ಕೆಎಸ್‌ಆರ್‌ಪಿಯಲ್ಲಿ 1.25 ಕೋಟಿ ರು.ದುರುಪಯೋಗ; ವಿಶೇಷ ಲೆಕ್ಕ ಪರಿಶೋಧನೆಯಿಂದ ಸಾಬೀತು

ಬೆಂಗಳೂರು; ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪೇದೆಗಳ ವೇತನ ಮತ್ತು ಭತ್ಯೆಗೆಂದು ಹಂಚಿಕೆಯಾಗಿದ್ದ ಕೋಟಿ ರು.ಅಧಿಕ ಮೊತ್ತ ದುರುಪಯೋಗ ಆಗಿರುವ ಪ್ರಕರಣ ಇದೀಗ ಹೊರಬಿದ್ದಿದೆ. ಕೆಎಸ್‌ಆರ್‌ಪಿಯ ಹಾಸನದ 11ನೇ ಪಡೆಯಲ್ಲಿ ಹಣ ದುರುಪಯೋಗವಾಗಿರುವುದನ್ನು ವಿಶೇಷ ಲೆಕ್ಕ ಪರಿಶೋಧನೆ ವರದಿ ದೃಢಪಡಿಸಿದೆ.


ಈ ವರದಿ ಆಧರಿಸಿ ಕೆಎಸ್‌ಆರ್‌ಪಿ ಎಡಿಜಿಪಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಸುಮಾ ಜೆ ಆರ್‌ ಅವರು ಹಾಸನದ ಶಾಂತಿಗ್ರಾಮ ಪೊಲೀಸ್‌ ಠಾಣೆಯಲ್ಲಿ 2020ರ ಮೇ 21ರಂದು ದೂರು ದಾಖಲಿಸಿದ್ದಾರೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.
ಹಾಸನದ 11ನೇ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಮಾಡೆಂಟ್‌ ಕೃಷ್ಫಪ್ಪ, ನಿವೃತ್ತ ಸಹಾಯಕ ಆಡಳಿತಾಧಿಕಾರಿ ಮಾದೇಗೌಡ, ದ್ವಿತೀಯ ದರ್ಜೆ ಸಹಾಯಕ ವೈ ಕೆ ಯೋಗೇಶ, ಲತಾಮಣಿ, ವೈಎಚ್‌ ಮನು, ಸತ್ಯಪ್ರಕಾಶ್‌ ಅವರ ವಿರುದ್ಧ ಐಪಿಸಿ 403, 406,409, 465, 468 ಅನ್ವಯ ಮೊಕದ್ದಮೆ ದಾಖಲಾಗಿರುವುದು ತಿಳಿದು ಬಂದಿದೆ.


ಪ್ರಕರಣ ವಿವರ


ಕೆಎಸ್‌ಆರ್‌ಪಿಯ ಹಾಸನದ 11ನೇ ಘಟಕದ ವೇತನ ಶಾಖೆಯಲ್ಲಿ 2015ರ ಜನವರಿ 1ರಿಂದ 2016ರವರೆಗಿನ ಅವಧಿಯಲ್ಲಿ ಕಮಾಡೆಂಟ್‌, ವಿಷಯ ನಿರ್ವಾಹಕರು ಸೇರಿದಂತೆ ಆಡಳಿತ ಕಚೇರಿಯ ಸಿಬ್ಬಂದಿ 1.25 ಕೋಟಿ ರು. ಗಳನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡಿರುವ ಪ್ರಕರಣ ಇದಾಗಿದೆ.


ಈ ಹಣ ಕರ್ನಾಟಕ ರಾಜ್ಯ ಮೀಸಲು ಪಡೆಯ ಪೇದೆ ಮತ್ತು ಸಿಬ್ಬಂದಿಯ ವೇತನ ಹಾಗೂ ಭತ್ಯೆಗಳಿಗೆ ಸಂಬಂಧಿಸಿತ್ತು ಎಂಬ ವಿಚಾರ ಗೊತ್ತಾಗಿದೆ. ವೇತನ ಮತ್ತು ಭತ್ಯೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಹಂಚಿಕೆಯಾಗಿದ್ದ ಅನುದಾನ ಬಳಕೆ ಕುರಿತು 2020ರ ಮಾರ್ಚ್‌ 2ರಿಂದ 31ರವರೆಗೆ ವಿಶೇಷ ಲೆಕ್ಕ ಪರಿಶೋಧನೆ ನಡೆಸಲಾಗಿತ್ತು.


ವೇತನ ಮತ್ತು ಭತ್ಯೆ ನಿಧಿಗೆ ಕನ್ನ ಹಾಕಿದ್ದ ಕಮಾಡೆಂಟ್‌ ಕೃಷ್ಣಪ್ಪ ಸೇರಿದಂತೆ ಇನ್ನಿತರೆ ಸಿಬ್ಬಂದಿ ಕೈ ಚಳಕ ವಿಶೇಷ ಲೆಕ್ಕಪರಿಶೋಧಕರ ತನಿಖೆಯಿಂದ ಬೆಳಕಿಗೆ ಬಂದಿತ್ತು. ಗಣಕ ಯಂತ್ರಗಳ ನಿರ್ವಾಹಕ (ಸಿಸ್ಟಂ ಅನಾಲಿಸ್ಟ್‌) ವೈ ಎಚ್‌ ಮನು ಎಂಬುವರ ಕೈ ಚಳಕವನ್ನೂ ವಿಶೇಷ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದಾರೆ.

the fil favicon

SUPPORT THE FILE

Latest News

Related Posts