ಬೆಂಗಳೂರು; ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊ ಕೆ ಬೈರಪ್ಪ ಅವರು ಕುಲಪತಿ ಆಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗಿದೆ ಎಂಬುದನ್ನು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ತನಿಖೆ ದೃಢಪಡಿಸಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ತನಿಖಾ ವರದಿ ಆಧರಿಸಿ ಉನ್ನತ ಶಿಕ್ಷಣ ಇಲಾಖೆ ಇದೀಗ ಆರೋಪಿತ ಅಧಿಕಾರಿ, ಸಿಬ್ಬಂದಿ ವಿರುದ್ಧ ಇಲಾಖೆ ವಿಚಾರಣೆಗೆ ಗುರಿಪಡಿಸಲು ಮುಂದಾಗಿದೆ.
ಪರೀಕ್ಷಾ ಕಾರ್ಯನಿರ್ವಹಣೆ ಗುತ್ತಿಗೆ ಸೇರಿದಂತೆ ಇನ್ನಿತರೆ ಗಂಭೀರ ಸ್ವರೂಪದ ಅವ್ಯವಹಾರಗಳನ್ನು ಸಾಬೀತುಪಡಿಸಿರುವ ಲೆಕ್ಕ ಪರಿಶೋಧಕರ ತನಿಖಾ ತಂಡ ಸರ್ಕಾರಕ್ಕೆ 2020ರ ಜನವರಿ 22ರಂದು ವರದಿ ಸಲ್ಲಿಸಿತ್ತು. ಈ ವಿಶ್ವವಿದ್ಯಾಲಯದಲ್ಲಿ 100 ಕೋಟಿ ರು.ಗೂ ಅಧಿಕ ಮೊತ್ತದಲ್ಲಿ ಹಗರಣ ನಡೆದಿದೆ ಎಂಬ ಅರೋಪ ಕೇಳಿ ಬಂದಿತ್ತು. ಈ ಕುರಿತು ಸರ್ಕಾರ ತನಿಖೆಗೆ ಆದೇಶಿಸಿತ್ತು.
ತನಿಖಾ ವರದಿಯನ್ನು ಅಂಗೀಕರಿಸಿ ಪರಿಶೀಲಿಸಿರುವ ಉನ್ನತ ಶಿಕ್ಷಣ ಇಲಾಖೆ ‘ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಲು ಕಾರಣಕರ್ತರಾದ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು,’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಪರೀಕ್ಷಾ ಕಾರ್ಯನಿರ್ವಹಣೆ ಗುತ್ತಿಗೆ, ಸೌರ ಮೇಲ್ಛಾವಣಿ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಗಣಕಯಂತ್ರ ಮತ್ತು ಲ್ಯಾಪ್‌ಟಾಪ್ ಖರೀದಿ ಪ್ರಕ್ರಿಯೆಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘಿಸಿರುವುದು, ಅಂತಾರಾಷ್ಟ್ರೀಯ ವಿದ್ಯಾರ್ಥಿನಿಲಯ, ಕ್ಲಾಸ್‌ರೂಂ ಕಾಂಪ್ಲೆಕ್ಸ್ ಸೇರಿದಂತೆ ಇನ್ನಿತರೆ ಸಿವಿಲ್ ಕಾಮಗಾರಿಗಳನ್ನು ಸರ್ಕಾರದ ಪೂರ್ವಾನುಮೋದನೆ ಇಲ್ಲದೆಯೇ ವಿಶ್ವವಿದ್ಯಾಲಯ ಹಂತದಲ್ಲೇ ಕ್ರಮ ಕೈಗೊಂಡು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಅಂಶ ತನಿಖಾ ವರದಿಯಿಂದ ತಿಳಿದು ಬಂದಿದೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ 6 ವರ್ಷಗಳ ಹಿಂದೆ ಈ ಅಕ್ರಮಗಳು ನಡೆದಿದ್ದವು. ಈ ಅವಧಿಯಲ್ಲಿ ಪ್ರೊ.ಬೈರಪ್ಪ ಅವರು ಕುಲಪತಿಗಳಾಗಿದ್ದರು. ಇಲ್ಲಿ ನಡೆದಿರುವ ಹಗರಣದ ಮೊತ್ತ ₹ 100 ಕೋಟಿಗೂ ಮೀರಿದೆ ಎಂದು ಬಿಜೆಪಿಯ ಎನ್.ರವಿಕುಮಾರ್ ಅವರು ವಿಧಾನಪರಿಷತ್ತಿನಲ್ಲಿ ಆರೋಪಿಸಿದ್ದರು.
ಹಗರಣಗಳ ವಿವರ
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ 2.5 ಕೋಟಿ ರು.ವೆಚ್ಚದಲ್ಲಿ ಕಳಪೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲಾಗಿತ್ತು. ಇ-ಆಡಳಿತವನ್ನು ಅನುಷ್ಠಾನಗೊಳಿಸಲು 2.5 ಕೋಟಿ ರು.ವೆಚ್ಚದಲ್ಲಿ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಖರೀದಿಸಲಾಗಿತ್ತು.
ಪ್ರತಿ ಲ್ಯಾಪ್‌ಟಾಪ್‌ನ ಮೂಲ ದರ 26,000 ರು. ಇದ್ದರೂ ವಿಶ್ವವಿದ್ಯಾಲಯವು ಪ್ರತಿ ಲ್ಯಾಪ್‌ಟಾಪ್‌ವೊಂದಕ್ಕೆ 50,000 ರು. ನೀಡಿ ಖರೀದಿಸಿತ್ತು. ಲ್ಯಾಪ್‌ಟಾಪ್‌ಗಳು ಕಚೇರಿ/ವಿಭಾಗಗಳಲ್ಲಿ ಅಳವಡಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆಯೇ 2.5 ಕೋಟಿ ರು.ಗಳನ್ನು ಸರಬರಾಜುದಾರರಿಗೆ ಸಂದಾಯ ಮಾಡಲಾಗಿತ್ತು ಎಂಬುದು ತನಿಖೆ ವರದಿಯಿಂದ ತಿಳಿದು ಬಂದಿದೆ.
ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪರೀಕ್ಷಾ ಗಣಕೀಕರಣಕ್ಕೆ ತರಾತುರಿಯಲ್ಲಿ ಟೆಂಡರ್ ಕರೆದಿದ್ದ ವಿಶ್ವವಿದ್ಯಾಲಯ, ಕುಲಪತಿ ಅವರ ಆಪ್ತರಿಗೆ ಸೇರಿರುವ ಬೆಂಗಳೂರು ಮೂಲದ ಕಂಪನಿಯೊಂದಕ್ಕೆ 2015ರಲ್ಲಿ ಪರೀಕ್ಷಾ ಗಣಕೀಕರಣದ ಗುತ್ತಿಗೆ ನೀಡಿದ್ದರು. ಈ ಕಂಪನಿಯು ಪರೀಕ್ಷಾ ಗಣಕೀಕರಣದಲ್ಲಿ ಮಾಡಿದ್ದ ಎಡವಟ್ಟಿಯಿಂದ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದರು.
ಹಿಂದಿನ ಕುಲಪತಿ ಪ್ರೊ. ಬೈರಪ್ಪ ಅವರ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಅಳವಡಿಕೆಯಲ್ಲಿಯೂ ಅಕ್ರಮಗಳು ನಡೆದಿರುವುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ. ವಿಶ್ವವಿದ್ಯಾಲಯದಲ್ಲಿ ಅನಧಿಕೃತ ತಾತ್ಕಾಲಿಕ ಹುದ್ದೆಗಳನ್ನು ಸೃಷ್ಟಿಸಿ, ನಿಯಮ ಬಾಹಿರವಾಗಿ ವೇತನ ನಿಗದಿ ಮಾಡಲಾಗಿತ್ತು. ಈ ಹುದ್ದೆಗಳಿಗೆ ದಕ್ಷಿಣಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಯವರನ್ನು ನಿರ್ಲಕ್ಷಿಸಿ, ಮೈಸೂರು, ಮಂಡ್ಯ ಮತ್ತು ಹಾಸನ ಭಾಗದ ತಮ್ಮ ಸಂಬಂಧಿಕರಿಗೆ ನೇಮಕ ಆದೇಶ ನೀಡಿ ಅವ್ಯವಹಾರ ನಡೆಸಲಾಗಿತ್ತು ಎಂಬ ಅರೋಪದ ಕುರಿತು ತನಿಖೆ ನಡೆಸಿದ್ದ ಲೆಕ್ಕ ಪರಿಶೋಧಕರ ತಂಡ, ಯುಜಿಸಿ ನಿಯಮಾವಳಿ ಮತ್ತು ನೇಮಕಾತಿ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಸೋಲಾರ್ ಬೀದಿ ದೀಪ ಖರೀದಿಗೆ ಸಂಬಂಧಿಸಿದಂತೆ ಎಲ್ 1 ಕನಿಷ್ಠ ದರ ನಮೂದಿಸಿದ್ದ ಸಂಸ್ಥೆಯನ್ನು ಕಡೆಗಣಿಸಿ, ಎಲ್ 2 ಎರಡನೇ ಕನಿಷ್ಠ ದರ ನಮೂದಿಸಿದ್ದ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದನ್ನು ಲೆಕ್ಕ ಪರಿಶೋಧಕರ ತನಿಖಾ ತಂಡ ಪತ್ತೆ ಹಚ್ಚಿದೆ.
55 ಕೋಟಿ ರೂ ವೆಚ್ಚದ ಅಂತಾರಾಷ್ಟ್ರೀಯ ವಿದ್ಯಾರ್ಥಿ ನಿಲಯದ ನಿರ್ಮಾಣ ಕಾಮಗಾರಿಯ ಟೆಂಡರ್‌ನ ಮಾಹಿತಿಯನ್ನು ಸೋರಿಕೆ ಮಾಡಿ ಕುಲಪತಿಗಳು ನಿರ್ಣಯಿಸಿದ ಮತ್ತು ಅವರ ಆಪ್ತ ವಲಯದ ಪ್ರಭಾವಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ನಿರ್ಮಾಣದ ಆದೇಶ ನೀಡಲಾಗಿತ್ತು ಎಂಬ ಆರೋಪಗಳನ್ನು ತನಿಖಾ ತಂಡ ಸಾಬೀತುಪಡಿಸಿದೆ.
ದೂರ ಶಿಕ್ಷಣ ಕಾರ್ಯಕ್ರಮದಲ್ಲಿ ಯುಜಿಸಿ ನಿಯಮಾವಳಿ ಉಲ್ಲಂಘಿಸಿ ಕುಲಪತಿಯವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಮ್ಮ ಕುಟುಂಬದ ಸದಸ್ಯರೇ ನಿರ್ವಹಿಸುವ ಎಸ್‌ಎಸ್‌ಬಿಇಟಿ(ಸ್ತ್ರೀ ಸಮಾಜ ಬೆಂಗಳೂರು ಎಜುಕೇಷನ್ ಟ್ರಸ್ಟ್) ಸಂಸ್ಥೆಗೆ ಅಧ್ಯಯನ ಕೇಂದ್ರದ ಮಾನ್ಯತೆ ನೀಡಿದ್ದರು ಎಂಬ ಅರೋಪಗಳೂ ಕೇಳಿ ಬಂದಿದ್ದವು.
ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಎರಡು ದಿನಗಳ ಓಪನ್ ಹೌಸ್ ಈ ಕಾರ್ಯಕ್ರಮಕ್ಕೆ ಸುಮಾರು ₹ 1 ಕೋಟಿ ಅಕ್ರಮ ಬಿಲ್‌ಗಳನ್ನು ತಯಾರಿಸಿ ವಿಶ್ವವಿದ್ಯಾಲಯದ ಹಣವನ್ನು ಲೂಟಿ ಮಾಡಲಾಗಿದೆ. ಭದ್ರತಾ ಸಿಬ್ಬಂದಿ, ಸ್ವಚ್ಛಾತ ಸಿಬ್ಬಂದಿ ಮತ್ತು ತಾತ್ಕಾಲಿಕ ಡಿ ಗ್ರೂಪ್ ನೌಕರರ ನೇಮಕಕ್ಕಾಗಿ ಬೈರಪ್ಪ ತಮ್ಮ ಸಂಬಂಧಿಕರಾದ ಬಾಲಕೃಷ್ಣ ನಿಂಗೇಗೌಡ ಅವರ ಮಾಲಿಕತ್ವದ ಕ್ಯಾನಾನ್ ಸೆಕ್ಯೂರಿಟಿ ಸರ್ವಿಸಸ್, ಮೈಸೂರು ಇವರಿಗೆ ಗುತ್ತಿಗೆ ನೀಡಿದ್ದರು ಎಂಬ ಆರೋಪವಿದೆ.
2015-16, 2016-17 ಮತ್ತು 2017-19 ನೇ ಸಾಲಿನಲ್ಲಿ ಇವರೇ ಗುತ್ತಿಗೆ ಪಡೆದಿದ್ದಾರೆ. ಭವಿಷ್ಯನಿಧಿ ಮತ್ತು ಇತರ ಭತ್ಯೆಗಳನ್ನು ವಿಶ್ವವಿದ್ಯಾಲಯಕ್ಕೆ ನೀಡದೆ ವಂಚಿಸಲಾಗಿದೆ. ಹೋರಾಟ ಮಾಡಿದ ನೌಕರರನ್ನು ವಜಾ ಮಾಡಲಾಗಿತ್ತು.