ವಸತಿರಹಿತರಿಗೆ ಜಮೀನು ಗುರುತಿಸದ ಸರ್ಕಾರ, ಕ್ರಿಕೆಟ್‌ ಅಸೋಸಿಯೇಷನ್‌ಗೆ 23.25 ಎಕರೆ ಗುತ್ತಿಗೆಗೆ ಪ್ರಸ್ತಾವನೆ

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಸರ್ಕಾರದ ವಶದಲ್ಲಿರುವ 39.23 ಎಕರೆ ಪೈಕಿ 23.25 ಎಕರೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ಗೆ 30 ವರ್ಷಗಳ ಅವಧಿಯವರೆಗೆ ಗುತ್ತಿಗೆ ನೀಡಲು ಅವಕಾಶವಿಲ್ಲವೆಂದು ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೆ ಸರಿಸಿರುವ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

 

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯವರು (KSCA) ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ನಡೆಸುವಂತಹ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು 19 ಎಕರೆ ಭೂಮಿ ನೀಡುವ ಸಂಬಂಧದ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿರುವ ಬೆನ್ನಲ್ಲೇ ಕಬಕ ಗ್ರಾಮದಲ್ಲಿ ಇದೇ ಸಂಸ್ಥೆಗೆ 23.25 ಎಕರೆ ಗುತ್ತಿಗೆ ನೀಡಲು ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿರುವುದು ಮುನ್ನೆಲೆಗೆ ಬಂದಿದೆ. ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವ ಆರ್‌ ಅಶೋಕ್‌ ಅವರು ಅನುಮೋದಿಸಿದ್ದಾರೆ. ಕಂದಾಯ ಇಲಾಖೆಯು ಸಲ್ಲಿಸಿರುವ ಸಚಿವ ಸಂಪುಟ ಟಿಪ್ಪಣಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ನಾನಾ ಯೋಜನೆ ಜಾರಿಗೊಳಿಸಲು ಅಥವಾ ವಸತಿ ರಹಿತರಿಗೆ ವಸತಿ ನೀಡಲು ಜಮೀನು ಕೊರತೆ ಇದ್ದರೂ ತಾಲೂಕು ಆಡಳಿತವು ಕಂದಾಯ ಜಮೀನು ಗುರುತಿಸಿರಲಿಲ್ಲ. ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಉದ್ದೇಶಕ್ಕಾಗಿ 23.25 ಎಕರೆಯನ್ನು ನೀಡಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಹೋಬಳಿ ಕಬಕ ಗ್ರಾಮದಲ್ಲಿ ಸರ್ಕಾರದ ವಶದಲ್ಲಿ 39.23 ಎಕರೆ ಇದೆ. ಇಲ್ಲಿ ಎಕರೆಯೊಂದಕ್ಕೆ ಮಾರ್ಗಸೂಚಿ ಮೌಲ್ಯ 4,00,000 ರು. ಇದೆ. ಇದರ ಪ್ರಕಾರ 23.25 ಎಕರೆಗೆ 93,00,000 ರು.ಗಳಾಗಲಿದೆ. ಈ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಜಮೀನಿನ ಮಾರ್ಗಸೂಚಿ ಮೌಲ್ಯದ ಶೇ.2.50ರಂತೆ ವಾರ್ಷಿಕ ಗುತ್ತಿಗೆ ಮೊತ್ತವನ್ನು ವಿಧಿಸಿ ಮಂಜೂರು ಮಾಡಲು ಕಂದಾಯ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿದೆ.

 

‘ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಖಾಸಗಿ ಸಂಸ್ಥೆ ಆಗಿರುವುದರಿಂದ ನಿಯಮ 19ರ ಅಡಿ ಗುತ್ತಿಗೆ ನೀಡಲು ಅವಕಾಶವಿಲ್ಲ. ಕರ್ನಾಟಕ ಭೂ ಮಂಜೂರಾತಿ ನಿಯಮ 22ಎ(2)ರಲ್ಲಿ ನಗರ ಪೌರ ವ್ಯಾಪ್ತಿಯಲ್ಲಿ ಉದ್ದೇಶಿತ ಮಂಜೂರಾತಿ ಜಮೀನು ಬರುವುದಾದಲ್ಲಿ ಅಂತಹ ಜಮೀನನ್ನು ಮಂಜೂರು ಮಾಡಬಾರದೆಂದು ಸ್ಪಷ್ಟಪಡಿಡಿದೆ. ಪ್ರಸ್ತುತ ಪ್ರಕರಣದಲ್ಲಿ ಜಮೀನು ನಗರ ಪೌರ ವ್ಯಾಪ್ತಿಯಿಂದ ಕೇವಲ 4.50 ಕಿ ಮೀ. ದೂರದಲ್ಲಿರುವುದರಿಂದ ಮಂಜೂರಾತಿಗೆ ಅವಕಾಶವಿಲ್ಲ,’ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯ ನೀಡಿದೆ.

 

 

ಅಲ್ಲದೇ ಇದೇ ಅಭಿಪ್ರಾಯದಲ್ಲಿ’ಭೂಮಂಜೂರಾತಿ ನಿಯಮಗಳಲ್ಲಿ ಏನೇ ನಿಯಮಾವಳಿಗಳ ಅಡೆತಡೆಗಗಳಿದ್ದಾಗ್ಯೂ ಸರ್ಕಾರವು ನಿಯಮ 27ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಯುಕ್ತ ಸಂದರ್ಭಗಳಲ್ಲಿ ನಿಯಮಗಳನ್ನು ಸಡಿಲಿಸಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ,’ಎಂದೂ ಪ್ರಸ್ತಾವಿಸಿದೆ.

 

ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ (ಕೆಎಸ್‌ಸಿಎ) ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರನ್ನು ಆಯ್ಕೆ ಮಾಡಿಕೊಂಡಿತ್ತು.
ವಿಶ್ವದರ್ಜೆಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸುವ ಕನಸು ಹೊಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ ಈ ಸಂಬಂಧ ಹಲವು ವರ್ಷಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಅಸೊಸಿಯೇಶನ್‌ ಜತೆ ಸಂಯೋಜನೆ ಹೊಂದಿರುವ ಯೂನಿಯನ್‌ ಕ್ರಿಕೆಟರ್ಸ್‌ ಪುತ್ತೂರು ಎಂಬ ಸಂಸ್ಥೆಯು ಈ ವಿಚಾರದಲ್ಲಿ ಸಹಾಯ ಮಾಡಿದ್ದು, ಅದರಂತೆ ಕಬಕ ಗ್ರಾಮದ ಪೆರಿಯತ್ತೋಡಿ ಸಮೀಪದಲ್ಲಿ 25 ಎಕರೆ ಸರಕಾರಿ ಜಮೀನನ್ನು ಪತ್ತೆ ಹಚ್ಚಿತ್ತು.

 

2017ರ ಸೆಪ್ಟೆಂಬರ್‌ 28ರಂದು ಈ ಬಗ್ಗೆ ಪುತ್ತೂರು ತಹಸೀಲ್ದಾರ್‌ ಅವರು ಪುತ್ತೂರು ನಗರಸಭೆಗೆ ಪತ್ರ ಬರೆದು ಕಬಕ ಗ್ರಾಮದ 25 ಎಕರೆ ಸರಕಾರಿ ಜಮೀನನ್ನು ಕೆಎಸ್‌ಸಿಎಗೆ ಗುತ್ತಿಗೆ ಆಧಾರದಲ್ಲಿ ನೀಡುವ ಬಗ್ಗೆ ನಿರಾಕ್ಷೇಪಣ ಪತ್ರ ನೀಡುವಂತೆ ಮನವಿ ಮಾಡಿದ್ದರು.

 

ನಗರಸಭೆ ವ್ಯಾಪ್ತಿಯಲ್ಲಿ ನಾನಾ ಯೋಜನೆ ಜಾರಿಗೊಳಿಸಲು ಅಥವಾ ವಸತಿ ರಹಿತರಿಗೆ ವಸತಿ ನೀಡಲು ಜಮೀನನ ಕೊರತೆ ಇದ್ದರೂ ಇಲ್ಲಿಯವರೆಗೆ ತಾಲೂಕು ಆಡಳಿತ ಕಂದಾಯ ಜಮೀನು ಗುರುತು ಮಾಡಿ ನೀಡಿಲ್ಲ. ಈಗ ಕ್ರಿಕೆಟ್‌ ಸ್ಟೇಡಿಯಂಗೆ ಕೇಳಿದಾಗ ಅಷ್ಟು ಬೇಗ 25 ಎಕರೆ ಹುಡುಕಿ ಕೊಟ್ಟಿದ್ದಾದರೂ ಹೇಗೆ ಎಂದು ಸದಸ್ಯರು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts