ಆರ್ಥಿಕ ಅಧಿಕಾರ ದುರ್ಬಳಕೆ; ರಾಜ್ಯದ ಬೊಕ್ಕಸದಿಂದಲೇ ಕೇಂದ್ರದ ಪಾಲು ಬಿಡುಗಡೆ?

ಬೆಂಗಳೂರು; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಯೋಜನೆ, ಪ್ರಧಾನ ಮಂತ್ರಿ ಆವಾಸ್‌ ಗ್ರಾಮೀಣ, ಸ್ವಚ್ಛ ಭಾರತ್‌ ಮಿಷನ್‌, ರಾ‍ಷ್ಟ್ರೀಯ ಉದ್ಯೋಗ ಉದ್ಯೋಗ ಖಾತ್ರಿ ಸೇರಿದಂತೆ ಒಟ್ಟು 25 ವಿವಿಧ ಯೋಜನೆಗಳಿಗೆ ಕೇಂದ್ರದಿಂದ ಹಣ ಬಿಡುಗಡೆಯಾಗದಿದ್ದರೂ ಕೆಲ ಆಡಳಿತ ಇಲಾಖೆಗಳು ಕೇಂದ್ರದ ಪಾಲನ್ನು ರಾಜ್ಯದ ಬೊಕ್ಕಸದಿಂದಲೇ ಭರಿಸುತ್ತಿರುವ ಪ್ರಕರಣಗಳು ಬಹಿರಂಗಗೊಂಡಿವೆ.


ಕೇಂದ್ರ ಮತ್ತು ರಾಜ್ಯದ ಪಾಲಿನ ಹಣವನ್ನು ತಮ್ಮ ಹಂತದಲ್ಲಿಯೇ ಬಿಡುಗಡೆ ಮಾಡುತ್ತಿರುವ ಕೆಲ ಆಡಳಿತ ಇಲಾಖೆಗಳು, ತಮಗಿದ್ದ ಆರ್ಥಿಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿವೆ ಎಂಬ ಆರೋಪಕ್ಕೆ ಗುರಿಯಾಗಿವೆ.
ಲಾಕ್‌ಡೌನ್‌ನಿಂದಾಗಿ ರಾಜ್ಯದ ರಾಜಸ್ವ ತೀವ್ರವಾಗಿ ಕುಂಠಿತಗೊಂಡಿರುವ ಹೊತ್ತಿನಲ್ಲೇ ಆಡಳಿತ ಇಲಾಖೆಗಳ ಮುಖ್ಯಸ್ಥರ ಈ ನಿರ್ಧಾರ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ.


ಕೇಂದ್ರ ಮತ್ತು ರಾಜ್ಯದ ಪಾಲನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡುವ ಮುನ್ನ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುತ್ತಿಲ್ಲ ಎಂದು ತಿಳಿದು ಬಂದಿದೆ. ಅಂತಹ ಇಲಾಖೆಗಳ ಮುಖ್ಯಸ್ಥರ ವಿರುದ್ಧ ಆರ್ಥಿಕ ಇಲಾಖೆ, ಯಾವುದೇ ಕ್ರಮ ಕೈಗೊಳ್ಳದೇ ಎಚ್ಚರಿಕೆ ಸೂಚನೆಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತಿದೆ.


ಲಾಕ್‌ಡೌನ್‌ನಿಂದಾಗಿ ರಾಜ್ಯದ ರಾಜಸ್ವ ತೀವ್ರವಾಗಿ ಕುಂಠಿತಗೊಂಡಿರುವ ಕಾರಣ ಇಲಾಖೆಗಳ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿರುವ ಹಣವನ್ನು ಬೇಕಾಬಿಟ್ಟಿಯಾಗಿ ಬಿಡುಗಡೆ ಮಾಡಬಾರದು ಮತ್ತು ಖರ್ಚು ಮಾಡಬಾರದು ಎಂದು ಆರ್ಥಿಕ ಇಲಾಖೆ ನೀಡಿದ್ದ ಸೂಚನೆಯನ್ನು ಹಲವು ಇಲಾಖೆಗಳು ಪಾಲಿಸುತ್ತಿಲ್ಲ ಎಂದು ತಿಳಿದು ಬಂದಿದೆ.


ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಬಹುತೇಕ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡಿಲ್ಲ. ಆದರೆ ಅಧಿಕಾರಿಗಳು ಹಣ ಮುಂದೆ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಿ ಕೇಂದ್ರದ ಪಾಲನ್ನೂ ಸೇರಿಸಿ ರಾಜ್ಯದ ಪಾಲನ್ನೂ ಬಿಡುಗಡೆ ಮಾಡುತ್ತಿರುವುದಕ್ಕೆ ಆರ್ಥಿಕ ಇಲಾಖೆ ಇದೀಗ ಆಕ್ಷೇಪಿಸಿದೆ.


ಈ ಕುರಿತು 2020ರ ಮೇ 28ರಂದು ಮತ್ತೊಂದು ಸುತ್ತೋಲೆಯನ್ನು ಹೊರಡಿಸಿದೆ. 2020-21ನೇ ಸಾಲಿನಲ್ಲಿ ಜೂನ್‌ 1ರಿಂದ ನವೆಂಬರ್‌ವರೆಗೆ 6 ತಿಂಗಳಿಗೆ ಮಾತ್ರ ಹಣ ಬಿಡುಗಡೆ ಮಾಡಲು ಅಧಿಕಾರವನ್ನು ಪ್ರತ್ಯಾಯೋಜಿಸಿ ಸುತ್ತೋಲೆ ಹೊರಡಿಸಿರುವ ಆರ್ಥಿಕ ಇಲಾಖೆ, ‘ಕೇಂದ್ರ ಮತ್ತು ರಾಜ್ಯದ ಪಾಲಿನ ಹಣ ಬಿಡುಗಡೆ ಮಾಡುವುದನ್ನು ಕಡ್ಡಾಯ ನಿರ್ಬಂಧಿಸಬೇಕು ಎಂದು ಸೂಚಿಸಿದೆ. ಅಲ್ಲದೆ, ಇಂತಹ ಯಾವುದೇ ಪ್ರಕರಣಗಳು ಆರ್ಥಿಕ ಇಲಾಖೆಯ ಗಮನಕ್ಕೆ ಬಂದಲ್ಲಿ ಆ ಯೋಜನೆಯಡಿ ಮುಂದಿನ ಹಣದ ಬಿಡುಗಡೆಯನ್ನು ನಿಲ್ಲಿಸಲಾಗುವುದು. ಈ ಸಂಬಂಧ ನೀಡಿರುವ ಆರ್ಥಿಕ ಅಧಿಕಾರವನ್ನು ಹಿಂಪಡೆಯಲಾಗುವುದು’ ಎಂದು ಎಚ್ಚರಿಸಿದೆ.

ಪ್ರಾಥಮಿಕ ಶಿಕ್ಷಣ( ಮಧ್ಯಾಹ್ನ ಊಟ), ಸಮಗ್ರ ಶಿಕ್ಷಣ (ಶಿಕ್ಷಕರ ವೇತನ), ಮಕ್ಕಳ ಮತ್ತು ಮಹಿಳಾ ಕಲ್ಯಾಣ ಕೇಂದ್ರಗಳು, ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ, ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ನಿರ್ವಹಣೆ, ವಸತಿ ಶಿಕ್ಷಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ, ಪರಿಶಿಷ್ಟ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಮತ್ತು ಪರಿಶಿಷ್ಟ ಕುಟುಂಬಗಳಿಗೆ ನೆರವು, ರಾಷ್ಟ್ರೀಯ ಪೌಷ್ಠಿಕಾಂಶ ಮಿಷನ್‌ ಯೋಜನೆಗಳಿಗೆ ಕೇಂದ್ರ ತನ್ನ ಪಾಲನ್ನು ಬಿಡುಗಡೆಯಾದ ನಂತರ ಅದಕ್ಕೆ ರಾಜ್ಯದ ಪಾಲನ್ನೂ ಸೇರಿಸಿ ಬಿಡುಗಡೆ ಮಾಡಬೇಕಿತ್ತು. ಆದರೆ ಆಡಳಿತ ಇಲಾಖೆಗಳು ಕೇಂದ್ರದ ಪಾಲನ್ನು ನಿರೀಕ್ಷಿಸಿ ಅದರ ಪಾಲನ್ನೂ ರಾಜ್ಯದ ಬೊಕ್ಕಸದಿಂದಲೇ ಭರಿಸುತ್ತಿದೆ.


ಭಾರತ ಸರ್ಕಾರದಿಂದ ಕೇಂದ್ರದ ಪಾಲಿನ ಹಣ ಬಿಡುಗಡೆಯಾಗಿದ್ದು, ರಾಜ್ಯ ಸರ್ಕಾರದ ಲೆಕ್ಕಕ್ಕೆ ಜಮೆಯಾಗುವ ಮುನ್ನ ಕೇಂದ್ರ ಮತ್ತು ರಾಜ್ಯದ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕಾದಲ್ಲಿ ಆರ್ಥಿಕ ಇಲಾಖೆಯ ಅನುಮೋದನೆ ಪಡೆದುಕೊಳ್ಳಬೇಕು ಎಂದು ಸೂಚಿಸಿದೆ.


ಆಡಳಿತಾತ್ಮಕ ವೆಚ್ಚ, ಕಟ್ಟಡ ವೆಚ್ಚ, ಮತ್ತು ಸಾರಿಗೆ ವೆಚ್ಚಗಳಡಿಯಲ್ಲಿ ಒದಗಿಸಿರುವ ಅನುದಾನವನ್ನು ಹೊಸ ವಾಹನ ಖರೀದಿ, ಪೀಠೋಪಕರಣ, ಕಟ್ಟಡಗಳ ಭಾರೀ ದುರಸ್ತಿ ಹಾಗೂ ನಿರ್ಮಾಣ ಕಾರ್ಯಕ್ಕೆ ಬಳಸಬಾರದು ಎಂದು ಸೂಚಿಸಿರುವ ಆರ್ಥಿಕ ಇಲಾಖೆ, ಸಹಾಯನುದಾನಗಳಿಗೆ ನೀಡುವ ಅನುದಾನಗಳನ್ನು ಹೊರತುಪಡಿಸಿ ಆರ್ಥಿಕ ಇಲಾಖೆಯ ನಿರ್ದಿಷ್ಟಾ ಅನುಮೋದನೆ ಪಡೆಯದೆ ಯಾವುದೇ ಯೋಜನೆಯ ಮೊತ್ತವನ್ನು ವೈಯಕ್ತಿಕ ಠೇವಣಿ ಖಾತೆಗೆ ಅಥವಾ ಬ್ಯಾಂಕ್‌ ಖಾತೆಗೆ ಜಮೆ ಮಾಡಬಾರದು ಎಂದು ಆದೇಶಿಸಿದೆ.


‘ಒಂದು ಆರ್ಥಿಕ ವರ್ಷದಲ್ಲಿ ಮುಂದುವರೆದ ಮತ್ತು ಅನುಮೋದನೆಗೊಂಡಿರುವ ಯೋಜನೆಗಳಿಗೆ ಮಾತ್ರ ಹಣವನ್ನು ಬಿಡುಗಡೆಗೊಳಿಸಬಹುದು. ಆಡಳಿತಾತ್ಮಕ ಅನುಮೋದನೆ ಆದೇಶವನ್ನು ಹಣ ಬಿಡುಗಡೆಯ ಆದೇಶ ಎಂದು ಭಾವಿಸತಕ್ಕದ್ದಲ್ಲ. ವರ್ಗೀಕರಿಸಲಾಗಿರುವ ನಿರ್ದಿಷ್ಟ ಯೋಜನೆಗಳಿಗೆ ವರ್ಷದ ಯಾವುದೇ ಅವಧಿಯಲ್ಲಾಗಲಿ ಅಥವಾ ಎಷ್ಟೇ ಮೊತ್ತವನ್ನಾಗಲಿ ಬಿಡುಗಡೆ ಮಾಡುವ ಮುನ್ನ ಆರ್ಥಿಕ ಇಲಾಖೆಯ ಅನುಮೋದನೆ ಕಡ್ಡಾಯ,’ ಎಂದು ಸೂಚಿಸಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.


ಅದೇ ರೀತಿ 10.00 ಕೋಟಿ ರು.ಗಿಂತ ಹೆಚ್ಚಿನ ಷೇರು ಬಂಡವಾಳವನ್ನು ಹಾಗೂ ಎಷ್ಟೇ ಮೊತ್ತದ ಸಾಲವನ್ನಾಗಲಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಪೂರ್ವಾನುಮೋದನೆ ಪಡೆಯಬೇಕಿದೆ.

Your generous support will help us remain independent and work without fear.

Latest News

Related Posts