ಬೆಂಗಳೂರು; ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ 30 ಕೋಟಿ ಕೊಡಲು ಆರ್ಥಿಕ ಇಲಾಖೆಯು ಸಹಮತಿಸಿಲ್ಲ!
ವಸತಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಸಲು ಅಂದಾಜು ವೆಚ್ಚ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆಯು ವರ್ಷದ ಹಿಂದೆ ಹೊರಡಿಸಿದ್ದ ಆದೇಶವು ಗೃಹಜ್ಯೋತಿ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಆರ್ಥಿಕ ಇಲಾಖೆಯು ಹೇಳಿದೆ.
ಇಂಧನ ಇಲಾಖೆಗೆ 1,000 ಕೋಟಿಗೂ ಹೆಚ್ಚು ಅನುದಾನವನ್ನು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ನೀಡಲಾಗುತ್ತಿದೆ. ಈ ಮೊತ್ತದಲ್ಲಿ ವರ್ಷಕ್ಕೆ ಕೇವಲ 30 ಕೋಟಿ ರು.ಗಳನ್ನು ಹೊಂದಾಣಿಕೆ ಮಾಡಲು ಆರ್ಥಿಕ ಇಲಾಖೆಯು ಒಪ್ಪಿಲ್ಲ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆ, ಪದವಿಪೂರ್ವ ವಸತಿ ಕಾಲೇಜುಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಇಂಧನ ಇಲಾಖೆಗೆ ಒದಗಿಸಿದ್ದ ಅನುದಾನದಲ್ಲಿಯೇ ವೆಚ್ಚ ಭರಿಸಿ ಉಚಿತ ವಿದ್ಯುತ್ ಸೌಲಭ್ಯ ವಿಸ್ತರಿಸಲು ಸೂಚಿಸಿತ್ತು. ಈ ಸಂಬಂಧ ಆದೇಶವನ್ನೂ ಹೊರಡಿಸಿತ್ತು.
ಆದರೀಗ ಈ ಆದೇಶವೇ ಗೃಹಜ್ಯೋತಿ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿದೆ.
ಇಂಧನ ಇಲಾಖೆಯು ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವ (EN/231/PSR/2024) ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು 2025ರ ಸೆ. 15ರಂದು ತನ್ನ ಅಭಿಪ್ರಾಯ ( FD/11/EXP-1/2024, DATED 15/09/2025) ನೀಡಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿದೆ?
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಇಂಧನ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಗೆ ಹಣಕಾಸು ಇಲಾಖೆಯು ವಿಷಾದ ವ್ಯಕ್ತಪಡಿಸುತ್ತದೆ. ಗೃಹ ಜ್ಯೋತಿ ಲೆಕ್ಕಾಚಾರದಲ್ಲಿ ಕೊರತೆಯಿದೆ. ಹೀಗಾಗಿ ಯಾವುದೇ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಈ ವರ್ಷ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಚ್ಚುವರಿಯಾಗಿ 1000 ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿದೆ. ಇಲಾಖೆಯು ಅದರಿಂದಲೇ ಪ್ರಸಕ್ತ ವರ್ಷದಲ್ಲಿ ಪಾವತಿಗಳನ್ನು ಮಾಡಬಹುದು. ಗೃಹ ಜ್ಯೋತಿಯ ಉದ್ದೇಶಕ್ಕೆ ವಿರುದ್ಧವಾಗಿ ಸರ್ಕಾರಿ ಆದೇಶ ಇರುವುದರಿಂದ ಇಲಾಖೆಯು ಅದನ್ನು ಹಿಂಪಡೆಯಬಹುದು ಎಂದು ಅಭಿಪ್ರಾಯದಲ್ಲಿ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.
ಈ ಕುರಿತು ‘ದಿ ಫೈಲ್’, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರನ್ನು ದೂರವಾಣಿ ಮುಖೇನ ಸಂಪರ್ಕಿಸಿತು. ಈ ಸಂಬಂಧ ಪ್ರತಿಕ್ರಿಯಿಸಿರುವ ಮಣಿವಣ್ಣನ್ ಅವರು, ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯವನ್ನು ಪರಿಶೀಲಿಸಲಾಗುತ್ತಿದೆ, ಇಲಾಖೆ ಸಚಿವರು, ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸುತ್ತೇವೆ ಎಂದು ಮಾಹಿತಿ ನೀಡಿದರು.
ಈ ಕುರಿತು ಸಚಿವ ಕೆ ಜೆ ಜಾರ್ಜ್ ಮತ್ತು ಡಾ ಹೆಚ್ ಸಿ ಮಹದೇವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಸಲು ಅಂದಾಜು ವೆಚ್ಚ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು.
ಕರ್ನಾಟಕದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ‘ಗೃಹ ಜ್ಯೋತಿ’ ಮಾದರಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಈ ಯೋಜನೆಯು 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿತ್ತು.
ಇದರಡಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸಂಪರ್ಕ ಒದಗಿಸಲಾಗುತ್ತದೆ. ವಿದ್ಯುತ್ ಮತ್ತು ನೀರಿನ ಬಿಲ್‌ಗಳಿಗಾಗಿ ಖರ್ಚಾಗುವ ಹಣವನ್ನು ಉಳಿಸಿ, ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯ ಸುಧಾರಿಸಲು ಬಳಸಿಕೊಳ್ಳಲು ಮುಂದಾಗಿತ್ತು.
ಈ ಸೌಲಭ್ಯವನ್ನು ಕಲ್ಪಿಸಲು ₹ 25 ಕೋಟಿ ಅನುದಾನವನ್ನು ನೀಡಲಾಗಿತ್ತು. ಸಂಘದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ 503 ವಸತಿ ಶಾಲೆ ಗಳು, ಪರಿಶಿಷ್ಟ ಪಂಗಡದ 144, ಹಿಂದುಳಿದ ವರ್ಗದ 174 ಸೇರಿ ಒಟ್ಟಾರೆ 821 ವಸತಿ ಶಾಲಾ, ಕಾಲೇಜುಗಳಿವೆ. ಇವುಗಳಿಗೆ ಉಚಿತ ವಿದ್ಯುತ್ ಪೂರೈಸಲು ವಾರ್ಷಿಕ ಅಂದಾಜು 36 ಕೋಟಿ ರು. ಬೇಕಾಗುತ್ತದೆ. 3 ಇಲಾಖೆಗಳು ಕ್ರಮವಾಗಿ 23 ಕೋಟಿ ರು., 6 ಕೋಟಿ ರು. ಮತ್ತು 7 ಕೋಟಿ ರು. ಭರಿಸಬೇಕಾಗುತ್ತದೆ. ಎಸ್ಸಿ, ಎಸ್ಟಿ ವಸತಿ ಶಾಲೆಗಳ 29 ಕೋಟಿ ರು. ವಿದ್ಯುತ್ ಬಿಲ್ ಅನ್ನು ಎಸ್‌ಸಿಎಸ್‌ಪಿ / ಟಿಎಸ್‌ಪಿ ಯೋಜನೆಯಡಿ ಒದಗಿಸುವ ಅನುದಾನದ ಮೂಲಕ ಭರಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು.
ಹಿಂದುಳಿದ ವರ್ಗಗಳ ವಸತಿ ಶಾಲೆಗಳ 7 ಕೋಟಿ ರು. ಬಿಲ್ ಅನ್ನು ಇದೇ ಇಲಾಖೆಯ ನಿರ್ವಹಣಾ ಲೆಕ್ಕ ಶೀರ್ಷಿಕೆಯಡಿ ಒದಗಿಸಲಾಗುವ ಅನುದಾನದಲ್ಲಿ ತ್ರೈಮಾಸಿಕವಾರು ಇಂಧನ ಇಲಾಖೆಗೆ ಮರುಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿತ್ತು. ಉಚಿತ ವಿದ್ಯುತ್ ಸೌಲಭ್ಯವನ್ನು ಮಿತವಾಗಿ, ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕೆಂದು ಪ್ರಾಂಶುಪಾಲರು, ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಆದೇಶದಲ್ಲಿ ವಿವರಿಸಿತ್ತು.
ಆರ್ಥಿಕ ಕ್ಲಿಷ್ಟತೆ, ಬೊಕ್ಕಸಕ್ಕೆ ಹೊರೆ; ವಿದ್ಯಾರ್ಥಿ ವೇತನಕ್ಕೆ ‘ಕೈ’ ಎತ್ತಿದ ಸರ್ಕಾರ, ರಾಗ ಬದಲಿಸಿತು ಸಮಾಜ ಕಲ್ಯಾಣ
ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದಾಖಲಾತಿಯನ್ನು ಹೆಚ್ಚಿಸುವ ಸಂಬಂಧವೂ ಆರ್ಥಿಕ ಇಲಾಖೆಯು ಆರ್ಥಿಕ ಕ್ಲಿಷ್ಟತೆ ಎಂದು ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈ ಕುರಿತು ‘ದಿ ಫೈಲ್’ ಕಳೆದ 2 ವರ್ಷದ ಹಿಂದೆಯೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.