ಮೈಮುಲ್‌; ಸಿಬ್ಬಂದಿ ನೇಮಕಾತಿಯಲ್ಲಿನ ಅಕ್ರಮ ದೃಢಪಡಿಸಿದ ವಿಚಾರಣೆ ವರದಿ

ಬೆಂಗಳೂರು; ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಅನುಸರಿಸದಿರುವುದು ಮತ್ತು ಲಿಖಿತ ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳಿಗೆ ಓಎಂಆರ್‌ ಪ್ರತಿಯನ್ನು ನೀಡದಿರುವುದು ಸೇರಿದಂತೆ ಹಲವು ಲೋಪಗಳನ್ನು ವಿಚಾರಣೆ ತಂಡ ಬಹಿರಂಗಗೊಳಿಸಿದೆ.


ಗಂಭೀರ ಸ್ವರೂಪದ ನ್ಯೂನತೆಗಳನ್ನು ತನಿಖೆ ವೇಳೆ ಪತ್ತೆ ಹಚ್ಚಿರುವ ವಿಚಾರಣೆ ವರದಿ, ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಕೇಳಿ ಬಂದಿದ್ದ ಆರೋಪಗಳಿಗೆ ಬಲ ನೀಡಿದೆ.


ಮೈಮುಲ್‌ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿಚಾರಣೆ ವರದಿ ಆಧರಿಸಿ ಕ್ರಮ ಕೈಗೊಂಡಿರುವ ಸಹಕಾರ ಸಂಘಗಳ ನಿಬಂಧಕ ಪ್ರಸನ್ನಕುಮಾರ್‌ ಅವರು ಈ ಸಂಬಂಧ 2020ರ ಜೂನ್‌ 11 ರಂದು ಮೈಮುಲ್‌ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 168 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿತ್ತು. 25 ಹೆಚ್ಚುವರಿ ಹುದ್ದೆಗಳನ್ನು ಈಗಾಗಲೇ ಹೊರಡಿಸಿದ್ದ ನೇಮಕಾತಿ ಪ್ರಕಟಣೆಗೆ ಅವಶ್ಯ ತಿದ್ದುಪಡಿ ಮತ್ತು ಪ್ರಕಟಣೆ ಹೊರಡಿಸಲು ಆಡಳಿತ ಮಂಡಳಿಗೆ ನಿಬಂಧಕರು ಷರತ್ತುಬದ್ಧ ಆದೇಶವನ್ನು ಹೊರಡಿಸಿದ್ದರೂ ಮೈಮುಲ್‌ ಆಡಳಿತ ಮಂಡಳಿ ಉಲ್ಲಂಘಿಸಿರುವುದು ವಿಚಾರಣೆ ವರದಿಯಿಂದ ಗೊತ್ತಾಗಿದೆ. ಅಲ್ಲದೆ ಮೂಲ ನೇಮಕಾತಿ ಪ್ರಕಟಣೆಗೆ ಮೀಸಲಾತಿ ಅನುಸರಿಸಿ ತಿದ್ದುಪಡಿ ಮತ್ತು ಹೆಚ್ಚುವರಿ ಪ್ರಕಟಣೆ ಹೊರಡಿಸದೇ ಇರುವುದನ್ನು ವರದಿ ಹೊರಗೆಡವಿದೆ.


ಅದೇ ರೀತಿ ನೇಮಕಾತಿ ಅರ್ಜಿ ಸಲ್ಲಿಸಲು 2019ರ ಅಕ್ಟೋಬರ್‌ 9ರಂದು ಕಡೆ ದಿನಾಂಕವಾಗಿತ್ತು. ಆದರೆ ಲಿಖಿತ ಪರೀಕ್ಷೆಯನ್ನು 2019ರ ನವೆಂಬರ್‌ 2ರಿಂದ 5ರವರೆಗೆ ನಡೆಸಲಾಗಿದೆ. ಲಿಖಿತ ಪರೀಕ್ಷೆ ಸಿದ್ಧತೆಗೆ ಅಭ್ಯರ್ಥಿಗಳಿಗೆ 22 ದಿನಗಳ ಕಾಲಾವಕಾಶ ನೀಡಲಾಗಿತ್ತಲ್ಲದೆ ಓ ಎಂ ಆರ್‌ ಪ್ರತಿಯನ್ನು ಅಭ್ಯರ್ಥಿಗಳಿಗೆ ನೀಡಿರಲಿಲ್ಲ.ಲಿಖಿತ ಪರೀಕ್ಷೆ ನಂತರ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರಲಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.


‘ನೇಮಕಾತಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿ ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ನಿಯಮ ಮತ್ತು ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೇಮಕಾತಿಯಲ್ಲಿ ಕಂಡು ಬಂದಿರುವ ನ್ಯೂನತೆಗಳನ್ನು ಸರಿಪಡಿಸಿ ದೂರುಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಬೇಕು,’ ಎಂದು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಮೈಮುಲ್‌ ನೇಮಕಾತಿ ಪ್ರಕರಣ ರಾಜಕೀಯ ಹಗ್ಗ ಜಗ್ಗಾಟಗಳಿಗೆ ಕಾರಣವಾಗಿತ್ತು. ನೇಮಕಾತಿಯಲ್ಲಿ ಅಕ್ರಮಗಳಾಗಿವೆ ಎಂದು ಶಾಸಕ ಸಾ ರಾ ಮಹೇಶ್‌ ಸೇರಿದಂತೆ ಹಲವರು ಅರೋಪಿಸಿದ್ದರು. ಹಾಗೆಯೇ ಉದ್ಯೋಗ ನೀಡಲು 20 ಲಕ್ಷ ರು. ಲಂಚಕ್ಕಾಗಿ ಬೇಡಿಕೆ ಇರಿಸಿದ್ದರು ಎಂಬ ಆಡಿಯೋ ಕೂಡ ಹೊರಬಿದ್ದಿತ್ತು.


ಆರೋಪ ಪ್ರತ್ಯಾರೋಪಗಳ ನಡುವೆಯೇ ಇಲಾಖೆ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖಾ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಸರಿಪಡಿಸಲಾಗುವುದು. ಯಾರೋ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ಇಡೀ ನೇಮಕಾತಿ ಪ್ರಕ್ರಿಯೆ ಕೈಬಿಡಲು ಸಾಧ್ಯವಿಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿರುಗೇಟು ನೀಡಿದ್ದರು.


ಪ್ರತಿಭಟನೆ, ಬ್ಲಾಕ್‌ಮೇಲ್‌ಗಳಿಗೆ ನಾವು ಬಗ್ಗುವುದಿಲ್ಲ ಎಂದು ಹೇಳಿದ್ದ ಸಚಿವ ಸೋಮಶೇಖರ್‌, ಸಿಬ್ಬಂದಿ ಇಲ್ಲದೆ ಡೈರಿ ನಡೆಸಲು ಸಾಧ್ಯವಿಲ್ಲ. ಈಗ ನೇಮಕಾತಿಯಾಗುತ್ತಿರುವ ಹುದ್ದೆಗಳಿಗೆ ಅನುಮೋದನೆಯನ್ನು ತಂದಿದ್ದು ಕೂಡ ಸಾ.ರಾ.ಮಹೇಶ್ ಎಂದು ಬಹಿರಂಗಪಡಿಸಿದ್ದರು.


ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಿ ಟಿ ದೇವೇಗೌಡ ಅವರು ಸಹ ಸಾ ರಾ ಮಹೇಶ್‌ ಅವರನ್ನು ಟೀಕಿಸಿದ್ದು ಅಚ್ಚರಿ ಮೂಡಿಸಿತ್ತು. ನೇಮಕಾತಿ ಅಕ್ರಮದಲ್ಲಿ ತೊಡಗಿರುವ ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್‌) ಅಭ್ಯರ್ಥಿಗಳ ಸಂದರ್ಶನಕ್ಕೆ ಮುಂದಾದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು. ಸರ್ಕಾರವು ಪ್ರಕರಣದ ತನಿಖೆ ನಡೆಸಲು ಸಹಕಾರ ಇಲಾಖೆಯ ಉಪನಿಬಂಧಕರನ್ನು ನಿಯೋಜಿಸಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಸಾ ರಾ ಮಹೇಶ್‌, ಜಿಲ್ಲಾಧಿಕಾರಿಯ ತನಿಖೆಗೆ ತಹಶೀಲ್ದಾರ್‌ ನೇಮಿಸಿದಂತಾಗಿದೆ ಎಂದು ಅಪಹಾಸ್ಯ ಮಾಡಿದ್ದನ್ನು ಸ್ಮರಿಸಬಹುದು.


ಪರೀಕ್ಷೆ ಬರೆದಿದ್ದ ಚೈತ್ರಾ ಎಂಬುವರ ಜತೆ ಮಾತನಾಡಿದ್ದ ಆಡಿಯೋ ಕೂಡ ಸದ್ದು ಮಾಡಿತ್ತು. ಪ್ರತಿ ಹುದ್ದೆಗೆ ₹ 20 ಲಕ್ಷಕ್ಕೂ ಹೆಚ್ಚು ಬೇಡಿಕೆ ಇಟ್ಟಿದ್ದರ ಬಗ್ಗೆ ಬಹಿರಂಗಗವಾಗಿದ್ದ ಆಡಿಯೋ ಅವ್ಯವಹಾರ ನಡೆದಿರುವುದಕ್ಕೆ ಹೆಚ್ಚಿನ ಪುಷ್ಠಿ ಸಿಕ್ಕಂತಾಗಿತ್ತು. ಓಎಂಆರ್‌ ಶೀಟ್‌ ಕೊಟ್ಟಿರಲಿಲ್ಲ. ಲಾಕ್‌ಡೌನ್‌ ಸಮಯದಲ್ಲೇ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಅಭ್ಯರ್ಥಿ ಚೈತ್ರಾ ಅವರು ಆರೋಪಿಸಿದ್ದರು.

the fil favicon

SUPPORT THE FILE

Latest News

Related Posts