ನರೇಗಾ ಅಕ್ರಮ; ಕೆಲಸವನ್ನೇ ಮಾಡದ ಪತ್ನಿ ಹೆಸರಿಗೆ ಜಾಬ್‌ ಕಾರ್ಡ್‌, ಹಣ ಪಾವತಿಸಿದ ಕಂಪ್ಯೂಟರ್ ಆಪರೇಟರ್‍‌

ಬೆಂಗಳೂರು; ರಾಜ್ಯದ ಶಿವಮೊಗ್ಗ ಜಿಲ್ಲೆ ಸೇರಿದಂತೆ  ಹಲವೆಡೆ  ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್‍‌ ಆಪರೇಟರ್‍‌ಗಳು ನರೇಗಾ ಅಡಿಯಲ್ಲಿ ಲಕ್ಷಾಂತರ ರುಪಾಯಿಗಳನ್ನು  ದುರುಪಯೋಗಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ.

 

ಅಷ್ಟೇ ಅಲ್ಲ,   ಕಂಪ್ಯೂಟರ್‍‌ ಆಪರೇಟರ್‍‌ಗಳು ತಮ್ಮ ಪತ್ನಿ, ಕುಟುಂಬ ಸದಸ್ಯರ ಹೆಸರಿನಲ್ಲಿ ನಿರುದ್ಯೋಗ ಭತ್ಯೆಯನ್ನೂ ಪಡೆಯುತ್ತಿದ್ದಾರೆ ಎಂಬ ದೂರುಗಳು ಸಹ ಕೇಳಿ ಬಂದಿವೆ.

 

ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ನರೇಗಾ ಕೋಶಕ್ಕೆ ನೂರಾರು ದೂರುಗಳು ಸಲ್ಲಿಕೆಯಾಗಿವೆ. ಆದರೆ ಈ ದೂರುಗಳನ್ನು ಬದಿಗೊತ್ತಿ, ಆರೋಪಿ ಸಿಬ್ಬಂದಿಗಳ ರಕ್ಷಣೆ ಮಾಡಲಾಗುತ್ತಿದೆ ಎಂಬ ಗಂಭೀರವಾದ ಆಪಾದನೆಗಳೂ ಕೇಳಿ ಬಂದಿವೆ.

 

ಅಲ್ಲದೇ ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿರುವ ಒಂಬುಡ್ಸ್‌ಮನ್‌ ಕಚೇರಿಯು ಪ್ರಕರಣಗಳಲ್ಲಿ ಶಿಕ್ಷೆಯನ್ನು ವಿಧಿಸಿದರೇ, ರಾಜ್ಯಮಟ್ಟದ ಒಂಬುಡ್ಸ್‌ಮನ್‌ ಮೇಲ್ಮನವಿ ಪ್ರಾಧಿಕಾರಿಗಳು ತಿಪ್ಪೆ ಸಾರಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಪ್ರಕರಣಗಳನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಗಮನದಲ್ಲಿದ್ದರೂ ಸಹ ಇದುವರೆಗೂ ಕಠಿಣ ಕ್ರಮಗಳು ಜರುಗಿಲ್ಲ ಎಂದು ತಿಳಿದು ಬಂದಿದೆ.

 

ಇದಕ್ಕೆ ಸಚಿವ ಮಧು ಬಂಗಾರಪ್ಪ ಅವರ ಸ್ವ ಕ್ಷೇತ್ರ   ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹುರುಳಿ ಗ್ರಾಮ ಪಂಚಾಯ್ತಿಯಲ್ಲಿನ ಪ್ರಕರಣವೇ ಉತ್ತಮ ನಿದರ್ಶನ.

 

 

ಈ ಪಂಚಾಯ್ತಿಯಲ್ಲಿ   ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‍‌ ತನ್ನ  ಹಂತದಲ್ಲೇ ಹೇಗೆ ನರೇಗಾ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಪ್ರಕರಣವನ್ನು ಸಾಮಾಜಿಕ ಹೋರಾಟಗಾರ ಮಂಜುನಾಥ ಹಿರೇಚೌಟಿ ಎಂಬುವರು ಪತ್ತೆ ಹಚ್ಚಿದ್ದಾರೆ.  ಅಷ್ಟೇ ಅಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಶಿವಮೊಗ್ಗ ಜಿಲ್ಲಾ   ಒಂಬುಡ್ಸ್‌ಮನ್‌ರಿಗೂ ಸಲ್ಲಿಸಿದ್ದಾರೆ.

 

 

ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹುರುಳಿ ಪಂಚಾಯ್ತಿ ಪ್ರಕರಣದಲ್ಲೇನಿದೆ?

 

ಸೊರಬ ತಾಲೂಕಿನ ಹುರುಳಿ ಗ್ರಾಮ ಪಂಚಾಯ್ತಿಯ ಕಂಪ್ಯೂಟರ್ ಆಪರೇಟರ್‍‌ ಆದ ಗುರುನಾಥ್‌ ಅವರು ನರೇಗಾ ಯೋಜನೆಯಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮಂಜುನಾಥ ಹಿರೇಚೌಟಿ ಎಂಬುವರು ದಾಖಲೆ ಸಹಿತ 2023ರ ಡಿಸೆಂಬರ್‍‌ 12ರಂದು  ಲಿಖಿತ ದೂರು ಸಲ್ಲಿಸಿದ್ದರು. ಆದರೆ  ಈ ದೂರಿನ ಮೇಲೆ ಆರಂಭಿಕ ಹಂತದಲ್ಲಿ ಯಾವುದೇ ಕ್ರಮವಹಿಸಲಿಲ್ಲ. ದೂರಿನ ಪ್ರತಿಯನ್ನು ಕಚೇರಿಯಿಂದ ಕಚೇರಿಗೆ ರವಾನಿಸಿರುವುದರಲ್ಲಿಯೇ ಕಾಲಹರಣ ಮಾಡಲಾಗಿತ್ತು.

 

 

ಈ ದೂರಿನಲ್ಲಿರುವ ಅಂಶಗಳ ಪ್ರಕಾರ ಕಂಪ್ಯೂಟರ್ ಆಪರೇಟರ್‍‌ ಗುರುನಾಥ್‌ ಎಂಬುವರು ನರೇಗಾ ಯೋಜನೆಯಡಿ ಫಲಾನುಭವಿಗಳ ಅಡಿಕೆ ತೋಟ ನಿರ್ಮಾಣದ ಕಾಮಗಾರಿಗಳಲ್ಲಿ ಫಲಾನುಭವಿಗಳಿಂದ ಹಣವನ್ನು ಪಡೆದಿದ್ದಾರೆ. ಮತ್ತು ಬೇರೆ ಗ್ರಾಮದ ಹಾಗೂ ಅದೇ ಗ್ರಾಮದಲ್ಲಿ ಕೆಲಸವನ್ನೇ ಮಾಡದೇ ಇರುವ ಕೂಲಿ ಕಾರ್ಮಿಕರಿಗೂ ಹಣ ಪಾವತಿಸಿದ್ದಾರೆ ಎಂದು ಅಪಾದಿಸಿರುವುದು ಗೊತ್ತಾಗಿದೆ.

 

ಮತ್ತೊಂದು ವಿಶೇಷವೆಂದರೇ ಇದೇ ಗುರುನಾಥ್‌ ಎಂಬುವರು ತಮ್ಮ ಪತ್ನಿ ಹೆಸರಿನಲ್ಲಿಯೂ ನಿರುದ್ಯೋಗ ಭತ್ಯೆಯನ್ನು ಪಾವತಿಸಿದ್ದಾರೆ ಎಂದು ಆಪಾದಿಸಿರುವುದು ದೂರಿನಿಂದ ತಿಳಿದು ಬಂದಿದೆ. ಈ ದೂರಿನ ಕುರಿತು ಒಂದು ವರ್ಷದ ನಂತರ ಅಂದರೇ 2024ರ ಜನವರಿ 22ರಂದು ವಿಚಾರಣೆ ವರದಿಯನ್ನು ಸಲ್ಲಿಸಲಾಗಿತ್ತು.

 

ವಿಚಾರಣೆ ವರದಿ ನಡವಳಿಕೆಯಲ್ಲೇನಿದೆ?

 

ಚನ್ನವೀರಯ್ಯ, ಬಸವಂತಪ್ಪ, ಸಾವಿತ್ರಮ್ಮ, ದೇಸಾಯಿಗೌಡ, ಕುಸುಮ, ಪಾರ್ವತಮ್ಮ, ಕೆ ಆರ್‍‌ ಸತ್ಯನಾರಾಯಣ, ರೇಖಮ್ಮ, ಖೈಜನ್ ಎಂಬುವರು ನರೇಗಾ ಯೋಜನೆಯಡಿಯಲ್ಲಿ ಅಡಿಕೆ ತೋಟವನ್ನು ಮಾಡಿಕೊಂಡಿದ್ದರು. ಈ ಕಾಮಗಾರಿ ಅನುಷ್ಠಾನಕ್ಕಾಗಿ ಪ್ರತಿ ಫಲಾನುಭವಿಯಿಂದ ಕಂಪ್ಯೂಟರ್ ಆಪರೇಟರ್‍‌ ಗುರುನಾಥ್‌ ಅವರು 5,000 ರು ಗಳಿಂದ 38,500 ರುವರೆಗೆ ಹಣ ಪಡೆದಿದ್ದರು ಎಂದು ಮಂಜುನಾಥ್‌ ಹಿರೇಚೌಟಿ ಎಂಬುವರು  ದೂರಿನಲ್ಲಿ ಆರೋಪಿಸಿದ್ದರು.

 

 

ಅಲ್ಲದೇ ಬೇರೆ ಬೇರೆ ಗ್ರಾಮದ ಕೂಲಿ ಕಾರ್ಮಿಕರ ಹೆಸರಿನಲ್ಲಿ ಹಾಗೂ ಅವರ ಪತ್ನಿಯ ಹೆಸರಿನ ಖಾತೆಗೂ ಹಣ ಪಾವತಿಸಿದ್ದರು. ಕೆಲಸ ಮಾಡದಿದ್ದರೂ ಸಹ ಹಾಜರಾತಿ ನಮೂದಿಸಿ ಕೂಲಿ ಹಣವನ್ನು ಪಾವತಿಸಿದ್ದರು ಎಂದು ದೂರಿನಲ್ಲಿ ಆಪಾದಿಸಲಾಗಿತ್ತು. ಈ ಆಪಾದನೆಗೆ ಸಂಬಂಧಿಸಿದಂತೆ ಮಂಜುನಾಥ್‌ ಹಿರೇಚೌಟಿ ಅವರು ಕೆಲವು ಫಲಾನುಭವಿಗಳಿಂದ ಲಿಖಿತ ಹೇಳಿಕೆಯನ್ನೂ ಪಡೆದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯಲ್ಲಿರುವ ಒಂಬುಡ್ಸ್‌ಮನ್‌ ಕಾರ್ಯಾಲಯಕ್ಕೂ ಸಲ್ಲಿಸಿದ್ದರು.

 

ಅದೇ ರೀತಿ ಕಂಪ್ಯೂಟರ್‍‌ ಆಪರೇಟರ್‍‌  ಗುರುನಾಥ್‌  ಪತ್ನಿ ಹೇಮಾವತಿ ಅವರು 2019-20ನೇ ಸಾಲಿನಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕದಿದ್ದರೂ ಸಹ ನಿರುದ್ಯೋಗ ಭತ್ಯೆ ನೀಡಿದ್ದರು.  ಈ ಆರೋಪಕ್ಕೆ ಸಂಬಂಧಿಸಿದಂತೆ ಎಂಐಎಸ್‌ನಿಂದ ತೆಗೆದ ಮಸ್ಟರ್‍‌ ರೋಲ್‌ ಪ್ರತಿ, ನಿರುದ್ಯೋಗ ಭತ್ಯೆಗೆ ಅರ್ಹರಾದ ಕೂಲಿ ಕಾರ್ಮಿಕರ ಪಟ್ಟಿಯನ್ನೂ ನೀಡಿದ್ದರು ಎಂಬುದು ವಿಚಾರಣೆ ವರದಿಯಿಂದ ತಿಳಿದು ಬಂದಿದೆ.

 

ಈ ದೂರನ್ನು ಪರಿಶೀಲಿಸಿದ್ದ ಒಂಬುಡ್ಸ್‌ಮನ್‌ ಕಚೇರಿಯು 2023ರ ಡಿಸೆಂಬರ್‍‌ 20ರಂದು ಕೆಲವು ಫಲಾನುಭವಿಗಳ ಮನೆಗೆ ನರೇಗಾ ಸಹಾಯಕ ನಿರ್ದೇಶಕರು ಮತ್ತು, ಸೊರಬ ತಾಲೂಕು ಪಂಚಾಯ್ತಿಯ ಅಧಿಕಾರಿಗಳು, ಪಿಡಿಒ, ತಾಂತ್ರಿಕ ಸಹಾಯಕರು ಭೇಟಿ ನೀಡಿ ತಪಾಸಣೆ ಕೈಗೊಂಡಿದ್ದರು. ಅಲ್ಲದೇ ಫಲಾನುಭವಿಗಳ ಹೇಳಿಕೆಯನ್ನೂ ಪಡೆದಿದ್ದರು.

 

 

ಅಡಿಕೆ ತೋಟ ಮಾಡಲು 7,000 ರು ಲಂಚ

 

ನರೇಗಾ ಯೋಜನೆಯಡಿಯಲ್ಲಿ ಸುಶೀಲಮ್ಮ ಎಂಬುವರು (ಸರ್ವೆ ನಂಬರ್ 139 ಮತ್ತು 105/4)  ಹೊಸ  ಅಡಿಕೆ ತೋಟ ಮಾಡಲು ಕಂಪ್ಯೂಟರ್‍‌ ಆಪರೇಟರ್‍‌ ಗುರುನಾಥ್‌ ಅವರಿಗೆ 7,000 ರು ನೀಡಿದ್ದನ್ನು ತಪಾಸಣೆ ವೇಳೆಯಲ್ಲಿ  ಒಪ್ಪಿಕೊಂಡಿದ್ದರು. ಅಲ್ಲದೇ ಗುರುನಾಥ್‌ ಅವರ ಪತ್ನಿ ಮತ್ತು ಇನ್ನಿತರೆ ಕೂಲಿ ಕಾರ್ಮಿಕರ ಹೆಸರಿನಲ್ಲಿ ಕೆಲಸ ಮಾಡದೆಯೇ ಎನ್ಎಂಆರ್‍‌ ಹಾಕಿದ್ದರು.  ನಿಜವಾದ ಫಲಾನುಭವಿಗೆ ಅನುಮೋದಿತ ಅಂದಾಜು ಪಟ್ಟಿಯಂತೆ ಅವರ ಖಾತೆಗೆ ಜಮೆ ಆಗಬೇಕಿದ್ದ ಹಣವು ಬಿಡುಗಡೆಯಾಗಿರಲಿಲ್ಲ ಎಂದು ಲಿಖಿತ ಹೇಳಿಕೆಯನ್ನು ನೀಡಿರುವುದು ವರದಿಯಿಂದ ಗೊತ್ತಾಗಿದೆ.

 

 

ಅದೇ ರೀತಿ ಬಸವಂತಪ್ಪ ಎಂಬುವರು ಸಹ (ಸರ್ವೆ ನಂಬರ್‍‌ 49) ಕಂಪ್ಯೂಟರ್ ಆಪರೇಟರ್‍‌ ಗುರುನಾಥ್‌ ಅವರಿಗೆ ಹೊಸ ಅಡಿಕೆ ತೋಟ ಮಾಡಿಕೊಡಲು ಕಾಮಗಾರಿ ಅನುಷ್ಠಾನದ ಮೊದಲೇ 10,000 ರು ಮತ್ತು ಕಾಮಗಾರಿ ಪೂರ್ಣಗೊಂಡ ನಂತರ 10,000 ರು ಸೇರಿ ಒಟ್ಟಾರೆ 20,000 ರು.ಗಳನ್ನು ನೀಡಿದ್ದರು. ಹಾಗೂ ಗುರುನಾಥ್‌ ಅವರ ಪತ್ನಿಯು ಅವರ ಜಮೀನಿನಲ್ಲಿ ಕೆಲಸ ಮಾಡದೇ ಇದ್ದರೂ ಸಹ ಅವರ ಹೆಸರಿನಲ್ಲಿ 21 ಮಾನವ ದಿನಗಳಿಗೆ ಹಾಜರಾತಿ ಹಾಕಿ ಹಣ ಪಾವತಿಸಿದ್ದರು ಎಂದು ಲಿಖಿತ ಹೇಳಿಕೆ ನೀಡಿದ್ದರು.

 

ಸಾವಿತ್ರಮ್ಮ ಎಂಬುವರು ಸಹ ತಮ್ಮ ಜಮೀನಿನಲ್ಲಿ ಹೊಸ ಅಡಿಕೆ ತೋಟ ಮಾಡಿಕೊಡಲು ಗುರುನಾಥ್‌ಗೆ 10,000 ರು ನೀಡಿದ್ದರು. ಮತ್ತು ಕೆಲಸ ಮಾಡದೇ ಇರುವ ಕೂಲಿ ಕಾರ್ಮಿಕರ ಹೆಸರಿನಲ್ಲಿ ಎನ್‌ಎಂಆರ್‍‌ ಮಾಡಿ 28,500 ರು ಮೊತ್ತವನ್ನು ಕೂಲಿ ಕಾರ್ಮಿಕರ ಖಾತೆಗೆ ಜಮಾ ಮಾಡಿ ಅವ್ಯವಹಾರ ಎಸಗಿದ್ದರು.

 

 

ಕುಸುಮ ಎಂಬುವರು ಸಹ ತಮ್ಮ ಜಮೀನಿನಲ್ಲಿ (ಸರ್ವೆ ನಂಬರ್‍‌ 202/ಪಿ)  ನರೇಗಾ ಅಡಿಯಲ್ಲಿ ಹೊಸ ಅಡಿಕೆ ತೋಟ ನಿರ್ಮಾಣ ಮಾಡಿದ್ದರು. ಕೆಲಸ ಮಾಡದೇ ಇರುವ ಅವರ ಪತ್ನಿ ಹೆಸರಿನಲ್ಲಿ ಮತ್ತು ಪಂಚಾಯ್ತಿಯ ಇನ್ನೊಂದು ಗ್ರಾಮವಾದ ಚಿಕ್ಕಚೌಟಿ ಗ್ರಾಮದಲ್ಲಿ ಕೆಲಸ ಮಾಡದೇ ಇರುವ ಉದ್ಯೋಗ ಚೀಟಿದಾರರ ಹೆಸರಿಗೂ ಒಟ್ಟು 37,050 ರು ಜಮೆ ಮಾಡಿದ್ದರು. ಆದರೆ ಈ ಹಣವನ್ನು ಕುಸುಮ ಅವರಿಗೆ ನೀಡಿರಲಿಲ್ಲ ಎಂದು ವಿಚಾರಣೆ ವರದಿಯ ನಡವಳಿಯಲ್ಲಿ ವಿವರಿಸಲಾಗಿದೆ.

 

ಕೆಲಸ ಮಾಡದಿದ್ದರೂ ಹಣ ಪಾವತಿ

 

ಗುರುನಾಥ್‌ ಅವರ ಪತ್ನಿ ಹೇಮಾವತಿ ಅವರು ನರೇಗಾ ಅಡಿಯಲ್ಲಿ ಕೆಲಸ ಮಾಡದಿದ್ದರೂ ಸಹ ಅವರಿಗೆ ಹಣ ಪಾವತಿಯಾಗಿತ್ತು. 2019-20ನೇ ಸಾಲಿನಲ್ಲಿ 53 ದಿನ ಕೆಲಸ ಮಾಡಿದ್ದರು ಎಂದು ದಾಖಲೆ ಸೃಷ್ಟಿಸಿ 13,711 ರು, 2020-21ನೇ ಸಾಲಿನಲ್ಲಿ 80 ದಿನ ಕೆಲಸ ಮಾಡಿದ್ದಾರೆ ಎಂದು ಹೇಳಿ 22,246 ರು., 2021-22ನೇ ಸಾಲಿನಲ್ಲಿ 32 ದಿನ ಕೆಲಸ ಮಾಡಿದ್ದಾರೆ ಎಂದು ಹೇಳಿ 9,568 ರು., 2022-23ನೇ ಸಾಲಿನಲ್ಲಿ 55 ದಿನ ಕೆಲಸ ಮಾಡಿ 17,135 ರು., 2023-24ನೇ ಸಾಲಿನಲ್ಲಿ 12 ದಿನ  ಕೆಲಸ ಮಾಡಿದ್ದಾರೆ ಎಂದು ಹೇಳಿ 3,792 ರು.ಗಳನ್ನು ಪಾವತಿಸಿದ್ದರು. ಅಲ್ಲದೇ 2023-24ನೇ ಸಾಲಿನಲ್ಲಿ ಒಟ್ಟು 66 ಮಂದಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡದೇ ನಿರುದ್ಯೋಗ ಭತ್ಯೆ ನೀಡಿದ್ದರು ಎಂದು ಆಪಾದಿಸಲಾಗಿತ್ತು. ಈ ಕುರಿತು ಲಿಖಿತ ಹೇಳಿಕೆ ನೀಡಬೇಕು ಎಂದು ಆಪಾದಿತ ಗುರುನಾಥ್‌ ಅವರಿಗೆ ಒಂಬುಡ್ಸ್‌ಮನ್‌ ಕಚೇರಿಯು ನಿರ್ದೇಶಿಸಿತ್ತು.

 

ಆರೋಪ ತಳ್ಳಿಹಾಕಿದ್ದ ಗುರುನಾಥ್‌

 

ಮಂಜುನಾಥ್‌ ಹಿರೇಚೌಟಿ ಅವರು ಮಾಡಿದ್ದ ಆರೋಪಗಳನ್ನು ಗುರುನಾಥ್‌ ಅವರು ತಳ್ಳಿ ಹಾಕಿದ್ದರು.

 

ಅರೋಪಿತ ಕಂಪ್ಯೂಟರ್‍‌ ಆಪರೇಟರ್‍‌ ಗುರುನಾಥ್‌

 

‘ದೂರುದಾರರು ನೀಡಿದ್ದ ಆರೋಪ ಸತ್ಯಕ್ಕೆ ದೂರವಾಗಿದೆ. ನಮೂನೆ 6ರಲ್ಲಿ ಉದ್ಯೋಗ ಬೇಡಿಕೆ ನೀಡಿದ ಕೂಲಿ ಕಾರ್ಮಿಕರಿಗೆ ನಿಯಮಾನುಸಾರ ಕೆಲಸ ನೀಡಲಾಗಿದೆ ಎಂದು ಪ್ರತಿಪಾದಿಸಿದ್ದರು. ತೋಟಗಾರಿಕೆ ಇಲಾಖೆಯು ಚನ್ನವೀರಯ್ಯ, ಸಾವಿತ್ರಮ್ಮ, ಕುಸುಮ, ಪಾರ್ವತಮ್ಮ ಅವರು ಅಡಿಕೆ ತೋಟದ ಕಾಮಗಾರಿ ನಡೆಸಿತ್ತು. ಹೀಗಾಗಿ ಇದಕ್ಕ ತಮಗೂ ಸಂಬಂಧವಿಲ್ಲ ಎಂದಿದ್ದರು. ತಮ್ಮ ಪತ್ನಿ ಹೇಮಾವತಿ ಅವರು 2019-20ರಿಂದ ಇಲ್ಲಿಯವರೆಗೂ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗ ಎನ್‌ಎಂಆರ್‍‌ ತೆಗೆದು ಹಣ ಪಾವತಿಸಲಾಗಿದೆ,’  ಎಂದು ಸಮರ್ಥಿಸಿಕೊಂಡಿದ್ದರು.

 

 

ಕೆಲಸ ಮಾಡಿದ್ದ ಫೋಟೋ ಇರಲಿಲ್ಲ

 

ವಿಶೇಷವೆಂದರೇ ತಮ್ಮ ಪತ್ನಿ ಹೇಮಾವತಿ ಅವರು ಕೆಲಸ ಮಾಡಿದ್ದರು ಎಂಬುದನ್ನು ಸಾಬೀತುಪಡಿಸಲು ಯಾವುದೇ ಫೋಟೋವನ್ನೂ ನೀಡಿರಲಿಲ್ಲ.

 

ಬಸವಂತಪ್ಪ ಅವರ ಅಡಿಕೆ ತೋಟದಲ್ಲಿ  ಪತ್ನಿ ಹೇಮಾವತಿ ಅವರು ಕೆಲಸ ಮಾಡಿದ್ದರು ಎಂದು ಹೇಳಿಕೆ ನೀಡಿದ್ದ  ಗುರುನಾಥ್‌ ಅವರು ಈ ಸಂಬಂಧ ಯಾವುದೇ ಫೋಟೋ ನೀಡಿರಲಿಲ್ಲ. ಫೋಟೋವು ಕಡತದಲ್ಲಿ ಇರಲಿಲ್ಲ. 2024ರ ಜನವರಿ 12ರ ಒಳಗಾಗಿ ಫೋಟೋ ನೀಡಲಾಗುವುದು ಎಂದು ಸಕ್ಷಮ ಪ್ರಾಧಿಕಾರದ ಮುಂದೆ ಹೇಳಿಕೆ ನೀಡಿದ್ದರು. ಈ ಅವಧಿಯೊಳಗೇ ಫೋಟೋವನ್ನು ನೀಡಿದ್ದಾರಾದರೂ ಅದರಲ್ಲಿ ತಮ್ಮ ಪತ್ನಿ ಹೇಮಾವತಿ ಅವರು ಕೆಲಸ ಮಾಡುತ್ತಿದ್ದರು ಎಂಬುದಕ್ಕೆ ಫೋಟೋದಲ್ಲಿ ಯಾವುದೇ ನಿದರ್ಶನವಿರಲಿಲ್ಲ.

 

 

ಅಲ್ಲದೇ ತೋಟಗಾರಿಕೆ ಇಲಾಖೆಯಿಂದ ಕಾಮಗಾರಿಯು ಅನುಷ್ಠಾನವಾಗಿರುವುದರಿಂದ ಇದರಲ್ಲಿ ತನ್ನ ಪಾತ್ರವಿಲ್ಲ. ಅಡಿಕೆ ತೋಟದ ಫಲಾನುಭವಿಗಳ ನಮೂನೆ 6 ಮತ್ತು ನಮೂನೆ 9ನ್ನು ತೆಗೆದುಕೊಂಡು ಕೆಲಸ ಮಾಡಿಸಿದ್ದಾರೆ. ಕೋಡಿಹಳ್ಳಿ ಗ್ರಾಮದ ಕೂಲಿ ಕಾರ್ಮಿಕರಿಗೆ ನಮೂನೆ 6ನ್ನು ನೀಡಲಾಗಿತ್ತು. ಫಲಾನುಭವಿಗಳೇ ಬೇಡಿಕೆ ಸಲ್ಲಿಸಿದ್ದರಿಂದಾಗಿ ಕೆಲಸ ನೀಡಲಾಗಿದೆ. ಇದರಲ್ಲಿಯೂ ತಮ್ಮ ಪಾತ್ರವಿಲ್ಲೆ ಎಂದು ಸಮಜಾಯಿಷಿ ನೀಡಿದ್ದರು.

 

 

2019-20ರಿಂದ 2022-23ರವರೆಗೆ ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ. ನನ್ನ ಲಾಗಿನ್‌ನಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಇದು ನನಗೆ ಗೊತ್ತಿಲ್ಲ ಎಂದು ಒಂಬುಡ್ಸ್‌ಮನ್‌ ಮುಂದೆ  ಹೇಳಿಕೆ ನೀಡಿದ್ದರು ಎಂಬುದು ವಿಚಾರಣೆ ವರದಿಯಿಂದ ಗೊತ್ತಾಗಿದೆ.

 

ಪತ್ನಿ ಹೆಸರಿನಲ್ಲಿತ್ತು ಜಾಬ್‌ ಕಾರ್ಡ್‌

 

ಗುರುನಾಥ್ ಪತ್ನಿ ಹೇಮಾವತಿ ಅವರು ಕೂಲಿ ಕೆಲಸ ಮಾಡದೇ ಇದ್ದರೂ ಸಹ ಅವರ ಹೆಸರಿನಲ್ಲಿ ಜಾಬ್‌ ಕಾರ್ಡ್‌ (KN 24-006-039-005/133) ನೀಡಲಾಗಿತ್ತು.

 

 

ಇವರ ಹೆಸರಿನಲ್ಲಿ 2019ರಿಂದ 2023ರ ಮೇ ತಿಂಗಳವರೆಗೆ 357 ಮಾನವ ದಿನಗಳಿಗೆ ಹಣ ಪಾವತಿಸಲಾಗಿತ್ತು.

 

 

 

ಈ ಬಗ್ಗೆ ಗುರುನಾಥ್ ಅವರು ಈ ಮೊದಲು ಈ ಆರೋಪವನ್ನು ತಳ್ಳಿ ಹಾಕಿದ್ದರು. ಆದರೆ ಈ ದೂರಿನ ಕುರಿತು ಒಂಬುಡ್ಸ್‌ಮನ್‌ ಅವರು ವಿಚಾರಣೆ ವೇಳೆಯಲ್ಲಿ ಸಾಬೀತುಪಡಿಸಿದ್ದಾರೆ.

 

ಬಸವಂತಪ್ಪ, ಚನ್ನವೀರಯ್ಯ, ಕುಸುಮ ಅವರ ಅಡಿಕೆ ತೋಟದ ಕಾಮಗಾರಿಯಲ್ಲಿನ ಎನ್‌ಎಂಆರ್‍‌ನಲ್ಲಿ ಹೇಮಾವತಿ ಅವರ ಹೆಸರಿದೆ. ಆದರೆ ಹುರುಳಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಸಲ್ಲಿಸಿರುವ ದಾಖಲೆ ಮತ್ತು ಫೋಟೋಗಳಲ್ಲಿ ಹೇಮಾವತಿ ಅವರು ಕೆಲಸ ಮಾಡುತ್ತಿರುವ ಚಿತ್ರವು ಕಂಡು  ಬರುವುದಿಲ್ಲ ಎಂದು ವಿಚಾರಣೆ ವರದಿಯಲ್ಲಿ ವಿವರಿಸಲಾಗಿದೆ.

 

ಫಲಾನುಭವಿಗಳ ತೋಟದ ಯಾವುದೇ ಕಾಮಗಾರಿಗಳಲ್ಲಿ   ನಿಯಮಾವಳಿಯಂತೆ ಹಾಗೂ ಸರ್ಕಾರದ ಆದೇಶದಂತೆ ಜಿಪಿಎಸ್‌ ಪೋಟೋವನ್ನೂ ತೆಗೆದಿರುವುದಿಲ್ಲ. ಈ ತೋಟದಲ್ಲಿ 7ರಿಂದ 9 ಮಂದಿ ಕೂಲಿ ಕಾರ್ಮಿಕರಷ್ಟೇ ಕೆಲಸ ಮಾಡಿದ್ದಾರೆ. ಆದರೆ ಹೇಮಾವತಿ ಅವರು ಕೆಲಸ ಮಾಡುತ್ತಿರುವ ಚಿತ್ರವು ಕಂಡುಬಂದಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

‘ದೂರುದಾರರು ತಿಳಿಸಿದಂತೆ ಹೇಮಾವತಿ ಅವರು ಮೂವರು ಫಲಾನುಭವಿಗಳ ಅಡಿಕೆ ತೋಟ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುವ ಜಿಪಿಎಸ್‌ ಫೋಟೋ ಇಲ್ಲದೇ ಇರುವುದರಿಂದ ಹಾಗೂ 3 ಮಂದಿ ಫಲಾನುಭವಿಗಳು ನೀಡಿದ ಲಿಖಿತ ಹೇಳಿಕೆಯಿಂದ ಹೇಮಾವತಿ ಅವರ ವಿರುದ್ಧ ನೀಡಿದ ದೂರು ಸಾಬೀತಾಗಿದೆ ಎಂದು ತೀರ್ಮಾನಿಸಬಹುದಾಗಿದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಬೇಡಿಕೆ ಇಟ್ಟರೂ ಕೆಲಸ ನೀಡಿಲ್ಲ

 

ನರೇಗಾ ಯೋಜನೆಯ ತಂತ್ರಾಂಶದ ಪ್ರಕಾರ 2019-20ನೇ ಸಾಲಿನಲ್ಲಿ 63 ಜನರು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದರು. 2020-21ನೇ ಸಾಲಿನಲ್ಲಿ 76, 2021-22ನೇ ಸಾಲಿನಲ್ಲಿ 23, 2022-23ರಲ್ಲಿ 57, 2023-24ರಲ್ಲಿ 62 ಜನರು ಕೆಲಸಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಅವರಿಗೆ ಕೆಲಸವನ್ನೇ ನೀಡಿರಲಿಲ್ಲ. ಕೆಲಸಕ್ಕೆ ಬೇಡಿಕೆ ನೀಡಿರುವ ಕೆಲಸಗಾರರಿಗೆ 15 ದಿನದೊಳಗಾಗಿ ಕೆಲಸ ನೀಡಬೇಕು. ಒಂದೊಮ್ಮೆ ಕೆಲಸ ನೀಡದಿದ್ದರೇ ನಿಯಮಾವಳಿ ಪ್ರಕಾರ ನಿರುದ್ಯೋಗ ಭತ್ಯೆ ನೀಡಬೇಕು.

 

ಆದರೆ ಈ ಪಂಚಾಯ್ತಿಯಲ್ಲಿ 2019-20ರಿಂದಲೂ ನಿರುದ್ಯೋಗ ಭತ್ಯೆ ನೀಡಲು ಗಮನವನ್ನೇ ಹರಿಸಿಲ್ಲ. ಇದು ಕರ್ತವ್ಯಲೋಪ ಎಂದು ವರದಿಯಲ್ಲಿ ಹೇಳಲಾಗಿದೆ.

 

ವಸೂಲಿಗೆ ಆದೇಶಿಸಿದ್ದ ಒಂಬುಡ್ಸ್‌ಮನ್‌

 

ಹುರುಳಿ ಗ್ರಾಮ ಪಂಚಾಯ್ತಿಯಲ್ಲಿ ಎಂಐಎಸ್‌ ಪ್ರಕಾರ 2019-20ರಿಂದ ಇಲ್ಲಿಯವರೆಗೆ ಬೇಡಿಕೆ ಸಲ್ಲಿಸಿದ್ದ ಕೂಲಿ ಕಾರ್ಮಿಕರಿಗೆ ಒಟ್ಟು 1,43,800 ರುಗ.ಳ ನಿರುದ್ಯೋಗ ಭತ್ಯೆ ನೀಡಬೇಕು. ನರೆಗಾ ಅಧಿನಿಯಮದ ಪ್ರಕಾರ ಈ ಹಣವನ್ನು ನೀಡಿಲ್ಲ. ಹೀಗಾಗಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ 71,900 ರು ಮತ್ತು ಗುರುನಾಥ್‌ ಅವರಿಂದ 71,900 ರು.ಗಳನ್ನು ವಸೂಲಿ ಮಾಡಬೇಕು. ಇದನ್ನು ಕರ್ನಾಟಕ ಸರ್ಕಾರದ ಉದ್ಯೋಗ ಖಾತ್ರಿ ಗ್ಯಾರಂಟಿ ಫಂಡ್‌ ಗೆ ಜಮಾ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ  ಒಂಬುಡ್ಸ್‌ಮನ್‌ ಪಿ ಡಿ ಗಣಪತಿ ಅವರು  ಅದೇಶ ಹೊರಡಿಸಿದ್ದರು. ಅಲ್ಲದೇ ಗುರುನಾಥ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಶಿಫಾರಸ್ಸು ಕೂಡ ಮಾಡಿದ್ದರು.

 

 

 

ಈ ಆದೇಶವನ್ನು ಗುರುನಾಥ್‌ ಅವರು ಒಂಬುಡ್ಸ್‌ಮನ್‌ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದರು.

 

 

ಈ ಕುರಿತು ಮೇಲ್ಮನವಿ ಪ್ರಾಧಿಕಾರವು ವಿಚಾರಣೆ ನಡೆಸಿತ್ತು. ಈ ಸಂಬಂಧ 2025ರ ಆಗಸ್ಟ್‌ 21ರಂದು ಆದೇಶ ಹೊರಡಿಸಿತ್ತು.

 

ವಿಶೇಷವೆಂದರೇ ಈ ಪ್ರಕರಣದ ಬಗ್ಗೆ ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಒಂಬುಡ್ಸ್‌ಮನ್‌ ಅವರು, ದೂರುದಾರರು ಮಾಡಿದ್ದ ಬಹುತೇಕ ಆರೋಪಗಳನ್ನು ಸಾಬೀತುಪಡಿಸಿದ್ದರು. ಆದರೆ ಮೇಲ್ಮನವಿ ಪ್ರಾಧಿಕಾರವು ತಳ್ಳಿ ಹಾಕಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆಲಸ ಕೇಳಿದವರಿಗೆ ಕೆಲಸ ನೀಡಲಾಗಿದೆ.   2019-20 ಮತ್ತು 2021-22ರಲ್ಲಿ  ಆಧಾರ್‍‌ ಕಾರ್ಡ್‌ ಅಕೌಂಟ್‌ಗೆ ಲಿಂಕ್‌ ಆಗದ ಕಾರಣ ತಾಂತ್ರಿಕ ಸಮಸ್ಯೆ ಎದುರಾಗಿದೆ. ಬೇಡಿಕೆ ನೀಡಿದವರಿಗೆ ಕೆಲಸ ನಿಯೋಜನೆ ಮಾಡಲು ಬಾರದಿದ್ದಾಗ ಈ ರೀತಿಯಾಗಿದೆ ಎಂದು ತೇಪೆ ಹಾಕಿರುವುದು ಆದೇಶದಿಂದ ಗೊತ್ತಾಗಿದೆ.

 

 

ಹಾಗೆಯೇ ಕೆಲವು ಕಾಮಗಾರಿಗಳ ಡಿಮ್ಯಾಂಡ್‌ ಎಂಟ್ರಿಗಳು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಬರುವುದಿಲ್ಲ. 2022-23 ಮತ್ತು 2023-24ನೇ ಸಾಲಿನಲ್ಲಿನ ಎಂಐಎಸ್‌ ವರದಿ ಪ್ರಕಾರ ನಿರುದ್ಯೋಗ ಭತ್ಯೆ ಬಾಕಿಯಿರುವುದಿಲ್ಲ ಎಂದು ದೃಢೀಕರಿಸಿರುವುದನ್ನು ಮೇಲ್ಮನವಿ ಪ್ರಾಧಿಕಾರವು ಪರಿಗಣಿಸಿರುವುದು ತಿಳಿದು ಬಂದಿದೆ.

 

ಈ ಕುರಿತು ದೂರುದಾರ ಮಂಜುನಾಥ ಹಿರೇಚೌಟಿ ಅವರು ‘ದಿ ಫೈಲ್‌’ ಪ್ರತಿನಿಧಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

 

‘ಓಂಬುಡ್ಸ್ಮನ್ ಅಪಲೇಟ್ ರವರು ರಾಜಕೀಯ ಪ್ರಭಾವಕ್ಕೊ ಅಥವಾ ಹಣದ ಆಮಿಷಕ್ಕೊ ಬಲಿಯಾಗಿರುವ ಸಾಧ್ಯತೆ ಇರುವುದು, ಆರೋಪಿತರನ್ನು ಖುಲಾಸೆಗೊಳಿಸಿ ದೋಷಪೂರಿತ ತೀರ್ಪು ನೀಡಿರುತ್ತಾರೆ. ಇದೊಂದೇ ಪ್ರಕರಣದಲ್ಲಿ ಇಲಾಖೆಯು ಕಾರ್ಯಾಚರಣೆ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಗ್ರಾಮ ಪಂಚಾಯ್ತಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಎಂಬುದೇ ನಾಟಕದಂತಿದೆ. ಮೇಲ್ಮನವಿ ಪ್ರಾಧಿಕಾರಗಳು, ಸಿಇಒ, ಆಯುಕ್ತರು, ಕಾರ್ಯದರ್ಶಿಗಳು ಜಾಣ ಕುರುಡರಂತೆ ವರ್ತಿಸುತ್ತಾರೆ,’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಮಂಜುನಾಥ್‌ ಹಿರೇಚೌಟಿ.

 

ಆರೋಪಿತ ಕಂಪ್ಯೂಟರ್‍‌ ಆಪರೇಟರ್‍‌ ಗುರುನಾಥ್‌ ಅವರನ್ನೂ ‘ದಿ ಫೈಲ್‌’ ಸಂಪರ್ಕಿಸಲು ಯತ್ನಿಸಿತಾದರೂ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

Your generous support will help us remain independent and work without fear.

Latest News

Related Posts