ಬೆಂಗಳೂರು; ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್‌ನೊಂದಿಗೆ ಪಿತೂರಿ ನಡೆಸಿ 62.62 ಲಕ್ಷ ರು ನಷ್ಟ ಮತ್ತು ಕಲ್ಯಾಣಿ ಸ್ಟೀಲ್ಸ್ ಹಾಗೂ ಮುಕುಂದ್ ಸ್ಟೀಲ್ಸ್ ಲಿಮಿಟೆಡ್‌ಗೆ ಕಾನೂನುಬಾಹಿರವಾಗಿ ಲಾಭ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತ ವಿಶೇಷ ತನಿಖಾ ತಂಡದ ತನಿಖೆಯಲ್ಲಿ ದೃಢಪಟ್ಟಿದ್ದ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಮಣ್ಣೆಳೆದು ಮುಚ್ಚಿದೆ.
ಈ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ಮತ್ತು ಪಿತೂರಿ ನಡೆಸಿ ಅಪರಾಧ ಎಸಗಿದ್ದಾರೆ ಎಂದು ಗುರುತಿಸಿದ್ದ ಮೈಸೂರ್ ಮಿನರಲ್ಸ್ ಲಿಮಿಟೆಡ್‌ನ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಐ ಆರ್ ಪೆರುಮಾಳ್ ಅವರ ವಿರುದ್ಧ ವಿಚಾರಣೆ ಪ್ರಸ್ತಾವವನ್ನೂ ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2025ರ ಡಿಸೆಂಬರ್ 12ರಂದು ಆದೇಶವನ್ನೂ ಹೊರಡಿಸಿದೆ. ಈ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡುವ ಸಂಬಂಧ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರ ನೇತೃತ್ವದ ಸಚಿವ ಸಂಪುಟವು ಇತ್ತೀಚೆಗಷ್ಟೇ ಹಲವು ಶಿಫಾರಸ್ಸುಗಳನ್ನು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯ ದಂಡ ವಸೂಲಾತಿ ಮಾಡಲು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಜಿ ವಿ ಕೆ ರಾವ್ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಿತ್ತು.
ಈ ಸಮಿತಿಯು ಕಾರ್ಯಾಚರಣೆಗಿಳಿದ ಬೆನ್ನಲ್ಲೇ ಮೈಸೂರು ಮಿನರಲ್ಸ್ ಪ್ರಕರಣದಲ್ಲಿ ಸಂಭವಿಸಿದ್ದ 612 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಅಕ್ರಮಗಳ ಪ್ರಕರಣಗಳನ್ನು ಒಂದೊಂದಾಗಿ ಮುಚ್ಚುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಎಂಎಂಎಲ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐ ಅರ್ ಪೆರುಮಾಳ್ ಅವರ ವಿರುದ್ಧದ ಆರೋಪಗಳ ಕುರಿತು ಲೋಕಾಯುಕ್ತ ವಿಶೇಷ ತನಿಖಾ ತಂಡವು ತನಿಖೆ ನಡೆಸಿತ್ತು. ಆರೋಪಗಳನ್ನು ಖಚಿತಪಡಿಸಿತ್ತು. ಆದರೆ ಲೋಕಾಯುಕ್ತ ವಿಶೇಷ ತನಿಖಾ ತಂಡದ ವರದಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2024ರಲ್ಲಿ ಒಪ್ಪದೇ ತಿರಸ್ಕರಿಸಿದೆ
ಲೋಕಾಯುಕ್ತ ವಿಶೇಷ ತನಿಖಾ ತಂಡವು ನೀಡಿದ್ದ ವರದಿ ಆಧರಿಸಿ ಐ ಆರ್ ಪೆರುಮಾಳ್ ಅವರನ್ನು ವಿಚಾರಣೆಗೊಳಪಡಿಸುವ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿತ್ತು. ಈ ಸಮಿತಿಯು, ವಿಶೇಷ ತನಿಖಾ ತಂಡದ ವರದಿಯಲ್ಲಿ ಶೋಧಗಳನ್ನು ಒಪ್ಪಿಲ್ಲ. ಬದಲಿಗೆ ಈ ಪ್ರಕರಣದಲ್ಲಿ ಐ ಆರ್ ಪೆರುಮಾಳ್ ಅವರ ಪಾತ್ರವೇ ಇಲ್ಲ ಮತ್ತು ಆಗಿರುವ ನಷ್ಟಕ್ಕೆ ಅವರು ಹೊಣೆಯಲ್ಲ ಎಂದು ಕ್ಲೀನ್ ಚಿಟ್ ನೀಡಿರುವುದು ಆದೇಶದ ನಡವಳಿಯಿಂದ ಗೊತ್ತಾಗಿದೆ.
ಪ್ರಕರಣದ ವಿವರ
ಸುಬ್ಬರಾಯನಹಳ್ಳಿ ಗಣಿಗಳಲ್ಲಿ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮೈಸೂರು ಮಿನರಲ್ಸ್ ಲಿಮಿಟೆಡ್ 1999 ರಲ್ಲಿ ಕಲ್ಯಾಣಿ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆ ಕಬ್ಬಿಣದ ಅದಿರು ಉತ್ಪಾದನೆಗಾಗಿ ಮತ್ತು ಸುಬ್ಬರಾಯನಹಳ್ಳಿಯಲ್ಲಿ ಉತ್ಪಾದಿಸುವ ಅದಿರು ಮಾರಾಟಕ್ಕಾಗಿ ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ಮತ್ತು ಮುಕುಂದ್ ಸ್ಟೀಲ್ಸ್ ಲಿಮಿಟೆಡ್ ಜೊತೆ ಮಾರುಕಟ್ಟೆ ಒಪ್ಪಂದಗಳನ್ನು ಮಾಡಿಕೊಂಡಿತ್ತು.
ಐ ಆರ್ ಪೆರುಮಾಳ್ ಅವರು ಮೈಸೂರು ಮಿನರಲ್ ಲಿಮಿಟೆಡ್‌ನಲ್ಲಿ 2001 ರಿಂದ 2002 ರವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವಧಿಯಲ್ಲಿ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಖಾಸಗಿ ಕಂಪನಿಗಳು/ವ್ಯಕ್ತಿಗಳೊಂದಿಗೆ ವ್ಯತಿರಿಕ್ತ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಆರೋಪಿಸಲಾಗಿತ್ತು. ಎಂಎಂಟಿಸಿ ಪ್ರಸ್ತುತ ಬೆಲೆಗೆ ಕಬ್ಬಿಣದ ಅದಿರುಗಳನ್ನು ಮಾರಾಟ ಮಾಡದೆ ಕಡಿಮೆ ಬೆಲೆಗೆ ಕಬ್ಬಿಣದ ಅದಿರುಗಳನ್ನು ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟುಮಾಡಿದ್ದಾರೆ ಎಂದು ಲೋಕಾಯುಕ್ತ ವರದಿ ಮತ್ತು ವಿಶೇಷ ತನಿಖಾ ತಂಡದ ತನಿಖೆಯಲ್ಲಿಯೂ ದೃಢಪಟ್ಟಿತ್ತು.

ಮಾರ್ಕೆಟಿಂಗ್ ಒಪ್ಪಂದದ ಪ್ರಕಾರ ಮುಕುಂದ್ ಸ್ಟೀಲ್ಸ್ ಲಿಮಿಟೆಡ್‌ನಿಂದ ಅದಿರಿನ ಬೆಲೆಯನ್ನು ಪ್ರತಿ ಟನ್‌ಗೆ 250 ರೂಪಾಯಿಗಳಾಗಿ ನಿಗದಿಪಡಿಸಿತ್ತು. ಬಿಎಚ್‌ಕ್ಯೂಗೆ ಪ್ರತಿ ಟನ್‌ಗೆ 150 ರೂಪಾಯಿಗಳಾಗಿ ಬೆಲೆ ನಿಗದಿಪಡಿಸಿತ್ತು. ಈ ಸ್ಥಿರ ದರಗಳ ಆಧಾರದ ಮೇಲೆ ಕಂಪನಿಗಳು ಎಂಎಂಎಲ್‌ನಿಂದ ಅದಿರನ್ನು ಖರೀದಿಸಬೇಕಾಗಿತ್ತು. ಈ ಒಪ್ಪಂದದ ಪ್ರಕಾರ ಆರಂಭಿಕ ಮಾರಾಟ ಬೆಲೆ ಒಟ್ಟು ಮೂರು ವರ್ಷಗಳವರೆಗೆ ಜಾರಿಯಲ್ಲಿತ್ತು. ನಂತರ 2002 ಅಕ್ಟೋಬರ್ ಎಂಎಂಎಲ್ ಬೆಲೆಯನ್ನು ಪರಿಷ್ಕರಿಸುವ ಹಕ್ಕನ್ನು ಹೊಂದಿತ್ತು. ಮತ್ತು ಪ್ರತಿ ವರ್ಷದ ಏಪ್ರಿಲ್ 1 ರಂದು ಮಾರಾಟ ಬೆಲೆಯನ್ನು ವಾರ್ಷಿಕವಾಗಿ ಪರಿಷ್ಕರಿಸಲು ಅವಕಾಶವಿತ್ತು.
2001 ರಲ್ಲಿ, ಕಲ್ಯಾಣ್ ಫೆರ್‍ಹೋಸ್ ಇಂಡಸ್ಟ್ರೀಸ್ ಲಿಮಿಟೆಡ್, ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ಮತ್ತು ಮುಕುಂದ್ ಲಿಮಿಟೆಡ್ ಕಂಪನಿಗಳು ಮಾರ್ಕೆಟಿಂಗ್ ಮತ್ತು ಹೆಚ್ಚುತ್ತಿರುವ ಗುತ್ತಿಗೆದಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿದವು. 2001 ರಲ್ಲಿ ಕಂಪನಿಗಳ ಕೋರಿಕೆಯ ಮೇರೆಗೆ, ಮೂಲ ಒಪ್ಪಂದದ ನಿಯಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಈ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

2001 ರಲ್ಲಿ ನಡೆದ 223ನೇ ಆಡಳಿತ ಮಂಡಳಿ ಸಭೆಯಲ್ಲಿ ಹಣಕಾಸು ನಿಯಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಹೊಸ ಮಾರ್ಕೆಟಿಂಗ್ ಮತ್ತು ಒಪ್ಪಂದಗಳನ್ನು ಮಾರ್ಪಡಿಸಲು ಮಂಡಳಿಯು ಅನುಮೋದನೆ ನೀಡಿತ್ತು. ಆಗಿನ ವ್ಯವಸ್ಥಾಪಕ ನಿರ್ದೇಶಕ ಆರ್. ಸುರೇಶ್ ಅವರು ಎಂಎಂಎಲ್ ಕಂಪನಿಯ ಪರವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು, ಇದರಲ್ಲಿ ಹಣಕಾಸಿನ ಪರಿಸ್ಥಿತಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಗುತ್ತಿಗೆದಾರರ ಪರಸ್ಪರ ವಿನಿಮಯಕ್ಕಾಗಿ ಒಪ್ಪಂದ ಮಾಡಿಕೊಂಡಿತ್ತು.
ಒಪ್ಪಂದದ ಪ್ರಕಾರ, ಮಾರ್ಕೆಟಿಂಗ್ ಮತ್ತು ಸಂಗ್ರಹಣಾ ಗುತ್ತಿಗೆದಾರರನ್ನು ಪರಸ್ಪರ ಬದಲಾಯಿಸಲಾಗಿತ್ತು. ಇದರಲ್ಲಿ ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ಅನ್ನು ಸಂಗ್ರಹಣಾ ಒಪ್ಪಂದದೊಂದಿಗೆ ಮತ್ತು ಕಲ್ಯಾಣಿ ಫೆರ್‍ಹೋಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಮಾರ್ಕೆಟಿಂಗ್ ಗುತ್ತಿಗೆ ಮಾಡಿಕೊಂಡಿತ್ತು.

ಮತ್ತು ಅದಿರು ಮಾರ್ಕೆಟಿಂಗ್ ಗುತ್ತಿಗೆಯನ್ನು ಮುಕುಂದ್ ಲಿಮಿಟೆಡ್‌ನ ಪ್ರತಿಶತ 58.62 ಪಾಲನ್ನು ಕಲ್ಯಾಣಿ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ನೀಡಲಾಗಿತ್ತು. ಅದರಂತೆ, 2002 ರಲ್ಲಿ ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ಮತ್ತು ಕಲ್ಯಾಣಿ ಫೆರ್‍ಹೋಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗಳೊಂದಿಗೆ ಕ್ರಮವಾಗಿ ಪ್ರತ್ಯೇಕ ಸಂಗ್ರಹಣಾ ಒಪ್ಪಂದ ಮತ್ತು ಮಾರುಕಟ್ಟೆ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು.
ಕಲ್ಯಾಣಿ ಸ್ಟೀಲ್ಸ್ ಮತ್ತು ಮುಕುಂದ್ ಲಿಮಿಟೆಡ್ ಜೊತೆ ಮಾಡಿಕೊಂಡ 1999 ರ ಮಾರ್ಕೆಟಿಂಗ್ ಒಪ್ಪಂದದ ಷರತ್ತು -5 ರ ಪ್ರಕಾರ, ಅದಿರಿನ ಮಾರಾಟದ ಬೆಲೆಯನ್ನು 2002 ರಲ್ಲಿ ಪರಿಷ್ಕರಿಸಲಾಯಿತು. ಆದಾಗ್ಯೂ, ಮೇ 2001 ರಲ್ಲಿ, ಸಂಗ್ರಹಣಾ ಗುತ್ತಿಗೆದಾರರು ಮತ್ತು ಮಾರ್ಕೆಟಿಂಗ್ ಗುತ್ತಿಗೆದಾರರನ್ನು ಪರಸ್ಪರ ಬದಲಾಯಿಸಲು ಒಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಅದರ ಪ್ರಕಾರ 2002 ರಲ್ಲಿ ಹೊಸ ಒಪ್ಪಂದವನ್ನು ಕಾರ್ಯಗತಗೊಳಿಸಲಾಗಿತ್ತು.
1999ರ ಮೂಲ ಒಪ್ಪಂದದಲ್ಲಿ ಕಂಪನಿಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಷರತ್ತುಗಳನ್ನು ಮಾರ್ಪಡಿಸಲಾಗಿತ್ತು. ಮತ್ತು ಎಂಎಂಎಲ್‌ನ ಮಾರ್ಕೆಟಿಂಗ್ ವಿಭಾಗವು ಹೊಸ ಒಪ್ಪಂದವನ್ನು ಸಿದ್ಧಪಡಿಸಿತ್ತು. ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ಇದಕ್ಕೆ ಒಪ್ಪಲಿಲ್ಲ. ಮತ್ತು 2002ರಲ್ಲಿ ಎಂಎಂಎಲ್‌ನ ಆಗಿನ ವ್ಯವಸ್ಥಾಪಕ ನಿರ್ದೇಶಕರಾದ ಪೆರುಮಾಳ್ ಅವರ ಗಮನಕ್ಕೆ ತಂದಿತ್ತು. ಪೆರುಮಾಳ್ ಅವರು ಯಾವುದೇ ನ್ಯೂನತೆಗಳನ್ನು ಸರಿಪಡಿಸದಂತೆ ಮತ್ತು ಒಪ್ಪಂದವನ್ನು ಬಯಸಿದಂತೆ ಸಿದ್ಧಪಡಿಸಬೇಕು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ವ್ಯವಸ್ಥಾಪಕರಿಗೆ ಸೂಚಿಸಿದ್ದರು.

ಪೆರುಮಾಳ್ ಮತ್ತು ನಂತರ ಬಂದ ಎಂಡಿ ಅವರ ಸೂಚನೆಯಂತೆ, ಹೊಸ ಮಾರುಕಟ್ಟೆ ಒಪ್ಪಂದಕ್ಕೆ 2002 ರಲ್ಲಿ ಸಹಿ ಹಾಕಲಾಗಿತ್ತು. ಇದರ ಆಧಾರದ ಮೇಲೆ ಮಾರಾಟ ಬೆಲೆಯ ಮೊದಲ ಪರಿಷ್ಕರಣೆಯನ್ನು 2005 ರಲ್ಲಿ ನಿಗದಿಪಡಿಸಲಾಗಿತ್ತು. ಪೆರುಮಾಳ್ ನಂತರ, ಆಗಿನ ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶನಗಳನ್ನು ಹೊರಡಿಸಿದ್ದರು. ಆದರೆ ಎಂಎಂಎಲ್ 2002 ಅಕ್ಟೋಬರ್‌ನಲ್ಲಿ ಅದಿರು ಮಾರಾಟ ಬೆಲೆಯನ್ನು ಪರಿಷ್ಕರಿಸಲಿಲ್ಲ.
ಇದರ ಪರಿಣಾಮವಾಗಿ, 2002 ರಿಂದ ಮಾರ್ಚ್ ವರೆಗೆ ಸುಮಾರು 2,31,926.95 ಮೆಟ್ರಿಕ್ ಟನ್ ಅದಿರನ್ನು ಪ್ರತಿ ಟನ್‌ಗೆ 253 ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಮತ್ತು ಕಲ್ಯಾಣಿ ಫೆರ್‍ಹೋಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ 5.86 ಕೋಟಿ ಇನ್‌ವಾಯ್ಸ್ ಬಿಲ್ ನೀಡಲಾಗಿತ್ತು. ಆದರೆ ಆ ಹಣಕಾಸು ವರ್ಷದಲ್ಲಿ ಪ್ರತಿ ಟನ್‌ಗೆ 365 ರೂಪಾಯಿಗಳ ಎಂಎಂಟಿಸಿ ಬೆಲೆಯನ್ನು ಪರಿಗಣಿಸಿ ಮತ್ತು ಸಾರಿಗೆ ಶುಲ್ಕದ 85 ರೂಪಾಯಿಗಳನ್ನು ಕಡಿತಗೊಳಿಸಿತ್ತು.
ಪ್ರತಿ ಟನ್‌ಗೆ ಅದಿರಿನ ಬೆಲೆ 280 ರೂಪಾಯಿಗಳಾಗಿತ್ತು. ಆದ್ದರಿಂದ, ಎಂಎಂಎಲ್‌ಗೆ ಮಾರಾಟವಾದ 231,926.95 ಮೆಟ್ರಿಕ್ ಟನ್ ಅದಿರಿನ ಮಾರಾಟಕ್ಕೆ ಕಲ್ಯಾಣಿ ಸ್ಟೀಲ್‌ಗಳಿಂದ 2,31,926. ಮೆಟ್ರಿಕ್ ಟನ್ ಅದಿರನ್ನು ಎಂಎಂಎಲ್‌ಗೆ ಮಾರಾಟ ಮಾಡಲು 6.493 ಕೋಟಿ ರೂಪಾಯಿಗಳನ್ನು ಪಡೆಯಬೇಕಾಗಿತ್ತು. ಇದರಿಂದಾಗಿ ಎಂಎಂಎಲ್ 62.62 ಲಕ್ಷ ರೂಪಾಯಿಗಳ ನಷ್ಟವಾಗಿತ್ತು. ಆಗಿನ ಎಂಎಂಎಲ್ ಎಂಡಿ ಪೆರುಮಾಳ್, ಅದಿರಿನ ಮಾರಾಟ ಬೆಲೆಯನ್ನು ಪರಿಷ್ಕರಿಸದ ಕಾರಣ ಎಂಎಂಎಲ್‌ಗೆ 62.62 ಲಕ್ಷ ನಷ್ಟ ಉಂಟಾಗಲು ಕಾರಣರಾಗಿದ್ದಾರೆ ಎಂದು ವದಿಯಲ್ಲಿ ಹೇಳಲಾಗಿತ್ತು.
ವಿಶೇಷ ತನಿಖಾ ತಂಡದ ಅಂತಿಮ ಅಭಿಪ್ರಾಯವೇನು?
ಪೆರುಮಾಳ್ ಅವರು 2001 ರಿಂದ 2002 ರವರೆಗೆ ಎಂಎಂಎಲ್‌ನಲ್ಲಿ ಎಂಡಿ ಆಗಿದ್ದ ಅವಧಿಯಲ್ಲಿ 1999 ರ ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್, ಮುಕುಂದ್ ಲಿಮಿಟೆಡ್ ಮತ್ತು ಕಲ್ಯಾಣಿ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆ ಸುಬ್ಬರಾಯಹಳ್ಳಿ ಗಣಿಗಳಿಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಮಾರ್ಕೆಟಿಂಗ್ ಮತ್ತು ರೈಸಿಂಗ್ ಗುತ್ತಿಗೆದಾರರನ್ನು ಪರಸ್ಪರ ಬದಲಾಯಿಸಿಕೊಳ್ಳಲಾಗಿತ್ತು.
ಪೆರುಮಾಳ್ ಅವರ ನಿರ್ದೇಶನದ ಮೇರೆಗೆ, ಎಂಎಂಎಲ್ ಅಧಿಕಾರಿಗಳು ಹೊಸ ಕರಡು ಮಾರುಕಟ್ಟೆ ಒಪ್ಪಂದವನ್ನು ಸಿದ್ಧಪಡಿಸಿದ್ದರು. 2002 ರಲ್ಲಿ ಪೆರುಮಾಳ್, ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ಬಯಸಿದಂತೆ ಕರಡು ಒಪ್ಪಂದಕ್ಕೆ ಸಹಿ ಹಾಕಿದ್ದರು.
ಒಪ್ಪಂದದಲ್ಲಿ ಕೆಲವು ಲೋಪದೋಷಗಳಿದ್ದವು. 2002 ಅಕ್ಟೋಬರ್‌ನಲ್ಲಿ ಪರಿಷ್ಕರಿಸಬೇಕಿದ್ದ ಅದಿರಿನ ಮಾರಾಟ ಬೆಲೆಯನ್ನು 2005 ರಲ್ಲಿ ಪರಿಷ್ಕರಿಸಲು ಯೋಜಿಸಲಾಗಿತ್ತು. ಇದರ ಪರಿಣಾಮವಾಗಿ 2006 ಮತ್ತು 2007 ರಲ್ಲಿ ಪರಿಷ್ಕರಣೆ ಅದಿರು ದರಗಳ ಕುರಿತು ಎಂಎಂಎಲ್ ಮತ್ತು ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ನಡುವೆ ವಿವಾದ ಉಂಟಾಯಿತು. 2002 ಅಕ್ಟೋಬರ್‌ನಲ್ಲಿ ಮಾರ್ಕೆಟಿಂಗ್ ಒಪ್ಪಂದದ ಷರತ್ತು-5 ರ ಪ್ರಕಾರ ಅದಿರಿನ ಮಾರಾಟ ಬೆಲೆಯನ್ನು ಪರಿಷ್ಕರಿಸದ ಕಾರಣ ಎಂಎಂಎಲ್ ಗೆ 62.62 ಲಕ್ಷ ರು ನಷ್ಟಕ್ಕೆ ಕಾರಣವಾಯಿತು ಎಂದು ವಿಶೇಷ ತನಿಖಾ ತಂಡವು ಅಭಿಪ್ರಾಯಿಸಿರುವುದು ಆದೇಶದಿಂದ ಗೊತ್ತಾಗಿದೆ.
‘ಮಾರಾಟ ಬೆಲೆಯನ್ನು ಪರಿಷ್ಕರಿಸದೆ ಪೆರುಮಾಳ್ ಈ ಆಡಳಿತಾತ್ಮಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್‌ನೊಂದಿಗೆ ಪಿತೂರಿ ನಡೆಸಿ ಕಂಪನಿಗೆ ನಷ್ಟವನ್ನುಂಟುಮಾಡಿದರು. ಮತ್ತು ಕಲ್ಯಾಣಿ ಸ್ಟೀಲ್ಸ್ ಮತ್ತು ಮುಕುಂದ್ ಸ್ಟೀಲ್ಸ್ ಲಿಮಿಟೆಡ್ ಎರಡಕ್ಕೂ ಕಾನೂನುಬಾಹಿರವಾಗಿ ಲಾಭ ಮಾಡಿಕೊಟ್ಟರು,’ ಎಂದು ವಿಶೇಷ ತನಿಖಾ ತಂಡವು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಹೇಳಿತ್ತು.

ಹಾಗೆಯೇ ಪೆರುಮಾಳ್ ಅವರು ಸೆಕ್ಷನ್ 406, 409, 120b (ಐಪಿಸಿ 1860 ರ ಬಿ0 ಸೆಕ್ಷನ್ 13(1) 13(2) ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಅಪರಾಧ ಎಸಗಿದ್ದಾರೆ ಎಂದೂ ತನ್ನ ಅಭಿಪ್ರಾಯದಲ್ಲಿ ತಿಳಿಸಿತ್ತು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಕರ್ನಾಟಕ ರಾಜ್ಯ ಖನಿಜ ನಿಗಮದ ಅಭಿಪ್ರಾಯವನ್ನು ಕೇಳಿತ್ತು.
ಪೆರುಮಾಳ್ ವಿರುದ್ಧ ವಿಚಾರಣೆ ನಡೆಸಲು ಅನುಮತಿ ಪ್ರಸ್ತಾವನೆಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ವರದಿ ನೀಡಿತ್ತು. ಅಕ್ಟೋಬರ್ 2002 ರಲ್ಲಿ ಎಂಎಂಟಿಸಿಯು ಹಿಂದಿನ ಗಣಿ ಅದಿರಿನ ಮಾರಾಟ ಬೆಲೆ 213.89 ರೂಪಾಯಿ ಮತ್ತು ಅಕ್ಟೋಬರ್ 2002 ರಲ್ಲಿ ಕೆಎಸ್ಎಂಸಿಎಲ್ ಹಿಂದಿನ-ಗಣಿ ಅದಿರಿನ ಮಾರಾಟ ಬೆಲೆ 225. 63 ರುನಷ್ಟಿತ್ತು ಎಂದು ಅಭಿಪ್ರಾಯಪಟ್ಟಿತ್ತು.
ಎರಡೂ ಮಾರಾಟ ಬೆಲೆಗಳನ್ನು ಹೋಲಿಸಿದಾಗ, ಅಕ್ಟೋಬರ್ 2002 ರಲ್ಲಿ ಮಾರಾಟ ಬೆಲೆಗಳನ್ನು ಪರಿಷ್ಕರಿಸದಿದ್ದರೂ, ಕಂಪನಿಗೆ ಯಾವುದೇ ನಷ್ಟವಿಲ್ಲ ಎಂದು ತೋರುತ್ತದೆ ಎಂದು ಈ ಸಮಿತಿಯು ಹೇಳಿತ್ತು. ಕೆಎಸ್ಎಂಸಿಎಲ್ ಮಾರಾಟ ಬೆಲೆಯು, ಎಂಎಂಟಿಸಿ ಬೆಲೆಗಳಿಗಿಂತ ಹೆಚ್ಚಾಗಿದೆ ಎಂದು ಗಮನಿಸಿತ್ತು.
ಎಂಎಂಎಲ್‌ನಲ್ಲಿ ಪೆರುಮಾಳ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಧಿಕಾರಾವಧಿಯಲ್ಲಿ, ಕಂಪನಿಯ ಸಂಬಂಧಪಟ್ಟ ಅಧಿಕಾರಿಗಳು ಮಾರಾಟ ಬೆಲೆ ಅದಿರಿನ ನಿಗದಿಗಾಗಿ ಕಡತವನ್ನು ಸಲ್ಲಿಸಲಿಲ್ಲ ಎಂದು ಕಂಡುಬಂದಿದೆ ಎಂದು ಹೇಳಿದ್ದ ಸಮಿತಿಯು, ಈ ಕಾರಣದಿಂದಲೇ ಪೆರುಮಾಳ್ ಅವರು ಬೆಲೆಯನ್ನು ಪರಿಷ್ಕರಿಸಲು ಸಾಧ್ಯವಾಗಲಿಲ್ಲ ಎಂದು ಸಮಿತಿಯು ವರದಿಯಲ್ಲಿ ವಿವರಿಸಿತ್ತು.
ಈ ಸಮಿತಿಯ ಶಿಫಾರಸುಗಳನ್ನು 2024 ಫೆಬ್ರವರಿ 14 ರಂದು ನಡೆದ ಕೆಎಸ್‌ಎಂಸಿಎಲ್‌ನ 347 ನೇ ಮಂಡಳಿಯ ಸಭೆಗೆ ಮುಂಚಿತವಾಗಿ ಅಂಗೀಕರಿಸಿತ್ತು. ಮತ್ತು ಆರೋಪಗಳಲ್ಲಿ ಸಾಕಷ್ಟು ಆಧಾರಗಳಿಲ್ಲದ ಕಾರಣ ಹಿರಿಯ ಅಧಿಕಾರಿಗಳ ಸಮಿತಿಯು ಪತ್ತೆ ಹಚ್ಚಿದ್ದ ಅಂಶಗಳನ್ನು ಸರ್ಕಾರಕ್ಕೆ ಕಳುಹಿಸಲು ಮಂಡಳಿಯು ನಿರ್ಧರಿಸಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಕೆಎಸ್‌ಎಂಸಿಎಲ್ ಸಲ್ಲಿಸಿದ ವರದಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿತ್ತಲ್ಲದೇ ಇದೇ ವರದಿಯನ್ನು ಆಡಳಿತ ಮಂಡಳಿಯು ಅನುಮೋದಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಈ ಎಲ್ಲಾ ಅಂಶಗಳನ್ನು ಅವಲೋಕಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು , ಐ ಆರ್ ಪೆರುಮಾಳ್ ಅವರ ವಿರುದ್ಧ ವಿಚಾರಣೆಯ ಪ್ರಸ್ತಾವವನ್ನು ತಿರಸ್ಕರಿಸಿರುವುದು ಆದೇಶದಿಂದ ಗೊತ್ತಾಗಿದೆ.
ರಾಜ್ಯದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದ ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ 16 ಸಾವಿರ ಕೋಟಿ ರೂ. ನಷ್ಟವಾಗಿತ್ತು. ಇದರಲ್ಲಿ ಶಾಮೀಲಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013-14ರಲ್ಲೇ ವಿಧಾನಸಭೆಗೆ ತಿಳಿಸಿದ್ದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಕಾಂಗ್ರೆಸ್‌ನ ಈಶ್ವರ್ ಖಂಡ್ರೆ ಅವರು ಕೇಳಿದ್ದ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದ ಸಿದ್ದರಾಮಯ್ಯ ಅವರು , ‘‘ಲೋಕಾಯುಕ್ತರು ವರದಿ ಕೊಟ್ಟು ಎರಡು ವರ್ಷಗಳಾದರೂ ಇನ್ನು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಈ ವಿಳಂಬಕ್ಕೆ ಹಿಂದಿನ ಸರಕಾರ ಕಾರಣ. ನಾವು ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ 2012ರ ನ.29ರಂದು ನೀಡಿರುವ ವರದಿ ಶಿಫಾರಸಿನಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇದಕ್ಕೆ ಕೆಲವರು ಉತ್ತರ ನೀಡಿದ್ದು, ಸರಕಾರದ ಪರಿಶೀಲನೆಯಲ್ಲಿದೆ ’’ಎಂದು ಅವರು ಹೇಳಿದ್ದರು.
‘‘ಎಂಟು ಐಎಎಸ್, ಒಂಬತ್ತು ಐಎಫ್‌ಎಸ್ ಸೇರಿ ಹತ್ತು ಇಲಾಖೆಯ ಒಟ್ಟು 343 ಅಧಿಕಾರಿ, ಸಿಬ್ಬಂದಿ ಅಕ್ರಮ ಗಣಿಗಾರಿಕೆಯಲ್ಲಿ ನೇರ ಹಾಗೂ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ. ಲೋಕಾಯುಕ್ತ ವರದಿ ಅನ್ವಯ ಎಲ್ಲ ಅಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಅನ್ವಯ ಕ್ರಮ ಜರುಗಿಸಲಾಗುವುದು. ಇದರಲ್ಲಿ ಯಾವುದೇ ಮೂಲಾಜು ನೋಡುವುದಿಲ್ಲ ’’ಎಂದು ಖಡಕ್ ಆಗಿ ಹೇಳಿದ್ದರು.
ವಿಧಾನಸಭೆಗೆ ಮಂಡಿಸಿದ್ದ ಉತ್ತರದಲ್ಲೇನಿತ್ತು?
ಮೈಸೂರು ಮಿನರಲ್ಸ್ ಲಿಮಿಟೆಡ್ ನಲ್ಲಿ ಒಟ್ಟಾರೆ 642 ಕೋಟಿ ರು ನಷ್ಟವಾಗಿತ್ತು. ಇದರಲ್ಲಿ ವಿ.ಉಮೇಶ್ ಅವರ ಅಧಿಕಾರವಾಧಿಯಲ್ಲಿ 6,90,56,138 ರೂ. ನಷ್ಟ, ಐ.ಆರ್.ಪೆರುಮಾಳ್ ಅವಧಿಯಲ್ಲಿ 5,02,60,312 ರೂ. ನಷ್ಟ ಕೆ.ಎಸ್.ಮಂಜುನಾಥ್ ಅವರ ಅವಧಿಯಲ್ಲಿ 4,04,66,938 ರೂ. ನಷ್ಟ, ಡಿ.ಎಸ್.ಅಶ್ವತ್ಥ್ ಅವರ ಅವಧಿಯಲ್ಲಿ 95,23,82,953 ರೂ. ನಷ್ಟ, ಜೀಜಾ ಮಾಧವನ್ ಹರಿಸಿಂಗ್ ಅವಧಿಯಲ್ಲಿ 2,99,42,72,022 ರೂ. (ಇವರ ವಿರುದ್ಧ ಪ್ರಕರಣ ರದ್ದುಪಡಿಸುವಂತೆ ಸಿಎಟಿ ನೀಡಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರ ರಿಟ್ ಅರ್ಜಿ ಹಾಕಿದ್ದು, ಸಿಎಟಿ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು)

ಮಹೇಂದ್ರ ಜೈನ್ ಅವರ ಅವಧಿಯಲ್ಲಿ 2,19,56,81,974 ರೂ. ನಷ್ಟ, ಗಂಗಾರಾಂ ಬಡೇರಿಯಾ ಅವಧಿಯಲ್ಲಿ 1,38,45,000 ರೂ., ಕೆ.ಎಸ್.ಪ್ರಭಾಕರ್ ಅವಧಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ (ಹಿಂದಿನ ಎಂಡಿ, ಎಂಎಂಎಲ್) ನಷ್ಟದ ಪ್ರಮಾಣ ನಮೂದಿಸಿರಲಿಲ್ಲ.
ಹಾಗೆಯೇ ಐಎಎಸ್‌ಯೇತರ ಅಧಿಕಾರಿಗಳ ಪೈಕಿ ಡಾ.ಎಂ.ಬಸಪ್ಪರೆಡ್ಡಿ – ನಾನ್ ಐಎಎಸ್ (ಹಿಂದಿನ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ)- 6,41,32,335 ರೂ. ನಷ್ಟ, ಕೆ.ಶ್ರೀನಿವಾಸ್ ಅವಧಿಯಲ್ಲಿ 14,84,31,833 ರೂ. ನಷ್ಟ ಎಂ.ರಾಮಪ್ಪ ಅವರ ಅವಧಿಯಲ್ಲಿ 6,10,47,870 ರೂ. ನಷ್ಟವುಂಟಾಗಿತ್ತು ಎಂದು ಖುದ್ದು ಸಿದ್ದರಾಮಯ್ಯ ಅವರೇ 2013-14ರಲ್ಲಿ ವಿಧಾನಸಭೆಗೆ ವಿವರಿಸಿದ್ದನ್ನು ಸ್ಮರಿಸಬಹುದು.
ಮೈಸೂರು ಮಿನರಲ್ಸ್ ಲಿಮಿಟೆಡ್‌ನಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 642.32 ಕೋಟಿ ರು. ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಕಳೆದ 14 ವರ್ಷಗಳಿಂದ ಒಂದೇ ಒಂದು ಕ್ರಮ ಜರುಗಿಸಿರಲಿಲ್ಲ.
ಮತ್ತೊಂದು ವಿಶೇಷವೆಂದರೇ ಆರ್ಥಿಕ ನಷ್ಟಕ್ಕೆ ಅಧಿಕಾರಿಗಳು ಜವಾಬ್ದಾರರಾಗಿಲ್ಲ ಎಂದು ಶಿಫಾರಸ್ಸು ಮಾಡಲಾಗಿದೆಯಾದರೂ ಆಗಿರುವ ನಷ್ಟಕ್ಕೆ ಹೊಣೆಗಾರರು ಯಾರು ಎಂಬುದನ್ನೂ ನಿರ್ದಿಷ್ಟವಾಗಿ ಹೇಳಿಲ್ಲ.
ಈ ಕುರಿತು ಸಿಬ್ಬಂದಿ ಮತ್ತು ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ನವೆಂಬರ್ 4ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಹಾಕಿದ್ದರು.

ಡಿಪಿಎಆರ್ ಪತ್ರದಲ್ಲೇನಿತ್ತು?
ಕಳೆದ 14 ವರ್ಷಗಳಿಂದ ಇಲಾಖೆ ವಿಚಾರಣೆಯನ್ನು ಪ್ರಾರಂಭಿಸುವ ಕುರಿತು ಮಾತ್ರ ಚರ್ಚೆಯಾಗಿರುತ್ತದೆ ಹೊರತು ಲೋಕಾಯುಕ್ತರ ನಿರ್ದೇಶನಗಳನ್ವಯ ಆರ್ಥಿಕ ನಷ್ಟವನ್ನು ವಸೂಲಾತಿ ಮಾಡುವ ಕುರಿತು ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಎಂದು ಪತ್ರದಲ್ಲಿ ಹೇಳಿತ್ತು.
ಅದೇ ರೀತಿ ‘ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಆರ್ಥಿಕ ನಷ್ಟಕ್ಕೆ ಜವಾಬ್ದಾರರಾಗಿಲ್ಲವೆಂದು ಶಿಫಾರಸ್ಸು ಮಾಡಿರುವುದಾದರೇ ಆಗಿರುವ ನಷ್ಟಕ್ಕೆ ಹೊಣೆಗಾರರು ಯಾರೆಂಬುದನ್ನು ಇಲಾಖೆಯು ನಿರ್ದಿಷ್ಟಪಡಿಸಿರುವುದಿಲ್ಲ,’ ಎಂದು ಪತ್ರದಲ್ಲಿ ವಿವರಿಸಿತ್ತು.

ಅಕ್ರಮ ಗಣಿಗಾರಿಕೆಯ ಎಂಎಂಎಲ್ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ 642,32,85,951 ಕೋಟಿ ರು. ಆರ್ಥಿಕ ನಷ್ಟವಾಗಿತ್ತು. ಇದಕ್ಕೆ 06 ಜನ ಐಎಎಸ್ ಮತ್ತು ಒಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಆರ್ಥಿಕ ನಷ್ಟವನ್ನು ವಸೂಲು ಮಾಡಲು ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.
ಎಂಎಂಎಲ್‌ನಲ್ಲಿ 642.32 ಕೋಟಿ ನಷ್ಟ; ಐಎಎಸ್, ಐಪಿಎಸ್‌ಗಳ ವಿರುದ್ಧ 14 ವರ್ಷಗಳಾದರೂ ಕ್ರಮವಿಲ್ಲ
ಈ ಕುರಿತು ‘ದಿ ಫೈಲ್’, 2023ರ ಡಿಸೆಂಬರ್ 19ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.









