ಬೆಂಗಳೂರು; ಟೆಂಡರ್ ಡಾಕ್ಯುಮೆಂಟ್‌ಗಳಲ್ಲಿ ಡಿಎಲ್‌ಪಿ ಅವಧಿಯ ಬಗ್ಗೆ ಲಿಕ್ವಿಟಿಡಿ ಡ್ಯಾಮೇಜ್‌ಗಳ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಯಾವುದೇ ಷರತ್ತುಗಳನ್ನು ವಿಧಿಸದೇ ಮೂಕವಾಗಿತ್ತು. ಅಲ್ಲದೇ ವಿಶ್ವವಿದ್ಯಾಲಯವು ಗುತ್ತಿಗೆದಾರರ ಮೇಲೆ ಯಾವುದೇ ಹಿಡಿತವನ್ನೇ ಹೊಂದಿಲ್ಲ ಎಂದು ರಾಜ್ಯ ಲೆಕ್ಕಪತ್ರ ಇಲಾಖೆಯ ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.
ಅಲ್ಲದೇ ವಿಶ್ವವಿದ್ಯಾಲಯವು ತಯಾರಿಸಿರುವ ಟೆಂಡರ್ ಡಾಕ್ಯುಮೆಂಟ್‌ಗಳು ದೋಷಪೂರಿತವಾಗಿದ್ದವು. ಇದರಿಂದಾಗಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗುವ ಸಂಭವವಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ವಿಶ್ವವಿದ್ಯಾಲಯವು 2023-24ನೇ ಸಾಲಿನಲ್ಲಿ ಶಿಕ್ಷಕರ ದಿನಾಚರಣೆಗಾಗಿ ವೆಚ್ಚ ಮಾಡಿದ್ದ 21,67,386 ರು ಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನೂ ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ.
ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಪೂರ್ಣಗೊಳಿಸಿರುವ ರಾಜ್ಯ ಲೆಕ್ಕಪತ್ರ ಇಲಾಖೆಯು, ವಿಶ್ವವಿದ್ಯಾಲಯದ ಆರ್ಥಿಕ ಅಶಿಸ್ತಿನ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ರಾಜೀವ್‌ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯವು ವಿವಿಧ ಕಟ್ಟಡಗಳ ಕಾಮಗಾರಿಗಳನ್ನು ಇ-ಪ್ರೊಕ್ಯೂರ್‍ಮೆಂಟ್ ಅಡಿಯಲ್ಲಿ ಟೆಂಡರ್ ಆಹ್ವಾನಿಸುತ್ತಿದೆ. ಈ ಟೆಂಡರ್ ಡಾಕ್ಯುಮೆಂಟ್‌ಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಡಿಎಲ್‌ಪಿ (Defect Liabilitiy Period) ಲಿಕ್ವಿಡಿಟಿ ಡ್ಯಾಮೇಜ್‌ಸ್ ಹಾಗೂ ಇತರೆ ಬಹುಮುಖ್ಯವಾದ ಆರ್ಥಿಕ ಹೊರೆಯ ಕುರಿತು ಸಮಗ್ರವಾದ ವಿವರಣೆಯೊಂದಿಗೆ ಟೆಂಡೆರ್ ಡಾಕ್ಯುಮೆಂಟ್‌ನಲ್ಲಿ ನಮೂದಿಸುವುದು ಟೆಂಡರ್ ಕರೆಯುವ ಅಧಿಕಾರಿಯ ಬಹುಮುಖ್ಯವಾದ ಜವಾಬ್ದಾರಿಯಾಗಿದೆ.
ಆದರೆ ವಿಶ್ವವಿದ್ಯಾಲಯದಿಂದ ಈವರೆವಿಗೂ ಕರೆದಿರುವ ಟೆಂಡರ್ ಡಾಕ್ಯುಮೆಂಟ್‌ಗಳಲ್ಲಿ ಡಿಎಲ್‌ಪಿ ಅವಧಿಯ ಬಗ್ಗೆ ಲಿಕ್ವಿಟಿಡಿ ಡ್ಯಾಮೇಜ್‌ಗಳ ಬಗ್ಗೆ ಯಾವುದೇ ಷರತ್ತುಗಳನ್ನು ವಿಧಿಸದೇ ಮೂಕವಾಗಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಇದರಿಂದಾಗಿ ಎಲ್‌ಒಎ ನೀಡುವಾಗ ಪರ್ಫಾಮೆನ್ಸ್ ಸೆಕ್ಯುರಿಟಿಗೆ ಸಂಬಂಧಿಸಿದಂತೆ ಪಡೆಯುವ ಗ್ಯಾರಂಟಿ, ಎಫ್‌ಡಿಆರ್‍ಗಳ ಕಾಲಾವಧಿಯನ್ನು ನೀಡಬೇಕಾಗಿರುತ್ತದೆ. ಹಾಗೂ ಕಾಮಗಾರಿ ಕುಂಟಿತವಾದ ಪಕ್ಷದಲ್ಲಿ ಲಿಕ್ವಿಟಿಡಿ ಡ್ಯಾಮೇಜ್‌ಸ್‌ನ್ನು ಯಾವ ಶೇಕಡವಾರು ದಂಡವನ್ನು ವಿಧಿಸಬೇಕಾಗಿರುವ ಬಗ್ಗೆ ಸ್ಪಷ್ಟತೆ ಹೊಂದಬೇಕಾಗುತ್ತದೆ. ಹಾಗೂ ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಮೇಲೆ ದಂಡ ವಿಧಿಸುವ ಪ್ರಕ್ರಿಯೆಗೂ ಸಂಬಂಧಿಸಿದಂತೆ ಎಷ್ಟು ಶೇಕಡವಾರು ದಂಡವನ್ನು ವಿಧಿಸಬೇಕು ಎಂಬ ಬಗ್ಗೆ ಸ್ಪಷ್ಟಣ ಚಿತ್ರಣವನ್ನು ಟೆಂಡರ್ ದಾಖಲಾತಿಯಲ್ಲಿ ವಿವರಿಸಬೇಕು.
ಈ ರೀತಿಯ ಬಹುಮುಖ್ಯವಾದ ಟೆಂಡರ್ ಡಾಕ್ಯುಮೆಂಟ್‌ನಲ್ಲಿ ನಮೂದಿಸದೇ ಇರುವುದರಿಂದ ವಿಶ್ವವಿದ್ಯಾಲಯದಿಂದ ಗುತ್ತಿಗೆದಾರರ ಮೇಲೆ ಯಾವುದೇ ಹಿಡಿತ ಇರುವುದಿಲ್ಲ. ಹಾಗೂ ನ್ಯಾಯಾಲಯಗಳಲ್ಲಿ ದಾವೆ ಹೂಡಿದಾಗಲೂ ಸಹ ಟೆಂಡರ್ ಡಾಕ್ಯುಮೆಂಟ್‌ನ ಆಧಾರದ ಮೇಲೆ ತೀರ್ಪುಗಳು ನೀಡಲಾಗುತ್ತದೆ ಎಂದು ವರದಿಯಲ್ಲಿ ಎಚ್ಚರಿಸಿದೆ.

‘ಈ ರೀತಿ ದೋಷಪೂರಿತ ಟೆಂಡರ್ ಡಾಕ್ಯುಮೆಂಟ್‌ಗಳನ್ನು ತಯಾರಿಸಿರುವುದರಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಇನ್ನು ಮುಂದೆ ಸಮರ್ಪಕವಾದ ಟೆಂಡರ್ ಡಾಕ್ಯುಮೆಂಟ್ ತಯಾರಿಸಿ ಕಾಮಗಾರಿಯ ಟೆಂಡರ್‍ನ್ನು ಆಹ್ವಾನಿಸಲು ಲೆಕ್ಕ ಪರಿಶೋಧನೆಯು ಸೂಚಿಸಿದೆ. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ಸಂಬಂಧಿಸಿದಂತೆ ಎಇ, ಎಇಇಗಳನ್ನೇ ನೇರವಾಗಿ ಜವಾಬ್ದಾರರನ್ನಾಗಿಸಬೇಕಾಗಿರುತ್ತದೆ,’ ಎಂದು ಲೆಕ್ಕ ಪರಿಶೋಧಕರು ಎಚ್ಚರಿಸಿರುವುದು ವರದಿಯಿಂದ ಗೊತ್ತಾಗಿದೆ.
ಡಿಜಿಟಲ್ ಮೌಲ್ಯಮಾಪನ ವೆಚ್ಚ
2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಸ್ವೀಕೃತಿ ಮತ್ತು ಪಾವತಿ ತಃಖ್ತೆಯಲ್ಲಿ ಡಿಜಿಟಲ್ ಮೌಲ್ಯಮಾಪನ ವೆಚ್ಚ ಪಾವತಿಗಳಿಗೆ ಸಂಬಂಧಿಸಿದಂತೆ ಲೆಕ್ಕ ಪತ್ರ ವಿಚಾರಣೆ ನೋಟೀಸ್ ಜಾರಿಗೊಳಿಸಿತ್ತು.
ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್, ಸ್ಕ್ರಿಪ್ಟ್ಸ್, ಕಟಿಂಗ್, ಆನ್‌ಲೈನ್ ಸ್ಕ್ರೀನ್ ಮಾರ್ಕಿಂಗ್ ಕಾರ್ಯಗಳಿಗಾಗಿ ಹೈದರಬಾದ್ ಮೂಲದ COEMPT EDU TECH PVT LIMITED 2020ರ ಜನವರಿ 7, ಹಾಗೂ 2020ರ ಜುಲೈ 29ರಂದು ಕಾರ್ಯಾದೇಶ ನೀಡಿತ್ತು. ಈ ಎರಡೂ ಏಜೆನ್ಸಿಗಳ ಕರಾರು ಪತ್ರಗಳನ್ನು ಲೆಕ್ಕ ಪತ್ರ ಇಲಾಖೆಯ ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಇದರ ಪ್ರಕಾರ ಪ್ರತಿ ಏಜೆನ್ಸಿಯೊಂದಿಗೆ 48 ತಿಂಗಳಿಗೆ ಕರಾರು ಒಪ್ಪಂದ ಮಾಡಿಕೊಂಡಿರುವುದು ಗೊತ್ತಾಗಿದೆ.

ಕೆಟಿಪಿಪಿ ಕಾಯ್ದೆ 1999ರ ನಿಯಮ 12(3) ಅನ್ವಯ ಟೆಂಡರ್ ಅವಧಿಯನ್ನು ಶೇ. 25ರಷ್ಟು ಅಂದರೆ 3 ತಿಂಗಳವರೆಗೆ ಮಾತ್ರ ವಿಸ್ತರಿಸಲು ಅವಕಾಶವಿದೆ. ಆದರೆ ಟೆಂಡರ್ ಪ್ರಕ್ರಿಯೆ ನಡೆಸದೇ ಅವಧಿಯನ್ನು ವಿಸ್ತರಿಸಲಾಗಿದೆ. ಇದರ ಔಚಿತ್ಯವೇನು ಎಂಬ ಬಗ್ಗೆ ಲೆಕ್ಕ ಪರಿಶೋಧಕರಿಗೆ ವಿಶ್ವವಿದ್ಯಾಲಯವು ಸೂಕ್ತ ವಿವರಣೆ ನೀಡಿತ್ತು.
ಪುನರ್ ಪರಿಶೀಲನಾ ಸಭೆಯಲ್ಲಿ ಚರ್ಚಿಸಿದಂತೆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಇನ್ನು ಮುಂದೆ ಈ ಪ್ರಕರಣದಲ್ಲಿ ಕಂಡುಬಂದ ನ್ಯೂನತೆಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಲೆಕ್ಕ ಪರಿಶೋಧಕರು ಸೂಚಿಸಿರುವುದು ಗೊತ್ತಾಗಿದೆ. ಸದ್ಯ ಈ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ದಾಸ್ತಾನು ಲೆಕ್ಕಗಳಿಗೆ ಸಂಬಂಧಿಸಿದಂತೆಯೂ ಲೆಕ್ಕ ಪರಿಶೋಧಕರು ಕಡತಗಳನ್ನು ಪರಿಶೀಲಿಸಿದ್ದಾರೆ. 2023-24ನೇ ಸಾಲಿನಲ್ಲಿ ಪೀಠೋಪಕರಣಗಳು, ಲೇಖನ ಸಾಮಗ್ರಿಗಳ ದಾಸ್ತಾನು ವಹಿಯನ್ನು ಲೆಕ್ಕ ಪರಿಶೋಧಕರಿಗೆ ಹಾಜರುಪಡಿಸಿಲ್ಲ.
ಕರ್ನಾಟಕ ಆರ್ಥಿಕ ಸಂಹಿತೆ 1958ರ ನಿಯಮ 164 ಮತ್ತು 166ರ ಪ್ರಕಾರ ದಾಸ್ತಾನು ವಹಿ ನಿರ್ವಹಿಸಿ ದಾಸ್ತಾನಿಗೆ ತೆಗೆದುಕೊಂಡು ಬೇಡಿಕೆ ಆಧಾರದ ಮೇಲೆ ವಿತರಿಸಬೇಕು. ಇದನ್ನು ವಿವರಣಾ ಪುಸ್ತಕದಲ್ಲಿ ನಮೂದಿಸಬೇಕು. ಅದರಂತೆ ದಾಸ್ತಾನಿಗೆ ತೆಗೆದುಕೊಂಡು ಅವಶ್ಯಕತೆಗೆ ತಕ್ಕಂತೆ ಇಂಡೆಂಟ್ ಪಡೆದುಕೊಂಡು ವಿತರಿಸಿರುವ ಕುರಿತು ನಿರ್ವಹಿಸಲಾದ ವಹಿಯನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ.
ವಿಶ್ವವಿದ್ಯಾಲಯದಲ್ಲಿ ಯಾವುದೇ ಬಗೆಯ ವ್ಯಾಪಾರ, ಬಳಕೆ ವಸ್ತುಗಳು, ಉಪಕರಣ, ಸಾಧನಗಳು, ಸ್ಥಿರ ಯಂತ್ರ, ಕಛೇರಿಯ ಪೀಠೋಪಕರಣ, ಪುಸ್ತಕಗಳು, ಗ್ರಂಥಾಲಯ ಪುಸ್ತಕಗಳು, ಲೇಖನ ಸಾಮಗ್ರಿ, ಸೋಫಾಗಳು, ಬೀಗಗಳು, ವಾಹನಗಳು, ದೀಪ ಸೇರಿದಂತೆ ಕಚೇರಿಗೆ ಸಂಬಂಧಿಸಿದಂತೆ ಇನ್ನಿತರೆ ಸಾಮಗ್ರಿಗಳ ಕುರಿತು ವಾರ್ಷಿಕ ದಾಸ್ತಾನಿನಲ್ಲಿ ಒದಗಿಸಬೇಕು. ಈ ಸಂಬಂಧ ಲೆಕ್ಕಪತ್ರ ವಿಚಾರಣೆ ನೋಟೀಸ್ ಕಳಿಸಿತ್ತು. ಆದರೂ ಸಹ ವಿಶ್ವವಿದ್ಯಾಲಯವು ಈ ಯಾವ ವಿವರಗಳು ಮತ್ತು ಮಾಹಿತಿಗಳನ್ನು ಒದಗಿಸಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.
ಮಾಲ್ಯುಕೆಲರ್ ಲ್ಯಾಬೋರೆಟರಿ, ಫ್ಯಾಕ್ಸ್, ಜೆರಾಕ್ಸ್ ಯಂತ್ರೋಪಕರಣ ಅಡಿಯಲ್ಲಿ ಒಟ್ಟು 5 ಲಕ್ಷ ವೆಚ್ಚ ಮಾಡಿತ್ತು. ಈ ವೆಚ್ಚಕ್ಕೆ ಸಂಬಂಧಿಸಿದಂತೆ ಕಡತ, ಬಿಲ್, ವೋಚರ್ ಹಾಗೂ ಪೂರಕ ದಾಖಲೆಗಳನ್ನು ಒದಗಿಸಬೇಕು ಎಂದು ಲೆಕ್ಕಪತ್ರ ವಿಚಾರಣೆ ನೋಟೀಸ್ ಜಾರಿಗೊಳಿಸಿತ್ತು. ಆದರೆ ವಿಶ್ವವಿದ್ಯಾಲಯವು ಈ ಸಂಬಂಧ ಯಾವುದೇ ವಿವರಣೆ, ದಾಖಲೆಗಳನ್ನೂ ಒದಗಿಸಿಲ್ಲ.
ಶಿಕ್ಷಕರ ದಿನಾಚರಣೆಗೆ 21.67 ಲಕ್ಷ ವೆಚ್ಚ
ವಿಶ್ವವಿದ್ಯಾಲಯವು 2023-24ನೇ ಸಾಲಿನಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಿತ್ತು. ಇದಕ್ಕಾಗಿ 21,67,386 ರುಗ.ಳನ್ನು ವೆಚ್ಚ ಮಾಡಿತ್ತು.

ಈ ವೆಚ್ಚಕ್ಕೆ ಸಂಬಂಧಿಸಿದಂತೆ ಕಡತ, ಬಿಲ್, ವೋಚರ್ ಮತ್ತು ಪೂರಕ ದಾಖಲೆಗಳನ್ನು ಒದಗಿಸಬೇಕು ಎಂದು ಲೆಕ್ಕಪತ್ರ ವಿಚಾರಣೆ ನೋಟೀಸ್ ಕಳಿಸಿತ್ತು ಆದರೆ ಈ ಮಾಹಿತಿಯನ್ನು ಒದಗಿಸಿಲ್ಲ. ಹೀಗಾಗಿ 21,67,386 ರು ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿಟ್ಟಿರುವುದು ಗೊತ್ತಾಗಿದೆ.
ರಾಮನಗರದ ಅರ್ಚಕರಹಳ್ಳಿಯಲ್ಲಿ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಶಿಫಾರಸ್ಸನ್ನು ವಿಶ್ವವಿದ್ಯಾಲಯವು ಪರಿಗಣಿಸಿರಲಿಲ್ಲ.
ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?
442 ಕೋಟಿ ರು ಮೌಲ್ಯದ ಸ್ಥಿರಾಸ್ತಿಹ ಹೊಂದಿರುವ ವಿಶ್ವವಿದ್ಯಾಲಯವು ಭೌತಿಕ ಆಸ್ತಿಯ ಮಾಹಿತಿಯನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿರಲಿಲ್ಲ.
442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ; ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕಪರಿಶೋಧನೆಗೆ ಒದಗಿಸದ ವಿವಿ
ವಿಶ್ವವಿದ್ಯಾಲಯವು ಅಂದಾಜು ಮೊತ್ತವನ್ನು ಮೀರಿ ವೆಚ್ಚ ಮಾಡಿತ್ತು.
ಅಂದಾಜು ಮೊತ್ತ ಮೀರಿ ವೆಚ್ಚ, ವಿವಿಧ ಶುಲ್ಕ, ಬಡ್ಡಿ ನಿರ್ವಹಣೆಯಲ್ಲಿ ಲೋಪ; ಬೇಜವಾಬ್ದಾರಿ ಬಯಲು
ವಿಶ್ವವಿದ್ಯಾಲಯವು ಸಂಗ್ರಹಿಸಿದ್ದ ಸಂಯೋಜನೆ ಶುಲ್ಕದಲ್ಲೂ ವ್ಯತ್ಯಾಸ ಕಂಡು ಬಂದಿತ್ತು.
ಸಂಯೋಜನೆ ಶುಲ್ಕ; 42.03 ಕೋಟಿ ಸಂಗ್ರಹ, 6.51 ಕೋಟಿ ರು ವ್ಯತ್ಯಾಸ, ವಿವಿ ಬಳಿ ಪೂರಕ ದಾಖಲೆಗಳೇ ಇಲ್ಲ
ವಾರ್ಷಿಕ ಲೆಕ್ಕಪತ್ರಗಳಲ್ಲಿಯೂ ವ್ಯತ್ಯಾಸ ಕಂಡು ಬಂದಿತ್ತು.
ವಾರ್ಷಿಕ ಲೆಕ್ಕಪತ್ರ, ಬ್ಯಾಂಕ್ ಖಾತೆಗಳ ಸ್ವೀಕೃತಿ; 116 ಕೋಟಿಯಲ್ಲಿ ವ್ಯತ್ಯಾಸ, ಪರೀಕ್ಷಾ ಶುಲ್ಕದಲ್ಲಿ ಅಕ್ರಮ?
155 ಸಿಬ್ಬಂದಿ ನೇಮಕದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಮನಸೋ ಇಚ್ಛೆ ಆದೇಶ ಹೊರಡಿಸಿತ್ತಲ್ಲದೇ ವಿವಿಧ ಸಂಬಳವನ್ನು ನೀಡಲಾಗಿತ್ತು. ಇದರಿಂದ ಆರ್ಥಿಕ ನಷ್ಟವುಂಟಾಗಿತ್ತು.
155 ಸಿಬ್ಬಂದಿ ನೇಮಕದಲ್ಲಿ ನಿಯಮ ಉಲ್ಲಂಘನೆ, ಮನಸೋ ಇಚ್ಛೆ ಆದೇಶ, ವಿವಿಧ ಸಂಬಳ; ಆರ್ಥಿಕ ನಷ್ಟ
ಇದರಿಂದ ಸದರಿ ಅಂದಾಜು ಪಟ್ಟಿ ದೋಷಪೂರಿತವಾಗಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ. ಆದ್ದರಿಂದ ಸೂಕ್ತ ವಿವರಣೆ ನೀಡುವವರೆಗೂ 80,90,894 ರು.ಗಳನ್ನು ಆಕ್ಷೇಪಣೆಯಲ್ಲಿಟ್ಟಿತ್ತು.
ಅಲ್ಲದೇ ಟೆಂಡರ್ ಇಲ್ಲದೆಯೇ 10 ಕೋಟಿಗೂ ಹೆಚ್ಚು ವೆಚ್ಚವನ್ನು ಮಾಡಿತ್ತು. ಇದನ್ನೂ ಸಹ ಲೆಕ್ಕ ಪರಿಶೋಧಕರು ಆಕ್ಷೇಪಿಸಿದ್ದರು.
ಟೆಂಡರ್ ಇಲ್ಲದೆಯೇ 10 ಕೋಟಿಗೂ ಹೆಚ್ಚು ವೆಚ್ಚ, ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಯಲ್ಲಿಯೂ ಅಕ್ರಮ?
ತಾಂತ್ರಿಕ ಸಮರ್ಥನೆಯಿಲ್ಲದಿದ್ದರೂ ಸಹ ವಿಶ್ವವಿದ್ಯಾಲಯವು ಬಹು ಕೋಟಿ ವೆಚ್ಚವನ್ನು ಮಾಡಿತ್ತು.
ತಾಂತ್ರಿಕ ಸಮರ್ಥನೆಯಿಲ್ಲ, ಅನುಮೋದನೆಯಿಲ್ಲ, ಕಾಮಗಾರಿ ವಹಿಯನ್ನೂ ನಿರ್ವಹಿಸಿಲ್ಲ; ವಿವಿಯಿಂದ ಬಹುಕೋಟಿ ವೆಚ್ಚ
ಮಿಂಟೋ ಆಸ್ಪತ್ರೆ ಕಾಮಗಾರಿ ನಡೆಸುವ ಮುನ್ನ ಸರ್ಕಾರದಿಂದ ಅನುಮೋದನೆಯನ್ನೇ ಪಡೆದಿರಲಿಲ್ಲ.
ಅನುಮೋದನೆಯಿಲ್ಲದೆಯೇ ಮಿಂಟೋ ಆಸ್ಪತ್ರೆ ಕಾಮಗಾರಿ, ಟೆಂಡರ್ ದಾಖಲೆಯಲ್ಲೇ ದೋಷ ; ಅಧಿಕಾರ ದುರ್ಬಳಕೆ
ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಶಿಸ್ತು ಕಂಡು ಬಂದಿರುವ ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದ್ದರೂ ಸಹ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.









