ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬ್ಬಡಿ ಅಸೋಸಿಯೇಷನ್ ಕುರಿತು ವಿಧಾನಸಭೆಗೆ ತಪ್ಪು ಮಾಹಿತಿ ಒದಗಿಸಿದ ಮಂಗಳೂರಿನ ಸಹಕಾರ ಸಂಘಗಳ ಉಪನಿಬಂಧಕರಿಗೆ ಸಹಕಾರ ಇಲಾಖೆಯು ಕಾರಣ ಕೇಳಿ ನೋಟಿಸು ಜಾರಿ ಮಾಡಿದೆ.
2024ರ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಹರೀಶ್ ಪೂಂಜ ಈ ಕಬ್ಬಡಿ ಅಸೋಸಿಯೇಷನ್‌ನ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್. ಅವರು ಉತ್ತರ ಸಿದ್ಧಪಡಿಸಿದ್ದರು. ಅವರು ನೀಡಿದ ಮಾಹಿತಿಯನ್ನಿಟ್ಟುಕೊಂಡು ಆಗಿನ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸನದಲ್ಲಿ ಉತ್ತರ ನೀಡಿದ್ದರು.
ಸಚಿವರು ನೀಡಿದ ಉತ್ತರ ತಪ್ಪು ಎಂದು ಸದನದಲ್ಲಿ ಶಾಸಕ ಹರೀಶ್ ಪೂಂಜಾ ಈ ಕುರಿತು ಸದನದಲ್ಲಿ ಮಾತನಾಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ಸಂಸ್ಥೆಯು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ -1960ರ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ತಿಳಿಸಿದ್ದರಲ್ಲದೆ, ಇಲಾಖೆಯಿಂದ ತಪ್ಪು ಮಾಹಿತಿ ಒದಗಿಸಲಾಗಿದೆ ಎಂದು ಸದನಲ್ಲಿಯೇ ತಿಳಿಸಿದ್ದರು.
ಸದನಕ್ಕೆ ಉಪ ನಿಬಂಧಕರಾದ ರಮೇಶ್ ತಪ್ಪು ಮಾಹಿತಿ ಒದಗಿಸಿರುವುದು ಸಾಬೀತಾಗಿರುವುದರಿಂದ ಈಗ ಇಲಾಖೆಯು ಕಾರಣ ಕೇಳಿ, ಆಗಸ್ಟ್ 26ರಂದು ನೋಟಿಸ್ (CO/118/ECA/2025) ಜಾರಿ ಮಾಡಿದೆ. ಇದಕ್ಕೆ ಹದಿನೈದು ದಿನಗಳೊಳಗಾಗಿ ತಮ್ಮ ಲಿಖಿತ ಹೇಳಿಕೆಯನ್ನು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಬೇಕೆಂದೂ ನೋಟಿಸಿನಲ್ಲಿ ಸೂಚಿಸಲಾಗಿದೆ.
ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಜಾರಿ ಮಾಡಿರುವ ಈ ನೋಟಿಸ್‌ನ ಪ್ರತಿ ʻದಿ ಫೈಲ್ʼಗೆ ಲಭ್ಯವಾಗಿದೆ.
ನೋಟಿಸಿನಲ್ಲಿ ಏನಿದೆ?
ವಿಧಾನ ಸಭಾ ಸದಸ್ಯರಾದ ಹರೀಶ್ ಪೂಂಜಾ ಅವರು ಸದನದಲ್ಲಿ ನಿಯಮ 73ರ ಮೇರೆಗೆ ಮಂಡಿಸಿರುವ ಗಮನ ಸೆಳೆಯುವ ಸೂಚನೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ವ್ಯಾಪ್ತಿಯಲ್ಲಿ ನೊಂದಾಯಿಸಲ್ಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾ, ಅಮೆಚೂರು, ಕಬಡ್ಡಿ ಅಸೋಸಿಯೇಷನ್ ಸಂಸ್ಥೆಯ ಕುರಿತಂತೆ ಇರುವ ಸರ್ಕಾರದ ಕಾನೂನು ಹಾಗೂ ನೀತಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ರೀತಿ, ಆ ಮೂಲಕ ದೇಶದ ಕ್ರೀಡೆಯ ಕುರಿತಂತೆ ಇರುವ ಗಂಭೀರ ವಿಷಯದ ಕುರಿತು ಸಭೆಯ ಗಮನ ಸೆಳೆದಿದ್ದು, ಈ ಗಮನ ಸೆಳೆಯುವ ಸೂಚನೆಗೆ ನೀವು ಉತ್ತರ/ ವರದಿ ಸಲ್ಲಿಸಿದ್ದು, ಅದರಂತೆ ಮಾನ್ಯ ಸಹಕಾರ ಸಚಿವರು ಸಭೆಯಲ್ಲಿ ಉತ್ತರಿಸಿರುತ್ತಾರೆ.
ಈ ಸಮಯದಲ್ಲಿ ವಿಧಾನ ಸಭಾ ಸದಸ್ಯರಾದ ಹರೀಶ್ ಪೂಂಜಾರವರು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡಿ ಅಸೋಸಿಯೇಷನ್ ಸಂಸ್ಥೆಯು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ತಿಳಿಸಿ, ಇಲಾಖೆಯಿಂದ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಸದನದಲ್ಲಿ ತಿಳಿಸಿರುತ್ತಾರೆ.
ಈ ಸಂಸ್ಥೆಯ ನ್ಯೂನ್ಯತೆಗಳ ಬಗ್ಗೆ ಈಗಾಗಲೇ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಕಲಂ 25ರಡಿ ವಿಚಾರಣೆ ಜರುಗಿ ಹಲವಾರು ಲೋಪ ದೋಷಗಳು ಕಂಡು ಬಂದಿದ್ದರೂ ಸಹ ಜವಾಬ್ದಾರಿಯುತವಾಗಿ ನಿಖರವಾದ ಮಾಹಿತಿಯನ್ನು ಅಳವಡಿಸಿ, ಉತ್ತರವನ್ನು ನೀಡದೇ ಸದನಕ್ಕೆ ತಪ್ಪು ಮಾಹಿತಿ ನೀಡಿ ಗಂಭೀರವಾದ ಕರ್ತವ್ಯಲೋಪವೆಸಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957ರ ನಿಯಮ 11ರನ್ವಯ ಶಿಸ್ತು ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ ಎಂದು ಈ ನೋಟಿಸಿನಲ್ಲಿ ಹೇಳಿರುವುದು ಗೊತ್ತಾಗಿದೆ.
ನೋಟಿಸಿನೊಂದಿಗೆ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ವಿರುದ್ಧದ ಕರ್ತವ್ಯ ಲೋಪ/ದುರ್ನಡತೆಯ ಆರೋಪಗಳ ಸಾರಾಂಶ, ಪ್ರತಿಯೊಂದು ಆರೋಪಕ್ಕೂ ಸಂಬಂಧಿಸಿದಂತೆ ದುರ್ನಡತೆ/ದುರ್ವರ್ತನೆ ಆರೋಪಗಳ ವಿವರಗಳನ್ನು ಪಟ್ಟಿ ಮಾಡಿ ನೀಡಲಾಗಿದೆ.
ಒಪ್ಪಿಕೊಳ್ಳದಿರುವ ಆರೋಪಗಳ ಬಗ್ಗೆ ಮಾತ್ರ ವಿಚಾರಣೆ ನಡೆಸಲಾಗುತ್ತದೆ. ಹೀಗಾಗಿ ಪ್ರತಿ ಆರೋಪದ ಬಗ್ಗೆಯೂ ಒಪ್ಪಿಕೊಳ್ಳುತ್ತೀರೋ , ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕೆಂದು ನೋಟಿಸ್‌ನ್ಲಲಿ ಸೂಚನೆ ನೀಡಿರುವುದು ಗೊತ್ತಾಗಿದೆ.
ಈ ಆರೋಪಗಳ ಕುರಿತು ಹದಿನೈದು ದಿನಗಳ ಒಳಗೆ ಲಿಖಿತ ಹೇಳಿಕೆಯನ್ನು ಸಲ್ಲಿಸದಿದ್ದರೆ, ಆರೋಪಗಳ ಬಗ್ಗೆ ತಮ್ಮ ಹೇಳಿಕೆ ಏನೂ ಇಲ್ಲವೆಂದು ಭಾವಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿ ತಮ್ಮ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಈ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
ವಿಧಾನಸಭೆಯಲ್ಲಿ ಏನು ನಡೆದಿತ್ತು?
ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ವಿಧಾನಸಭೆಯಲ್ಲಿ ನಿಯಮ 73 ರಡಿಯಲ್ಲಿ ಮಂಡಿಸಿರುವ ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು.
ಗಮನ ಸೆಳೆಯುವ ಸೂಚನೆಯಲ್ಲೇನಿತ್ತು? : ಕರ್ನಾಟಕ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯ ನಿಯಂತ್ರಿತ ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಅಡಿಯಲ್ಲಿ ನೋಂದಾಯಿತ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸೇರಿದಂತೆ ರಾಜ್ಯದ ಹಲವಾರು ಕಬಡ್ಡಿ ಅಸೋಸಿಯೇಷನ್‌ಗಳು ನನ್ನ ಕ್ಷೇತ್ರದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕಬಡ್ಡಿ ಆಟಗಾರ ಒಳಗೊಂಡಂತೆ, ಅವರ ಕ್ರೀಡಾ ಹಿತಾಸಕ್ತಿಗೆ ಪೂರಕವಾಗಿ ವರ್ತಿಸದೆ, ಜಿಲ್ಲೆ ಹಾಗೂ ರಾಜ್ಯದ ಕ್ರೀಡೆಯ ಹಿತಾಸಕ್ತಿ ಪಾಲಿಸದೆ, ಈ ಕುರಿತಂತೆ ಇರುವ ಸರಕಾರದ ಕಾನೂನು ಹಾಗೂ ನೀತಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ರೀತಿ, ಆ ಮೂಲಕ ದೇಶದ ಕ್ರೀಡೆಯ ಭವಿಷ್ಯದ ಕುರಿತಾಗಿ ಇರುವ ಗಂಭೀರ ವಿಷಯದ ಕುರಿತಾಗಿ ಮಾನ್ಯ ಸಹಕಾರ ಸಚಿವರ ಗಮನ ಸೆಳೆಯ ಬಯಸುತ್ತೇನೆ.
ಇದಕ್ಕೆ ಆಗಿನ ಸಹಕಾರ ಸಚಿವ ಕೆ.ಎನ್. ರಾಜಣ್ಣ ಉತ್ತರ ನೀಡಿದ್ದರು (ಸಂಖ್ಯೆ: ಸಿಒ 295 ಸಿಎಸ್‌ಆರ್ 2024).
ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಂಸ್ಥೆಯು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನೋಂದಣಿ ಕಾಯ್ದೆ 1960 ಕಲಂ 13 ರನ್ವಯ ಅವಶ್ಯಕ ದಾಖಲೆಯನ್ನು ಹಾಜರುಪಡಿಸಿ, ಪ್ರತಿ ವರ್ಷ ನೋಂದಣಿಯನ್ನು ಫೈಲಿಂಗ್ ಮಾಡಲಾಗುತ್ತಿದ್ದು, 2023-24 ನೇ ಸಾಲಿನಲ್ಲಿಯೂ ಸಹ ಫೈಲಿಂಗ್ ಅನ್ನು ಮಾಡಲಾಗಿರುತ್ತದೆ. ಸದರಿ ಸಂಸ್ಥೆಯಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಆಯೋಜಿಸಲಾದ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಿವಿಧ ವಯೋಮಿತಿಯ ಬಾಲಕ ಬಾಲಕಿಯರು ಹಾಗೂ ಪುರುಷರು ಮತ್ತು ಮಹಿಳೆಯರು ಪಾಲ್ಗೊಂಡಿರುವ ಬಗ್ಗೆ ಸಂಘದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇವುಗಳಲ್ಲಿ ಬಂಟ್ವಾಳ ತಾಲೂಕಿನ ಬಾಲಕ-ಬಾಲಕಿಯರ ತರಬೇತಿ ಶಿಬಿರ, ಎಸ್.ಡಿ.ಎಂ ಕಾಲೇಜಿನಲ್ಲಿ ಜ್ಯೂನಿಯರ್ ಬಾಲಕ-ಬಾಲಕಿಯರ ತರಬೇತಿ ಶಿಬಿರ, ಸೀನಿಯರ್ ವಿಭಾಗದ ಪುರುಷರ ತರಬೇತಿ ಶಿಬಿರವನ್ನು ಮಡಂತ್ಯಾರು ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಮತ್ತು ಮಹಿಳಾ ತಂಡದ ತರಬೇತಿ ಶಿಬಿರವನ್ನು ಆಳ್ವಾಸ್ ಕಾಲೇಜಿನಲ್ಲಿ ಮಾಡಲಾಗಿರುತ್ತದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದರು.
ಇದರಲ್ಲಿ ತರಬೇತಿ ಪಡೆದು ಉತ್ತಮ ಪ್ರದರ್ಶನ ನೀಡಿದ ಬಾಲಕಿಯರ ವಿಭಾಗದಲ್ಲಿ, ತಂಡದ 05 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಬಾಲಕರ ವಿಭಾಗದಲ್ಲಿ 03 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅದೇ ರೀತಿ ಸಬ್ ಜೂನಿಯರ್ ವಿಭಾಗದಲ್ಲಿ 02 ಮಂದಿ ಬಾಲಕಿಯರು ಹಾಗೂ 02 ಮಂದಿ ಬಾಲಕರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕರ್ನಾಟಕ ರಾಜ್ಯ ಕಬಡ್ಡಿ ಚಾಂಪಿಯನ್‌ಶಿಪ್ ದಾವಣಗೆರೆಯ ಜಗಳೂರಿನಲ್ಲಿ ನಡೆದ ಪಂದ್ಯಾಟದಲ್ಲಿ ಮಹಿಳಾ ತಂಡವು ಪ್ರಥಮ ಸ್ಥಾನವನ್ನು ಪಡೆದು, 04 ಮಂದಿ ಮಹಿಳೆಯರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅದೇ ರೀತಿ ಪುರುಷರ ತಂಡದಿಂದ 02 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬೆಂಗಳೂರಿನಲ್ಲಿ ನಡೆದ ಜ್ಯೂನಿಯರ್ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದು, ಬಾಲಕರ ತಂಡವು 04 ನೇ ಸ್ಥಾನವನ್ನು ಪಡೆದಿದ್ದು, ರಾಷ್ಟ್ರ ಮಟ್ಟಕ್ಕೆ 05 ಬಾಲಕಿಯರು ಮತ್ತು 03 ಬಾಲಕರು ಆಯ್ಕೆಯಾಗಿರುತ್ತಾರೆ.
ಈ ಸಂಸ್ಥೆಯು ಪ್ರತಿಯೊಂದು ಕ್ರೀಡೆಯನ್ನು ಪ್ರೋತ್ಸಾಹಿಸಿ ನಗರ ಕ್ರೀಡಾಪಟುಗಳೊಂದಿಗೆ ಗ್ರಾಮೀಣ ಭಾಗದ ಕ್ರೀಡಾ ಪಟುಗಳನ್ನು ಬೆಳೆಸಲು, 08 ಜನ ಸದಸ್ಯರನ್ನೊಳಗೊಂಡ ಆಡಳಿತ ಸಮಿತಿಯನ್ನು ರಚಿಸಿ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಂಸ್ಥೆಯಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಬಗ್ಗೆ ನಿರ್ಧಿಷ್ಟವಾಗಿ ದೂರುಗಳನ್ನು ನೀಡಿದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ಕಲಂ 25ರಡಿ ವಿಚಾರಣೆ ನಡೆಸಲು ಅವಕಾಶವಿರುತ್ತದೆ ಎಂದು ಉತ್ತರಿಸಿದ್ದರು.
ಈ ಸಂದರ್ಭದಲ್ಲಿ ಸಚಿವರ ಉತ್ತರದಿಂದ ತೃಪ್ತರಾಗದ ಶಾಸಕ ಹರೀಶ್ ಪೂಂಜಾ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡಿ ಅಸೋಸಿಯೇಷನ್ ಸಂಸ್ಥೆಯು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ 1960ರ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ತಿಳಿಸಿ, ಇಲಾಖೆಯಿಂದ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಸದನದಲ್ಲಿ ತಿಳಿಸಿದ್ದರು.
ವಸತಿರಹಿತರಿಗೆ ಜಮೀನು ಗುರುತಿಸದ ಸರ್ಕಾರ, ಕ್ರಿಕೆಟ್ ಅಸೋಸಿಯೇಷನ್‌ಗೆ 23.25 ಎಕರೆ ಗುತ್ತಿಗೆಗೆ ಪ್ರಸ್ತಾವನೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಸರ್ಕಾರದ ವಶದಲ್ಲಿರುವ 39.23 ಎಕರೆ ಪೈಕಿ 23.25 ಎಕರೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ 30 ವರ್ಷಗಳ ಅವಧಿಯವರೆಗೆ ಗುತ್ತಿಗೆ ನೀಡಲು ಅವಕಾಶವಿಲ್ಲವೆಂದು ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೆ ಸರಿಸಿರುವ ಕಂದಾಯ ಇಲಾಖೆಯು ಈ ಹಿಂದೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಕುರಿತೂ ʻದಿ ಫೈಲ್ʼ ದಾಖಲೆಗಳೊಂದಿಗೆ ವರದಿ ಮಾಡಿತ್ತು.