ಬೆಂಗಳೂರು; ಉಜಿರೆಯ ಕುಮಾರಿ ಸೌಜನ್ಯಳ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಾದ ಡಾ ರಶ್ಮಿ ಮತ್ತು ಡಾ ಆದಂ ಉಸ್ಮಾನ್ ಅವರಿಬ್ಬರ ವಿರುದ್ಧ ಆರೋಪಗಳನ್ನು ಸಿಬಿಐ ತನಿಖಾ ಸಂಸ್ಥೆಯು ದೃಢಪಡಿಸಿದ್ದರೂ ಇಲಾಖೆ ವಿಚಾರಣೆಯಲ್ಲಿ ಆ ಎಲ್ಲಾ ದೃಢಪಟ್ಟ ಅಂಶಗಳನ್ನು ತಳ್ಳಿ ಹಾಕಿರುವುದನ್ನು ಆರ್‍ಟಿಐ ಅಡಿ ಪಡೆದಿರುವ ದಾಖಲೆಗಳ ಮೂಲಕ ‘ದಿ ಫೈಲ್’, ಇದೀಗ ಹೊರಗೆಡವುತ್ತಿದೆ.
ತುಂಬಾ ಮುಖ್ಯವಾಗಿ ಕುಮಾರಿ ಸೌಜನ್ಯಳ ಮರಣೋತ್ತರ ಪರೀಕ್ಷೆಗೂ ಮುನ್ನ ವಿಸೆರಾ ಸಂಗ್ರಹಿಸಲು ಪೊಲೀಸರು ಸೂಚನಾ ಪತ್ರದಲ್ಲಿ ಕೋರಿಕೆಯನ್ನೇ ಸಲ್ಲಿಸಿರಲಿಲ್ಲ ಎಂಬ ಅಂಶವನ್ನು ಆಪಾದಿತ ವೈದ್ಯರ ಪೈಕಿ ಡಾ ಆದಂ ಉಸ್ಮಾನ್ ಅವರು ವಿಚಾರಣೆ ವೇಳೆ ದಾಖಲಿಸಿದ್ದ ಹೇಳಿಕೆಯ ಬಹಿರಂಗವಾಗಿದೆ.
ಸೌಜನ್ಯಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯಲ್ಲಿ ಲೋಪ ಎಸಗಿದ್ದಾರೆ ಎಂದು ಆರೋಪಿಸಿದ್ದ ಸಿಬಿಐ ತನಿಖಾ ಸಂಸ್ಥೆಯು ಆಪಾದಿತ ವೈದ್ಯರಿಬ್ಬರ ವಿರುದ್ಧ ಉಗ್ರ ದಂಡನೆಯನ್ನು ವಿಧಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಅನುಷ್ಠಾನ ಆಗಿದೆಯೇ ಇಲ್ಲವೇ ಎಂಬ ಕುರಿತು ‘ದಿ ಫೈಲ್’, ಆರ್‍ಟಿಐಯಲ್ಲಿ ಸಮಗ್ರ ಕಡತವನ್ನು ಕೇಳಿತ್ತು. ಇದೀಗ ಸರ್ಕಾರವು 438 ಪುಟಗಳ ಕಡತವನ್ನು ಒದಗಿಸಿದೆ.
‘ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆ ಮಾಡಿದೆ. ಈಗ ಸುಪ್ರೀಂ ಕೋರ್ಟಿನ ವೆಚ್ಚ ಭರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳುತ್ತಿದ್ದಾರೆ. ಪ್ರಕರಣ ಮೇಲ್ಮನವಿಗೆ ಸೂಕ್ತವಾಗಿದೆಯೇ ಎಂಬುದನ್ನು ಸೌಜನ್ಯ ತಾಯಿ ನಿರ್ಧರಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು.
ಈ ಮಧ್ಯೆ ಸೌಜನ್ಯಳ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ವಿಶೇಷ ತನಿಖಾ ತಂಡಕ್ಕೆ ಮನವಿ ಸಲ್ಲಿಕೆಯಾಗಿರುವ ಹೊತ್ತಿನಲ್ಲೇ ಸೌಜನ್ಯಳ ಮರಣೋತ್ತರ ಪರೀಕ್ಷೆ ನಡೆಸಿದ್ದ ಆಪಾದಿತ ವೈದ್ಯರ ವಿರುದ್ಧದ ವಿಚಾರಣೆ ವರದಿಯ ಕಡತವು ಮುನ್ನೆಲೆಗೆ ಬಂದಿದೆ.
ಅಲ್ಲದೇ ಆರೋಪಿತ ಅಧಿಕಾರಿಗಳ ಆರೋಪಗಳ ಕುರಿತಾಗಿ ವಿಚಾರಣೆ ನಡೆಸಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಇಲಾಖೆ ವಿಚಾರಣೆಯು, ವೈದ್ಯರಿಬ್ಬರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ.
ಅಲ್ಲದೇ ಸೌಜನ್ಯಳ ಹಸ್ತದ ಹಿಂಬದಿಯಲ್ಲಿ ಗಾಯದ ಗುರುತುಗಳಿದ್ದವು ಎಂದು ಸಿಬಿಐ ಮಾಡಿದ್ದ ಆರೋಪವನ್ನು ವೈದ್ಯ ಡಾ ಆದಂ ಉಸ್ಮಾನ್ ಅವರು ಒಪ್ಪಿಲ್ಲ. ಅಲ್ಲದೇ ಯಾವುದೇ ಗುರುತುಗಳಿರಲಿಲ್ಲ ಎಂದು ಪ್ರತಿಪಾದಿಸುವ ಮೂಲಕ ಸಿಬಿಐ ತನಿಖೆಯ ಅಂಶವನ್ನು ಪ್ರಶ್ನಿಸಿರುವುದು ಕಡತದ ಹಾಳೆಗಳಿಂದ ಗೊತ್ತಾಗಿದೆ.
ಆಪಾದಿತ ವೈದ್ಯರು ಕುಮಾರಿ ಸೌಜನ್ಯಳ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪು ಎಸಗಿಲ್ಲ. ಈ ಇಬ್ಬರು ವೈದ್ಯರು ತಪ್ಪೆಸಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಪರಿಗಣಿಸಿರುವ ಅಂಶಗಳನ್ನು ಒಪ್ಪಲು ಸಾಧ್ಯವಿರುವುದಿಲ್ಲ ಎಂದು ಇಲಾಖೆ ವಿಚಾರಣಾಧಿಕಾರಿಯವರು ಅಭಿಪ್ರಾಯ ವ್ಯಕ್ತಪಡಿಸಿರುವುದು ಕಡತದ ಹಾಳೆಗಳಿಂದ ಗೊತ್ತಾಗಿದೆ.
ಹಾಗೆಯೇ ಈ ಇಬ್ಬರು ವೈದ್ಯರ ವಿರುದ್ಧ ಉಗ್ರ ದಂಡನೆಯನ್ನು ವಿಧಿಸಬೇಕು ಎಂದು ಸಿಬಿಐ ಮಾಡಿದ್ದ ಶಿಫಾರಸ್ಸಿನಲ್ಲಿನ ಅಂಶಗಳಿಗೂ ಮತ್ತು ಇಲಾಖೆ ವಿಚಾರಣೆ ಅಧಿಕಾರಿಗಳ ವಿಚಾರಣೆ ವರದಿಯಲ್ಲಿನ ಅಂಶಗಳಿಗೂ ತಾಳೆಯಾಗದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಕಡತವು ಹಿಂದಿನ ಆರೋಗ್ಯ ಸಚಿವ ಬಿ ಶ್ರೀರಾಮುಲು ಮತ್ತು ಈಗಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಸಲ್ಲಿಕೆಯಾಗಿತ್ತು. ಇಲಾಖೆ ವಿಚಾರಣೆ ವರದಿಯನ್ನು ಒಪ್ಪಬಹುದು ಎಂದು ಇಲಾಖೆಯ ಆಯುಕ್ತರು ಅಭಿಪ್ರಾಯ ನೀಡಿದ್ದರು.
ಸಿಬಿಐ ದೋಷಾರೋಪವೇನು?
ಶವ ಪರೀಕ್ಷೆ ಮಾಡುವಾಗ ಪರೀಕ್ಷೆಗೆ ಅಗತ್ಯವಿರುವಷ್ಟು ವೆಜೈನಲ್ ಸ್ವಾಬ್ಸ್‌ನ್ನು ತೆಗೆಯದೇ ಡಿಎನ್‌ಎ ಪರೀಕ್ಷೆಯು ಅಪೂರ್ಣವಾಗುವಂತೆ ಮಾಡಲಾಗಿದೆ. ಹೊಟ್ಟೆಯಲ್ಲಿ ಜೀರ್ಣವಾಗದ ಹಾಗೂ ಸಣ್ಣ ಕರುಳಿನಲ್ಲಿ ಅರ್ಧಂಬರ್ಧ ಜೀರ್ಣವಾಗಿರುವ ಆಹಾರವಿದೆ ಎಂದು ತಪ್ಪು ಮಾಹಿತಿ ನೀಡಿರುವುದು, ವಿಸೆರಾ ಸಂಗ್ರಹಣೆ ( ಹೊಟ್ಟೆ ಹಾಗೂ ಅದರಲ್ಲಿರುವ ಪದಾರ್ಥ ಲಿವರ್ ಕಿಡ್ನಿ ಇತ್ಯಾದಿ) ಸಮರ್ಪಕವಾಗಿ ಮಾಡಿರಲಿಲ್ಲ ಎಂದು ಸಿಬಿಐ ದೋಷಾರೋಪ ಮಾಡಿತ್ತು.
ಕುಮಾರಿ ಸೌಜನ್ಯರ ಬಲ ಹಸ್ತದ ಹಿಂಬದಿಯಲ್ಲಿ ವೃತ್ತಾಕಾರದ ಕಣ್ಣಿಗೆ ಕಾಣಿಸುವ ಗಾಯದ ಗುರುತಿದ್ದರೂ ಸಹ ಮರಣೋತ್ತರ ಪರೀಕ್ಷೆಯಲ್ಲಿ ಅದನ್ನು ನಮೂದಿಸಿದೇ ಇರುವುದು, ಸೌಜನ್ಯರ ಕುತ್ತಿಗೆ ಬಿಗಿದ ಗುರುತಿರುವ ಜಾಗದ ಚರ್ಮದ ತುಣುಕುಗಳನ್ನು ಹಿಸ್ಟೋಪೆಥಾಲಜಿ ಪರೀಕ್ಷೆಗೆ ಕಳುಹಿಸಿಲ್ಲ ಎಂದು ಸಿಬಿಐ ತನಿಖಾ ಸಂಸ್ಥೆಯು ಇಬ್ಬರು ವೈದ್ಯರ ವಿರುದ್ಧ ದೋಷಾರೋಪ ಮಾಡಿತ್ತು.
ಈ ಕುರಿತು ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಸಿಬಿಐನ ಗೌಪ್ಯ ಪತ್ರವನ್ನಾಧರಿಸಿ ವರದಿ ಪ್ರಕಟಿಸಿತ್ತು.
ಸೌಜನ್ಯ ಕೊಲೆ; ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪ, ಸಿಬಿಐ ‘ಗೌಪ್ಯ’ ಪತ್ರ ಬಯಲು
ಸಿಬಿಐ ತನಿಖಾ ಸಂಸ್ಥೆಯು ತನ್ನ ಗೌಪ್ಯ ಪತ್ರದಲ್ಲಿ ಮಾಡಿದ್ದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಆಪಾದಿತ ವೈದ್ಯ ಡಾ ಆದಂ ಉಸ್ಮಾನ್ ಅವರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಿತ್ತು. ಅಲ್ಲದೆ ಈ ಸಂಬಂಧ ಇಲಾಖೆ ವಿಚಾರಣೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ ಪಿ ಎನ್ ರಾಜು ಅವರನ್ನು ವಿಚಾರಣೆ ಪ್ರಾಧಿಕಾರಿಯನ್ನಾಗಿ ಮತ್ತು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಡಾ ಭೀಮಪ್ಪ ಹಾವನೂರು ಅವರನ್ನು ವಿಚಾರಣೆ ಮಂಡನಾಧಿಕಾರಿಯನ್ನಾಗಿ ನೇಮಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ವಿಶೇಷವೆಂದರೇ ಈ ಪ್ರಕರಣದಲ್ಲಿ ಡಾ ಆದಂ ಉಸ್ಮಾನ್ ಅವರನ್ನಷ್ಟೇ ವಿಚಾರಣೆ ನಡೆಸಿರುವುದು ಕಡತದ ಹಾಳೆಯಿಂದ ಕಂಡು ಬಂದಿದೆ. ವಿಚಾರಣೆ ಪ್ರಾಧಿಕಾರಕ್ಕೆ ಡಾ ಆದಂ ಉಸ್ಮಾನ್ ಅವರು ಲಿಖಿತ ಹೇಳಿಕೆಯನ್ನು ಸಲ್ಲಿಸಿದ್ದರು.
ಆಪಾದಿತ ವೈದ್ಯ ಆದಂ ಉಸ್ಮಾನ್ ಹೇಳಿಕೆಯಲ್ಲೇನಿದೆ?
ಶವ ಪರೀಕ್ಷೆ ಮಾಡುವಾಗ ಅಗತ್ಯವಿರುವಷ್ಟು ಪ್ರಮಾಣದ ವೆಜೈನಲ್ ಸ್ವಾಬ್‌ನ್ನು ತೆಗೆದು ಡಿಎನ್‌ಎ ಪರೀಕ್ಷೆಗೆ ಕಳಿಸಲಾಗಿತ್ತು. ಅಗತ್ಯ ಪ್ರಮಾಣದ ವೆಜೈನಲ್ ಸ್ವಾಬ್‌ನ್ನು ಕಳಿಸಿಲ್ಲ ಎಂದು ಡಿಎನ್‌ಎ ವರದಿಯಲ್ಲಿ ತಿಳಿಸಿಲ್ಲ. ಸಾಕ್ಷಿದಾರರು ಸಹ ಅವರ ಹೇಳಿಕೆಯಲ್ಲಿ ಈ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಮತ್ತು ಆರೋಪ ಸಮರ್ಥಿಸುವ ಸಾಕ್ಷ್ಯಾಧಾರದ ದಾಖಲೆ ಒದಗಿಸಿಲ್ಲ ಎಂದು ಸಮರ್ಥಿಸಿಕೊಂಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ತಪ್ಪು ಮಾಹಿತಿ ನೀಡಿಲ್ಲ
ಅಲ್ಲದೇ ಮರಣೋತ್ತರ ಪರೀಕ್ಷೆಯಲ್ಲಿ ಮೃತ ಹೊಟ್ಟೆಯಲ್ಲಿ ಜೀರ್ಣವಾದ ಹಾಗೂ ಸಣ್ಣ ಕರುಳಿನಲ್ಲಿ ಅರ್ಧಂಬರ್ಧ ಜೀರ್ಣವಾಗಿರುವ ಆಹಾರವಿರುತ್ತದೆ ಎಂಬುದಾಗಿ ತಿಳಿಸಿರುವುದು ನಿಜವಿರುತ್ತದೆ. ಇಬ್ಬರೂ ವೈದ್ಯಾಧಿಕಾರಿಗಳೂ ಇದನ್ನು ಪರಿಶೀಲಿಸಿಯೆ ಈ ಮಾಹಿತಿಯನ್ನು ನೀಡಿರುತ್ತೇವೆ. ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಇದು ಆಧಾರವಿಲ್ಲದ ಆರೋಪವಾಗಿದೆ. ಸಾಕ್ಷಿದಾರರು ಸಹಾ ಈ ಬಗ್ಗೆ ಅವರ ಹೇಳಿಕೆಯಲ್ಲಿ ಯಾವುದೇ ಆರೋಪ ಮಾಢಿಲ್ಲ ಅಥವಾ ಸಾಕ್ಷ್ಯಾಧಾರ ದಾಖಲೆ ಒದಗಿಸಿಲ್ಲ ಎಂದು ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ಮೃತರ ಶವ ಪರೀಕ್ಷೆ ಸಂದರ್ಭದಲ್ಲಿ ಮರಣವು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಶವ ಪರೀಕ್ಷೆ ಮಾಡಿದ ಇಬ್ಬರೂ ವೈದ್ಯಾಧಿಕಾರಿಗಳಾದ ನಾವು ನಿರ್ದಿಷ್ಟವಾದ ಅಭಿಪ್ರಾಯಕ್ಕೆ ಬಂದಿದ್ದರಿಂದ ವಿಸೆರಾ ಸಂಗ್ರಹಣೆ ಮಾಡಿರುವುದಿಲ್ಲ,’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಅಲ್ಲದೇ ಸೌಜನ್ಯಳ ಮರಣ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ನಿರ್ದಿಷ್ಟ ಕಾರಣಗಳು ಗೊತ್ತಾಗದೇ ಇದ್ದ ಸಂದರ್ಭದಲ್ಲಿ ಮಾತ್ರ ವಿಸೆರಾ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ಡಾ ಆದಂ ಉಸ್ಮಾನ್ ಅವರು ಸಮರ್ಥಿಸಿಕೊಂಡಿರುವುದು ಹೇಳಿಕೆಯಿಂದ ಗೊತ್ತಾಗಿದೆ.
ವಿಸೆರಾ ಸಂಗ್ರಹಿಸಲು ಕೋರಿಕೆ ಸಲ್ಲಿಸದ ಪೊಲೀಸರು
‘ಶವ ಪರೀಕ್ಷೆ ನಿಯಮದ ಪ್ರಕಾರ ಶವ ಪರೀಕ್ಷೆ ನಡೆಸುವ ವೈದ್ಯರುಗಳು ಮರಣದ ಕಾರಣದ ಬಗ್ಗೆ ಅಂತಿಮ ಅಭಿಪ್ರಾಯಕ್ಕೆ ಬಂದಿದ್ದಲ್ಲಿ ವಿಸೆರಾ ಸಂಗ್ರಹನೆ ಮಾಡುವ ಅವಶ್ಯಕತೆ ಇರುವುದಿಲ್ಲ. ಪೊಲೀಸರು ಸೂಚನಾ ಪತ್ರದಲ್ಲಿ ವಿಸೆರಾ ಸಂಗ್ರಹಿಸಲು ಕೋರಿಕೆ ಸಲ್ಲಿಸಿರುವುದಿಲ್ಲ. ಈ ಆರೋಪದ ಬಗ್ಗೆ ಸಾಕ್ಷಿದಾರರು ಅವರ ಹೇಳಿಕೆಯಲ್ಲಿ ಯಾವುದೇ ಆರೋಪ ಮಾಡಿಲ್ಲ. ಮತ್ತು ಆರೋಪ ಸಮರ್ಥಿಸುವ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಆರೋಪ ಒಪ್ಪದ ಆದಂ
ಸಿಬಿಐ ಮಾಡಿದ್ದ ಅರೋಪವನ್ನೂ ಡಾ ಆದಂ ಉಸ್ಮಾನ್ ಅವರು ಒಪ್ಪಿಲ್ಲ. ಮೃತರ ಬಲ ಹಸ್ತದ ಹಿಂಬದಿಯಲ್ಲಿ ವೃತ್ತಾಕಾರದ ಕಣ್ಣಿಗೆ ಕಾಣಿಸುವ ಯಾವುದೇ ಗಾಯದ ಗುರುತುಗಳಿದ್ದಿಲ್ಲ. 2ನೇ ಸಾಕ್ಷಿದಾರರಾದ ಪೊಲೀಸ್ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಅವರು 2018ರ ಜುಲೈ 21 ರಂದು ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಪಾಟಿ ಸವಾಲಿನಲ್ಲಿ ಮೃತರ ಹಸ್ತದ ಹಿಂಬದಿಯಲ್ಲಿ ಕಣ್ಣಿಗೆ ಕಾಣಿಸುವ ಯಾವುದೇ ವೃತ್ತಾಕಾರದ ಗಾಯಗಳಿದ್ದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಮೃತರ ಶವ ಪರೀಕ್ಷೆ ವರದಿಯಲ್ಲಿ ಮೃತರ ಮೈಮೇಲಿರುವ ಎಲ್ಲಾ ಗಾಯಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದ್ದರಿಂದ ಈ ಆರೋಪವು ಸುಳ್ಳು ಎಂಬುದು ಸ್ಪಷ್ಟವಾಗಿದೆ ಎಂದು ಡಾ ಆದಂ ಉಸ್ಮಾನ್ ಅವರು ಪ್ರತಿಪಾದಿಸಿದ್ದರು ಎಂಬುದು ಹೇಳಿಕೆಯಿಂದ ಗೊತ್ತಾಗಿದೆ.
ಅಲ್ಲದೇ ಮೃತರ ಕುತ್ತಿಗೆಯ ಅಂಗಾಂಗಳನ್ನು ಹಿಸ್ಟೋಪೆಥಾಲಜಿ ಪರೀಕ್ಷೆಗೆ ಕಳಿಸಲಾಗಿದೆ. ಇದನ್ನೂ ಶವ ಪರೀಕ್ಷೆ ವರದಿಯಲ್ಲಿ ತೋರಿಸಲಾಗಿದೆ. ಮೃತರ ಕುತ್ತಿಗೆ ಬಿಗಿದ ಜಾಗದ ಚರ್ಮವು ಮರಣ ಪೂರ್ವದಲ್ಲಿ ಸಂಭವಿಸಿರುತ್ತದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಶವ ಪರೀಕ್ಷೆ ನಡೆಸಿದ್ದ ಇಬ್ಬರೂ ವೈದ್ಯಾಧಿಕಾರಿಗಳು ಅಭಿಪ್ರಾಯ ಹೊಂದಲಾಗಿತ್ತು. ಹೀಗಾಗಿ ಚರ್ಮದ ತುಣುಕುಗಳನ್ನು ಹಿಸ್ಟೋಪೆಥಾಲಜಿ ವಿಭಾಗಕ್ಕೆ ಕಳಿಸಿರಲಿಲ್ಲ ಎಂದು ಕಾರಣಗಳನ್ನು ನೀಡಿರುವುದು ತಿಳಿದು ಬಂದಿದೆ.
ಮಂಡನಾಧಿಕಾರಿಯ ಅಭಿಪ್ರಾಯವಿಲ್ಲದೇ ವರದಿ ಸಲ್ಲಿಕೆ
ಡಾ ಆದಂ ಉಸ್ಮಾನ್ ಅವರು ನೀಡಿದ್ದ ಹೇಳಿಕೆಯನ್ನು ವಿಚಾರಣೆ ಅಧಿಕಾರಿಯು ಪರಿಶೀಲಿಸಿದ್ದರು. ಉಸ್ಮಾನ್ ಅವರು ನೀಡಿದ್ದ ಹೇಳಿಕೆಯನ್ನು ಪರಿಶೀಲಿಸಿದ ನಂತರ ‘ಆರೋಪಗಳು ಸಾಬೀತಾಗಿವೆ ಎಂದು ಹೇಳಲು ಯಾವುದೇ ಆಧಾರಗಳಿಲ್ಲ. ಆದ್ದರಿಂದ ಅಪರಾಧಿಯ ವಿರುದ್ಧ ಕ್ರಮ ಕೈಗೊಳ್ಳಲು ಏನೂ ಇಲ್ಲ. ‘(‘There are no grounds to hold the charges are proved. Hence there is nothing to take action against the delinquent) ಎಂದು ಷರಾ ಬರೆದಿದ್ದರು.
ವಿಶೇಷವೆಂದರೇ ಈ ಪ್ರಕರಣದಲ್ಲಿ ವೈದ್ಯಾಧಿಕಾರಿ ನೀಡಿದ್ದ ಸಮಜಾಯಿಷಿಯು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಂಡನಾಧಿಕಾರಿಯಾಗಿದ್ದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ವಿಧಿ ವಿಜ್ಞಾನ ತಜ್ಞರಾದ ಡಾ ಭೀಮಣ್ಣ ಹಾವನೂರ ಅವರ ಅಭಿಪ್ರಾಯವು ಬಹಳ ಪ್ರಾಮುಖ್ಯವಾಗಿತ್ತು. ಆದರೆ ಅವರ ಅಭಿಪ್ರಾಯವಿಲ್ಲದೆಯೇ ವಿಚಾರಣೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಪರಿಣಿತರ ಅಭಿಪ್ರಾಯವಿಲ್ಲದೇ ಇದನ್ನು ಒಪ್ಪದಿರುವುದಕ್ಕೆ ಎರಡನೇ ಕಾರಣ ಕೇಳುವ ನೋಟೀಸ್‌ನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆಯು ಅಭಿಪ್ರಾಯಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಡಾ ಭೀಮಣ್ಣ ಹಾವನೂರು ನೀಡಿದ್ದ ಮಾಹಿತಿಯಲ್ಲೇನಿತ್ತು?
ಡಾ ಆದಂ ಉಸ್ಮಾನ್ ಅವರು ನೀಡಿದ್ದ ಸಮಜಾಯಿಷಿ ಕುರಿತು ವಿಧಿ ವಿಜ್ಞಾನ ತಜ್ಞ ಡಾ ಭೀಮಣ್ಣ ಹಾವನೂರು ಅವರು ಇಲಾಖೆಗೆ 2023ರ ಏಪ್ರಿಲ್ 17ರಂದೇ ಮಾಹಿತಿ ನೀಡಿದ್ದರು.
ತಾವು ಲಗತ್ತಿಸಿರುವ ದಾಖಲೆಗಳಲ್ಲಿ ಡಿಎನ್‌ಎ ವರದಿಯ ಪ್ರತಿಯು ಇರುವುದಿಲ್ಲ. ಆದ್ದರಿಂದ ಸಂಪೂರ್ಣ ವರದಿಯನ್ನು ನೋಡದೇ ವೆಜೈನಲ್ ಸ್ವಾಬ್‌ನ್ನು ಸಂಗ್ರಹಿಸಿರುವ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಅಲ್ಲದೇ ಮೃತಳ ಶವ ಪರೀಕ್ಷೆ ಸಮಯದಲ್ಲಿ ಹೊಟ್ಟೆಯಲ್ಲಿರುವ ಆಹಾರದ ಬಗ್ಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಆರೋಪಿಸಲಾಗಿದೆ. ಆದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿಯನ್ನು ನಮಗೆ ಒದಗಿಸಿರುವುದಿಲ್ಲ. ಆದ್ದರಿಂದ ಈ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಅದೇ ರೀತಿ ಎಲ್ಲಾ ಶವ ಪರೀಕ್ಷೆಯಲ್ಲಿ ವಿಸೆರಾವನ್ನು ಸಂಗ್ರಹಣೆ ಮಾಡುವುದಿಲ್ಲ. ಏಕೆಂದರೇ ಜೀರ್ಣಾಂಗದಲ್ಲಿ ಯಾವುದೇ ವಿಷದ ಅಂಶ ಕಂಡು ಬಂದರೆ ಅಥವಾ ಸಂದೇಹವಿದ್ದರೇ ಅಥವಾ ತನಿಖಾಧಿಕಾರಿಗಳು ಸಂಗ್ರಹಣೆ ಮಾಡಲು ಕೋರಿದಾಗ ಮಾತ್ರ ಸಂಗ್ರಹಣೆ ಮಾಡುವ ಪರಿಪಾಠವಿದೆ ಎಂಬ ವೈದ್ಯಾಧಿಕಾರಿಗಳ ವಾದವನ್ನು ಒಪ್ಪಬಹುದು. ಈ ಪ್ರಕರಣದಲ್ಲಿ ಮೃತಳ ಬಲ ಹಸ್ತದ ಹಿಂಬದಿಯಲ್ಲಿ ಇದ್ದ ಗಾಯದ ಬಗ್ಗೆ ತಾವು ಒದಗಿಸಿರುವ ದಾಖಲೆಗಳಲ್ಲಿ (ಫೋಟೋ, ಮತ್ತು ಪಿಎಂ ಪ್ರತಿ) ಎಲ್ಲೂ ಒದಗಿಸಿರುವುದಿಲ್ಲ. ಆದ್ದರಿಂದ ಈ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡಲು ಸಾಧ್ಯವಿರುವುದಿಲ್ಲ ಎಂದು ಡಾ ಭೀಮಣ್ಣ ಹಾವನೂರು ತಿಳಿಸಿದ್ದರು.
ಹಾಗೆಯೇ ಮೃತಳ ಕುತ್ತಿಗೆಯ ಅಂಗಾಂಗಳನ್ನು ಹಿಸ್ಟೋಪೆಥಾಲಜಿ ಪರೀಕ್ಷೆಗೆ ಎಲ್ಲಾ ಪ್ರಕರಣದಲ್ಲಿ ಕಳಿಸುವುದು ಅಗತ್ಯವಿರುವುದಿಲ್ಲ. ಯಾವುದೇ ಪ್ರಕರಣದಲ್ಲಿ ಕುತ್ತಿಗೆಗೆ ಗಾಯ ಅಥವಾ ಒತ್ತಡವುಂಟಾಗಿರುವ ಕುರಿತು ಸಂದೇಹವಿದ್ದು ಶವ ಪರೀಕ್ಷೆ ಸಮಯದಲ್ಲಿ ಅದು ಸ್ಪಷ್ಟವಾಗಿ ಕಾಣದಿದ್ದರೇ ಅಂತಹ ಪ್ರಕರಣದಲ್ಲಿ ಹಿಸ್ಟೋಪೆಥಾಲಜಿ ವಿಭಾಗಕ್ಕೆ ಕುತ್ತಿಗೆಯ ಭಾಗವನ್ನು ಕಳಿಸಬಹುದಾಗಿದೆ. ಈ ಪಗರಕರಣದಲ್ಲಿ ಮೃತಳ ಕುತ್ತಿಗೆಯ ಬಿಗಿದ ಬಗ್ಗೆ ಸ್ಪಷ್ಟ ಅಭಿಪ್ರಾಯವಿದ್ದು ಯಾವುದೇ ಗೊಂದಲ ಇಲ್ಲದ ಕಾರಣ ಅದನ್ನು ಕಳಿಸಿಲ್ಲ ಎಂಬ ವೈದ್ಯಾಧಿಕಾರಿಗಳ ವಾದವನ್ನು ಒಪ್ಪಬಹುದು ಎಂದು ಹೇಳಿದ್ದರು.
ಮತ್ತೊಂದು ವಿಶೇಷವೆಂದರೇ ಮಂಡನಾಧಿಕಾರಿಗಳು ಈ ಕುರಿತು ಲಿಖಿತವಾದವನ್ನು ಮಂಡಿಸಿರಲಿಲ್ಲ.
‘ಪ್ರಕರಣದಲ್ಲಿ ಮಂಡನಾಧಿಕಾರಿಗಳು ತನ್ನ ವಾದವನ್ನು ವಿಚಾರಣಾಧಿಕಾರಿಗಳಿಗೆ ಹೇಳಿಕೆ ಮೂಲಕ ಮಂಡಿಸಿರುತ್ತಾರೆ. ಅದನ್ನು ವಿಚಾರಣಾಧಿಕಾರಿಗಳು ಒಪ್ಪಿಕೊಂಡಿರುವುದರಿಂದ ಲಿಖಿತ ವಾದ ಮಂಡಿಸಲೇಬೇಕಾದ ಯಾವ ನಿಯಮಗಳಲ್ಲಿಯೂ ಸ್ಪಷ್ಟವಾಗಿ ವಿವರಿಸಿರುವುದಿಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಆದರೂ ‘ಪರಿಣಿತರ ಅಭಿಪ್ರಾಯ ಪಡೆದು ಅದರಲ್ಲಿ ಆಪಾದಿತರ ಸಮಜಾಯಿಷಿ ತಪ್ಪೆಂದು ಕಂಡುಬಂದಲ್ಲಿ ಆಗ ಯಾವ ಕಾರಣಗಳಿಗಾಗಿ ವಿಚಾರಣೆ ವರದಿಯನ್ನು ಒಪ್ಪುತ್ತಿಲ್ಲ ಎಂಬ ಕಾರಣಗಳನ್ನು ವಿವರಿಸಲು ಸಾಧ್ಯವಾಗಲಿದೆ. ಹೀಗಾಗಿ ಮಂಡನಾಧಿಕಾರಿ ಅಥವಾ ಬೇರೆ ವಿಧಿ ವಿಜ್ಞಾನ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಇಲಾಖೆ ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ಆದೇಶ ಕೋರಿದ್ದರು.