ಕಗ್ಗಂಟಾಗಿರುವ ಕೃಷ್ಣಾ ಮೇಲ್ದಂಡೆ ಭೂಸ್ವಾಧೀನ; ನ್ಯಾಯಾಲಯದಲ್ಲಿರುವ ಪ್ರಕರಣಗಳ ಸಂಖ್ಯೆ 28,649!

Land compensation disputes big hurdle for Upper Krishna Project Phase-3

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ರೈತರು ಯಾರೂ ಪರಿಹಾರ ಕೊಡಿ ಎಂದು ನ್ಯಾಯಾಲಯಕ್ಕೆ ಹೋಗಬಾರದು. ಇದರಿಂದ ವಿಳಂಬವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡ ಬೆನ್ನಲ್ಲೇ, ಈ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 28,649 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವುದು ಬೆಳಕಿಗೆ ಬಂದಿದೆ.

 

ಕಳೆದ ಶನಿವಾರ ಆಲಮಟ್ಟಿಯಯಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಪೂಜೆ ಹಾಗೂ ಬಾಗಿನ ಅರ್ಪಿಸಿದ ಸಂದರ್ಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ  ಸಿದ್ದರಾಮಯ್ಯ ಈ ಮನವಿ ಮಾಡಿಕೊಂಡಿದ್ದರು. ಆದರೆ ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳು ಈ ಯೋಜನೆಗೆ ಕಗ್ಗಂಟಾಗಿವೆ.

 

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕಾಗಿ ಮುಳುಗಡೆ, ಪುನರವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ ಮತ್ತು 9 ಉಪ ಯೋಜನೆಗಳ ಕಾಳುವೆ ಜಾಲದ ನಿರ್ಮಾಣಕ್ಕಾಗಿ ಒಟ್ಟು 1,40,844 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಇದುವರೆಗೆ ಒಟ್ಟು 32,612 ಎಕರೆ ಜಮೀನಿನ ಭೂ ಸ್ವಾಧೀನಕ್ಕೆ ಪಡೆಯಲಾಗಿದೆ. ಸ್ವಾಧೀನ ಪಡಿಸಿಕೊಂಡ ಈ ಭೂಮಿಗೆ ಸಂಬಂಧಿಸಿದಂತೆ ವಿಜಯಪುರ, ಬಾಗಲಕೋಟೆ ಮತ್ತು ರಾಯಚೂರಿನ ನ್ಯಾಯಾಲಯಗಳಲ್ಲಿ 28,649 ಪ್ರಕರಣಗಳು (ಎಲ್‌ಎಸಿ) ದಾಖಲಾಗಿವೆ. ಇದರಲ್ಲಿ 28, 407 ಪ್ರಕರಣಗಳು ಹೆಚ್ಚುವರಿ ಪರಿಹಾರ ಕೋರಿ ಸಲ್ಲಿಸಿದ ಪ್ರಕರಣಗಳಾಗಿವೆ.

 

ಇನ್ನೂ ಈ ಯೋಜನೆಗೆ 1,08,232 ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಕೃಷ್ಣಾ ಮೇಲ್ಡಂಡೆ ಯೋಜನೆಯ ಹಂತ 1 ಮತ್ತು 2 ಕ್ಕೆ ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 2,73,798 ಎಕರೆ ಭೂಮಿಯನ್ನುಸ್ವಾಧೀನಪಡಿಸಿಕೊಳ್ಳಲಾಗಿತ್ತು.

 

ಈ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕಳೆದ ಬಜೆಟ್‌ನಲ್ಲಿ (2025-26) ಫಾಸ್ಟ್‌ ಟ್ರ್ಯಾಕ್‌ (Fast-track) ನ್ಯಾಯಾಲಯಗಳನ್ನು ಬಾಗಲಕೋಟೆಯಲ್ಲಿ ಸ್ಥಾಪಿಸುವುದಾಗಿ ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದರು. ಆದರೆ ಈ ನ್ಯಾಯಾಲಯ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.

 

Land compensation disputes big hurdle for Upper Krishna Project Phase-3

 

 

ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯದ ಸ್ಥಾಪನೆಯ ಕುರಿತು ಕಳೆದ ಮೇ ನಲ್ಲಿಯೇ ಯೋಜನೆಯ ಭೂ ಸ್ವಾಧೀನ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರ ಪ್ರತಿ ʻದಿ ಫೈಲ್‌ʼಗೆ ಲಭ್ಯವಾಗಿದೆ.

 

ಪ್ರಸ್ತಾವನೆಯಲ್ಲೇನಿದೆ?

 

ಈಗಾಗಲೇ ಭೂಸ್ವಾಧೀನಪಡಿಸಿಕೊಂಡ 32,612 ಎಕರೆ ಜಮೀನಿನ ಪೈಕಿ ಭೂಸ್ವಾಧೀನ ಕಾಯ್ದೆ ಕಲಂ 64ರಡಿ ಸಲ್ಲಿಸಿದ ಪರಾಮರ್ಶೆ ಅರ್ಜಿಗಳ ಬಗ್ಗೆ ದಾಖಲಾದ 28,649 ಎಲ್.ಎ.ಸಿ. ಪ್ರಕರಣಗಳನ್ನು ಮತ್ತು ಇನ್ನೂ ಭೂಸ್ವಾಧೀನಪಡಿಸಿಕೊಳ್ಳಬೇಕಾದ 1,08,232 ಎಕರೆ ಜಮೀನಿನ ಕುರಿತು ಜಿಲ್ಲಾ ಪ್ರಾಧಿಕಾರದಲ್ಲಿ ದಾಖಲಾಗಬಹುದಾದ ಎಲ್‌ಎಸಿ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯವು ತನ್ನ ದೈನಂದಿನ ಕೆಲಸದೊಂದಿಗೆ ನಿರ್ವಹಿಸುವುದು ಕಷ್ಟ ಸಾಧ್ಯವಾದ್ದರಿಂದ ವಿವಿಧ ಜಿಲ್ಲಾ ಪ್ರಾಧಿಕಾರಗಳಲ್ಲಿ ಎಲ್.ಎ.ಸಿ. ಪ್ರಕರಣಗಳು ಸುಮಾರು 6 ರಿಂದ 7ವರ್ಷಗಳ ನಂತರ ಇತ್ಯರ್ಥವಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ಶೇಕಡಾ 15 ರಷ್ಟು ಬಡ್ಡಿಯ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತದೆ ಎಂದು ಈ ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

 

Land compensation disputes big hurdle for Upper Krishna Project Phase-3

 

 

ಸರ್ಕಾರಕ್ಕೆ ಉಂಟಾಗುವ ಆರ್ಥಿಕ ಹೊರೆಯನ್ನು ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿಗಳು 2025-26ನೇ ಸಾಲಿನ ಆಯ-ವ್ಯಯದಲ್ಲಿ ಘೋಷಿಸಿರುವಂತೆ ಕೃಷ್ಣಾ ಮೇಲ್ದಂಡ ಯೋಜನೆಯ ನ್ಯಾಯಾಲಯ (ಎಲ್.ಎ.ಸಿ) ಪ್ರಕರಣಗಳನ್ನು ನಿರ್ವಹಿಸುವ ಸಲುವಾಗಿ ಬಾಗಲಕೋಟೆಯಲ್ಲಿ ಒಂದು ವಿಶೇಷ ತ್ವರಿತಗತಿ (Fast-track) ನ್ಯಾಯಾಲಯವನ್ನು ಪ್ರಾರಂಭಿಸಲು ಶಿಫಾರಸ್ಸು ಮಾಡಿ ಈ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

 

ಯಾವ ನ್ಯಾಯಾಲಯದಲ್ಲಿ ಎಷ್ಟು ಪ್ರಕರಣ?

 

ಬಾಗಲಕೋಟೆಯ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 7,754, ವಿಜಯಪುರದ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 9,484 , ವಿಜಯಪುರದ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 6,098, ಜಮಖಂಡಿಯ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 1,275,  ಯಾದಗಿರಿಯ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 1,025,  ಕಲಬುರಗಿಯ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 726, ರಾಯಚೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 2,257, ಬೆಳಗಾವಿಯ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 18, ವಿಜಯಪುರದ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 9 ಹೀಗೆ ಒಟ್ಟು 28,649 ಪ್ರಕರಣಗಳ ವಿಚಾರಣೆ ಬಾಕಿ ಇದೆ ಎಂದು ಈ ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

 

Land compensation disputes big hurdle for Upper Krishna Project Phase-3

 

ಸರ್ಕಾರದ ಕಂದಾಯ ಇಲಾಖೆಯ ಸೂಚನೆಯಂತೆ (ಆದೇಶ ಸಂಖ್ಯೆ:ಕಂಇ 24 ಎಕ್ಯೂವಿ 2022 ಬೆಂಗಳೂರು, ದಿನಾಂಕ 25.01.2023) ಒಪ್ಪಂದದ ಐತೀರ್ಪು ರಚಿಸಲು ಒಪ್ಪಿಗೆ ನೀಡುವ ಸಂತ್ರಸ್ಥರಿಗೆ ಒಣ ಭೂಮಿಯ, ಮೂಲ ಬೆಲೆ ರೂ. 5.00 ಲಕ್ಷ X 4 = ರು. 20.00 ಲಕ್ಷ ಹಾಗೂ ನೀರಾವರಿ/ಬಾಗಾಯ್ತ ಭೂಮಿ, ಮೂಲ ಬೆಲೆ ರು. 6.00 ಲಕ್ಷ X 4 =ರು. 24.00 ಲಕ್ಷ ಗಳಂತೆ ಪ್ರತಿ ಎಕರೆಗೆ ಇತರೆ ಶಾಸನಬದ್ಧ ಸೌಲಭ್ಯಗಳೊಂದಿಗೆ ಪರಿಹಾರ ನೀಡಲಾಗುತ್ತದೆ.

 

ಒಪ್ಪಿಗೆ ನೀಡದ ಸಂತ್ರಸ್ಥರಿಗೆ ಹೊಸ ಭೂಸ್ವಾಧೀನ ಕಾಯ್ದೆ 2013ರ ಕಲಂ 26 ರಿಂದ 30 ರ ಪ್ರಕಾರ ಪರಿಹಾರ ನಿಗದಿಪಡಿಸಲಾಗುತ್ತಿದೆ.

 

ಹೆಚ್ಚುವರಿ ಪರಿಹಾರಕ್ಕೆ 2.01 ಲಕ್ಷ ಬೇಕು!

 

ಕೃಷ್ಣಾ ಮೇಲ್ದಂಡೆ ಹಂತ-3ರ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯವು ನೀಡಿದ ತೀರ್ಪಿನಂತೆ ಹೆಚ್ಚುವರಿ ಪರಿಹಾರವನ್ನು ಸರಾಸರಿಯಂತೆ ಪರಿಗಣಿಸಿದರೆ 2,01,097.79 ಕೋಟಿ ರು. ಬೇಕಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ವಿಧಾನ ಪರಿಷತ್ತಿಗೆ ತಿಳಿಸಿದ್ದರು.

 

ಕಳೆದ ಅಧಿವೇಶನದಲ್ಲಿ ಸದಸ್ಯ ಪಿ.ಎಚ್. ಪೂಜಾರ್‌ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದ ಅವರು, ಹೆಚ್ಚುವರಿ ಪರಿಹಾರ ಘೋಷಣೆಯಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಿದ್ದು, ಈ ಪ್ರಕರಣಗಳ ಸರಾಸರಿ ದರವನ್ನು ಪರಿಗಣಿಸಿ ಈಗಾಗಲೇ ಭೂಸ್ವಾಧೀನಪಡಿಸಿಕೊಂಡ 29,566 ಎಕರೆ ಜಮೀನುಗಳಿಗೆ 66,563.27 ಕೋಟಿಗಳ ಹೆಚ್ಚುವರಿ ಪರಿಹಾರ ಧನವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದರು.

 

Land compensation disputes big hurdle for Upper Krishna Project Phase-3

 

ಈ ಯೋಜನೆಯ ಸಿವಿಲ್‌ ಕಾಮಗಾರಿಗಳನ್ನು 2024-25ರ ದರಪಟ್ಟಿಯಂತೆ ಮತ್ತು ಭೂ ಸ್ವಾಧೀನವನ್ನು ಚಾಲ್ತಿಯಲ್ಲಿರುವ ಒಪ್ಪಂದದ ಐತೀರ್ಪಿನಂತೆ ಪರಿಷ್ಕರಿಸಲಾಗಿದೆ. ಹೀಗೆ ಪರಿಷ್ಕರಿಸಿದರೆ ಈ ಯೋಜನೆಗೆ ಅಂದಾಜು 87,818.82 ಕೋಟಿ ಬೇಕಾಗಬಹುದು. ಈ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಸಚಿವರು ಉತ್ತರದಲ್ಲಿ ಹೇಳಿರುವುದು ಗೊತ್ತಾಗಿದೆ.

 

Land compensation disputes big hurdle for Upper Krishna Project Phase-3

 

ಯೋಜನೆಯ ಭೂ ಸ್ವಾಧೀನಕ್ಕೆ 2014-15ರ ದರಪಟ್ಟಿಯಂತೆ ಲೆಕ್ಕ ಹಾಕಿದರೆ 17, 627.00 ಕೋಟಿ ಬೇಕಾಗುತ್ತದೆ. 2014-25ರ ದರಪಟ್ಟಿಯಂತೆ ಮತ್ತು ಭೂ ಸ್ವಾಧೀನವನ್ನು ಚಾಲ್ತಿಯಲ್ಲಿರುವ ಒಪ್ಪಂದದ ಐತೀರ್ಪಿನಂತೆ ಅಂದಾಜಿಸಿದರೆ 40,557.09 ಕೋಟಿ ಬೇಕಾಗುತ್ತದೆ ಎಂದು  ಸಚಿವ ಡಿ.ಕೆ. ಶಿವಕುಮಾರ್‌ ವಿಧಾನ ಪರಿಷತ್ತಿಗೆ ನೀಡಿದ ಉತ್ತರದಲ್ಲಿ ಹೇಳಿದ್ದಾರೆ.

 

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ, ಭೂ ಪರಿಹಾರ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಭೂಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳ ಕುರಿತು ಸೆಪ್ಟೆಂಬರ್‌ 3 ರಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ವಿಧಾನಸೌಧದಲ್ಲಿ ಸಂಪುಟ ಸಹೋದ್ಯೋಗಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿದ್ದಾರೆ.

 

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ; ಹೆಚ್ಚಿನ ಭೂಪರಿಹಾರ ಆದೇಶಗಳಿಂದ ಆರ್ಥಿಕ ಹೊರೆ?

 

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಲ್ಲಿ ಹೆಚ್ಚಿನ ಭೂಪರಿಹಾರದ ಆದೇಶಗಳಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗಲಿದೆ ಎಂದು ಈ ಹಿಂದೆಯೇ ಅಧಿಕಾರಿಗಳು ವಿಸ್ತೃತವಾದ ಟಿಪ್ಪಣಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ಕುರಿತು ʻದಿ ಫೈಲ್‌ʼ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts