38 ಕೋಟಿ ರು., ಡಯೋಗ್ನೋಸ್ಟಿಕ್‌ ಉಪಕರಣಗಳಿಗೆ 118.64 ಕೋಟಿ ರು., ಉಪಕರಣಗಳಿಗೆ ಮೂಲಸೌಕರ್ಯಗಳಿಗೆ 8.52 ಕೋಟಿ ರು., ಆಂಬುಲೆನ್ಸ್‌ಗೆ 8.58 ಕೋಟಿ ರು., ಕನ್ಸೂಮಬೆಲ್ಸ್‌ಗಳಿಗೆ 496.72 ಕೋಟಿ ರು. ಸೇರಿ ಒಟ್ಟು 815.85 ಕೋಟಿ ರು. ಎಂದು ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಿತ್ತು.


‘ನಿರ್ದೇಶನಾಲಯದಿಂದ ಬಂದಿರುವ ವರದಿಯು ಸಮಿತಿಯಲ್ಲಿದ್ದ ತಜ್ಞರ ಯಾವುದೇ ಅಭಿಪ್ರಾಯ, ತಾಂತ್ರಿಕ ಮಾಹಿತಿ ಹಾಗೂ ವಸ್ತುನಿಷ್ಠ ಶಿಫಾರಸ್ಸುಗಳನ್ನು ಒಳಗೊಂಡಿರುವುದಿಲ್ಲ. ಕೇವಲ ವೈದ್ಯಕೀಯ ಕಾಲೇಜುಗಳಿಗೆ ಅಗತ್ಯವಿರುವ ವಿವಿಧ ಉಪಕರಣಗಳನ್ನು ಪಟ್ಟಿ ಮಾಡಿ ಸಲ್ಲಿಸಲಾಗಿದೆ. ಸರ್ಕಾರದಿಂದ ಯಾವ ಉದ್ದೇಶಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೂಲಂಕಷವಾಗಿ ಚರ್ಚಿಸಿ ಸ್ಪಷ್ಟವಾದ ಪ್ರಸ್ತಾವನೆಯನ್ನು ಸಲ್ಲಿಸದೇ ಇರುವುದು ಕಂಡು ಬರುತ್ತದೆ,’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಭಿಪ್ರಾಯಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಆರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಬ್ರಾಂಡೆಡ್‌ ಸಾಮಗ್ರಿ, ಉಪಕರಣಗಳಿಗೆ ಮೊರೆ ಹೋಗಬಾರದು ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಸೂಚಿಸಿದ್ದ ಸರ್ಕಾರ, ಸಾಮಾನ್ಯ ದರದ ಉಪಕರಣ ಮತ್ತು ಸಾಮಗ್ರಿಗಳನ್ನು ಖರೀದಿಸುವುದು ಸೂಕ್ತ ಎಂದು ಹೇಳಿತ್ತು.


ಅಲ್ಲದೆ ಎನ್‌-95 ಮಾಸ್ಕ್‌ಗಳು ದುಬಾರಿ ಆಗಿರುವ ಕಾರಣ ಅದಕ್ಕೆ ಪರ್ಯಾಯವಾಗಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಸ್ವಲ್ಪ ಕಡಿಮೆ ದರದ ಮಾಸ್ಕ್‌ಗಳನ್ನು ಖರೀದಿಸಲು ಪ್ರಸ್ತಾಪಿಸಬೇಕು ಎಂದು ಸೂಚಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ಅಲ್ಲದೆ ಬ್ರಾಂಡೆಡ್‌ ವಸ್ತುಗಳ ಬದಲಾಗಿ ಬೇರೆ ಸಾಮಗ್ರಿಗಳನ್ನು ಹೆಸರಿಸಿರುವ ಬಗ್ಗೆ ತಜ್ಞರ ವರದಿಯಲ್ಲಿ ಉಲ್ಲೇಖವಾಗಿರಲಿಲ್ಲ ಎಂಬುದು ತಿಳಿದು ಬಂದಿದೆ.


‘ಈ ಸಂಕಷ್ಟದ ಸಮಯದಲ್ಲಿಯೇ ತ್ವರಿತ ಚಿಕಿತ್ಸೆ ನೀಡುವ ಹೆಸರಿನಲ್ಲಿ ಬೊಕ್ಕಸವನ್ನು ಕೊಳ್ಳೆ ಹೊಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಕ್ಕೆ ಇದು ಬಲ ನೀಡಿದೆ. ಡಾ ದೇವಿಶೆಟ್ಟಿ ಮತ್ತು ಡಾ ಸಿ ಎನ್‌ ಮಂಜುನಾಥ್‌ ಮತ್ತಿತರ ತಜ್ಞರ ಸಮಿತಿ ಕೇವಲ ನಾಮಕಾವಸ್ಥೆಯಂತಿದೆ. ಭ್ರಷ್ಟ ಅಧಿಕಾರಿಗಳೇ ಯಾವುದನ್ನೂ ಯಾರಿಂದ ಎಷ್ಟಕ್ಕೆ ಖರೀದಿ ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತಿದ್ದಾರೆ. ಇದೊಂದು ಸಾವಿರಾರು ಕೋಟಿ ರು. ಹಗರಣ. ದೊಡ್ಡಮಟ್ಟದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

SUPPORT THE FILE

Latest News

Related Posts