ಬೆಂಗಳೂರು; ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರಿಗೆ ಉದ್ಯಮಶೀಲತಾ ಕೌಶಲ್ಯ ತರಬೇತಿ ಮತ್ತು ಆರ್ಥಿಕ ಬೆಂಬಲ ಒದಗಿಬೇಕಿದ್ದ ಸಮೃದ್ಧಿ ಯೋಜನೆಯು ಖಾಸಗಿ ಕಂಪನಿ, ಪ್ರಾಂಚೈಸಿಗಳಿಗೆ ಹೆಚ್ಚಿನ ಆರ್ಥಿಕ ಬಲ ತುಂಬಿದೆ. ಅಲ್ಲದೇ ಪ್ರಾಂಚೈಸರ್‍ಗಳು ಇಂಟೀರಿಯರ್‍ಗಳಿಗಾಗಿ ಅನಗತ್ಯವಾಗಿ ಹೆಚ್ಚಿನ ಮೊತ್ತ ಖರ್ಚು ಮಾಡಿರುವುದನ್ನು ಮೌಲ್ಯಮಾಪನ ತಂಡವು ಪತ್ತೆ ಹಚ್ಚಿದೆ.
2018-19ರಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಸಮ್ಮಿಶ್ರ ಸರ್ಕಾರವು ಸಮೃದ್ಧಿ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಮೌಲ್ಯಮಾಪನ ಮಾಡಿತ್ತು. ಪ್ರಾಧಿಕಾರದ ಪರವಾಗಿ ಐಸೆಕ್‌ನ ಡಾ ಮೀನಾಕ್ಷಿ ಭಟ್ ಅವರು ಮಾಡಿರುವ ಮೌಲ್ಯಮಾಪನ ವರದಿಯ ಪ್ರಕಾರ ಸಮೃದ್ಧಿ ಯೋಜನೆಯು, ದಲಿತ ಸಮುದಾಯದ ನಿರುದ್ಯೋಗಿಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಸ್ವಾವಲಂಬಿಗಳನ್ನಾಗಿಸುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಯೋಜನೆಗೆ ಆಯ್ಕೆಯಾಗುವ ಅರ್ಹ ಫಲಾನುಭವಿಗೆ ನೀಡುವ 10 ಲಕ್ಷ ರು ಸಹಾಯನುದಾನದ ಪೈಕಿ ಅರ್ಧದಷ್ಟು ಹಣವು ಇಂಟೀರಿಯರ್‍ಗೆ ಖರ್ಚು ಮಾಡಲಾಗಿದೆ. ಮತ್ತು ಯೋಜನೆಯಲ್ಲಿ ಅನುದಾನವು ಫಲಾನುಭವಿಗೆ ಹೋಗಿಲ್ಲ. ಬದಲಿಗೆ ಇದರ ಸಂಪೂರ್ಣ ಬೆಂಬಲವು ಪ್ರಾಂಚೈಸರ್ ಜೇಬು ತುಂಬಿಸಿದೆ.
ಸಮೃದ್ಧಿ ಯೋಜನೆ ಕುರಿತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನೀಡಿದ್ದ ವರದಿ ಆಧರಿಸಿ ಸಮಾಜ ಕಲ್ಯಾಣ ಇಲಾಖೆಯು ಸಹ ಯೋಜನೆ ಅನುಷ್ಠಾನದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಅಲ್ಲದೇ ಪ್ರಾಂಚೈಸಿಗಳ ಖಾತೆಗೆ ಪಾವತಿಸುವ ಕ್ರಮವನ್ನು ಬದಲಿಸಿಲ್ಲ. ಹೀಗಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ತಲುಪುತ್ತಿಲ್ಲ. ಪ್ರಾಧಿಕಾರವು ಒಂದು ವರ್ಷದ ಹಿಂದೆಯೇ ವರದಿ ನೀಡಿದ್ದರೂ ಸಹ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರೂ ಸಹ ವರದಿಯತ್ತ ಕಣ್ಣಾಡಿಸಿಲ್ಲ.
2024ರಲ್ಲಿ ಸಲ್ಲಿಸಿರುವ ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಸಮೃದ್ಧಿ ಯೋಜನೆಯನ್ನು 2018-19ರಲ್ಲಿ ಪರಿಚಯಿಸಲಾಗಿತ್ತು. ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಬೋವಿ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಎಸ್ ಸಿ ಎಸ್ ಟಿ ಅಭಿವೃದ್ಧಿ ನಿಗಮಗಳ ಮೂಲಕ ಸಮೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು.

ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 10 ಲಕ್ಷ ರು.ವರೆಗೆ ಹಣಕಾಸಿನ ಅನುದಾನವನ್ನು ಒದಗಿಸಲಾಗುತ್ತದೆ. ಅಥವಾ ವ್ಯಾಪಾರ ಘಟಕಗಳನ್ನು ನಿರ್ಮಿಸಲು ವೆಚ್ಚವನ್ನು ಒದಗಿಸಿದೆ. ಈ ಹಣಕಾಸನ್ನು ಸಾಲದ ರೂಪದ ಬದಲಿಗೆ ಅನುದಾನ ರೂಪದಲ್ಲಿತ್ತು.
ಈ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯ ಸರ್ಕಾರವು ಹಲವು ಪ್ರಸಿದ್ಧ ಪ್ರಾಂಚೈಸರ್‍ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಮತ್ತು ಅರ್ಹ ಎಸ್ ಸಿ ಎಸ್ ಟಿ ಫಲಾನುಭವಿಗಳಿಗೆ ಪ್ರಾಂಚೈಸ್ ಔಟ್ ಲೆಟ್‌ಗಳನ್ನು ಸ್ಥಾಪಿಸಲು 10 ಲಕ್ಷ ರು.ವರೆಗೆ ಹಣವನ್ನು ಒದಗಿಸುತ್ತದೆ. ಇದು ಅವರ ಆದಾಯ ಮತ್ತು ಜೀವನಮಟ್ಟವನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ಇಲ್ಲಿಯವರೆಗೆ ಸಮೃದ್ಧಿ ಯೋಜನೆಯು ಕೇವಲ 4,000 ಉದ್ಯಮಿಗಳನ್ನು ಸಶಕ್ತಗೊಳಿಸಿದೆ. 10,000 ಉದ್ಯೋಗಗಳನ್ನು ಸೃಷ್ಟಿಸಿದೆ. ಮತ್ತು 200 ಕೋಟಿ ರು ಗಳ ಬೆಂಬಲವನ್ನು ವಿತರಿಸಿದೆ.
ಆದರೂ ಸಹ ಸಮೃದ್ಧಿ ಯೋಜನೆಯ ಫಲಾನುಭವಿಗಳ ಆದಾಯ ಮತ್ತು ಜೀವನೋಪಾಯದಲ್ಲಿ ಗಮನಾರ್ಹ ಆರ್ಥಿಕ ಬದಲಾವಣೆಗಳೇನೂ ಆಗಿಲ್ಲ.
ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಿದ್ದ ಈ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲಾವಾರು ಕಂಡುಬಂದಿರುವ ವ್ಯತ್ಯಾಸಗಳನ್ನು ಮೌಲ್ಯಮಾಪನ ತಂಡವು ಪತ್ತೆ ಹಚ್ಚಿದೆ. 2018-19ನೇ ಸಾಲಿನಲ್ಲಿ ರಾಜ್ಯದಾದ್ಯಂತ ಈ ನಿಗಮದ ಮೂಲಕ ಅನುದಾನವನ್ನು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಮೌಲ್ಯಮಾಪನ ತಂಡವು ವಿಶ್ಲೇಷಿಸಿರುವುದು ವರದಿಯಿಂದ ಗೊತ್ತಾಗಿದೆ.
ಇದರ ಪ್ರಕಾರ ಬೆಂಗಳೂರು ನಗರದಲ್ಲಿ ಆದಿ ಜಾಂಬವ ಫಲಾನುಭವಿಗಳ ಸಂಖ್ಯೆ ಶೇ. 11.4ರಷ್ಟಿತ್ತು. ಕಲ್ಬುರ್ಗಿಯಲ್ಲಿ ಶೇ. 6.4ರಷ್ಟು ಫಲಾನುಭವಿಗಳಿದ್ದರು. ಬೆಳಗಾವಿಯಲ್ಲಿ ಶೇ. 5.7, ಮೈಸೂರಿನಲ್ಲಿ ಶೇ. 5.4, ಬಳ್ಳಾರಿಯಲ್ಲಿ ಶೇ. 5.2, ತುಮಕೂರಿನಲ್ಲಿ ಶೆ. 4.9, ಕೋಲಾರದಲ್ಲಿ ಶೇ. 4.4, ವಿಜಯಪುರದಲ್ಲಿ ಶೇ. 4.4, ಬೀದರ್‍ನಲ್ಲಿ ಶೇ. 4.0, ಬೀದರ್ ನಲ್ಲಿ ಶೇ. 4.0, ರಾಯಚೂರಿನಲ್ಲಿ ಶೇ. 4.0, ರಾಯಚೂರಿನಲ್ಲಿ ಶೇ. 4.0ರಷ್ಟಿತ್ತು.
ಚಿತ್ರದುರ್ಗದಲ್ಲಿ ಶೇ. 3.8, ದಾವಣಗೆರೆಯಲ್ಲಿ ಶೇ. 3.8, ಬಾಗಲಕೋಟೆಯಲ್ಲಿ ಶೇ. 3.2, ಚಿಕ್ಕಬಳ್ಳಾಪುರದಲ್ಲಿ ಶೇ. 3.2, ಹಾಸನದಲ್ಲಿ ಶೇ. 3.2, ಯಾದಗಿರಿಯಲ್ಲಿ ಶೇ. 2.7, ಚಾಮರಾಜನಗರದಲ್ಲಿ ಶೇ. 2.5, ಚಿಕ್ಕಮಗಳೂರು ಶೇ. 2.5, ಕೊಪ್ಪಳದಲ್ಲಿ ಶೇ. 2.5, ಮಂಡ್ಯದಲ್ಲಿ ಶೇ. 2.5, ಬೆಂಗಳೂರು ಗ್ರಾಮಾಂತರದಲ್ಲಿ ಶೇ. 2.2, ಹಾವೇರಿಯಲ್ಲಿ ಶೇ. 2.2, ಶಿವಮೊಗ್ಗದಲ್ಲಿ ಶೇ. 2.2, ರಾಮನಗರದಲ್ಲಿ ಶೇ. 2.0, ಧಾರವಾಡದಲ್ಲಿ ಶೇ. 1.7, ಗದಗ್‌ನಲ್ಲಿ ಶೇ. 1.7, ಉತ್ತರ ಕನ್ನಡದಲ್ಲಿ ಶೇ. 1.2, ಉಡುಪಿಯಲ್ಲಿ ಶೇ. 0.7, ದಕ್ಷಿಣ ಕನ್ನಡದಲ್ಲಿ ಶೇ. 0.2, ಕೊಡಗಿನಲ್ಲಿ ಶೇ. 0.2 ಫಲಾನುಭವಿಗಳು ಇದರ ಅನುಕೂಲ ಪಡೆದಿರುವುದು ತಿಳಿದು ಬಂದಿದೆ.

ಸಮೃದ್ಧಿ ಯೋಜನೆಯನ್ನು ಉಪ ಜಾತಿಗಳ ಪೈಕಿ ಆದಿ ಕರ್ನಾಟಕವು ಶೇ. 41ರಷ್ಟು ಪ್ರಾತಿನಿಧ್ಯ ಪಡೆದಿದೆ. ಸಮಾಗರವು ಶೇ. 6ರಷ್ಟು, ಆದಿ ದ್ರಾವಿಡವು ಶೇ. 11, ಮಾಧರ್ ಶೇ. 13ರಷ್ಟು ಮತ್ತು ಮಾದಿಗ ಶೇ.22ರಷ್ಟು, ಧೋರ್, ಮೋಚಿ, ಚಂಬಾರ್, ಹೋಲರ್, ಮಡಿಗ್, ಮೋಚಿಗರ್, ಚಮರ್, ಚಮ್ಗರ್, ಮಾಂಗ್ ಒಳಗೊಂಡ ಇತರೆ ಉಪ ಜಾತಿಗಳ ಶೇ. 7ರಷ್ಟು ಫಲಾನುಭವಿಗಳು ಪ್ರಾತಿನಿಧ್ಯ ಪಡೆದಿರುವುದು ಗೊತ್ತಾಗಿದೆ.

ಬೆಂಗಳೂರು ನಗರ ಜಿಲ್ಲೆ ಅತೀ ಹೆಚ್ಚು ಶೇಕಡವಾರು ಪ್ರಮಾಣವನ್ನು ಹೊಂದಿದೆ. ಕಲ್ಬುರ್ಗಿ ನಂತರದ ಸ್ಥಾನದಲ್ಲಿದೆ. ಕೊಡಗು ಕಡಿಮೆಯಾಗಿದೆ. ಉಪ ಜಾತಿವಾರು ಆದಿ ಕರ್ನಾಟಕ ಸಮುದಾಯದವರು ಹೆಚ್ಚಿನ ಲಾಭವನ್ನು ಪಡೆದಿದ್ದಾರೆ. ನಂತರ ಮಾದಿಗರು ಇದರ ಪ್ರಯೋಜನ ಪಡೆದಿರುವುದು ವರದಿಯಿಂದ ಗೊತ್ತಾಗಿದೆ.
ಆರೋಗ್ಯ ಆರ್ಗಾನಿಕ್, ಟುಟ್ಟೂಡು, ಪ್ರೆಸ್ಟೀಜ್ ಹೋಂ ಅಪ್ಲೈಯನ್ಸಸ್, ರೋಮನ್ ಐಲ್ಯಾಂಡ್, ಕೆಎಂಎಫ್, ಬಿಗ್ ಬಾಸ್ಕೆಟ್, ಚಿಕ್ಕಪೇಟೆ ದೊನ್ನೆ ಬಿರಿಯಾನಿ ಮನೆ, ಮಿಲ್ಕಿವೇ ಎಕ್ಸೈಸ್, ಚೆರ್‍ರಿ ಟೈರ್, ಬ್ಲಾಕ್ ಬರ್ಡ್, ಜ್ಯೂಸ್ ಲಾಂಜ್, ಬಾಟಾ, ಕ್ಲಾಸಿಕ್ ಪೋಲೋ, ಲಂಡನ್ ಶೇಕ್ಸ್, ಖಾಧಿಮ್ಸ್, ಚಾಟ್ ಒಕೆ ಪ್ಲೀಸ್, ಚಾಯ್ ಪಾಯಿಂಟ್, ಉಡುಪಿ ಬೇಕರಿ ಸಿಹಿ ತಿಂಡಿಗಳು, ಕಾಂಡಿಮೆಂಟ್ಸ್, ವಾಕರ್ಸ್ ಸೇರಿದಂತೆ ಇನ್ನಿತರೆ ಪ್ರಾಂಚೈಸ್‌ಗಳನ್ನು ಫಲಾನುಭವಿಗಳು ಆರಂಭಿಸಿದ್ದರು. ಈ ಪೈಕಿ ಆರೋಗ್ಯ ಆರ್ಗಾನ್ಯಿಕ್ ಪ್ರಮುಖ ಪಾಲನ್ನು ಹೊಂದಿದೆ.

ಈ ಯೋಜನೆಯ ಫಲಾನುಭವಿಗಳ ಪೈಕಿ ಶೇ. 47ರಷ್ಟು ನಾಲ್ಕು ಅಥವಾ ಹೆಚ್ಚಿನ ಅವಲಂಬಿತರನ್ನು ಹೊಂದಿದ್ದಾರೆ. ಶೇ. 61ರಷ್ಟು ಮಂದಿಯ ಮನೆಗಳು ಎರಡು ಕೊಠಡಿಗಳನ್ನು ಹೊಂದಿವೆ. ಆದರೂ ಕಾಲುಭಾಗದಷ್ಟು ಅಂದರೇ ಶೇ. 28.2ರಷ್ಟು ಮಂದಿ ಇನ್ನೂ ಒಂದೇ ಒಂದು ಮಲಗುವ ಕೋಣೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಸಮೀಕ್ಷೆಗೆ ಒಳಗಾದವರಲ್ಲಿ ಶೇ. 6ರಷ್ಟು ಜನರು ಮೂರು ಮಲಗುವ ಕೋಣೆಗಳಿಗಿಂತ ಹೆಚ್ಚು ಮತ್ತು 500 ಚದರ ಅಡಿಗಳಿಗಿಂತ ಹೆಚ್ಚು ವಾಸಿಸುವ ಸ್ಥಳವನ್ನು ಹೊಂದಿದ್ದಾರೆ. ಅವರಲ್ಲಿ ಸುಮಾರು 94 ಪ್ರತಿಶತದಷ್ಟು ಮನೆಗಳಲ್ಲಿ ಒಂದು ಸ್ನಾನಗೃಹವಿದೆ ಎಂದು ಫಲಾನುಭವಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮೇಲೂ ಬೆಳಕು ಚೆಲ್ಲಿದೆ.

ಕಳೆದ ಮೂರು ವರ್ಷಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದಾಗಲೀ ಅಥವಾ ಆದಿ ಜಾಂಬವ ನಿಗಮದಿಂದಾಗಲಿ ಬೇರೆ ಯಾವುದೇ ಯೋಜನೆಗಳ ಅಡಿಯಲ್ಲಿ ಅನುದಾನ ನೀಡಿಲ್ಲ. ಫಲಾನುಭವಿಗಳು ಎಸ್‌ಎಸ್‌ಎಲ್‌ಎಸಿ ಉತ್ತೀರ್ಣರಾಗಿರಬೇಕು ಎಂಬ ಅರ್ಹತೆ ಇದೆ. ಹೀಗಾಗಿ ಕೆಲವು ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಿವರವಾದ ತರಬೇತಿಯನ್ನು ಪಡೆಯುವಲ್ಲಿ ಮಹಿಳೆಯರು, ಪುರುಷರಿಗಿಂತ ಸ್ವಲ್ಪ ಕಡಿಮೆ ಶೇಕಡವಾರು ಪಡೆದಿದ್ದಾರೆ. ಯಶಸ್ವಿಯಾಗಿ ವ್ಯಾಪಾರ ನಡೆಸಲು ನೀಡಿರುವ ತರಬೇತಿಯು ಸಮರ್ಪಕವಾಗಿಲ್ಲ ಎಂದು ಶೇ. 40ರಷ್ಟು ಫಲಾನುಭವಿಗಳು ಮೌಲ್ಯಮಾಪನ ತಂಡಕ್ಕೆ ಅಭಿಪ್ರಾಯಿಸಿದ್ದಾರೆ.
ಪ್ರಾಂಚೈಸಿಗಳಿಂದ ಕೇವಲ ಆರಂಭಿಕ ತರಬೇತಿಯಷ್ಟೇ
ಪ್ರಾಂಚೈಸರ್ ಕಂಪನಿಯು ಕೇವಲ ಆರಂಭಿಕ ತರಬೇತಿಯನ್ನು ಮಾತ್ರ ನೀಡಿದೆ. ಇದನ್ನು ಹೊರತುಪಡಿಸಿ ಪ್ರಾಂಚೈಸರ್‍ಗಳು ಯಾವುದೇ ನಿಯಮಿತವಾಗಿ ಸಹಾಯ ಮಾಡಿಲ್ಲ.

ಫಲಾನುಭವಿಗೆ ಅನುದಾನವು ಮಹತ್ವದ್ದಾಗಿದೆ. ಆದರೆ ಈ ಯೋಜನೆಯಡಿ ಒದಗಿಸಿದ್ದ ಅನುದಾನವು ಫಲಾನುಭವಿಗೆ ತಲುಪಿಲ್ಲ. ಸಂಪೂರ್ಣ ಬೆಂಬಲವು ಪ್ರಾಂಚೈಸರ್‍ಗೆ ಪಾವತಿಯಾಗಿದೆ. ಫಲಾನುಭವಿಗಳು ಪ್ರಾಂಚೈಸರ್‍ನ ಸೂಚನೆಗಳನ್ನು ಮಾತ್ರ ಅನುಸರಿಸಬೇಕು. ಪ್ರಾಂಚೈಸರ್‍ಗಳು ಇಂಟೀರಿಯರ್‍ಗಳಿಗಾಗಿ ಅನಗತ್ಯವಾಗಿ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದ್ದಾರೆ. ಹೀಗಾಗಿ ಫಲಾನುಭವಿಗಳ ಕೈಗೆ ಹೆಚ್ಚು ಮೊತ್ತವು ಕೈ ಸೇರಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅನೇಕ ಫಲಾನುಭವಿಗಳು ಬಾಡಿಗೆಯನ್ನು ತಮ್ಮ ವೈಯಕ್ತಿಕ ಸಂಪನ್ಮೂಲಗಳಿಂದ ಮುಂಗಡ ಬಾಡಿಗೆ ಪಾವತಿಸಿದ್ದಾರೆ. ಶೇ. 5ರಷ್ಟು ಫಲಾನುಭವಿಗಳು ತಮ್ಮ ಪೋಷಕರು, ಸ್ನೇಹಿತರು, ಸಂಬಂಧಿಕರಿಂದ ಹಣ ಪಡೆದು ಬಾಡಿಗೆ ಪಾವತಿಸಿದ್ದಾರೆ.

ಕೇವಲ ಶೇ. 2.7ರಷ್ಟು ಪ್ರಾಂಚೈಸರ್‍ಗಳಿಂದ ಮುಂಗಡ ಹಣವನ್ನು ಪಡೆದುಕೊಂಡಿದ್ದಾರೆ.

ಐದು ಪ್ರತಿಶತದಷ್ಟು ಮಂದಿ ತಮ್ಮ ಹಣವನ್ನು ಬ್ಯಾಂಕ್‌ಗಳಿಂದ ಪಡೆದಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸಮೃದ್ಧಿ ಯೋಜನೆಯು ಕೆಲವರಿಗೆ ಜೀವನೋಪಾಯ ಸೃಷ್ಟಿಸಲು ಸಾಧ್ಯವಾಗಿದ್ದರೂ ಫಲಾನುಭವಿಗಳಿಗೆ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. 2020-21 ಮತ್ತು 2021-22ರಲ್ಲಿ ಸರಾಸರಿ ಉದ್ಯೋಗ ಸೃಷ್ಟಿಯು ಪ್ರತಿ ಸಂಸ್ಥೆಗೆ ಇಬ್ಬರು ಉದ್ಯೋಗಿಗಳು, 2021-22ರಲ್ಲಿ ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸಿಕೊಳ್ಳದೇ ತಮ್ಮ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಮತ್ತೊಂದೆಡೆ 35.1ರಷ್ಟು ಜನರು ತಮ್ಮ ಜೊತೆಗೆ ಇಬ್ಬರಿಗೆ ಉದ್ಯೋಗ ನೀಡಿದ್ದಾರೆ.

ಯೋಜನೆಯ ಫಲಾನುಭವಿಗಳ ಪೈಕಿ ಬೆಂಗಳೂರು ವಿಭಾಗದಲ್ಲಿ ಸಂಸ್ಥೆಗಳು ನಿರೀಕ್ಷಿತವಾಗಿ ಹೆಚ್ಚಿನ ಲಾಭ ಗಳಿಸಿವೆ. ಲಿಂಗ ಪ್ರಕಾರ ಲಾಭದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಸ್ನಾತಕೋತ್ತರ ಪದವೀಧರರು ಎಸ್‌ಎಸ್‌ಎಲ್‌ಸಿ ಫಲಾನುಭವಿಗಳಿಗಿಂತ 3 ಪಟ್ಟು ಹೆಚ್ಚು ಗಳಿಸಿದ್ದಾರೆ. ವಿವಿಧ ವಿಭಾಗಗಳ ವಾಹನಗಳ ಓಡಾಟ ಮತ್ತು ಸೇವೆಯು ಆಹಾರ ಮತ್ತು ಪಾನೀಯಗಳ ನಂತರ ಹೆಚ್ಚಿನ ಲಾಭವನ್ನು ಗಳಿಸಿವೆ. ಫಲಾನುಭವಿಗಳ ಮಾಸಿಕ ಗಳಿಕೆಯಲ್ಲಿ ಬೆಂಗಳೂರು ವಿಭಾಗದಲ್ಲಿ ಮಾಸಿಕ ಸರಾಸರಿ 15,000 ರು ಲಾಭ ಗಳಿಸಿದ್ದಾರೆ. ಮೈಸೂರು ವಿಭಾಗದಲ್ಲಿ 11,333 ರು, ಬೆಳಗಾವಿ ವಿಭಾಗದಲ್ಲಿ 9,964, ಕಲ್ಬುರ್ಗಿ ವಿಭಾಗದಲ್ಲಿ 9,217 ರು ಮಾಸಿಕ ಸರಾಸರಿ ಲಾಭ ಗಳಿಸಿರುವುದು ವರದಿಯಿಂದ ಗೊತ್ತಾಗಿದೆ.

ಸಮೃದ್ಧಿ ಯೋಜನೆಯಿಂದ ಉದ್ಯಮಗಳನ್ನು ಕಟ್ಟಿಕೊಂಡಿದ್ದರೂ ಸಹ ಜೀವನ ವೆಚ್ಚವನ್ನು ಸರಿದೂಗಿಸಲು ಸಾಕಾಗುತ್ತಿಲ್ಲ. ಶೇ. 50.7ರಷ್ಟು ಫಲಾನುಭವಿಗಳು ಆದಾಯವು ಜೀವನ ವೆಚ್ಚವನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ಮೌಲ್ಯಮಾಪನ ತಂಡಕ್ಕೆ ಹೇಳಿದ್ದಾರೆ.

ಅಲ್ಲದೇ ತಮ್ಮ ವ್ಯವಹಾರಗಳು ಸಾಕಷ್ಟು ಆದಾಯ ಗಳಿಸುತ್ತಿಲ್ಲ ಎಂದಿರುವುದು ತಿಳಿದು ಬಂದಿದೆ.

ಬಹುತೇಕ ಫಲಾನುಭವಿಗಳಿಗೆ ವ್ಯವಹಾರ ಜ್ಞಾನ ಇಲ್ಲ. ತಮ್ಮ ಮಾರಾಟವನ್ನು ನಿರಂತರವಾಗಿ ಮರು ಹೂಡಿಕೆ ಮಾಡಬೇಕು ಎಂದು ತಿಳಿದಿರುವುದಿಲ್ಲ. ಮಾರಾಟ, ವಹಿವಾಟು ತಮ್ಮ ಆದಾಯ ಎಂದು ಭಾವಿಸಿ ಖರ್ಚು ಮಾಡುತ್ತಿದ್ದಾರೆ. ನಂತರ ಅವರ ವ್ಯವಹಾರಗಳು ಸಮರ್ಥನೀಯವಾಗುವುದಿಲ್ಲ. ಪ್ರಾಂಚೈಸರ್‍ಗಳು ಫಲಾನುಭವಿಗಳಿಗೆ ಕೆಲವು ತರಬೇತಿ ನೀಡಿದರೂ ಸಹ ಅದು ಸಾಕಾಗುತ್ತಿಲ್ಲ. ಫಲಾನುಭವಿಗಳಿಗೆ ವ್ಯಾಪಾರ , ಮಾರ್ಕೇಟಿಂಗ್ ವೆಚ್ಚ ಇತ್ಯಾದಿಗಳ ಬಗ್ಗೆ ಹೆಚ್ಚಿನ ವಿವರವಾದ ತರಬೇತಿ ಅಗತ್ಯವಿದೆ. ಅಲ್ಲದೇ ಫಲಾನುಭವಿಗಳಿಗೆ ವ್ಯವಹಾರದ ಬಗ್ಗೆ ಗಂಭೀರತೆಯ ಕೊರತೆಯಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

ಆದರೆ ಪ್ರಾಂಚೈಸರ್ ಕಂಪನಿಗಳು ನೀಡುತ್ತಿರುವ ವಸ್ತುಗಳು ದುಬಾರಿಯಾಗಿವೆ. ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಫಲಾನುಭವಿಗಳು ಮೌಲ್ಯಮಾಪನ ತಂಡಕ್ಕೆ ದೂರಿದ್ದಾರೆ. ಈ ಸಮೃದ್ಧಿ ಯೋಜನೆ ನಡೆಸುತ್ತಿರುವ ಪ್ರೈಸ್ ವಾಟರ್ ಹೌಸ್ ಕೂಪರ್ಸ್, ಉತ್ತಮ ಕೆಲಸ ಮಾಡಿಲ್ಲ ಮತ್ತು ಅವರಿಂದ ಯಾರಿಗೂ ಬೆಂಬಲ ಸಿಕ್ಕಿಲ್ಲ ಎಂದು ಫಲಾನುಭವಿಗಳು ಮೌಲ್ಯಮಾಪನ ತಂಡದ ಮುಂದೆ ಅಲವತ್ತುಕೊಂಡಿರುವುದು ತಿಳಿದು ಬಂದಿದೆ.

ಆದೀಶ್ವರ ಅಥವಾ ಕ್ರೋಮಾದಂತಹ ಬ್ರಾಂಡ್ ಕಂಪನಿಗಳಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಿಲ್ಲರೆ ಮಾರಾಟ ಮಾಡುವ ಕಂಪನಿಯಾಗಿದೆ. ಈ ಕಂಪನಿಗಳು ಟಿ ವಿ , ಮೊಬೈಲ್ ಮತ್ತು ವಾಷಿಂಗ್ ಮೆಷಿನ್ ಮತ್ತಿತರೆ ಉತ್ಪನ್ನಗಳನ್ನು ಮಾರಾಟ ಮಾಡಿವೆ. ಈ ಕಂಪನಿಗಳು ಶೇ. 50ಕ್ಕೂ ಹೆಚ್ಚು ಫಲಾನುಭವಿಗಳನ್ನು ಬೆಂಬಲಿಸಿದ್ದಾರೆ.
ಆದರೆ ಫಲಾನುಭವಿಗಳಿಗೆ ಸರ್ಕಾರ ನೀಡುವ 10 ಲಕ್ಷ ರು ಅನುದಾನದಲ್ಲಿ 5 ಲಕ್ಷ ರು.ಗಳನ್ನು ಒಳಾಂಗಣಕ್ಕೆ ಖರ್ಚು ಮಾಡಿಸಿವೆ. ಬ್ರಾಂಡ್ ಶುಲ್ಕ ಮತ್ತು ಉತ್ಪನ್ನಗಳಿಗೆ ಉಳಿದ ಹಣ ಖರ್ಚಾಗಿದೆ. ಹೀಗಾಗಿ ಒಟ್ಟು ಫಲಾನುಭವಿಗಳ ಪೈಕಿ ಸುಮಾರು 5ರಿಂದ 7 ಪ್ರತಿಶತದಷ್ಟು ಮುಚ್ಚಿದ್ದಾರೆ. ಶೇ. 50ರಷ್ಟು ಫಲಾನುಭವಿಗಳು ತಮ್ಮ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರಾದರೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮೌಲ್ಯಮಾಪನ ತಂಡದ ಪರಿಶೀಲನೆಯಿಂದ ಗೊತ್ತಾಗಿದೆ.
ಸಮೃದ್ಧಿ ಯೋಜನೆಯು ಬಹಳ ಉತ್ತಮವಾಗಿದೆ. ಆದರೆ ಅದರ ಅನುಷ್ಠಾನ ಪ್ರಕ್ರಿಯೆ ಸರಿಯಾಗಿಲ್ಲ. ಪ್ರೈಸ್ ವಾಟರ್ ಕೋಪರ್ಸ್ ಸಂಸ್ಥೆಯು ಯಾವುದೇ ಸರಿಯಾದ ಬೆಂಬಲ ಮತ್ತು ಪರಿಹಾರವನ್ನೂ ನೀಡಿಲ್ಲ. ಆರಂಭದಲ್ಲಷ್ಟೇ ಫಲಾನುಭವಿಗಳಿಂದ ಉತ್ಪನ್ನಗಳನ್ನು ಪಡೆದಿದೆ. ಆ ನಂತರ ಫಲಾನುಭವಿಗಳ ಬಳಿ ಅವರು ಬಂದಿಲ್ಲ. ಬೇರೆಯವರಿಂದ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಹಾಗೆಯೇ ಆನ್‌ಲೈನ್ ಕಂಪನಿಗಳ ಉಪಸ್ಥಿತಿಯಿಂದಾಗಿ ಲಾಭದ ಪ್ರಮಾಣವು ಶೇ. 10ಕ್ಕೆ ಇಳಿದಿದೆ. ಹೀಗಾಗಿ ಹಲವು ಫಲಾನುಭವಿಗಳು ಉದ್ಯಮ ಚಟುವಟಿಕೆ ಮುಂದುವರಿಸಲು ಸಿದ್ಧರಿಲ್ಲ ಎಂದು ಮೌಲ್ಯಮಾಪನ ತಂಡದ ಮುಂದೆ ಫಲಾನುಭವಿಗಳು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಮಾರುಕಟ್ಟೆ ಸಂಶೋಧನೆ ಕೊರತೆ ಇದೆ. ಬ್ಲಾಕ್ ಬರ್ಡ್ ಬಟ್ಟೆ ಚಿಲ್ಲರೆ ವ್ಯಾಪಾರವೂ ಕಡಿಮೆಯಾಗಿದೆ. ತಾಲೂಕಿನ ನಿವಾಸಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಇದನ್ನು ಅಧ್ಯಯನ ಮಾಡದೆಯೇ ಬ್ಲಾಕ್ ಬರ್ಡ್‌ನ ಚಿಲ್ಲರೆ ವ್ಯಾಪಾರ ಮಾಡಿದ್ದರಿಂದ ನಷ್ಟವನ್ನು ಅನುಭವಿಸಿದರು. ಅಲ್ಲದೇ ಬ್ಲಾಕ್ ಬರ್ಡ್ ಬಟ್ಟೆಯು ಸಹ ಗುಣಮಟ್ಟದಿಂದ ಕೂಡಿಲ್ಲ. ಕಳಪೆಯದ್ದಾಗಿತ್ತು. ಬಣ್ಣವು ಕಳೆಗುಂದಿತ್ತು. ಫಲಾನುಭವಿಯು ಪ್ರಾಂಚೈಸರ್‍ಗೆ ವರದಿ ಮಾಡಿದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಮತ್ತು ಪರಿಹಾರವೂ ನೀಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಹಲವು ಯೋಜನೆಗಳಲ್ಲಿ ಪ್ರಾಂಚೈಸರ್‍ಗಳು ಮಾತ್ರ ಲಾಭ ಗಳಿಸಿದ್ದಾರೆ. ಫಲಾನುಭವಿಗಳು ನಷ್ಟ ಅನುಭವಿಸಿದ್ದಾರೆ. ಉದಾಹರಣೆಗೆ ತಮಾರಾ ಫ್ಯಾಷನ್ ಅಂಗಡಿ ನಡೆಸುತ್ತಿದ್ದ ಫಲಾನುಭವಿಯೊಬ್ಬನ ಪ್ರಕರಣದಲ್ಲಿ ಲಾಭವನ್ನು ಪ್ರಾಂಚೈಸರ್ ಪಡೆದಿದ್ದಾರೆ. ಅವರ ಪ್ರಕಾರ ಬಟ್ಟೆಗಳಿಗೆ ಹೆಚ್ಚಿನ ಶುಲ್ಕ ವಿಧಿಸಲಾಗಿದೆ. ಬಟ್ಟೆಗೆ ಕೇವಲ 3 ಲಕ್ಷ ಬೆಲೆಯಿದ್ದರೂ ಸಹ ಪ್ರಾಂಚೈಸರ್, ಫಲಾನುಭವಿಗೆ 7 ಲಕ್ಷ ಬಿಲ್ ಮಾಡಿದ್ದಾನೆ. ಉತ್ಪನ್ನಗಳ ಮಾರಾಟದ ವೆಚ್ಚವು ಮಾರುಕಟ್ಟೆಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಲಭ್ಯವಿರುವ ಒಂದೇ ರೀತಿಯ ಬಟ್ಟೆಗಳ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಹೀಗಾಗಿ ಹಣವನ್ನು ಪ್ರಾಂಚೈಸಿಗೆ ನೀಡುವ ಬದಲು ನೇರವಾಗಿ ಫಲಾನುಭವಿ ಖಾತೆಗೆ ವರ್ಗಾಯಿಸಬೇಕು.

ಸಮೃದ್ಧಿ ಯೋಜನೆಯ ಹಣದ ಮೇಲೆ ಫಲಾನುಭವಿಗಳಿಗೆ ಬಹಳ ಕಡಿಮೆ ಹಕ್ಕಿದೆ. ಹೆಚ್ಚಿನ ಹಕ್ಕು ಪ್ರಾಂಚೈಸಿಗಳಿಗಿದೆ. ಅನೆಕ ಫಲಾನುಭವಿಗಳು ತಮ್ಮ ವ್ಯಾಪಾರವನ್ನು ಸ್ಥಾಪಿಸಿದ ಫಲಾನುಭವಿಯ ಸ್ಥಳೀಯರಲ್ಲಿ ಸಾಕಷ್ಟು ಬೇಡಿಕೆಯಿಲ್ಲದ ವ್ಯವಹಾರಗಳನ್ನು ಕೈಗೊಂಡಿದ್ದಾರೆ. ಪ್ರಾಂಚೈಸಿಗಳು ಒಳಾಂಗಣ ವಿನ್ಯಾಸಕ್ಕೆ ಹೆಚ್ಚಿನ ಬೆಲೆ ವಿಧಿಸುತ್ತಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.









